ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಉಳಿಸಲು ಹೊಳೆವ ಪಟ್ಟಿ

Last Updated 4 ಮೇ 2016, 19:30 IST
ಅಕ್ಷರ ಗಾತ್ರ

ಅಮ್ಮ ಉಣಿಸುವ ಎದೆಹಾಲಿಗೆ ಕಾಯುವ ಕಣ್ತೆರೆಯದ ಕಂದಮ್ಮಗಳು. ಹಿಡಿ ಅನ್ನ, ತುಂಡು ಬ್ರೆಡ್ ಚೂರಿಗಾಗಿ ಬೀದಿಬೀದಿ ಹುಡುಕಾಡುವ ನಾಯಿ– ಬೆಕ್ಕುಗಳು. ಸಾಕಿದವರು ಬೀದಿಗೆ ಬಿಟ್ಟ ದನಕರುಗಳು... ಇದು ಎಲ್ಲ ಮಹಾನಗರಗಳ ಸಾಮಾನ್ಯ ದೃಶ್ಯ.

ರಸ್ತೆ ಮೇಲೆ ಜೀವನ ನಡೆಸುವ ಬೀದಿ ನಾಯಿ, ಬೆಕ್ಕು, ದನಕರುಗಳು ಅಪಘಾತಕ್ಕೀಡಾಗಿ ಸಾವನ್ನಪ್ಪುವ ಘಟನೆಗಳು ನಿತ್ಯ ನಮ್ಮ ಕಣ್ಮುಂದೆ ನಡೆಯುತ್ತಲೇ ಇರುತ್ತದೆ.

ಅಪಘಾತಗಳಿಂದ ಕೆಲ ಪ್ರಾಣಿಗಳು ಸಾವನ್ನಪ್ಪಿದರೆ, ಹಲವು ಪ್ರಾಣಿಗಳು ಮೂಳೆ ಮುರಿತ (ಕಾಲುಗಳು, ಬೆನ್ನು, ಸೊಂಟ ಹಾಗೂ ಪಕ್ಕೆಲುಬು) ಅನುಭವಿಸುತ್ತವೆ.ಜೀವನ ಪರ್ಯಂತ ಅಂಗವಿಕಲ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಗರದ ಸ್ವಯಂ ಸೇವಾಸಂಸ್ಥೆಗಳಲ್ಲಿ ಆಶ್ರಯ ಪಡೆದಿರುವ ಸಾವಿರಾರು ಪ್ರಾಣಿಗಳು ಇದಕ್ಕೆ ಉದಾಹರಣೆಯಾಗಿ ತಮ್ಮ ನೋವನ್ನು ಬಿಂಬಿಸುತ್ತಿವೆ.

ಅನಾಹುತ ನಡೆಯುವ ಮೊದಲೇ ಎಚ್ಚರಿಕೆ ವಹಿಸಿಸುವುದು ಉತ್ತಮ ಎನ್ನುವ ಮಾತಿದೆ. ಅದರಂತೆ ನಗರದ ನಾಲ್ವರು ಪ್ರಾಣಿಪ್ರಿಯರು ರಸ್ತೆಗಳಲ್ಲಿ ಸಂಭವಿಸುವ ಪ್ರಾಣಿಗಳ ಅಪಘಾತವನ್ನು ತಡೆಯುವ ಸಲುವಾಗಿ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ನಿಧಾನವಾಗಿ ಚಲಿಸಿ ಹಾಗೂ ಪ್ರಾಣಿಗಳ ಜೀವ ಉಳಿಸಿ ಎಂಬ ಅಭಿಯಾನ ಪ್ರಾರಂಭಿಸಿರುವ ‘ಟಿವೈಡಿ ತಂಡ’ ರಸ್ತೆಗಳಲ್ಲಿ ಕಾಣಿಸುವ ಬೀದಿ ನಾಯಿಗಳಿಗೆ ಹೊಳೆಯುವ ‘ಟಿವೈಡಿ’ ಪಟ್ಟಿಗಳನ್ನು ಹಾಕುತ್ತಿದೆ. ಜೊತೆಗೆ ನಾಯಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ  ಮಾಡುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚುತ್ತಿದೆ.

ಟಿವೈಡಿ ಗುಂಪಿನ ರೂವಾರಿಗಳಾದ ಅನುಷಾ ಕಾರ್ನಾಡ, ಸಂಜಯ್‌, ಕೀರ್ತಿ ಹಾಗೂ ವಿಜಯಲಕ್ಷ್ಮಿ ಕಳೆದ ಜನವರಿಯಿಂದ ನಗರದಲ್ಲಿ ಈ ಅಭಿಯಾನ ನಡೆಸುತ್ತಿದ್ದಾರೆ.ಕಳೆದ ಕೆಲ ತಿಂಗಳಿನಿಂದ ಅನುಷಾ ಕಾರ್ನಾಡ ನಾಯಿಗಳು ಅಪಘಾತದಿಂದ ಸಾವನ್ನಪ್ಪುವುದನ್ನು ತಡೆಯುವ ಸಲುವಾಗಿ ಏನಾದರೂ ಮಾಡಬೇಕೆಂದು ಆಲೋಚಿಸುತ್ತಿದ್ದರು. ಆಗ ಅವರಿಗೆ ಪುಣೆಯಲ್ಲಿ ಪ್ರಾಣಿಪ್ರಿಯರು ಅಳವಡಿಸುತ್ತಿದ್ದ ‘ರಿಫ್ಲೆಕ್ಟಿಂಗ್‌ ಕಾಲರ್‌’ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ಸಿಕ್ಕಿತು. ಪಟ್ಟಿ ತಯಾರಿ ಕುರಿತು ಮಾಹಿತಿ ಸಂಗ್ರಹಿಸಿ ಅದನ್ನು ಸಿದ್ಧಪಡಿಸುವ ಪ್ರಯತ್ನಕ್ಕೆ ಕೈ ಹಾಕಿದರು.

ಆರಂಭದಲ್ಲಿ ಸ್ನೇಹಿತರೊಂದಿಗೆ ಚರ್ಚಿಸಿ ಪ್ರಾಯೋಗಿಕವಾಗಿ ತಾವೇ ಎರಡು ಪಟ್ಟಿಗಳನ್ನು ಸಿದ್ಧಪಡಿಸಿದರು. ಅದನ್ನು ಕಚೇರಿ ಬಳಿ ಇರುವ ನಾಯಿಗಳಿಗೆ ತೊಡಿಸಿ ಪರೀಕ್ಷಿಸಲಾಯಿತು. ಈವರೆಗೆ ನಗರದ 80ಕ್ಕೂ ಹೆಚ್ಚು ನಾಯಿಗಳಿಗೆ ಪಟ್ಟಿ ಹಾಕಲಾಗಿದೆ.  

‘ಸದ್ಯಕ್ಕೆ ನಾನು ಮತ್ತು ನನ್ನ ಸ್ನೇಹಿತರು ಸೇರಿ ಕೈಲಾದಷ್ಟು ಹಣ ಸೇರಿಸಿ ಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ಕೇವಲ ನಾಯಿಗಳಿಗೆ ಮಾತ್ರ ಪಟ್ಟಿಗಳನ್ನು ಹೊಲಿಯಲಾಗುತ್ತಿದೆ.

ಹಣದ ಕೊರತೆಯಿಂದಾಗಿ ಬೀದಿ ದನ ಹಾಗೂ ಇತರ ಪ್ರಾಣಿಗಳಿಗೆ ಪಟ್ಟಿಗಳನ್ನು ಸಿದ್ಧಪಡಿಸುವ ಪ್ರಯತ್ನ ಮಾಡಿಲ್ಲ. ಪ್ರಾಣಿಪ್ರಿಯರು ಹಣ ಸಹಾಯ ಮಾಡಿದರೆ ಭವಿಷ್ಯದಲ್ಲಿ ಎಲ್ಲ ಪ್ರಾಣಿಗಳಿಗೂ ಪಟ್ಟಿಗಳನ್ನು ಸಿದ್ಧಪಡಿಸಬಹುದು’ ಎಂದು ವಿವರಿಸುತ್ತಾರೆ ಅನುಷಾ ಕರ್ನಾಡ.

‘ಸಾಮಾಜಿಕ ಜಾಲತಾಣಗಳಲ್ಲಿ ಹೊಳೆಯುವ ಟಿವೈಡಿ ಪಟ್ಟಿ ಕುರಿತ ಮಾಹಿತಿ ಪ್ರಕಟವಾಗುತ್ತಿದ್ದಂತೆಯೇ ಪ್ರಾಣಿಪ್ರಿಯರು ಬೇಡಿಕೆ ಇಡುತ್ತಿದ್ದಾರೆ. ಈವರೆಗೆ 40ಕ್ಕೂ ಹೆಚ್ಚು ಮಂದಿಗೆ ಪಟ್ಟಿಗಳನ್ನು ನೀಡಿದ್ದೇವೆ. ಮುಂಬೈ, ದೆಹಲಿ ಹಾಗೂ ಚೆನ್ನೈಗೂ ಕಳುಹಿಸುತ್ತಿದ್ದೇವೆ. ಚೆನ್ನೈನ ಪ್ರಾಣಿ ಪ್ರಿಯರು ನಮ್ಮಲ್ಲಿ ಪಡೆದ ಪಟ್ಟಿಗಳನ್ನು  ‘ಮ್ಯಾಜಿಕ್‌ ಕಾಲರ್‌’ ಹೆಸರಿನಲ್ಲಿ ಬೀದಿ ನಾಯಿಗಳಿಗೆ ಹಾಕಲು ಪ್ರಾರಂಭಿಸಿದ್ದಾರೆ’ ಎಂದಾಗ ಅವರ ಮುಖದಲ್ಲಿ ಮಂದಹಾಸ ಮೂಡಿತ್ತು. 

ಎಲ್ಲ ಸರಿಯಾಗಿರುವಾಗಲೇ ಪ್ರಾಣಿಗಳು ಆಹಾರ ಹುಡುಕಲು ಪರದಾಡುತ್ತವೆ. ಅಂತಹದ್ದರಲ್ಲಿ ಅಂಗಗಳೇ ಊನವಾದರೆ, ಅವುಗಳ ಪಾಡು ಹೇಳುವ ಅಗತ್ಯ ಇಲ್ಲ. ವಾಹನ ಸವಾರರು ಕೊಂಚ ಎಚ್ಚರವಹಿಸಿದರೂ ಸಾಕಷ್ಟು ಅಪಘಾತಗಳನ್ನು ತಡೆಯಬಹುದು. ಪಟ್ಟಿಗಳಿಗಾಗಿ ಸಂಪರ್ಕಿಸಿ: 9980019305

ಪಟ್ಟಿ ಕುರಿತ ಮಾಹಿತಿ
ಫೈಬರ್‌ ಮೇಲೆ ಹೊಳೆಯುವ ನೈಲಾನ್‌ ಮೆಟೀರಿಯಲ್‌ ಅನ್ನು ಇಟ್ಟು ಹೊಲಿಗೆ ಹಾಕಲಾಗುತ್ತದೆ. ಫೈಬರ್‌ ನೀರಿನಲ್ಲಿ ನೆನೆಯದ ಕಾರಣ ಪಟ್ಟಿ ದೀರ್ಘಕಾಲ ಬಾಳಿಕೆ ಬರುತ್ತದೆ. ನಾಯಿಗಳಿಗಾಗಿ ಸಿದ್ಧಪಡಿಸುವ ಪಟ್ಟಿಯ ವೆಚ್ಚ ₹ 50.

***
ನಗರದಲ್ಲಿ ದಿನವೊಂದಕ್ಕೆ ಹದಿನೈದಕ್ಕೂ ಹೆಚ್ಚು ಅಪಘಾತ ಸಂಭವಿಸುತ್ತದೆ. ಅದರಲ್ಲಿ ಗಾಯಗೊಳ್ಳುವುದು ಅಥವಾ ಸಾವನ್ನಪ್ಪುವುದು ಬಹುಪಾಲು ನಾಯಿಗಳೇ. ಪ್ರತಿನಿತ್ಯ ನಾನೇ 5–7 ಅಪಘಾತ ಕುರಿತ ಕರೆಗಳನ್ನು ಸ್ವೀಕರಿಸುತ್ತೇನೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ಬೀದಿ ದನಗಳೂ ಸಾವನ್ನಪ್ಪುತ್ತವೆ. ರಾತ್ರಿ ಕತ್ತಲಿನಲ್ಲಿ ಕಪ್ಪುಬಣ್ಣದ ಪ್ರಾಣಿಗಳು ಹೆಚ್ಚಾಗಿ ಅಪಘಾತಕ್ಕೊಳಗಾಗುತ್ತವೆ. ಹೀಗಾಗಿ ಅವುಗಳ ರಕ್ಷಣೆಗೆ ಈ ಟಿವೈಡಿ ಪಟ್ಟಿ ಅಭಿಯಾನ ತುಂಬಾ ಸಹಾಯಕವಾಗಿದೆ. ನಮ್ಮೊಂದಿಗೆ ಜೀವಿಸುವ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ.
– ಟೋನಿ, ಪ್ರಾಣಿಪ್ರಿಯ

***

ಅಪಘಾತ ತಪ್ಪಿಸಲು ಸಾಧ್ಯ
ಹಗಲಿನಲ್ಲಿ ಮನುಷ್ಯನ ನಿರ್ಲಕ್ಷ್ಯ ಹಾಗೂ ವಿಕೃತಿಯಿಂದ ನಡೆಯುವ ಅಪಘಾತಗಳನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅರಿವಿಗೆ ಬಾರದಂತೆ ರಾತ್ರಿ ವೇಳೆ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ನಡೆಯುವ ಅಪಘಾತಗಳನ್ನು ತಕ್ಕಮಟ್ಟಿಗೆ ತಪ್ಪಿಸಬಹುದು. ನಾನು ಕೆಲಸ ಮಾಡುವ ಕಚೇರಿ ಬಳಿ ನಾಲ್ಕು ನಾಯಿಗಳಿಗೆ ನಿತ್ಯ ಊಟ ಹಾಕುತ್ತಿದ್ದೆ. ಆಹಾರ ಸೇವಿಸಿದ ನಾಯಿಯೊಂದು ಕೆಲವೇ ನಿಮಿಷದಲ್ಲಿ ರಸ್ತೆ ಅಪಘಾತದಿಂದ ಸಾವನ್ನಪ್ಪಿತ್ತು. ಅಪಘಾತಗಳಿಂದ ಪ್ರಾಣಿಗಳನ್ನು ಕಾಪಾಡಲು ಏನಾದರೂ ಮಾಡಬೇಕು ಎಂಬ ಆಲೋಚನೆ ಬಂದಿದ್ದು ಆಗಲೇ.
– ಅನುಷಾ ಕಾರ್ನಾಡ, ಪ್ರಾಣಿ ಪ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT