ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವದ ಹಂಗು ತೊರೆದು...

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಗಡಿಯಾರದ ಮುಖ ನೋಡದೆ ಕೆಲಸ ಮಾಡುವ ಏಕೈಕ ವೃತ್ತಿ ಎಂದರೆ ಪತ್ರಿಕಾ ವೃತ್ತಿ. ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಕೆಲಸ ಮಾಡುತ್ತ ಸುದ್ದಿ ನೀಡುವುದು ಪತ್ರಕರ್ತರಿಗೆ ಸವಾಲಿನ ಕೆಲಸವೇ ಸರಿ. ರಾಜ್ಯ ಪತ್ರಿಕಾ ದಿನಾಚರಣೆ ನಿಮಿತ್ತ, ಜೀವದ ಹಂಗು ತೊರೆದು ಸುದ್ದಿ ತರಲು ಹೋಗಿ ಪ್ರಾಣತೆತ್ತ ಯುವ ಪತ್ರಕರ್ತರ ಪರಿಚಯ ಈ ಬಾರಿ.

ಮೈಕೆಲ್ ಹೆಸ್ಟಿಂಗ್
ಅಮೆರಿಕ ಮೂಲದ ಖ್ಯಾತ ಯುವ ಪತ್ರಕರ್ತ ಮೈಕೆಲ್ ಹೆಸ್ಟಿಂಗ್ ಅವರ ದುರಂತ ಕಥೆ ಇದು. ಇರಾಕ್ ನಾಗರಿಕರ ಪರವಾಗಿ ಹೋರಾಟಕ್ಕೆ ಇಳಿದು ಪ್ರಿಯತಮೆಯನ್ನು ಕಳೆದುಕೊಂಡರೂ ಸಂಶೋಧನಾ ವರದಿಗಾರಿಕೆಯನ್ನು ಮುಂದುವರೆಸಿದ್ದ ಹೆಸ್ಟಿಂಗ್ ದುರಾದೃಷ್ಟವಶಾತ್ ಅಪಘಾತದಲ್ಲಿ ಸಾವನ್ನಪ್ಪಿದರು. ಆಗ ಅವರಿಗೆ ಕೇವಲ 33 ವರ್ಷ.

ಡಿಜಿಟಲ್ ಮೀಡಿಯಾ ವಿಷಯದಲ್ಲಿ ಪದವಿ ಪಡೆದಿದ್ದ ಹೆಸ್ಟಿಂಗ್ ‘ರೋಲಿಂಗ್ ಸ್ಟೋನ್’ ಪತ್ರಿಕೆಯ ಮೂಲಕ ವೃತ್ತಿ ಜೀವನ ಆರಂಭಿಸಿದರು. ನಂತರ ಟೈಮ್ಸ್ ಪತ್ರಿಕೆಯಲ್ಲಿ ಸಂಶೋಧನಾ ವರದಿಗಾರರಾಗಿ ಕೆಲಸಕ್ಕೆ ಸೇರಿಕೊಂಡರು.

ಕುಶಾಗ್ರಮತಿಯಾಗಿದ್ದ ಹೆಸ್ಟಿಂಗ್, ಸುದ್ದಿಯನ್ನು ಹೆಕ್ಕಿ ತೆಗೆಯುವುದರಲ್ಲಿ ನಿಸ್ಸೀಮರಾಗಿದ್ದರು. ಹೆಸ್ಟಿಂಗ್ ತನ್ನ ಸಹೋದ್ಯೋಗಿ ಅಂದೇರಾ ಅವರನ್ನು ಪ್ರೀತಿಸುತ್ತಿದ್ದರು. 2007ರಲ್ಲಿ ಇಬ್ಬರೂ ಮದುವೆಯಾಗಲು ಬಯಸಿದ್ದರು.

ಹೆಸ್ಟಿಂಗ್ ಮತ್ತು ಅಂದೇರಾ ಬಹಳ ಚುರುಕಿನಿಂದ ಕೆಲಸ ಮಾಡುತ್ತಿದ್ದರಿಂದ ಪತ್ರಿಕೆಯು ಅವರನ್ನು ಇರಾಕ್ ದೇಶಕ್ಕೆ ಕಳುಹಿಸಿಕೊಟ್ಟಿತು. ಇರಾಕ್‌ನಲ್ಲಿ ನಾಗರಿಕ ಯುದ್ಧದ ಕುರಿತಂತೆ ಸಮಗ್ರ ವರದಿ ಮಾಡುವ ಮೂಲಕ ವಿಶ್ವಸಂಸ್ಥೆಯ ಗಮನ ಸೆಳೆದಿದ್ದರು.

ಸ್ಥಳೀಯ ಸರ್ಕಾರ ಹಾಗೂ ಉಗ್ರರ ವಿರೋಧ ಕಟ್ಟಿಕೊಂಡಿದ್ದ ಈ ಯುವ ಜೋಡಿಗೆ ಪ್ರಾಣ ಬೆದರಿಕೆಯೂ ಇತ್ತು. ಯಾವ ಬೆದರಿಕೆಗೂ ಜಗ್ಗದೆ ಜೀವದ ಹಂಗು ತೊರೆದು ವರದಿಗಾರಿಕೆಯಲ್ಲಿ ತಲ್ಲೀನರಾಗಿದ್ದರು. ಹೆಸ್ಟಿಂಗ್ ಮತ್ತು ಅಂದೇರಾ ಉಗ್ರರ ಅಡಗುತಾಣಗಳ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡುತ್ತಿದ್ದಾರೆ ಎಂದು ಆಲ್‌ಖೈದಾ ಉಗ್ರರು ಬಲವಾಗಿ ನಂಬಿದ್ದರು.

2007ರ ಮಾರ್ಚ್‌ನಲ್ಲಿ ಅಲ್‌ಖೈದಾ ಉಗ್ರರು ಅಂದೇರಾ ಅವರಿದ್ದ ಕಾರನ್ನು ಸ್ಫೋಟಿಸಿ ಹತ್ಯೆ ಮಾಡಿದರು. ಸ್ವಲ್ಪದರಲ್ಲೇ ಹೆಸ್ಟಿಂಗ್ ಪ್ರಾಣಾಪಾಯದಿಂದ ಪಾರಾದರು.

ಅಂದೇರಾ ಮೇಲಿನ ಪ್ರೀತಿಯ ಕುರಿತಂತೆ ‘ಐ ಲಾಸ್ಟ್ ಮೈ ಲವ್ ಇನ್ ಬಾಗ್ದಾದ್’ ಎಂಬ ಪುಸ್ತಕ ಬರೆದರು. ಇಲ್ಲಿನ ನಾಗರಿಕ ಸರ್ಕಾರ ಸಾರ್ವಜನಿಕರನ್ನು ಯಾವ ರೀತಿ ಶೋಷಣೆ ಮಾಡುತ್ತಿದೆ ಎಂಬುದನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. 2011ರಲ್ಲಿ ಅಮೆರಿಕಕ್ಕೆ ಮರಳಿದ ಹೆಸ್ಟಿಂಗ್, 2013ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು.

*
ಸಗಲ್ ಸಲಾದ್ ಒಸ್ಮಾನ್
ಸಗಲ್ ಸಲಾದ್ ಒಸ್ಮಾನ್ ಅವರು ಸೊಮಾಲಿಯ ದೇಶದ ಯುವ ಪತ್ರಕರ್ತೆ. ಸೊಮಾಲಿಯಾ ಸರ್ಕಾರ ನಡೆಸುವ ಎಸ್‌ಎನ್‌ ಟಿ.ವಿಯಲ್ಲಿ ನಿರೂಪಕಿ ಹಾಗೂ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಪಿಎಚ್‌ಡಿ ಮಾಡುತ್ತಿದ್ದರಿಂದ ವಿಶ್ವ ವಿದ್ಯಾಲಯದ ಮಹಿಳಾ ಹಾಸ್ಟೆಲ್‌ನಲ್ಲಿ ಸಗಲ್ ತಂಗಿದ್ದರು.

2016 ಜನವರಿ 11ರಂದು ಸಗಲ್ ಕೆಲಸ ಮುಗಿಸಿಕೊಂಡು ಹಾಸ್ಟೆಲ್‌ಗೆ ಮರಳಿದರು. ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಯಾರೋ ಬೆಲ್ ಮಾಡಿದ ಸದ್ದಾಯಿತು. ಕೂಡಲೇ ಹೋಗಿ ಬಾಗಿಲು ತೆರೆದರು. ಎರಡೇ ನಿಮಿಷದಲ್ಲಿ ಹೆಣವಾಗಿ ರಕ್ತದ ಮಡುವಿನಲ್ಲಿ ಬಿದ್ದರು.

ಅಪರಿಚಿತ ಬಂದೂಕುಧಾರಿಯೊಬ್ಬ ಸಗಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ. ವಿಶ್ವಸಂಸ್ಥೆ ಈ ಹತ್ಯೆಯನ್ನು ತೀವ್ರವಾಗಿ ಖಂಡಿಸಿತು. ವಿಶ್ವಸಮುದಾಯದ ಒತ್ತಡಕ್ಕೆ ಮಣಿದ ಸೊಮಾಲಿಯಾ ಸರ್ಕಾರ ಸಗಲ್ ಹತ್ಯೆ ಪ್ರಕರಣವನ್ನು ತನಿಖೆಗೆ ಒಪ್ಪಿಸಿತು. ಹತ್ಯೆ ನಡೆದು ಐದು ತಿಂಗಳು ಕಳೆದರೂ ಇಲ್ಲಿಯವರೆಗೂ ಹಂತಕನ ಸುಳಿವು ಸಿಕ್ಕಿಲ್ಲ.

ಸುದ್ದಿ ನಿರೂಪಕಿ ಮಾತ್ರವಲ್ಲದೆ ಸಂಶೋಧನಾ ವರದಿಗಾರ್ತಿಯಾಗಿಯೂ ಸಗಲ್ ಕೆಲಸ ಮಾಡುತ್ತಿದ್ದರು. ಸ್ಥಳೀಯ ಸರ್ಕಾರಗಳು ಕಡಲ್ಗಳ್ಳರಿಗೆ ಕುಮ್ಮಕ್ಕು ನೀಡುತ್ತಿವೆ ಎಂಬ ವರದಿಯನ್ನು ಸಾಕ್ಷಿ ಸಮೇತವಾಗಿ ಸಿದ್ಧಪಡಿಸಿದ್ದರು. ಈ ಬಗ್ಗೆ ಎಸ್‌ಎನ್‌ಟಿ.ವಿಯ ಹಿರಿಯ ಸಂಪಾದಕರ ಜತೆಯಲ್ಲಿ ಚರ್ಚೆ ನಡೆಸಿದ್ದರು.

ಸುದ್ದಿ ಮನೆಯಿಂದ ಈ ಗೌಪ್ಯ ಮಾಹಿತಿ ಸರ್ಕಾರ ಮತ್ತು ಇಸ್ಲಾಮಿಕ್ ಉಗ್ರರ ಕಿವಿಗೆ ಬಿದ್ದಿತ್ತು. ವರದಿಗೆ ಸಂಬಂಧಿಸಿದ ವಿಡಿಯೊ ಮತ್ತು ಸ್ಕ್ರಿಪ್ಟ್ ಅನ್ನು ಸಂಪಾದಕರಿಗೆ ನೀಡಿ ಹಾಸ್ಟೆಲ್‌ಗೆ ಮರಳಿದ ಕೆಲವೇ ಗಂಟೆಗಳಲ್ಲಿ ಸಗಲ್ ಹತ್ಯೆಯಾಗಿದ್ದು ದುರಂತ.

ಸೊಮಾಲಿಯಾ ಸರ್ಕಾರ ಮತ್ತು ಇಸ್ಲಾಮಿಕ್ ಉಗ್ರರು ಸೇರಿ ಯುವ ಪತ್ರಕರ್ತೆ ಸಗಲ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಧನ ಸಹಾಯದಲ್ಲಿ ಕೆಲಸ ಮಾಡುತ್ತಿರುವ ಸೊಮಾಲಿಯಾ ಮಿಷನ್ ವರದಿ ಪ್ರಕಟಿಸಿತ್ತು. ಸೊಮಾಲಿಯಾ ಸರ್ಕಾರ ಈ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಶೋಚನೀಯ ಸಂಗತಿ ಎಂದು ಇಲ್ಲಿ ಆರೋಪಗಳೂ ಕೇಳಿಬಂದವು.

*
ಹಸೀಮ್ ಅಲ್ ಹರ್ಮಾನ್
ಇದು ಯೆಮನ್ ದೇಶದ ಅತಿ ಕಿರಿಯ ಯುವ ಪತ್ರಕರ್ತ ಹಸೀಮ್ ಅಲ್ ಹರ್ಮಾನ್ ಅವರ ದುರಂತ ಸಾವಿನ ಕಥೆ. ಇಸ್ಲಾಮಿಕ್ ಉಗ್ರರು ಮತ್ತು ಸರ್ಕಾರಿ ಸೇನೆ ನಡುವಿನ ಯುದ್ಧದ ಸನ್ನಿವೇಶಗಳನ್ನು ಚಿತ್ರೀಕರಿಸಲು ಹೋಗಿ ಹರ್ಮಾನ್ ಪ್ರಾಣತ್ಯಾಗ ಮಾಡಿದ್ದಾರೆ.

2016 ಜನವರಿ 21ರಂದು ಯೆಮನ್ ದೇಶದ ಸಾದಾ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಉಗ್ರರು ಮತ್ತು ಸರ್ಕಾರಿ ಸೇನೆ ನಡುವೆ ಯುದ್ಧ ಆರಂಭವಾಗಿತ್ತು. ಇಲ್ಲಿನ ಸ್ಥಳೀಯ ಅಲ್-ಮಸೀರ್ಹಾ ಎಂಬ ಸುದ್ದಿ ವಾಹಿನಿಯಲ್ಲಿ ಹರ್ಮಾನ್ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದರು.

ಆಗ ಅವರಿಗೆ ಕೇವಲ 13 ವರ್ಷಗಳು ಮಾತ್ರ. ಯುದ್ಧದ ಭೀಕರತೆ ಮತ್ತು ನಾಗರಿಕರ ಸಮಸ್ಯೆಗಳನ್ನು ಬಿಂಬಿಸುವ ವರದಿಯನ್ನು ಪ್ರಸಾರ ಮಾಡಲು ಸಂಪಾದಕರು ನಿರ್ಧರಿಸಿದ್ದರು. ಅದಕ್ಕಾಗಿ ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸುವಂತೆ ಅನುಭವಿ ಕ್ಯಾಮೆರಾಮನ್‌ಗಳಿಗೆ ಸಂಪಾದಕರು ಸೂಚಿಸಿದ್ದರು.

ವಾಹಿನಿಯ ಎಲ್ಲ ಕ್ಯಾಮೆರಾಮನ್‌ಗಳು ಅಲ್ಲಿಗೆ ಹೋಗಲು ನಿರಾಕರಿಸಿದ್ದರು. ಕೊನೆಗೆ ಹರ್ಮಾನ್ ಯುದ್ಧ ಭೂಮಿಗೆ ಹೋಗಬೇಕಾಯಿತು. ಸಂಪಾದಕರು ಮತ್ತು ಇತರ ಸಹೋದ್ಯೋಗಿಗಳು ಒಲ್ಲದ ಮನಸ್ಸಿನಿಂದ ಹರ್ಮಾನ್ ಅವರನ್ನು ಕಳುಹಿಸಿಕೊಟ್ಟಿದ್ದರು.

ಹರ್ಮಾನ್, ಹೆಗಲ ಮೇಲೆ ಕ್ಯಾಮೆರಾ ನೇತು ಹಾಕಿಕೊಂಡು ಉತ್ಸಾಹದಿಂದಲೇ ರಣರಂಗಕ್ಕೆ ಹೋದರು. ಯುದ್ಧದ ಭೀಕರತೆ ಸಾರುವ ನೂರಾರು ವಿಡಿಯೊಗಳನ್ನು ಚಿತ್ರೀಕರಿಸಿ ಕಚೇರಿಗೆ ಕಳುಹಿಸಿಕೊಟ್ಟಿದ್ದರು. ಸಂಪಾದಕರಿಂದ ಕಚೇರಿಗೆ ಮರಳುವಂತೆ ಸೂಚನೆಯೂ ಬಂದಿತ್ತು.

ಇನ್ನೇನು ಕಚೇರಿಗೆ ಹೋಗ ಬೇಕು ಎನ್ನುವಷ್ಟರಲ್ಲಿ ಸರ್ಕಾರಿ ಪಡೆಗಳು ನಡೆಸಿದ ಹಠಾತ್ ವಾಯು ದಾಳಿಯಲ್ಲಿ ಹರ್ಮಾನ್ ಗಂಭೀರವಾಗಿ ಗಾಯಗೊಂಡರು. ಯೋಧರು ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದರಾದರೂ ಹರ್ಮಾನ್ ಬದುಕುಳಿಯಲಿಲ್ಲ.

ಯುದ್ಧದ ಭೀಕರತೆಯನ್ನು ಚಿತ್ರೀಕರಿಸಲು ಹೋಗಿ ಹರ್ಮಾನ್ ಪ್ರಾಣ ಕಳೆದುಕೊಂಡರು. ಹರ್ಮಾನ್ ಚಿತ್ರೀಕರಿಸಿದ್ದ ಯುದ್ಧದ ವಿಡಿಯೊಗಳು ಅಂತರರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದ್ದು ವಿಶೇಷ.

ಹರ್ಮಾನ್ ಅವರ ಧೈರ್ಯ ಮತ್ತು ಸಾಹಸಕ್ಕೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು. ಸಿಎನ್‌ಎನ್ ಮತ್ತು ಬಿಬಿಸಿ ಸುದ್ದಿ ವಾಹಿನಿಗಳು ಹರ್ಮಾನ್ ಕುರಿತ ಸಾಕ್ಷ್ಯ ಚಿತ್ರಗಳನ್ನು ತಯಾರಿಸಿ ಪ್ರಸಾರ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT