ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪಂಚಾಯ್ತಿ ಆವರಣದಲ್ಲೇ ಸ್ವಚ್ಛತೆ ಮಾಯ!

ರಸ್ತೆ ಮೇಲೆ ಹರಿಯುತ್ತಿರುವ ಶೌಚನೀರು, ಕಣ್ಮುಚ್ಚಿ ಕುಳಿತ ಆಡಳಿತ
Last Updated 1 ನವೆಂಬರ್ 2014, 9:40 IST
ಅಕ್ಷರ ಗಾತ್ರ

ಶಿವಮೊಗ್ಗ: ಸ್ವಚ್ಛ ಭಾರತ ಅಭಿಯಾನದಲ್ಲಿ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿರುವ ಜಿಲ್ಲಾ ಪಂಚಾಯ್ತಿ ಕಚೇರಿಯ ಆವರಣದಲ್ಲೇ ಸ್ವಚ್ಛತೆ ಮಾಯವಾಗಿದೆ!

ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಪಂಚಾಯ್ತಿಯ ಮುಖ್ಯ ದ್ವಾರ ಕುವೆಂಪು ರಸ್ತೆಯಲ್ಲಿದ್ದರೆ, ಅ.ನ.ಕೃ ರಸ್ತೆಯ ಮೂಲಕ ಹಿಂಭಾಗದಿಂದಲೂ ಕಚೇರಿಗೆ ಪ್ರವೇಶ ಪಡೆಯಬಹುದು.

ಗಾಂಧಿನಗರ, ವೆಂಕಟೇಶ್ ನಗರ, ಹೊಸಮನೆ, ವಿನೋಬನಗರ ಭಾಗದಿಂದ ಬರುವ ನಾಗರಿಕರು, ಅಧಿಕಾರಿಗಳು, ಸದಸ್ಯರು ಅ.ನ.ಕೃ ರಸ್ತೆಯ ಮೂಲಕವೇ ಕಚೇರಿ ಪ್ರವೇಶಿಸುತ್ತಾರೆ. ಮುಂಭಾಗದಲ್ಲಿ ವಾಹನಗಳ ಸಂದಣಿ ದಟ್ಟವಾಗಿದ್ದರೆ, ಹಿಂಭಾಗದಲ್ಲಿರುವ ಖಾಲಿ ಜಾಗವನ್ನು ವಾಹನ ನಿಲುಗಡೆಗೆ  ಬಳಕೆ ಮಾಡಿಕೊಳ್ಳಲಾಗುತ್ತಿದೆ.

ರಸ್ತೆಯಲ್ಲಿ ಹರಿಯುತ್ತಿರುವ ಕಲ್ಮಶ
ಜಿಲ್ಲಾ ಪಂಚಾಯ್ತಿ ಕಚೇರಿಯ ಹಿಂಭಾಗದ ಆವರಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಸತಿ ಗೃಹಗಳು ಇವೆ. ಹಲವು ದಿನಗಳಿಂದ ಆವರಣದ ಶೌಚದ ಡ್ರೈನೇಜ್‌ ತುಂಬಿ, ಯುಜಿಡಿ ಪೈಪ್‌ ಒಡೆದು ರಸ್ತೆಯ ಮೇಲೆಲ್ಲ ಹರಿಯುತ್ತಿದೆ. ಹಾಗಾಗಿ, ಆ ಭಾಗದಲ್ಲಿ ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ವಸತಿ ಗೃಹಗಳ ಸಿಬ್ಬಂದಿ ನಿತ್ಯವೂ ಮೂಗುಮುಚ್ಚಿಕೊಂಡೇ ಜೀವನ ಸಾಗಿಸುವ ದುಸ್ಥಿತಿಯಲ್ಲಿದ್ದಾರೆ. ಆದರೆ, ಅದನ್ನು ಸರಿಪಡಿಸುವ ಗೋಜಿಗೆ ಯಾರೂ ಮುಂದಾಗಿಲ್ಲ.

ಕೆಲವರು ಅಲ್ಲಿನ ಬಯಲಲ್ಲೇ ಮೂತ್ರ ವಿಸರ್ಜನೆಯನ್ನೂ ಮಾಡುತ್ತಾರೆ. ಅದನ್ನು ನಿರ್ಬಂಧಿಸುವ ಗೋಜಿಗೂ ಅಲ್ಲಿನ ಸಿಬ್ಬಂದಿ ಹೋಗಿಲ್ಲ. ಅಲ್ಲದೇ, ಆವರಣದ ತುಂಬ ಗಿಡಗಂಟೆಗಳು ಬೆಳೆದಿದ್ದು, ಹುಳ–ಹುಪ್ಪಟೆಗಳ ಕಾಟ ಮಿತಿಮೀರಿದೆ. ಕಸದ ರಾಶಿಯನ್ನೂ ಅಲ್ಲೇ ಹಾಕಿದ್ದಾರೆ.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಚೇರಿಯೂ ಆ ಭಾಗದಲ್ಲೇ ಬರುತ್ತದೆ. ಕಚೇರಿಯ ಒಳಗೆ ಹೋದ ಸಾರ್ವಜನಿಕರಿಗೂ ಪರಿಸರದ
ವಾಸನೆ ಮೂಗಿಗೆ ಬಡಿಯುತ್ತದೆ. ಅಂತಹ ಸ್ಥಿಯಲ್ಲಿಯೇ ಅಧ್ಯಕ್ಷರು ಕಾರ್ಯನಿರ್ವಹಿಸುತ್ತಿದ್ದಾರೆ..!

ಸ್ವಚ್ಛತೆ ಪಾಠ ಹೇಳಲು ಹೇಗೆ ಸಾಧ್ಯ?
ಕಚೇರಿ ಆವರಣವನ್ನೇ ಸ್ವಚ್ಛವಾಗಿಟ್ಟುಕೊಳ್ಳಲು ಆಗದವರು ಹೇಗೆ ಉತ್ತಮ ಆಡಳಿತ ನೀಡಲು ಸಾಧ್ಯ? ಜಿಲ್ಲಾ ಪಂಚಾಯ್ತಿ ಆಡಳಿತ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದಕ್ಕೆ ಕಚೇರಿ ಹಿಂಭಾಗದ ಆವರಣವೇ ಸಾಕ್ಷಿ.

ಮನುಷ್ಯರು ಓಡಾಡಲು ಸಾಧ್ಯವಾಗದಂತಹ ವಾತಾವರಣ ಇದ್ದರೂ, ಸ್ವಚ್ಛಗೊಳಿಸದ ಇವರು ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಗಳ ಸ್ವಚ್ಛತೆಯ ಬಗ್ಗೆ ಕೆಳ ಹಂತದ ಅಧಿಕಾರಿಗಳು ಹಾಗೂ ಜನರಲ್ಲಿ ಅರಿವು ಮೂಡಿಸಲು ಸಾಧ್ಯವೇ? ಮೊದಲು ಮನೆ ಸ್ವಚ್ಛವಾಗಿಟ್ಟುಕೊಂಡು ನಂತರ ಇತರರಿಗೆ ಮಾದರಿಯಾಗಲಿ
–ಎಂ.ಬಿ.ರೇಣುಕಮ್ಮ ರುದ್ರಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT