ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಸಂಭ್ರಮದ ರಥೋತ್ಸವ

Last Updated 17 ಏಪ್ರಿಲ್ 2014, 9:06 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ ಪುಣ್ಯಕ್ಷೇತ್ರ ಹಾಗೂ ಗಳಿಗೇ ತೇರು ಎಂದೇ ಹೆಸರು ಪಡೆದಿರುವ ಯಾದಾಪುರ ಜೇನುಕಲ್ ಸಿದ್ದೇಶ್ವರಸ್ವಾಮಿ ರಥೋತ್ಸವ  ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಗಿತು.

ಚೈತ್ರ ಮಾಸ ಬಂತೆಂದರೆ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಜಾತ್ರೆ, ರಥೋತ್ಸವಗಳ ಭರಾಟೆ. ಜತೆಗೆ ದೂರದ ಊರುಗಳಿಂದ ಬರುವ ತಮ್ಮ ಬಂಧು–ಬಳಗದವರಿಂದ ಮನೆಯಲ್ಲಿ ಹಾಗೂ ಜಾತ್ರಾ ಆವರಣದಲ್ಲಿ ಹಬ್ಬದ ಕಳೆ ಎದ್ದು ಕಾಣುತ್ತದೆ. ಜೇನುಕಲ್‌ ಸಿದ್ದೇಶ್ವರ ಜಾತ್ರಾ  ಮಹೋತ್ಸವದ ಅಂಗವಾಗಿ ಸುತ್ತಮುತ್ತಲ 12 ಗ್ರಾಮಗಳಲ್ಲಿಯೂ ಜಾತ್ರಾ ಮಹೋತ್ಸವದ ಸಡಗರ ಕಂಡುಬರುತ್ತದೆ.

ಮಂಗಳವಾರ ಸಂಜೆ ಜೇನುಕಲ್‌ ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿ ಪಾದುಕೆಗಳಿಗೆ ಅಂಕುರಾರ್ಪಣೆ, ಭಕ್ತಾದಿಗಳಿಂದ ನೂರೊಂದೆಡೆ ಸೇವೆ, ರಾತ್ರಿ ಬಸವನ ಉತ್ಸವ, ಉಪ್ಪರಿಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಬೆಳ್ಳಿ ಪಲ್ಲಕ್ಕಿ ಮಹೋತ್ಸವ, ಹುಲಿ, ಅಶ್ವ ಹಾಗೂ ಬಿಲ್ವ ವೃಕ್ಷೋತ್ಸವ ಮುಂತಾದ 12 ಉತ್ಸವಗಳು ಹಾಗೂ ಗುಗ್ಗಳ ಸೇವೆ ರಾತ್ರಿಯಿಡೀ ನಡೆದವು.

ಚೌಡೇಶ್ವರಿ ದೇವಿ ಬ್ರಹ್ಮರಥೋತ್ಸವ
ಹಿರೀಸಾವೆ: ಇಲ್ಲಿನ ಗ್ರಾಮ ದೇವತೆ ಚೌಡೇಶ್ವರಿದೇವಿ ಬ್ರಹ್ಮರಥೋತ್ಸವವು ಬುಧವಾರ ಸಾವಿರಾರು ಭಕ್ತರ ಸಮ್ಮಖದಲ್ಲಿ  ವಿಜೃಂಭಣೆಯಿಂದ ನಡೆಯಿತು.ಗ್ರಾಮದ ಹೊರಗೆ, ಕೆರೆ ಏರಿ ಮೇಲೆ ಇರುವ ದೇವರ ಮೂಲಸ್ಥಾನದಲ್ಲಿ ಬೆಳಿಗ್ಗೆ ಉತ್ಸವ ಮೂರ್ತಿಗೆ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಯಿತು. ನಂತರ ವಿಶೇಷ ಪೂಜೆಗಳನ್ನು ಸಲ್ಲಿಸಿ, ಭಕ್ತರ ವೇದ ಘೋಷಗಳು ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆತಂದು, ಊರ ಮದ್ಯದಲ್ಲಿರುವ ಉಯ್ಯಾಲೆ ಕಂಬದಲ್ಲಿ ಕೂರಿಸಲಾಯಿತು.
ರಾಹುಕಾಲದಲ್ಲಿ ರಥಕ್ಕೆ ಬಲಿ ಅನ್ನವನ್ನು ಅರ್ಪಿಸಲಾಯಿತು.

ರಥೋತ್ಸವದ ನೇತೃತ್ವವನ್ನು ಗ್ರಾಮದ ಅರಳಿಮರದ ಮನೆತನದವರು ವಹಿಸಿದ್ದರು. ಧಾರ್ಮಿಕ ವಿಧಿವಿಧಾನಗಳನ್ನು ಧರ್ಮದರ್ಶಿಗಳಾದ ಅನಂತರಾಮಯ್ಯ ಮತ್ತು ಪಣೀಶ್ ನಡೆಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಿ.ಜಿ. ಅಂಬಿಕಾರಾಮಕೃಷ್ಣ,  ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್ ಹಾಜರಿದ್ದರು.

ಸಂಭ್ರಮದ ವಸಂತೋತ್ಸವ
ಚನ್ನರಾಯಪಟ್ಟಣ: ಜಗತ್ತಿಗೆ ತ್ಯಾಗ, ಶಾಂತಿ ಸಂದೇಶ ಸಾರಿದ ಶ್ರವಣಬೆಳಗೊಳದಲ್ಲಿ ಬುಧವಾರ ‘ವಸಂತೋತ್ಸವ’ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಂಡಾರ ಬಸದಿಯಲ್ಲಿ ಲಘುಸಿದ್ದ ಚಕ್ರವಿಧಾನ ಹಾಗೂ 24 ತೀರ್ಥಂಕರರಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ವಿಂದ್ಯಗಿರಿಬೆಟ್ಟದಲ್ಲಿ ಗೊಮ್ಮಟೇಶ್ವರಸ್ವಾಮಿಗೆ ಪಾದಪೂಜೆ ಮಾಡಲಾಯಿತು. ಕಲ್ಯಾಣಿಯಲ್ಲಿ ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು. ಭಂಡಾರ ಬಸದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಶ್ರವಣಬೆಳಗೊಳದ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಭಾಗವಹಿಸಿದ್ದರು.

ನಮ್ಮ ಊರ ಹಬ್ಬ
ಹಿರೀಸಾವೆ: ‘ನಮ್ಮ ಊರ ಹಬ್ಬ’ದಲ್ಲಿ ಸಾವಿರಾರು ಭಕ್ತರು ಮಂಗಳವಾರ ರಾತ್ರಿ ಹಿರೀಸಾವೆಯಲ್ಲಿ ಹೆಬ್ಬಾರಮ್ಮ ದೇವರ ಮೆರವಣಿಗೆಯನ್ನು  ನಡೆಸಿದರು. ಹಿರೀಸಾವೆ ಮತ್ತು ಹೊನ್ನೇನಹಳ್ಳಿ ಗ್ರಾಮಗಳಲ್ಲಿರುವ ದೇವರ ಮನೆತನದವರು ಮಡಿಕೆಯಲ್ಲಿ ಮಡೆ ಮಾಡಿ, ದೇವರ ಹಿಂದೆ ಮೆರವಣಿಗೆ ಬಂದರು. ದೇವರನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ, ನಡೆಮುಡಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಹಿರೀಸಾವೆಯ ದೊಡ್ಡ ಮನೆತನದವರು ದೇವರ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT