ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತ ವಿಮುಕ್ತರ ಬೃಹತ್‌ ಪ್ರತಿಭಟನೆ

Last Updated 28 ಜನವರಿ 2015, 11:17 IST
ಅಕ್ಷರ ಗಾತ್ರ

ಎಚ್.ಡಿ. ಕೋಟೆ: ಮೈಸೂರು ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕುಗಳ ಜೀತದಾಳುಗಳನ್ನು ಶೀಘ್ರ ಗುರುತಿಸಿ, ವಿಮುಕ್ತಿಗೊಳಿಸಬೇಕು, ಈಗಾಗಲೇ ಜೀತ ವಿಮುಕ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಮಂಗಳವಾರ ಇಲ್ಲಿ ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಸಲಾಯಿತು.

‘ಜೀವಕ’ ಸಂಘಟನೆಯ ರಾಜ್ಯ ಸಂಚಾಲಕ ನೂರಲಕುಪ್ಪೆ ಉಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಜೀತದಾಳುಗಳಿದ್ದಾರೆ. ನೂರಾರು ಮಂದಿ ಪ್ರಬಲ ವ್ಯಕ್ತಿಗಳು ಜೀತ ಪ್ರಕರಣಗಳನ್ನು ತಿರುಚಿ ಮರೆಮಾಚುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

‘ಜೀವಿಕ’ ಬಸವರಾಜು ಮಾತನಾಡಿ, ಜಿಲ್ಲಾಧಿಕಾರಿಗಳು ಒಂದು ತಿಂಗಳಲ್ಲಿ ಜೀತದಾಳುಗಳನ್ನು ಗುರುತಿಸಿ ವರದಿ ನೀಡಿ ಎಂದು ಉಪವಿಭಾಗಾಧಿಕಾರಿ ಅವರಿಗೆ  ಸೂಚಿಸಿದ್ದರು. ಆದರೆ, ಒಂದು ವರ್ಷವಾದರೂ ಆ ಕೆಲಸ ಪೂರ್ಣಗೊಂಡಿಲ್ಲ. ಮರು ತನಿಖೆ ಮಾಡಿಸಿ ನಿಜವಾದ ಜೀತದಾಳುಗಳನ್ನು ಗುರುತಿಸಿ ಪರಿಹಾರ ಮತ್ತು ಪುನರ್ವಸತಿಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

ಹತ್ತು ದಿನಗಳ ಒಳಗೆ ಎಲ್ಲಾ ಪ್ರಕರಣಗಳು ಇತ್ಯರ್ಥವಾಗದಿದ್ದರೆ ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಅದೀವೇಶನಕ್ಕೆ ತೆರಳಿ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶಿವಸ್ವಾಮಿ, ತಾಲ್ಲೂಕು ಆಡಳಿತದಿಂದಾಗುವ ಕೆಲಸಗಳನ್ನು ಶೀಘ್ರ ­ಮಾಡಲಾಗುವುದು. ಇನ್ನುಳಿದ ಬೇಡಿಕೆಗಳನ್ನು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನಿಮ್ಮ ಮನವಿಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಲಾಗುವುದು ಎಂದರು.

ಚಂದ್ರಶೇಖರಮೂರ್ತಿ, ಮಹೇಶ್‌, ಶಿವರಾಜು, ನಾಗರಾಜು, ವೆಂಕಟೇಶ್‌, ಸಿದ್ದರಾಮಯ್ಯ, ನಾಗಮ್ಮ, ಮಲ್ಲಿಗಮ್ಮ, ಮುದ್ದಮ್ಮ, ಚಂದ್ರಮ್ಮ, ಗೋಪಾಲ, ಶಿವರಾಜು, ವೆಂಕಟೇಶ್‌ ಪ್ರತಿಭಟನೆಯಲ್ಲಿ ಇದ್ದರು.

ಇದಕ್ಕೂ ಮುನ್ನ ಪಟ್ಟಣದ ಪೊಲೀಸ್‌ ಠಾಣೆಯಿಂದ ಮೆರವಣಿಗೆ ಹೊರಟು ಮಿನಿವಿಧಾನಸೌಧದವರಗೆ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಪ್ರಮುಖ ಬೇಡಿಕೆಗಳು
* 2012ನೇ ಸಾಲಿನಲ್ಲಿ ಗುರುತಿಸಿರುವ 365 ಮಂದಿ ಜೀತದಾಳುಗಳ ಪೈಕಿ 40 ಮಂದಿಗೆ ಮಾತ್ರ ಬಿಡುಗಡೆ ಪತ್ರ ಸಿಕ್ಕಿದೆ. ಉಳಿದೆಲ್ಲರಿಗೂ ಬಿಡುಗಡೆ
ಪತ್ರ ನೀಡಬೇಕು.
* 2011ರಲ್ಲಿ ತಾಲ್ಲೂಕಿನಲ್ಲಿ ಬಿಡುಗಡೆಗೊಂಡಿರುವ 253 ಮಂದಿ ಮತ್ತು 2014ರಲ್ಲಿ ಬಿಡುಗಡೆಗೊಂಡ 40 ಮಂದಿ, ಪಿರಿಯಾಪಟ್ಟಣದ ತಾಲ್ಲೂಕಿನಲ್ಲಿ 22 ಮಂದಿ, ಹುಣಸೂರಿನ 7 ಮಂದಿ  ಜೀತದಾಳುಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು.
* ಸಂಘಟನೆಯ ವತಿಯಿಂದ 2013ನೇ ಸಾಲಿನಲ್ಲಿ 38 ಮಂದಿ, 2014ರಲ್ಲಿ 40 ಮಂದಿ ಜೀತದಾಳುಗಳನ್ನು ಗುರುತಿಸಿದ್ದು, ತಕ್ಷಣ ಈ ಜೀತದಾಳುಗಳನ್ನು ಬಿಡುಗಡೆ ಮಾಡಬೇಕು.
* ಕೋಹಳ ಸರ್ವೆ ನಂ. 23,45,48 ಹಾಗೂ ಬಂಕವಾಡಿ ಸರ್ವೆ ನಂ. 48ರಲ್ಲಿ ಜೀತದಾಳುಗಳ ಮತ್ತು ಕೃಷಿ ಕಾರ್ಮಿಕರು ವ್ಯವಸಾಯ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT