ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್ ಏರ್‌ವೇಸ್‌ ಗೆ ಬೆದರಿಕೆ

ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ
Last Updated 22 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ನವದೆಹಲಿ: ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಘಟನೆ ಮತ್ತು ಜೆಟ್ ಏರ್‌ವೇಸ್‌ಗೆ ಬಾಂಬ್ ಬೆದರಿಕೆ ಕರೆ ಬಂದಿರುವುದರಿಂದ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ವಿಮಾನ ನಿಲ್ದಾಣಗಳಲ್ಲಿ ಬಿಗಿಯಾದ ತಪಾಸಣೆ ನಡೆಸಬೇಕು ಮತ್ತು ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಭದ್ರತಾ ಪಡೆಗಳಿಗೆ ಸೂಚನೆ ನೀಡಿದೆ.

ತಪಾಸಣೆಯನ್ನು ಬಿಗಿಗೊಳಿಸಿರು ವುದರಿಂದ ಪ್ರಯಾಣಿಕರು ಸಾಕಷ್ಟು ಮೊದಲೇ ವಿಮಾನ ನಿಲ್ದಾಣ ತಲುಪಬೇಕು ಎಂದು ಸಲಹೆ ಮಾಡಲಾಗಿದೆ.
ವಿಮಾನ ನಿಲ್ದಾಣಗಳ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಬಗ್ಗೆ ಗುಪ್ತಚರ ಮಾಹಿತಿ ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ಸ್ಫೋಟಿಸುವ ಬೆದರಿಕೆ: ಜೆಟ್ ಏರ್‌ವೇಸ್‌ ಸಂಸ್ಥೆಗೆ ಸೇರಿದ ಕೆಲವು ವಿಮಾನಗಳು ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಸಂಸ್ಥೆಯ ಕಾಲ್ ಸೆಂಟರ್‌ಗೆ ವಿಮಾನ ಸ್ಫೋಟಿಸುವ ಐದು ಕರೆಗಳು ಬಂದಿವೆ. ಇವು ಕುಚೇಷ್ಟೆಯ ಕರೆಗಳಾಗಿರಬಹುದು ಎಂದು ಶಂಕಿಸಲಾಗಿದೆ.

ಕರೆ ಮಾಡಿದವರು ದೆಹಲಿಯಿಂದ ವಿವಿಧ ಕಡೆಗೆ ಸಂಚರಿಸುವ ವಿಮಾನ ಗಳನ್ನು ಸ್ಫೋಟಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬೆದರಿಕೆಯ ಕರೆ ಬಂದ ನಂತರ ವಿಮಾನಗಳನ್ನು ನಿಲ್ದಾಣದ ನಿರ್ಜನ ಪ್ರದೇಶಕ್ಕೆ ಒಯ್ದು ತಪಾಸಣೆ ನಡೆಸಲಾಗಿದೆ. ದೆಹಲಿಯಿಂದ ಚೆನ್ನೈಗೆ ಹೊರಡಲಿದ್ದ ವಿಮಾನದ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ನಡೆಲಾಯಿತು.  ಇದೇ ರೀತಿ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲೂ ತಪಾಸಣೆ ನಡೆಸಲಾಗಿದೆ.

ಜೆಟ್ ಏರ್‌ವೇಸ್‌ನ ಇಬ್ಬರು ಸಿಬ್ಬಂದಿಗೆ ಗಾಯ: ಬ್ರಸೆಲ್ಸ್‌ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಜೆಟ್ ಏರ್‌ವೇಸ್‌ ಸಂಸ್ಥೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಿಧಿ ಖುರಾನಾ ಮತ್ತು ಅಮಿತ್‌ ಮೋಟ್ವಾನಿ ಎಂದು ಗುರುತಿಸಲಾಗಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಸುರಕ್ಷಿತರಾಗಿದ್ದಾರೆ ಎಂದು ಜೆಟ್‌ ಏರ್‌ವೇಸ್‌ ತಿಳಿಸಿದೆ.  ಸ್ಫೋಟ ಸಂಭವಿಸಿದ ಕೂಡಲೇ ಅಧಿಕಾರಿಗಳು ವಿಮಾನ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಬ್ರಸೆಲ್ಸ್ ವಿಮಾನ ನಿಲ್ದಾಣವು ಜೆಟ್ ಏರ್‌ವೇಸ್‌ನ ಅಂತರರಾಷ್ಟ್ರೀಯ ಕಾರ್ಯಾಚರಣೆಯ ಕೇಂದ್ರ ಸ್ಥಾನವಾಗಿದೆ. ಇದನ್ನು ಮುಂದಿನ ವಾರ ನೆದರ್‌ಲೆಂಡ್‌ ರಾಜಧಾನಿ ಆಮ್‌ಸ್ಟಾರ್‌ಡಾಂಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಬ್ರಸೆಲ್ಸ್‌ನಿಂದ ನ್ಯೂಯಾರ್ಕ್, ಟೊರೊಂಟೊ, ಮುಂಬೈ ಮತ್ತು ದೆಹಲಿಗೆ ತೆರಳಬೇಕಾಗಿದ್ದ ವಿಮಾನ ಸಂಚಾರವನ್ನು ಬುಧವಾರದವರೆಗೆ ರದ್ದುಪಡಿಸಲಾಗಿದೆ ಎಂದು ಜೆಟ್ ಏರ್‌ವೇಸ್‌ ಮೂಲಗಳು ತಿಳಿಸಿವೆ.

‘ವಿಮಾನ ನಿಲ್ದಾಣಗಳ  ಭದ್ರತೆ ದುರ್ಬಲ’
ಬ್ರಸೆಲ್ಸ್‌ ವಿಮಾನ ನಿಲ್ದಾಣದ ಮೇಲೆ ನಡೆದ ಉಗ್ರರ ದಾಳಿ ಭಾರತದ ವಿಮಾನ ನಿಲ್ದಾಣಗಳಲ್ಲಿನ ರಕ್ಷಣಾ ವ್ಯವಸ್ಥೆ ಬಗ್ಗೆ ಗಮನ ಹರಿಸುವಂತೆ ಮಾಡಿದೆ. ಸಂಸದೀಯ ಸಮಿತಿಯೊಂದು ಕಳೆದ ವರ್ಷ ಸಂಸತ್ತಿಗೆ ಸಲ್ಲಿಸಿದ ವರದಿ ವಿಮಾನ ನಿಲ್ದಾಣಗಳ ರಕ್ಷಣಾ ವ್ಯವಸ್ಥೆಯಲ್ಲಿನ ಹಲವು ಲೋಪಗಳ ಕಡೆಗೆ ಬೆಳಕು ಚೆಲ್ಲಿದೆ.

ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ಭದ್ರತೆ ‘ದುರ್ಬಲ’ವಾಗಿದೆ. 300 ಮೀಟರ್‌ ಅಂತರದಲ್ಲಿ ಕಾವಲುಗೋಪುರಗಳು ಇರಬೇಕು. ಆದರೆ ನಮ್ಮಲ್ಲಿ ಒಂದು ಕಿಲೋಮೀಟರ್‌ ಅಂತರದಲ್ಲಿ ಕಾವಲು ಗೋಪುಗಳಿವೆ ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಕೆ. ಡಿ. ಸಿಂಗ್‌ ನೇತೃತ್ವದ ಸಂಸದೀಯ ಸಮಿತಿ ಹೇಳಿದೆ. ಕಳೆದ ಡಿಸೆಂಬರ್‌ನಲ್ಲಿ ವರದಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದೆ.

ವಿಮಾನಗಳ ಸಂಖ್ಯೆ ಹೆಚ್ಚಾಗಿದ್ದರೂ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿಲ್ಲ. ಲಗೇಜುಗಳ ಎಕ್ಸ್‌ರೇ ತಪಾಸಣೆಯಂತಹ ಭದ್ರತಾ ಸಾಧನಗಳು ಸಮರ್ಪಕವಾಗಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಭಾರಿ ದುರಂತ ಸಂಭವಿಸುವ ಮೊದಲೇ ವಿಮಾನ ನಿಲ್ದಾಣಗಳ ಭದ್ರತೆಯ ಸಮಗ್ರ ಮರು ಪರಿಶೀಲನೆ ನಡೆಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಶಸ್ತ್ರಕ್ರಿಯೆ ಮೂಲಕ ದೇಹದೊಳಗೆ ಸ್ಫೋಟಕ ಅಳವಡಿಸಿಕೊಳ್ಳುವುದು, ಪ್ರಿಂಟರ್‌ನ ಕಾರ್ಟ್ರಿಡ್ಜ್‌ನೊಳಗೆ ಸ್ಫೋಟಕ  ಅಳವಡಿಸಿ ಸಾಗಿಸುವುದು ಅಥವಾ ನುರಿತ ಪೈಲಟ್‌ಗಳನ್ನು ಬಳಸಿಕೊಂಡು ವಿಮಾನ ಅಪಹರಣ ಮಾಡುವ ಮೂಲಕ ಭಯೋತ್ಪಾದನಾ ಕೃತ್ಯ ಎಸಗುವ ಅಪಾಯ ಇದೆ
ಎಂದು ವರದಿಯಲ್ಲಿ ಹೇಳಲಾಗಿದೆ.

ಅತಿಸೂಕ್ಷ್ಮ 26 ನಿಲ್ದಾಣಗಳಲ್ಲಿ 8, ಸೂಕ್ಷ್ಮ 56ರಲ್ಲಿ 19 ಮತ್ತು ಸಾಮಾನ್ಯ 16ರಲ್ಲಿ 12 ವಿಮಾನ ನಿಲ್ದಾಣಗಳು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ವಿಶೇಷ ಭದ್ರತಾ ವ್ಯವಸ್ಥೆಯನ್ನು ಹೊಂದಿಲ್ಲ ಎಂಬುದನ್ನು ವರದಿ ಗುರುತಿಸಿದೆ.

‘ಹಾಗಾದರೆ ಈ ವಿಮಾನ ನಿಲ್ದಾಣಗಳನ್ನು ಕಾಯುವವರು ಯಾರು? ಈ ವಿಮಾನ ನಿಲ್ದಾಣಗಳು ಎಷ್ಟು ಸುರಕ್ಷಿತ? ಈಗಿನ ಆತಂಕಕಾರಿ ಸ್ಥಿತಿಯಲ್ಲಿ ವಿಮಾನ ನಿಲ್ದಾಣಗಳ ಭದ್ರತೆಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ್ದು ಸರಿಯೇ’ ಎಂದು ವರದಿಯಲ್ಲಿ ಪ್ರಶ್ನಿಸಲಾಗಿದೆ.

ವಿವಿಧ ಸಂಸ್ಥೆಗಳಾದ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್‌ ಮತ್ತು ಸಿಐಎಸ್‌ಎಫ್‌ ನಡುವೆ ಹೊಂದಾಣಿಕೆ ಇಲ್ಲ ಎಂಬುದನ್ನು ಸಮಿತಿಯ ಮುಂದೆ ಕೇಂದ್ರ ಗೃಹ ಕಾರ್ಯದರ್ಶಿ ಒಪ್ಪಿಕೊಂಡಿದ್ದಾರೆ. ಈ ಸಂಸ್ಥೆಗಳ ನಡುವೆ ಸಮನ್ವಯ ಇಲ್ಲದಿರುವುದು ಈ ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ವಿಮಾನ ನಿಲ್ದಾಣಗಳಿಗೆ ಯಾವ ಮಟ್ಟದ ಬೆದರಿಕೆ ಇದೆಯೋ ಅದಕ್ಕೆ ಸಮನಾದ ಭದ್ರತಾ ವ್ಯವಸ್ಥೆಯನ್ನು ಅಳವಡಿಸಬೇಕು. ಇದಕ್ಕೆ ಹಣದ ಕೊರತೆ ಒಂದು ತೊಡಕಾಗಬಾರದು ಎಂದು ಸಮಿತಿ ಹೇಳಿದೆ.

ವಿಮಾನ ನಿಲ್ದಾಣಗಳ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆದರೆ ಅದು ಭಾರಿ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗುತ್ತದೆ. ಅರ್ಥವ್ಯವಸ್ಥೆ ಭಾರಿ ನಷ್ಟಕ್ಕೆ ಒಳಗಾಗುತ್ತದೆ. ದೇಶದೊಳಕ್ಕೆ ಹರಿದು ಬರುವ ವಿದೇಶಿ ಹೂಡಿಕೆ ಭದ್ರತೆ ಮತ್ತು ಸುರಕ್ಷತೆ ಮೇಲೆ ಅವಲಂಬಿತವಾಗಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT