ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಅನಕ್ಷರಸ್ಥರಿಗೆ ‘ಅಕ್ಷರ ಭಾಗ್ಯ’

ಸಾಕ್ಷರ ಭಾರತ್‌ ಯೋಜನೆಗೆ ರಾಮನಗರ ಆಯ್ಕೆ: ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಿಸುವ ಗುರಿ
Last Updated 25 ಜುಲೈ 2014, 11:17 IST
ಅಕ್ಷರ ಗಾತ್ರ

ರಾಮನಗರ :  ಜಿಲ್ಲೆಯಲ್ಲಿ ಶಿಕ್ಷಣದಿಂದ ವಂಚಿತರಾಗಿ ಅನಕ್ಷರಸ್ಥರಾಗಿರುವ ವಯ­ಸ್ಕರಿಗೆ ಕೇಂದ್ರ ಸರ್ಕಾರದ ಸಾಕ್ಷರ ಭಾರತ್‌ ಯೋಜನೆಯಡಿ ‘ಅಕ್ಷರ ಭಾಗ್ಯ’ ಕಲ್ಪಿಸಲು ರಾಮನಗರ ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

ಈಗಾಗಲೇ ರಾಜ್ಯದ 18 ಜಿಲ್ಲೆ­ಗಳಲ್ಲಿ ಜಾರಿಯಾಗಿರುವ ಈ ಕಾರ್ಯ­ಕ್ರಮ ಪ್ರಸಕ್ತ ಸಾಲಿನಿಂದ ರಾಮನಗರ, ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಜಿಲ್ಲೆ­ಯಲ್ಲಿ ಅನುಷ್ಠಾನ­ವಾಗುತ್ತಿದ್ದು, ಪ್ರಮು­ಖ­­ವಾಗಿ ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿದೆ.

2011ರ ಜನಗಣತಿ ಪ್ರಕಾರ ರಾಮ­ನಗರ ಜಿಲ್ಲೆಯಲ್ಲಿ ಶೇ 69.22ರಷ್ಟು ಸಾಕ್ಷರತೆಯ ಪ್ರಮಾಣ ಇದೆ. ಇದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ 76.76 ರಷ್ಟಿದ್ದರೆ, ಮಹಿಳಾ ಸಾಕ್ಷ­ರತೆಯ ಪ್ರಮಾಣ ಶೇ 61.50ರಷ್ಟು ಇದೆ. ಮಹಿಳೆಯರ ಸಾಕ್ಷರತೆಯ ಪ್ರಮಾಣ ಪುರುಷರಿಗಿಂತ ಸಾಕಷ್ಟು ಹಿಂದಿರುವುದನ್ನು ಗುರುತಿಸಿರುವ ಕೇಂದ್ರ ಸರ್ಕಾರ ಈ ವರ್ಷದಿಂದ ರಾಮನಗರ ಜಿಲ್ಲೆಯಲ್ಲಿಯೂ ಸಾಕ್ಷರ ಭಾರತ್‌ ಯೋಜನೆ ಅನುಷ್ಠಾನಗೊಳಿಸಲು ನಿರ್ದೇ­ಶನ ನೀಡಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ವಿ. ವೆಂಕಟೇಶ್‌ ತಿಳಿಸಿದರು.

ಮುಖ್ಯಾಂಶಗಳು
*ಈ ವರ್ಷದಿಂದ ಜಿಲ್ಲೆಯಲ್ಲೂ ವಯಸ್ಕರ ಶಿಕ್ಷಣ ಆರಂಭ
*ಸಾಕ್ಷರತೆ ಪ್ರಮಾಣ ಹೆಚ್ಚಳದ ಉದ್ದೇಶ
*ಮೂರು ಹಂತದಲ್ಲಿ ತರಬೇತಿ, ಪ್ರೇರಕರ ನೇಮಕ
*15 ವಯಸ್ಸು ದಾಟಿದ ಅನಕ್ಷರಸ್ಥರಿಗೆ ಶಿಕ್ಷಣ

ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 10.82 ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಅನಕ್ಷರಸ್ಥರಿದ್ದಾರೆ. ರಾಜಧಾನಿಗೆ ಸಮೀಪ ದಲ್ಲಿಯೇ ಇರುವ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾಕ್ಷರತೆ ಪ್ರಮಾಣ ತೀರ ಹಿಂದುಳಿದಿದೆ. ಅದನ್ನು ಹೆಚ್ಚಿಸುವ ಸಲುವಾಗಿಯೇ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಲು ತಿಳಿಸಿದೆ. ಈ ವರ್ಷ ಜಿಲ್ಲೆಯ ಒಂದುಲಕ್ಷ ವಯಸ್ಕರನ್ನು ಸಾಕ್ಷರರನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೂರು ಹಂತದ ತರಬೇತಿ: ಪ್ರತಿ ಗ್ರಾಮಗಳಲ್ಲಿಯೂ ಅನಕ್ಷರಸ್ಥರನ್ನು ಗುರುತಿಸಿ, ಅವರನ್ನು ಸಾಕ್ಷರರನ್ನಾಗಿ­ಸಲು ಮೂರು ಹಂತದ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಮೊದಲ ಹಂತ­ದಲ್ಲಿ ಚಟುವಟಿಕೆಗಳ ಮೂಲಕ ಅಕ್ಷರ­ಗಳ ಪರಿಚಯ ಮಾಡಲಾಗುತ್ತದೆ. ಎರ­ಡನೇ ಹಂತದಲ್ಲಿ ಅಕ್ಷರಗಳನ್ನು ಓದು­ವುದು ಮತ್ತು ಬರೆಯುವ ಬಗ್ಗೆ ತರ­ಬೇತಿ ನೀಡಲಾಗುತ್ತದೆ. ಇಲ್ಲಿ ಮೂರನೇ ತರಗತಿವರೆಗಿನ ಶಿಕ್ಷಣವನ್ನು ಕಲಿಸ­ಲಾಗುವುದು. ಕೊನೆಯ ಹಂತದಲ್ಲಿ ಅಕ್ಷರಗಳನ್ನು ಅರ್ಥ ಮಾಡಿ­ಕೊಳ್ಳು­ವಂತೆ ನಿರಂತರ ಶಿಕ್ಷಣ ನೀಡಲಾಗುತ್ತದೆ ಎಂದರು.

ವೃತ್ತಿ ಶಿಕ್ಷಣ ಮತ್ತು ನಿರಂತರ ಶಿಕ್ಷಣ ಮಾಡಬೇಕೆಂಬ ಆಸಕ್ತಿ ಹೊಂದಿರುವವ­ರಿಗೆ ಹೆಚ್ಚಿನ ಪ್ರೋತ್ಸಾಹವನ್ನೂ ನೀಡ­ಲಾಗುವುದು. ಅಲ್ಲದೆ ಅವರಿಗೆ ಮುಕ್ತ ಶಾಲೆಯ ಮೂಲಕ 10ನೇ ತರಗತಿಗೆ ಸರಿಸಮಾನದ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಆ ನಂತರ ಅವರು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ವಯೋ­ಮಿತಿ ಆಧಾರದ ಮೇಲೆ ತೆಗೆದು­ಕೊಳ್ಳಲು ಅವಕಾಶ ದೊರೆಯುತ್ತದೆ ಎಂದು ಸಿಇಒ ವಿವರಿಸಿದರು.

15 ವಯಸ್ಸಿನ ನಂತರದವರಿಗೆ: ಯೋಜನೆ ಕುರಿತು ಮಾಹಿತಿ ನೀಡಿದ ಸಾಕ್ಷರ ಭಾರತ್‌ ಯೋಜನೆಯ ಜಿಲ್ಲಾ ಸಂಚಾಲಕ ಗೋಪಿನಾಥ್‌ ಅವರು, ಸಾಮಾನ್ಯವಾಗಿ 14 ವರ್ಷದೊಳಗಿನ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ­ಶಾಲೆಗಳಲ್ಲಿ ವ್ಯಾಸಂಗ ಮಾಡುವ ಅವ­ಕಾಶ ಇರುತ್ತದೆ. 15 ವರ್ಷವಾದವರಿಗೆ ಆ ಶಾಲೆಗಳಲ್ಲಿ ಅವಕಾಶ ಇರುವುದಿಲ್ಲ. ಹಾಗಾಗಿ ಅವರು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಅಂತಹವರಿಗೆ ಶಿಕ್ಷಣ ಕಲಿಸಿ, ಸಾಕ್ಷರರನ್ನಾಗಿಸುವ ಮಹತ್ವದ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ ಎಂದರು.

ಈ ಯೋಜನೆಯಲ್ಲಿ ಶೇ 85ರಷ್ಟು ಮಹಿಳೆಯರನ್ನು ಫಲಾನುಭವಿಗಳನ್ನಾಗಿ ಮಾಡಿಕೊಳ್ಳಲಾಗುವುದು. ಉಳಿದ ಶೇ 15ರಷ್ಟು ಪುರುಷ ಫಲಾನುಭವಿಗಳಿರು­ತ್ತಾರೆ. 15ರಿಂದ 45ರ ವಯೋಮಾನ­ದವರಿಗೆ ಆದ್ಯತೆ ನೀಡಲಾಗುವುದು. ಅವರಿಗಿಂತ ಹೆಚ್ಚಿನ ವಯಸ್ಸಿನವರು ಬಂದರೂ ಅವರಿಗೂ ಶಿಕ್ಷಣದ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಪ್ರೇರಕರ ನೇಮಕ :  ಜಿಲ್ಲೆಯ 130 ಗ್ರಾಮ ಪಂಚಾಯ್ತಿಗಳಲ್ಲಿ ಈ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಗೆ ಇಬ್ಬರು ಪ್ರೇರಕರನ್ನು ನೇಮಕ ಮಾಡಲಾಗುತ್ತಿದ್ದು, ಇಬ್ಬರೂ ಮಹಿಳೆಯರೇ ಆಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಮಹಿಳೆಯರು ಸಿಗದ ಸಂದರ್ಭದಲ್ಲಿ ಪುರುಷ ರನ್ನು ನೇಮಿಸಲಾಗುವುದು. ಪ್ರತಿ ಗ್ರಾಮದಲ್ಲಿಯೂ ಕನಿಷ್ಠ 10 ಅನಕ್ಷರಸ್ಥರಿಗೆ ಒಬ್ಬರು ವಿದ್ಯಾವಂತ ಸ್ವಯಂ ಸೇವಕರನ್ನು ನಿಯೋಜಿಸಿ, ಅವರಿಗೆ ಅಕ್ಷರಾಭ್ಯಾಸ ಮತ್ತು ಕಲಿಕೆ ಹೇಳಿಕೊಡುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಈಗಾಗಲೇ ಜಿಲ್ಲೆಯ ಹಲವೆಡೆ ಪ್ರೇರಕರ ನೇಮಕಾತಿ ಮುಗಿದಿದೆ. ಮಾಗಡಿಯ ಕೆಲ ಭಾಗದಲ್ಲಿ ನೇಮಕಾತಿ ನಡೆಯುತ್ತಿದ್ದು, ಅದು ಶೀಘ್ರದಲ್ಲಿಯೇ ಅಂತ್ಯವಾಗಲಿದೆ. ಇವರಿಗೆ ತರಬೇತಿ ನೀಡಿ, ಸೆಪ್ಟೆಂಬರ್‌ ಮೊದಲ ವಾರದಿಂದ ಗ್ರಾಮಗಳಲ್ಲಿ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT