ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯಕ್ಕೆ ಮಾರಕ ಗ್ಲೈಫೊಸೇಟ್

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಫ್ರೆಂಚ್‌ನಲ್ಲಿ ‘ಕಳೆ’ ಎಂಬ ಶಬ್ದ ಇಲ್ಲವೇ ಇಲ್ಲವೆಂದು ರೈತ ಮಿತ್ರರೊಬ್ಬರು ಹೇಳಿದರು. ಕುತೂಹಲಗೊಂಡು ಈ ಪದದ ಹಿಂದೆ ಬಿದ್ದಾಗ, ಫ್ರೆಂಚ್‌ನಲ್ಲಿ ಕಳೆಗೆ ಇರುವ ಸಮನಾರ್ಥಕ ಪದಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದವು. ಆ ಭಾಷೆಯಲ್ಲಿರುವುದು ಒಳ್ಳೆಯ ಗಿಡಮೂಲಿಕೆ (ಗುಡ್ ಹರ್ಬ್ಸ್) ಮತ್ತು ಕೆಟ್ಟ ಗಿಡಮೂಲಿಕೆ (ಬ್ಯಾಡ್ ಹರ್ಬ್ಸ್) ಮಾತ್ರ. ಇವುಗಳನ್ನು ಆಯಾ ಕೃಷಿ ಪ್ರದೇಶಗಳಲ್ಲಿ ನಿಯಂತ್ರಿಸಬೇಕೇ ಹೊರೆತು, ಪ್ರಕೃತಿಯಿಂದ ಯಾವುದನ್ನೂ ನಶಿಸಿಬಾರದು ಎನ್ನುವ ಮೂಲತತ್ವವೇ ಈ ವರ್ಗೀಕರಣದ ಆಧಾರ.

ಕನ್ನಡದಲ್ಲೂ, ಕಳೆಯೆಂದರೆ ಇಂಗ್ಲಿಷ್‌ನ ವೀಡ್ (weed) ಅಲ್ಲ. ‘ಏನಪ್ಪ ಮುಖದಲ್ಲಿ ಬಹಳ ಕಳೆ’ ಎಂಬರ್ಥದಲ್ಲೂ ಬಳಸುತ್ತಾರೆ. ಇದು ‘ಕಳೆ’ ಎಂಬುದು ಅನುಪಯುಕ್ತವಾದದಲ್ಲ ಎಂದು ಸೂಚಿಸುತ್ತದೆ. ಆದರೆ ಬಹುತೇಕ ಗಿಡಮೂಲಿಕೆಗಳನ್ನು ನಮ್ಮ ರೈತರು ಕಳೆ ಎಂದು ಪರಿಗಣಿಸಿ ಮತ್ತೆ ಮತ್ತೆ ಟ್ರಾಕ್ಟರ್ ಹೊಡೆಸುವುದು ಅಥವಾ ಗ್ಲೈಫೊಸೇಟ್‌ನಂತಹ ಕಳೆನಾಶಕ ಬಳಸಿ ಜೀವಸಂಕುಲದ ಜೈವಿಕ ಚಕ್ರವನ್ನೇ ಬದಲಿಸುತ್ತಿದ್ದಾರೆ. ಈ ಎರಡೂ ವಿಧಾನಗಳಿಂದ ಮಣ್ಣಿನಲ್ಲಿರುವ 80ಕ್ಕೂ ಹೆಚ್ಚು ರೈತಸ್ನೇಹಿ ಬ್ಯಾಕ್ಟೀರಿಯಾಗಳು ಸತ್ತು, ಮಣ್ಣಿಗೆ ಅಸಾಧ್ಯ ರೋಗಗಳು ಉಲ್ಬಣಿಸಿವೆ.

ಒಂದೆಡೆ ಗರಿಕೆಯನ್ನು ಕಳೆಯೆಂದು ನಾಶಪಡಿಸುತ್ತಿರುವ ರೈತರು; ಮತ್ತೊಂದೆಡೆ, ಅದೇ ಗರಿಕೆಯ ಜ್ಯೂಸ್‌ ಆರೋಗ್ಯಕ್ಕೆ ಅವಶ್ಯಕ ಎಂದು ಹಣ ಕೊಟ್ಟು ಖರೀದಿಸುವ ಪಟ್ಟಣದ ಜನ... ಇದು ವಿಪರ್ಯಾಸವಲ್ಲದೇ ಇನ್ನೇನು?

ಏನಿದು ಗ್ಲೈಫೊಸೇಟ್
ಅದೇನೇ ಇರಲಿ. ಇಲ್ಲಿ ಹೇಳಹೊರಟಿರುವುದು ವಿನಾಶಕಾರಿ ಕಳೆನಾಶಕ ‘ಗ್ಲೈಫೊಸೇಟ್’ ಬಗ್ಗೆ. ಮಾನ್ಸೆಂಟೋ ಕಂಪೆನಿ 1970ರಲ್ಲಿ ಪರಿಚಯಿಸಿದ ಕಳೆನಾಶಕ ಇದಾಗಿದ್ದು, ಇಂದು ಜಗತ್ತಿನಾದ್ಯಂತ ಯಥೇಚ್ಛವಾಗಿ ಬಳಕೆಯಾಗುತ್ತಿರುವ ರಾಸಾಯನಿಕವಾಗಿದೆ. ಮಾನ್ಸೆಂಟೋ ಕಂಪೆನಿಯೇ ಅಧಿಕೃತವಾಗಿ ಗ್ಲೈಫೊಸೇಟ್ ಅನ್ನು ಅಧಿಕವಾಗಿ ಬಳಸದಂತೆ ಎಚ್ಚರಿಸುತ್ತದೆ. ಇದರಿಂದ ಮಣ್ಣು-ಬೆಳೆಗೆ ಕಾಡುತ್ತಿರುವ ರೋಗಗಳ ಬಗ್ಗೆ ಸಾವಿರಾರು ಸಂಶೋಧನೆಗಳು ನಡೆದಿದ್ದು, ಯಾವೊಂದು ಸಂಶೋಧನೆಯೂ ಗ್ಲೈಫೊಸೇಟ್ ಬಳಕೆಯನ್ನು ಪುಷ್ಟೀಕರಿಸುವುದಿಲ್ಲ.

ಈ ಕಳೆನಾಶಕ, ಯಾವೊಂದು ಕಳೆಯನ್ನು ನೇರವಾಗಿ ಕೊಲ್ಲುವುದಿಲ್ಲ. ಬದಲಾಗಿ ಗಿಡದ ಬೇರಿಗೆ ಇಳಿದು, ಅದರ ಸುತ್ತಲ ಮಣ್ಣಿನಲ್ಲಿರುವ ಮ್ಯಾಂಗನೀಸ್, ಕಬ್ಬಿಣ, ಕ್ಯಾಲ್ಸಿಯಮ್, ತಾಮ್ರದಂತ ಪೌಷ್ಠಿಕಾಂಶಗಳನ್ನು ನಿಶ್ಚಲಗೊಳಿಸುತ್ತದೆ. ಯಾವುದೇ ಸಮಗ್ರ ಆಹಾರ ಸಿಗದ ಅಂತಹ ಕಳೆ ಅಥವಾ ಗಿಡ ಬೇರಿನಿಂದಲೇ ಒಣಗಿಬಿಡುತ್ತದೆ. ಈ ಕಳೆನಾಶಕ ಮಣ್ಣಿನ ಆರು ಇಂಚುಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಅವಧಿ, ಗಾಳಿ-ಬೆಳಕಿನಿಂದ ಯಾವುದೇ ಮಾರ್ಪಾಡಾಗದೇ ಇರುವುದರಿಂದ, ವರ್ಷದ ಚಕ್ರದಲ್ಲಿ ಯಾವ್ಯಾವ ಸಾರಜನಕವನ್ನು ನಿಯಂತ್ರಿಸುವ ಕಳೆಗಳು ಬೆಳೆಯುತ್ತಿದ್ದವೋ ಅಂತಹವೆಲ್ಲಾ ಮಾಯವಾಗಿಬಿಡುತ್ತವೆ. ಇನ್ನೂ ಅಪಾಯದ ಸಂಗತಿ ಏನೆಂದರೆ, ಇದೇ ಕಳೆನಾಶಕ ಮಳೆನೀರಿನೊಂದಿಗೆ ನಮ್ಮ ಜಲಮೂಲವನ್ನು ತಲುಪುವುದು. ನಮ್ಮ ಹೊಲಗಳಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ಪ್ರತೀ ಮಳೆಗಾಲದಲ್ಲೂ ಇಣುಕಿ ನೋಡುತ್ತಿದ್ದ ಅಣಬೆ ಇತ್ತೀಚೆಗೇಕೆ ಮಾಯವಾಗಿದೆ ಎಂಬ ಸರಳ ಪ್ರಶ್ನೆಗೆ ಉತ್ತರವನ್ನು ಗ್ಲೈಫೊಸೇಟ್‌ನಂತಹ ಕಳೆನಾಶಕಗಳು ನೀಡುತ್ತವೆ. ಹಣಬೆ ಬೀಜವಲ್ಲ, ಮಣ್ಣಿನ ಕಣ್ಣಿನಿಂದೊಡೆಯುವ ಗಿಡಮೂಲಿಕೆ. ಅಂತಹ ಕಣ್ಣಗಳು ನಾಶವಾಗಿ, ಅವುಗಳನ್ನು ಬೆಳೆಸುವ ಸೂಕ್ಷ್ಮಾಣು ಜೀವಿಗಳ ಇಲ್ಲದೇ ಸಸ್ಯಸಂಪತ್ತು ಹೇಗೆ ಬೆಳೆದಾವು?

ಕಳೆಗಳು ಮಿಲಿಯನ್ ವರ್ಷಗಳಿಂದ ಭೂಮಿ ಮೇಲಿವೆ. ನಮಗಿಂತ ಮೊದಲು ಬಂದವು ಅವು. ಅವುಗಳನ್ನು ಸಸ್ಯ ಸಂಪತ್ತೆಂದು ಪರಿಗಣಿಸಿದರೆ, ಯಾವುದು ಮುಖ್ಯವೋ ಅವನ್ನು ಉಳಿಸುವ ಜವಾಬ್ದಾರಿಯೂ ನಮ್ಮದು. ಇದೇ ಸಸ್ಯಗಳು ನಮ್ಮ ದನಕರುಗಳಿಗೂ ಅವಶ್ಯಕ. ಇಂದು ನಮ್ಮ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರ ಕೊರತೆ ಇದೆ. ದುಡ್ಡು ಕೊಟ್ಟರೂ ಕಳೆ ಕೀಳಲು ಸಿಗುವವರು ಕ್ಷೀಣಿಸಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಕಳೆನಾಶಕಗಳನ್ನು ಬಳಸಲೇಬೇಕಾಗುತ್ತದೆ. ಈ ಬಳಕೆ ವೈಜ್ಞಾನಿಕ ರೀತಿಯಲ್ಲಿ, ಹತ್ತು ಹದಿನೈದು ದಿನಗಳಲ್ಲಿ ನಿರ್ಜೀವವಾಗಿಬಿಡುವ ಕಳೆನಾಶಕಗಳನ್ನು ಬಳಸಿದರೆ ಸೂಕ್ತ. ಆದರೆ, ಮತ್ತೆ ಮತ್ತೆ ಬಳಸಬಾರದು ಎನ್ನುತ್ತಾರೆ ಧಾರವಾಡ ವಿವಿಯ ಕಳೆ ನಿಯಂತ್ರಣ ತಜ್ಞರಾದ ಪ್ರೊ.ರಮೇಶ್ ಬಾಬು.

ಕಳೆಗಳನ್ನೇ ಅರಸಿ ಬರುವ ಸಹಸ್ರಾರು ಕೀಟಗಳು, ಬೆಳೆಯನ್ನು ಅನೇಕ ರೀತಿ ಕಾಪಾಡುತ್ತವೆ. ಉದಾಹರಣೆಗೆ ಎರೆಹುಳು. ಪ್ರತಿಯೊಂದು ಒಣಎಲೆಯನ್ನು ತಿಂದು ಗೊಬ್ಬರವಾಗಿ ಮಾಡುವ ಎರೆಹುಳು, ಮಣ್ಣಿನಲ್ಲಿಲ್ಲದಿದ್ದರೆ, ಇಳುವರಿಯೂ ತಗ್ಗುತ್ತದೆ.
ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಉದ್ದೇಶದಿಂದ ಮೂರು ತೋಟಗಳಿಗೆ ಭೇಟಿ ನೀಡಿದ್ದೆ. ಆ ತೋಟಗಳನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದೆ. ನನ್ನ ಮಳವಳ್ಳಿ ಗೆಳೆಯರ ಶೂನ್ಯ ಬೇಸಾಯದ ತೋಟದಲ್ಲಿ ತುಂಬೆ, ಮೆಣಸಿನಸೊಪ್ಪು, ಆಡುಸೋಗೆ, ಪುರುಷರತ್ನ, ಅಗಸೆ, ಬಿಳಿ-ಕೆಂಪು ಕಣಿಗಿಲೆ, ಕೆಂಪು-ಕಪ್ಪು ಗಾಣಿಗೆ, ಜೀಬುಂಜಿ, ಲಕಲಿ, ಇಂದ್ರಾಣಿ, ದೊಡ್ಡಪತ್ರೆಯಂತಹ ಅನೇಕ ಉಪಯುಕ್ತ ಗಿಡಮೂಲಿಕೆಗಳು ಕಾಣಸಿಗುತ್ತವೆ. ಅಕ್ಕಪಕ್ಕದ ಇವರ ಅಣ್ಣ-ತಮ್ಮಂದಿರ ಗದ್ದೆಯಲ್ಲಿ ಹಲವು ವರ್ಷಗಳಿಂದ ಭತ್ತ-ಕಬ್ಬಿಗೆ ಹೊಂದಿಕೊಂಡು, ಗ್ಲೈಫೊಸೇಟ್ ಪರಿಣಾಮವಾಗಿ ಒಂದು ಪಾರ್ಥೇನಿಯಂ ಗಿಡವೂ ಕಾಣಸಿಗುವುದಿಲ್ಲ. ಮೇಲೆ ಹೆಸರಿಸಿದ ಎಲ್ಲಾ ಗಿಡಗಳು ಪ್ರಾಕೃತಿಕವಾಗಿ ನಮಗೆ ದೊರೆತ ಅಮೂಲ್ಯ ಗಿಡಮೂಲಿಕೆಗಳು ಮಾತ್ರವಲ್ಲದೆ, ಗಿಡಗಳ ಬೆಳವಣಿಗೆಗೆ ಅವಶ್ಯಕವಾದ ಅನಿಲದಲ್ಲಿನ ಸಾರಜನಕವನ್ನು, ಅಮೋನಿಯ-ಯುರಿಯಾ-ನೈಟ್ರೇಟ್‌ಗಳಾಗಿ ಪರಿವರ್ತಿಸುವ ಲಕ್ಷಾಂತರ ನೈಟ್ರೇಟ್ ಕಿಣ್ವಗಳು ಮಾಡುತ್ತಿರುತ್ತವೆ. ಈ ಪೌಷ್ಟಿಕಾಂಶವನ್ನು ಮಣ್ಣಿಗೆ ಸೇರಿಸುವ ಕೆಲಸವನ್ನು ಗಿಡ ಮತ್ತು ಬ್ಯಾಕ್ಟೀರಿಯಾಗಳು ಒಟ್ಟೊಟ್ಟಿಗೆ ಮಾಡುತ್ತಿರುತ್ತವೆ. ಗ್ಲೈಫೊಸೇಟ್‌ನಿಂದ ಈ ಎರಡೂ ನಿಷ್ಕ್ರಿಯವಾಗಿಬಿಡುತ್ತಿವೆ.

2006 -2008ರಲ್ಲಿ ಬೆಂಗಳೂರಿನ ಸ್ವರಾಜ್ ಸಂಸ್ಥೆ ದೊಡ್ಡಬಳ್ಳಾಪುರದ ಆಲೂರಿನಲ್ಲಿ ನಡೆಸಿದ ಸಂಶೋಧನೆಯಿಂದ ಗ್ಲೈಫೊಸೇಟ್ ಪರಿಣಾಮ ಬಹಿರಂಗಗೊಂಡಿದೆ. ಧಾನ್ಯಗಳ ಮೇಲೆ ಈ ಸಂಶೋಧನೆ ನಡೆದಿದೆ. ಆಲೂರಿನ ಭಾಗದಲ್ಲಿ ಬೆಳೆಯುವ ಧಾನ್ಯಗಳನ್ನೇ ಯಾವುದೇ ಕಳೆನಾಶಕವಿಲ್ಲದೇ ಬೆಳೆದು, ಅಕ್ಕಪಕ್ಕದ ಜಮೀನಿನ ರಾಸಾಯನಿಕಗಳ ವ್ಯತಿರಿಕ್ತತೆಯನ್ನು ಅಧ್ಯಯನ ಮಾಡಿದ್ದಾರೆ. ಅದರ ಪ್ರಕಾರ, ಗ್ಲೈಫೊಸೇಟ್ ಬಳಸಿದ ಅವರೆಯಂತಹ ಗಿಡಗಳ ಬೇರಿನಲ್ಲಿ ಅತೀ ಕಡಿಮೆ ಮಯಿಸಿಲಿಯಂ ಕಂಡುಬಂದಿದ್ದು, ಎಲೆಗಳ ತಿರುಳನ್ನೇ ಕೀಟಗಳು ನಾಶಮಾಡಿವೆ. ಯಾವ ಗಿಡದ ಬೇರುಗಳು ನೇರವಾಗಿ ನೀರು ಗೊಬ್ಬರವನ್ನು ಹೀರುವುದಿಲ್ಲ. ಬೇರಿನಲ್ಲಿರುವ ಮೈಸಿಲೀಯಂ ಶೀಲಿಂಧ್ರಗಳು ಈ ಕಾರ್ಯ ಮಾಡುತ್ತವೆ. ಗ್ಲೈಫೊಸೇಟ್‌ನಿಂದ ಈ ಶೀಲಿಂಧ್ರಗಳು ಇಲ್ಲವಾಗಿ, ಗಿಡಕ್ಕೆ ಅವಶ್ಯಕವಾದ ಪೋಷಕಾಂಶಗಳು ದೊರೆಯುವುದಿಲ್ಲ.

ಯಾವುದೇ ಗಿಡ ಬೆಳೆಯಲು ಮಣ್ಣಿನಲ್ಲಿ 20ಕ್ಕೂ ಹೆಚ್ಚು ಸ್ವಾಭಾವಿಕ ರಾಸಾಯನಿಕಗಳು ಬೇಕು. ಇದನ್ನು ಯಾವ ಯೂರಿಯಾದಿಂದಲೂ ನೀಡಲು ಸಾಧ್ಯವಿಲ್ಲ. ಮಣ್ಣಿನಲ್ಲೇ ಬೆಳೆಯುವ ಕಳೆಗಳು, ಕೊಳೆತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.

ಇನ್ನೊಂದು ಮುಖ್ಯವಿಚಾರವೆಂದರೆ, ಮಣ್ಣಿನಲ್ಲಿ ನಾಶವಾಗುತ್ತಿರುವ ಪಾಚಿ. ಕಲ್ಲನ್ನು ಕರಗಿಸಿ, ಮಲಬ್ಡಿನಮ್ ಬಿಡುಗಡೆಗೊಳಿಸುವ ಶಕ್ತಿ ಇರುವುದು ಪಾಚಿಗೆ ಮಾತ್ರ. ಗ್ಲೈಫೊಸೇಟ್ ಬಳಸಿದಾಗ, ಆಳುದ್ದ ಬೆಳೆದ ಕಳೆಯ ನಾಶವಾಗುವಾಗ, ಪಾಚಿ ಉಳಿಯಲು ಸಾಧ್ಯವೇ?. ಇದೇ ಪ್ರಶ್ನೆಗಳನ್ನು ವಂದನಾ ಶಿವ, ‘ಅರ್ತ್ ಡೆಮೆಕ್ರೆಸಿ’ ಪುಸ್ತಕದಲ್ಲಿ ಕೇಳುತ್ತಾರೆ. ಅಮೆರಿಕದ ಪ್ರತಿಷ್ಠಿತ ವಿಜ್ಞಾನಿಗಳ ಸಂಸ್ಥೆಯಾದ, ‘ಯೂನಿಯನ್ ಆಫ್ ಕನ್ಸರ್ಡ್ ಸೈಂಟಿಸ್ಟ್ಸ್’ ಬ್ಲಾಗ್‌ನಲ್ಲಿ ಗ್ಲೈಫೊಸೇಟ್‌ನ ಪರಿಣಾಮವನ್ನು ಅಲ್ಲಿಯ ವಿಜ್ಞಾನಿಗಳೇ ವಿಷದಪಡಿಸಿದ್ದಾರೆ.
ಮನುಷ್ಯರಿಗೆ ಬಂದಂತೆ, ಮಣ್ಣಿಗೂ ರೋಗ ಬಡಿದಿದೆ. ಅದನ್ನು ಸರಿಪಡಿಸಲು ಅಲ್ಲೇ ಸ್ವಾಭಾವಿಕವಾಗಿ ಬೆಳೆಯುವ ಯಾವ ಕಳೆಯನ್ನೂ ತೆಗೆಯಕೂಡದು. ಪಾರ್ಥೇನಿಯಂನಂತಹ ಕಳೆಗಳನ್ನು ಹೂಬಿಡುವ ಮೊದಲು ಅದೇ ಜಾಗದಲ್ಲಿ ಕಿತ್ತೆಸೆದರೆ ಸಾಕು, ಅದೂ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಎಕರೆಗಟ್ಟಲೆ ಹೀಗೆ ನಿಯಂತ್ರಿಸುವ ಕೆಲಸ ಶ್ರಮದಾಯಕವಾದರೂ, ಬೇರೆ ವಿಧಿಯಿಲ್ಲ ಎಂಬುದೂ ನಿಜ. ಆದರೆ, ಭೂತಾಯಿಯೊಂದಿಗೆ ನಾವು ಪ್ರಯೋಗದಲ್ಲಿ ತೊಡಗಬೇಕೆ ಹೊರೆತು, ಆಕೆ ಕೊಡುವ ಯಾವೊಂದೂ ಸಸ್ಯಸಂಪತ್ತನ್ನು ನಾಶಮಾಡುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT