ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಂದಾಲ್‌ ಸೇರಿ 11 ಮಂದಿ ತಪ್ಪಿತಸ್ಥರು

ಶಸ್ತ್ರಾಸ್ತ್ರ ವಶ ಪ್ರಕರಣ ತೀರ್ಪು ಪ್ರಕಟ
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ದಾಳಿ ಸಂಚುಕೋರ ಅಬು ಜುಂದಾಲ್  ಮತ್ತು ಇತರ 11 ಮಂದಿ 2006ರ ಔರಂಗಾಬಾದ್‌ ಶಸ್ತ್ರಾಸ್ತ್ರ ವಶ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ವಿಶೇಷ  ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಎಂಟು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು ಇಬ್ಬರ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಯುತ್ತಿದೆ.

ಪ್ರಕರಣ ನಡೆದ ಹತ್ತು ವರ್ಷಗಳ ನಂತರ ವಿಶೇಷ ಮೋಕಾ ನ್ಯಾಯಾಧೀಶ ಶ್ರೀಕಾಂತ್‌ ಆನೇಕಾರ್‌ ಅವರು ಗುರುವಾರ ತೀರ್ಪು ಪ್ರಕಟಿಸಿದರು.

2006ರ ಮೇ 8ರಂದು ಮಹಾರಾಷ್ಟ್ರ ಭಯೋತ್ಪಾದನೆ ತಡೆ ಘಟಕದ ಪೊಲೀಸರು ಚಂದವಾಡ–ಮನ್‌ಮಾಡ್‌ ಹೆದ್ದಾರಿಯಲ್ಲಿ ಒಂದು ಟಾಟಾ ಸುಮೊ ಮತ್ತು ಒಂದು ಇಂಡಿಕಾ ಕಾರನ್ನು ಬೆನ್ನು ಹತ್ತಿ ಔರಂಗಾಬಾದ್‌ ಸಮೀಪ ಮೂವರು ಉಗ್ರರನ್ನು ಬಂಧಿಸಿದ್ದರು. ಈ ವಾಹನಗಳಿಂದ 30 ಕಿಲೋ ಆರ್‌ಡಿಎಕ್ಸ್‌, 10 ಎಕೆ–47 ಬಂದೂಕುಗಳು ಮತ್ತು 3,200 ಗುಂಡುಗಳನ್ನು ವಶಪಡಿಸಿಕೊಂಡಿದ್ದರು.

ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಹಿಂದೂ ಮುಖಂಡ ಪ್ರವೀಣ್‌ ತೊಗಾಡಿಯ ಅವರಂತಹ ಮುಖಂಡರನ್ನು ಹತ್ಯೆ ಮಾಡಿ ಜನರ ಮನಸಲ್ಲಿ ಭೀತಿ ಸೃಷ್ಟಿಸುವುದು ಇವರ ಉದ್ದೇಶವಾಗಿತ್ತು ಎಂಬ ಪ್ರಾಸಿಕ್ಯೂಷನ್‌ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ.

ಇಂಡಿಕಾ ಕಾರನ್ನು ಚಾಲನೆ ಮಾಡುತ್ತಿದ್ದ ಎಂದು ಹೇಳಲಾದ ಜುಂದಾಲ್‌ ಪೊಲೀಸರಿಗೆ ಸಿಗದೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಮಹಾರಾಷ್ಟ್ರದ ಬೀಡ್‌ ಜಿಲ್ಲೆಯವನಾದ ಈತ ಮಾಲೆಗಾಂವ್‌ಗೆ ಹೋಗಿ ಅಲ್ಲಿಂದ ಬಾಂಗ್ಲಾ ದೇಶಕ್ಕೆ ನುಸುಳಿದ್ದ. ಅಲ್ಲಿಂದ ಆತ ಪಾಕಿಸ್ತಾನಕ್ಕೆ ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

2012ರಲ್ಲಿ ಈತನನ್ನು ಸೌದಿ ಅರೇಬಿಯಾದಿಂದ ಭಾರತಕ್ಕೆ ಗಡೀಪಾರು ಮಾಡಲಾಯಿತು.

ನಂತರ 2013ರ ಆಗಸ್ಟ್‌ನಲ್ಲಿ ಈತನ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಯಿತು.

ಮೋಕಾದ ಕೆಲವು ಅಂಶಗಳು ಸಂವಿಧಾನ ವಿರೋಧಿ ಎಂದು ಆರೋಪಿಗಳಲ್ಲೊಬ್ಬ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದಾಗಿ ಮಧ್ಯದಲ್ಲಿ ವಿಚಾರಣೆಗೆ ತಡೆ ನೀಡಲಾಗಿತ್ತು. 2009ರಲ್ಲಿ ಈ ತಡೆಯಾಜ್ಞೆ ತೆರವುಗೊಂಡಿತು.

ಕಳೆದ ವರ್ಷ ಆಗಸ್ಟ್‌ನಲ್ಲಿ ವಿಚಾರಣೆ ತ್ವರಿತಗೊಳಿಸುವಂತೆ ಬಾಂಬೆ ಹೈಕೋರ್ಟ್‌ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT