ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ 2, ಕಾಂಗ್ರೆಸ್‌, ಬಿಜೆಪಿ ತಲಾ 1

ಶಿಕ್ಷಕ, ಪದವೀಧರ ಕ್ಷೇತ್ರ ಚುನಾವಣೆ ಫಲಿತಾಂಶ ಪ್ರಕಟ
Last Updated 24 ಜೂನ್ 2014, 20:00 IST
ಅಕ್ಷರ ಗಾತ್ರ

ಬೆಂಗಳೂರು/ಗುಲ್ಬರ್ಗ/ಧಾರವಾಡ:ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರರ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಒಂದು ಕ್ಷೇತ್ರಗಳಲ್ಲಿ ಜಯ ಗಳಿಸಿವೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಪುಟ್ಟಣ್ಣ ಮೂರನೇ
ಬಾರಿ ಗೆಲುವು ಸಾಧಿಸಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಚೌಡರೆಡ್ಡಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ   ಡಾ.ಎ.ಎಚ್‌. ಶಿವಯೋಗಿ ಸ್ವಾಮಿ ಅವ­ರನ್ನು ಮಣಿಸಿದ್ದಾರೆ. ಈಶಾನ್ಯ
ಶಿಕ್ಷ­ಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ಪಶ್ಚಿಮ ಪದವೀಧ­ರರ ಕ್ಷೇತ್ರ­ದಲ್ಲಿ ಬಿಜೆಪಿಯ ಪ್ರೊ.ಎಸ್‌.ವಿ. ಸಂಕನೂರ ಗೆಲುವು ಸಾಧಿಸಿದ್ದಾರೆ.     

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಪುಟ್ಟಣ್ಣ ಅವರು ಬಿಜೆ­ಪಿಯ ಎಂ.ನೀಲಯ್ಯ ವಿರುದ್ಧ 3 ಸಾವಿರ ಮತ ಅಂತರದಿಂದ ಗೆಲುವು ಸಾಧಿಸಿದರು. ಪುಟ್ಟಣ್ಣ ಅವರು 8,531 ಮತ ಪಡೆದರೆ ನೀಲಯ್ಯ 5,531 ಮತ ಗಳಿಸಿದರು.

ಡಾ.ಗುರುರಾಜ ಕರ್ಜಗಿ ಅವರಿಗೆ 1,456 ಮತಗಳು ದೊರೆತವು. ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ. ವೆಂಕಟೇಶ್‌ ಕೇವಲ 114 ಮತ ಗಳಿಸಿದರು.

ಕಣದಲ್ಲಿದ್ದ ನಾಲ್ವರು ಪಕ್ಷೇತರ ಅಭ್ಯರ್ಥಿ­ಗಳಲ್ಲಿ ಇಬ್ಬರು ಎರಡಂಕಿ ತಲುಪಲಿಲ್ಲ. ಉಳಿದ ಇಬ್ಬರು ನೂರರ ಗಡಿ ಮುಟ್ಟಲಿಲ್ಲ.

ಪುಟ್ಟಣ್ಣ ಅವರಿಗೆ ಇದು ಸತತ ಮೂರನೇ ಗೆಲುವು. 2002 ಮತ್ತು 2008ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರ­ದಿಂದ ಅವರು ಗೆಲುವು ಸಾಧಿಸಿದ್ದರು.

ಎರಡನೇ ಪ್ರಾಶಸ್ತ್ಯದಲ್ಲಿ ಗೆಲುವು: ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 51,800 ಮತದಾ­ರರು ಹಕ್ಕು ಚಲಾಯಿಸಿದ್ದರು. ಈ ಪೈಕಿ 5,500 ಮತಗಳು ಕುಲಗೆಟ್ಟಿದ್ದವು. 46,300 ಮತಗಳು ಸಿಂಧುವಾಗಿದ್ದು, ಗೆಲುವಿಗೆ 23,151 ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿತ್ತು.

ಚೌಡರೆಡ್ಡಿ ಅವರಿಗೆ 20,807 ಮೊದಲ ಪ್ರಾಶಸ್ತ್ಯದ ಮತಗಳು ದೊರೆತವು. ಶಿವಯೋಗಿ ಸ್ವಾಮಿ ಅವರು 15,454 ಮತ ಗಳಿಸಿದರು. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಮುಗಿದಾಗ ಯಾರೂ ಗೆಲುವಿಗೆ ಬೇಕಿದ್ದ ಮತಗಳನ್ನು ಪಡೆಯಲಿಲ್ಲ. ಬಳಿಕ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಯಿತು. 12ನೇ ಸುತ್ತಿನ ಎಣಿಕೆ ಮುಗಿದಾಗ ಚೌಡರೆಡ್ಡಿ 23,440 ಮತ ಗಳಿಸಿ ಗೆಲುವು ಸಾಧಿಸಿದರು. ಶಿವಯೋಗಿಸ್ವಾಮಿ ಅವರಿಗೆ 16,906 ಮತಗಳು ಮಾತ್ರ ದೊರೆತವು.

ಮಟ್ಟೂರ ಜಯಭೇರಿ: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಅವರು ಬಿಜೆಪಿಯ ಶಶೀಲ್‌ ನಮೋಶಿ ವಿರುದ್ಧ 2,089 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಮಟ್ಟೂರ ಅವರು 9,022 ಮತಗಳನ್ನು ಪಡೆದರೆ, ನಮೋಶಿ ನಮೋಶಿ 6,933 ಮತ ಪಡೆದರು.

ಜೆಡಿಎಸ್‌ನ ಎಂ.ಬಿ.ಅಂಬಲಗಿ 953, ಪಕ್ಷೇತರ ಅಭ್ಯರ್ಥಿಗಳಾದ ಎಚ್.ಶಂಕರ­ರಾವ್ (9), ಡಾ.ಎಂ.ಆರ್.ರಂಗನಾಥ್ (19), ಲಿಂಗರಾಜ ಬಿರಾದಾರ (766) ಹಾಗೂ ಸುಭಾಷ್‌ಚಂದ್ರಬೋಸ್ (46) ಮತ ಗಳಿಸಿದರು. ನಮೋಶಿ ಹಿಂದೆ ಸತತವಾಗಿ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಸಂಕನೂರಗೆ ಭರ್ಜರಿ ಜಯ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ವಿ.ಸಂಕನೂರ ಅವರು ಜೆಡಿಎಸ್‌ನ ವಸಂತ ಹೊರಟ್ಟಿ ಅವರನ್ನು 13,932 ಮತಗಳ ಅಂತರದಿಂದ ಮಣಿಸಿದರು. ವಸಂತ ಹೊರಟ್ಟಿ ವಿಧಾನ ಪರಿಷತ್ತಿನ ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಪುತ್ರ.

ಸಂಕನೂರ ಅವರಿಗೆ 22,506 ಮತ ದೊರೆತರೆ, ವಸಂತ ಅವರಿಗೆ 8,574 ಮತಗಳು ಮಾತ್ರ ದೊರೆತವು. ಕಾಂಗ್ರೆಸ್‌ ಅಭ್ಯರ್ಥಿ ಪಿ.ಎಚ್‌.ನೀರಲಕೇರಿ 4,685 ಮತ ಗಳಿಸಿದರು. 7,823 ಮತಗಳು ಕುಲಗೆಟ್ಟಿದ್ದವು. 175 ಮತದಾರರು ‘ಕಣದಲ್ಲಿರುವ ಎಲ್ಲರನ್ನೂ ತಿರಸ್ಕರಿಸುವ’ ಆಯ್ಕೆ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT