ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನುಗೂಡು

ಬದಲಾವಣೆಗೆ ತುಡಿವ ಯುವಮನದ
Last Updated 15 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬಿಳಿ ಟಿ–ಶರ್ಟ್‌, ಕೈಗೆ ಗ್ಲೌಸ್‌, ಮುಖಕ್ಕೆ ಮಾಸ್ಕ್  ಧರಿಸಿಕೊಂಡು ಬೈಕ್ ಮೇಲೆ ಈ ತಂಡ ಒಟ್ಟಿಗೇ ಸೇರಿ ಎಲ್ಲಿಯಾದರೂ ಹೊರಟಿತು ಎಂದರೆ ಅಲ್ಲೆಲ್ಲೋ ಸ್ವಚ್ಛತೆ ಕಾರ್ಯ ನಡೆಯಲೇಬೇಕು. ಅದು ರಸ್ತೆಯಾದರೂ ಸೈ, ಹಳ್ಳ–ಕೊಳ್ಳಗಳಾದರೂ ಸೈ, ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿ, ಆಸ್ಪತ್ರೆ.... ಹೀಗೆ ಏನಾದರೂ ಸೈ... ಒಟ್ಟಿನಲ್ಲಿ ಅವರ ಬಿಳಿಯ ಬಟ್ಟೆ ಕೊಳೆಯಾಗಿ, ಅಲ್ಲಿಯ ವಾತಾವರಣ ಶುಭ್ರವಾಗುವುದಂತೂ ದಿಟ.

ಈ ತಂಡದ ಹೆಸರು ಜೇನುಗೂಡು. ಇದು ಕಾಣಸಿಗುವುದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ. ವರ್ಷದಲ್ಲಿ ಒಂದೆರಡು ಕಾರ್ಯಕ್ರಮಗಳನ್ನು ಮಾಡಿ ಕೈತೊಳೆದುಕೊಳ್ಳುವ, ಸನ್ಮಾನ, ಹಾರ ತುರಾಯಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ  ಕೆಲವು ಸಂಘಟನೆಗಳ ನಡುವೆ ಭಿನ್ನವಾಗಿ ನಿಂತು ಎಲೆಮರೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಸಂಘವೇ ‘ಜೇನುಗೂಡು’.

2015ರ ಆಗಸ್ಟ್‌ ತಿಂಗಳಿನಲ್ಲಿ 45 ಯುವಕರಿಂದ ಪ್ರಾರಂಭವಾದ ಜೇನುಗೂಡು ಸಂಘಟನೆಯಲ್ಲಿ ಇಂದು ನೂರಕ್ಕೂ ಅಧಿಕ ಯುವ ಸ್ವಯಂಸೇವಕರು ಇದ್ದಾರೆ. ಬಡವ, ಶ್ರೀಮಂತ ಎನ್ನುವ ಭೇದವಿಲ್ಲದ ಈ ಪಡೆಯಲ್ಲಿ, ಬ್ಯಾಂಕ್ ಉದ್ಯೋಗಿಗಳು, ಸರ್ಕಾರಿ ನೌಕರರು, ಶಿಕ್ಷಕರು, ಎಂಜಿನಿಯರ್‌ಗಳು,  ಗುತ್ತಿಗೆದಾರರು... ಹೀಗೆ ದೊಡ್ಡ ಸಮೂಹವೇ ಇದೆ.

ವಾರಪೂರ್ತಿ ಕಚೇರಿಯಲ್ಲಿ ದುಡಿದ ಮನಗಳಿಗೆ ವಾರಾಂತ್ಯ ಬಂತೆಂದರೆ ಮನೆಯಲ್ಲಿ ನೆಮ್ಮದಿಯಿಂದ ಕಾಲ ಕಳೆಯುವ ಆಸೆ. ಆದರೆ ಈ ಪಡೆಯ ಸದಸ್ಯರು ಹಾಗಲ್ಲ. ಪ್ರತಿ ಭಾನುವಾರ ಬೆಳಿಗ್ಗೆ 5.30ಕ್ಕೆ ಇವರ ಸ್ವಚ್ಛತಾ ಕೆಲಸ ಆರಂಭವಾಗುತ್ತದೆ. ಮಧ್ಯಾಹ್ನ ಎರಡು ಗಂಟೆಯವರೆಗೂ ಸ್ವಚ್ಛತಾ ಕಾರ್ಯ ನಡೆಯುತ್ತದೆ.

‘ಜೇನುಗೂಡು’ ಸ್ವಚ್ಛತೆಗಾಗಿ ವಿಶೇಷವಾಗಿ ಆಯ್ಕೆ ಮಾಡಿಕೊಳ್ಳುವುದು ಸರ್ಕಾರಿ ಕಚೇರಿ ಆವರಣ, ಆಸ್ಪತ್ರೆ ಹಾಗೂ ಸಾರ್ವಜನಿಕ  ಸ್ಥಳಗಳನ್ನು. ಏಕೆಂದರೆ ಈ ಸ್ಥಳಗಳನ್ನು ಎಷ್ಟೇ ಶುಚಿಗೊಳಿಸಿದರೂ ಪುನಃ ಅಲ್ಲಿ ಕಸದ ರಾಶಿ ಬೀಳುವುದು ಸಾಮಾನ್ಯ. ಒಂದೇ ಬಾರಿಗೆ ಶುಚಿ ಮಾಡಿ ಮುಗಿಯುವ ಸ್ಥಳಗಳಲ್ಲ ಇವು. ಅತ್ತ ಶುಚಿಯಾಗುತ್ತಿದ್ದಂತೆಯೇ ಇತ್ತ ಮತ್ತೆ ಕಸದ ರಾಶಿ ಬೀಳುವುದೂ ಉಂಟು. ಆದ್ದರಿಂದ ಪ್ರತಿ ವಾರವೂ ಇಂಥ ಸ್ಥಳಗಳನ್ನು ಬೇಸರಿಸಿಕೊಳ್ಳದೆಯೇ ತಂಡದ ಸದಸ್ಯರು ಸ್ವಚ್ಛಗೊಳಿಸುತ್ತಾರೆ.

ಆಯಾ ವಾರ ಯಾವ ಸ್ಥಳವನ್ನು ಆಯ್ದುಕೊಳ್ಳಬೇಕು ಎಂಬ ಬಗ್ಗೆ ಗುಂಪಿನ ಸದಸ್ಯರ ನಡುವೆ ಮೊದಲೇ ಚರ್ಚೆ ನಡೆಯುತ್ತದೆ. ಎಲ್ಲರೂ ಒಪ್ಪಿದ ಮೇಲೆ ಆ ವಾರದ ಮಟ್ಟಿಗೆ ಒಬ್ಬ ನಾಯಕನ ಆಯ್ಕೆ ಮಾಡಲಾಗುತ್ತದೆ. ನಂತರ ಅವರ ಮುಂದಾಳತ್ವದಲ್ಲಿ ಕೆಲಸ ಶುರು ಮಾಡಲಾಗುತ್ತದೆ. ಇವರ ಕೆಲಸವನ್ನು ವಾಟ್ಸ್‌ಆ್ಯಪ್‌ನಲ್ಲಿ ನೋಡುವ ಹಲವರು, ತಾವೂ ಈ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ. ಇವರ ಕೆಲಸ ಸ್ವಚ್ಛತೆ ಮಾಡುವುದು ಮಾತ್ರವಲ್ಲ, ಬದಲಿಗೆ ಜನ ಸಾಮಾನ್ಯರಲ್ಲಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದೂ ಆಗಿದೆ.

ಶುಚಿತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇವರು ಬಸ್ ನಿಲ್ದಾಣ, ಪೊಲೀಸ್ ಸ್ಟೇಷನ್, ತಾಲ್ಲೂಕು ಆಸ್ಪತ್ರೆ, ಮಿನಿ ವಿಧಾನಸೌಧ ಹೀಗೆ ಎಲ್ಲೆಡೆ ತಿರುಗುತ್ತಾರೆ.

ಕೊಳೆಯಿಂದ ತುಂಬಿ ಹೋಗಿದ್ದ ಐತಿಹಾಸಿಕ ಸುಂದರವಾದ ಬಸವನಬಾಗೇವಾಡಿಯ ನಂದೀಶ್ವರ ದೇವಸ್ಥಾನದ  ಬಸವತೀರ್ಥ ಕಲ್ಯಾಣಿ ಇವರ ಶ್ರಮದ ಫಲವಾಗಿ ಈಗ ಮಿರಮಿರ ಮಿಂಚುತ್ತಿದೆ.

ಗಬ್ಬೆದ್ದು ಹೋಗಿದ್ದ ಬಸವ ಮೂರ್ತಿ ಚೌಕ, ಅಂಬೇಡ್ಕರ್ ಚೌಕ ಸೇರಿದಂತೆ ಹತ್ತಾರು ಸಾರ್ವಜನಿಕ ಸ್ಥಳಗಳು ಈಗ ನೋಡುವಂತಾಗಿವೆ. ಎಲ್ಲೆಂದರಲ್ಲಿ ಉಗಿಯುವ, ಮೂತ್ರ ವಿಸರ್ಜನೆಯಿಂದ ನಾರುತ್ತಿದ್ದ ಹಲವಾರು ಸ್ಥಳಗಳು ಇಂದು ಸ್ವಚ್ಛಗೊಂಡಿವೆ. ಜಾಗವನ್ನು ಸ್ವಚ್ಛಗೊಳಿಸುವ ಜೊತೆಗೇ ಅಲ್ಲಿಯ ತ್ಯಾಜ್ಯಗಳನ್ನು ವಾಹನಗಳ ಮೂಲಕ ಸಾಗಿಸುತ್ತಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದರೆ, ಉಗುಳಿದರೆ 500 ರೂಪಾಯಿ ದಂಡ’, ‘ಸರ್ಕಾರದ ಆಸ್ತಿ ನಮ್ಮ ಆಸ್ತಿ’... ಹೀಗೆ ಹಲವಾರು ಭಿತ್ತಿ ಚಿತ್ರಗಳನ್ನು ನಗರಸಭೆ, ಪಾಲಿಕೆಗಳು ಅಂಟಿಸುವುದು ಸಾಮಾನ್ಯ. ಆದರೆ ಆ ಕೆಲಸವನ್ನೂ ಈ ಬಳಗದ ಸದಸ್ಯರೇ ಮಾಡುತ್ತಿದ್ದಾರೆ. ಆವರಣದ ಗೋಡೆಗೆ ಬಣ್ಣ ಬಳಿದು ಅದರ ಮೇಲೆ ಪರಿಸರ ಕಾಳಜಿಯ ಸಂದೇಶಗಳನ್ನು  ಬರೆದು ಕುಂಚದಿಂದ ಚಿತ್ರಿಸಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇವರ ಸೇವೆಗೆ ಇನ್ನಷ್ಟು ಸಾಕ್ಷಿಯಾಗಿರುವುದು, ಶಾಲಾ ಕಾಲೇಜುಗಳ ಆವರಣಗಳಿಗೆ ಬಾಗಿಲುಗಳನ್ನು ದೇಣಿಗೆಯಾಗಿ ನೀಡಿರುವುದು. ಇದರ ಜೊತೆಗೆ ಶಾಲಾ–ಕಾಲೇಜುಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಕುರಿತು ಕಾಳಜಿ ಮೂಡಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕೂರಲು ಆಸನ ವ್ಯವಸ್ಥೆಯನ್ನೂ ಇವರೇ ಮಾಡಿದ್ದಾರೆ.

ಈ ಸಂಘಟನೆಯ ಇನ್ನೊಂದು ವಿಶೇಷತೆ ಎಂದರೆ, ಇಲ್ಲಿ ‘ನಾನು ಅಧ್ಯಕ್ಷ, ನಾನು ಕಾರ್ಯದರ್ಶಿ’ ಎನ್ನುವ ಗೋಜು ಇಲ್ಲವೇ ಇಲ್ಲ. ಎಲ್ಲರೂ ಒಂದೇ ಎನ್ನುವ ಮನೋಭಾವ. ಇಷ್ಟೆಲ್ಲಾ ಸೇವೆ ಮಾಡುತ್ತಿದ್ದರೂ ಯಾವುದೇ ಅನುದಾನಕ್ಕೆ  ಇವರು ಬೇಡಿಕೆ ಒಡ್ಡಿಲ್ಲ. ರಾಜಕಾರಣಿಗಳ ಕಾಲು  ಹಿಡಿದಿಲ್ಲ.  ಪ್ರಚಾರ ಕಾರ್ಯವಂತೂ ಇಲ್ಲವೇ ಇಲ್ಲ.

‘ಸ್ವಂತ ಖರ್ಚಿನಿಂದಲೇ ಎಲ್ಲವನ್ನೂ ನಿಭಾಯಿಸುತ್ತೇವೆ. ಒಟ್ಟಿನಲ್ಲಿ ನಗರ ಶುಚಿಯಾಗಬೇಕಷ್ಟೇ’ ಎನ್ನುತ್ತಾರೆ ಕಾರ್ಯಕರ್ತರಾಗಿರುವ ಪ್ರದೀಪ ಮುಂಜಾನೆ. ‘ನಮ್ಮ ಸೇವೆ ಗುರುತಿಸಿ ಹಲವಾರು ಜನ ಹಣ ಹಾಗೂ ಸಾಮಗ್ರಿಗಳ ಸಹಾಯ ನೀಡಿದ್ದಾರೆ. ಸಾರ್ವಜನಿಕ ಸ್ಥಳದ ಆವರಣ ಗೋಡೆಗೆ ಜಾಗೃತಿ ಮೂಡಿಸುವ ವ್ಯಾಖ್ಯೆಗಳನ್ನು ಬರೆಯಲು ಕಲಾವಿದರೇ ಮುಂದಾಗಿ ಉಚಿತವಾಗಿ ಚಿತ್ರಿಸಿಕೊಟ್ಟಿದ್ದಾರೆ. ಸಂಘಟನೆಗೆ ಬಂದ ಧನ ಸಹಾಯವನ್ನೂ ಸಾರ್ವಜನಿಕ ಸೇವೆಗೆ ಮೀಸಲಾಗಿಡುತ್ತೇವೆ. ಇದೇ ನಮ್ಮ ಗುರಿ’ ಎನ್ನುತ್ತಾರೆ ಸತೀಶ ಕ್ವಾಟಿ.

ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸುವುದು ಹಾಗೂ ತಾಲ್ಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಯೋಜನೆ ರೂಪಿಸಿಕೊಂಡಿದ್ದಾರೆ.

‘ಬರೀ ಸರ್ಕಾರದ ಯೋಜನೆಗಳನ್ನೇ ನಂಬಿ ಕುಳಿತು ಅದರ ಅನುದಾನವನ್ನೇ ಕಾಯುತ್ತಾ ಕುಳಿತಿರುವುದು ಬೇಡ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಾವೇ ಶುಚಿಯಾಗಿಡೋಣ’ ಎನ್ನುವ ಧ್ಯೇಯದೊಂದಿಗೆ ಕಾರ್ಯ ಆರಂಭಿಸಿರುವ ಜೇನುಗೂಡು ತಂಡ, ಒಂದು ವರ್ಷದಲ್ಲಿಯೇ ಹೆಮ್ಮರವಾಗಿ ಬೆಳೆದು ಈ ಉದ್ದೇಶವನ್ನು ಈಡೇರಿಸಿ ತೋರಿಸಿದೆ.

ಇವರ ಈ ಕೆಲಸದಿಂದ ಉತ್ತೇಜನಗೊಂಡು ತಂಡಕ್ಕೆ ಕೈಜೋಡಿಸಲು ಮುಂದೆ ಬರುತ್ತಿರುವ ಊರಿನ ಜನರ ಉತ್ಸಾಹ ನೋಡಿದರೆ ಅಚ್ಚರಿ ಆಗುತ್ತದೆ. ಸಂಪರ್ಕಕ್ಕೆ: 9739482881/ 9480644880.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT