ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ದಾಖಲೆಯ ಶೇ 66.1ರಷ್ಟು ಮತದಾನ

Last Updated 18 ಏಪ್ರಿಲ್ 2014, 7:43 IST
ಅಕ್ಷರ ಗಾತ್ರ

ಧಾರವಾಡ: ಬೆಳಿಗ್ಗೆಯಿಂದಲೇ ಸಾಲುಗಟ್ಟಿ ಮತದಾನ ಮಾಡಲು ಉತ್ಸುಕರಾದ ಮತದಾರರು. ಬಿಸಿಲನ್ನೂ ಲೆಕ್ಕಿಸದೇ ವಾಹನದಲ್ಲಿ ಮತಗಟ್ಟೆಗೆ ಬಂದ ವೃದ್ಧರು. ಮಳೆ ಬಂದರೂ ಕುಗ್ಗದೇ ಮತಚಲಾಯಿಸಿದ ವನಿತೆಯರು.

ಧಾರವಾಡ ಜಿಲ್ಲೆಯ ಚುನಾವಣಾ ಚಿತ್ರಣವನ್ನು ಹೀಗೆ ಬಣ್ಣಿಸಬಹುದು. ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಜಿಲ್ಲೆಯಲ್ಲಿ ಅತ್ಯುತ್ತಮ ಮತದಾನ ನಡೆದಿದೆ. ಕೆಲವು ಕಡೆ ಮತದಾನ ಬಹಿಷ್ಕಾರ, ಚಿಕ್ಕಪುಟ್ಟ ಗೊಂದಲ, ಗಲಾಟೆಗಳನ್ನು ಹೊರತುಪಡಿಸಿದರೆ ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ ನಡೆಯಿತು. ಮಧ್ಯಾಹ್ನದ ವೇಳೆಗೆ ಶೇ 34ರಷ್ಟಾಗಿದ್ದ ಮತಪ್ರಮಾಣ ಸಂಜೆಯ ವೇಳೆಗೆ ಶೇ 66.1ರಷ್ಟು ತಲುಪಿತು.

ಕಳೆದ ಚುನಾವಣೆಯಲ್ಲಿ ಶೇ 56.1ರಷ್ಟು ಮತದಾನವಾಗಿತ್ತು.ಧಾರವಾಡ ಕ್ಷೇತ್ರದ ಗರಗ, ಉಪ್ಪಿನ ಬೆಟಗೇರಿ, ಶಿವಳ್ಳಿ; ಕಲಘಟಗಿ ವಿಧಾನಸಭಾ ಕ್ಷೇತ್ರದ ಮುಗದ, ಮಂಡಿಹಾಳ, ರಾಮಾಪುರ, ಕಲ್ಲಾಪುರ, ವರವ ನಾಗಲಾವಿ; ನವಲಗುಂದ ಕ್ಷೇತ್ರದ ಗುಮ್ಮಗೋಳ, ಶಿರೂರ, ಮೊರಬ ಹಾಗೂ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯಿತು.

ಬೆಳಿಗ್ಗೆ 8.30ಕ್ಕೆ ನಗರದ ಶಾರದಾ ಹೈಸ್ಕೂಲ್‌ನ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಕುಟುಂಬ ಸಮೇತರಾಗಿ ಮತದಾನ ಮಾಡಿದರು. ಪಕ್ಷೇತರ ಅಭ್ಯರ್ಥಿ ಪ್ರಮೋದ ಮುತಾಲಿಕ್‌ ಬಾರಾಕೊಟ್ರಿಯ ಪವನ ಇಂಗ್ಲಿಷ್‌ ಮಿಡಿಯಂ ಶಾಲೆಯಲ್ಲಿ ಮತದಾನ ಮಾಡಿದರು. ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ಅವರು ಪಕ್ಷದ ಜಿಲ್ಲಾ ಸಮಿತಿ ಸದಸ್ಯರೊಂದಿಗೆ ಇಲ್ಲಿಯ ಬಾಸೆಲ್‌ ಮಿಷನ್ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದರು.

ಗರಗ, ಮೊರಬ, ಕೋಟೂರಿನಲ್ಲಿ ಉದ್ದನೆಯ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಮೊರಬ ಗ್ರಾಮದ ಶಾಲಾ ಕಟ್ಟಡದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಕತ್ತಲು ಆವರಿಸಿತ್ತು. ಅದಕ್ಕೆ ಸರಿಯಾಗಿ ಹೊರಗೆ ಮಳೆ ಆರಂಭವಾಯಿತು. ಆದರೂ ಕುಗ್ಗದ ಜನತೆ ಮಳೆಯಿಂದ ರಕ್ಷಣೆ ಪಡೆಯುತ್ತಲೇ ಮತಚಲಾಯಿಸಲು ಸರದಿಯಲ್ಲಿ ನಿಂತರು.

ಬಹುತೇಕ ಮತದಾನ ಕೇಂದ್ರಗಳಲ್ಲಿ ಚುನಾವಣಾ ಆಯೋಗ ನೀಡಿದ ವೋಟರ್‌ ಸ್ಲಿಪ್‌ಗಳನ್ನು ಮತಗಟ್ಟೆ ಅಧಿಕಾರಿಗಳು ಮಾನ್ಯ ಮಾಡಲಿಲ್ಲ. ಇದರಿಂದ ಕೆಲ ಹೊತ್ತು ಮತಗಟ್ಟೆ ಅಧಿಕಾರಿಗಳೊಂದಿಗೆ ಮತದಾರರು ವಾಗ್ವಾದ ನಡೆಸಿದರು.ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನೀರಸವಾಗಿತ್ತು.

ಬಳಿಕ ಸಂಜೆ 4ರ ಸುಮಾರಿಗೆ ಗರಿಗೆದರಿದ ಮತದಾನ ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮುಂದುವರೆಯಿತು. ಅಣ್ಣಿಗೇರಿಯಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ಮತದಾನ ಮುಗಿದ ಬಳಿಕ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಮತಗಟ್ಟೆಯಿಂದ ಸಾಗಿಸಲು ಕೊಂಚ ವಿಳಂಬವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT