ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಹಸ್ತಪ್ರತಿಗಳ ಗಣಕೀಕರಣ

ಬಸದಿಗಳ ಜೀರ್ಣೋದ್ಧಾರ: ನಜ್ಮಾ ಹೆಪ್ತುಲ್ಲಾ
Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ತಾಳೆಗರಿಗಳಲ್ಲಿಯೇ ಉಳಿದಿರುವ ಜೈನ ಧರ್ಮಕ್ಕೆ ಸಂಬಂಧಿಸಿದ ಅಪ­ರೂಪದ ಹಸ್ತಪ್ರತಿಗಳನ್ನು ಗಣಕೀಕರಣ­ಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಜೈನ ಧರ್ಮಕ್ಕೆ ಸಂಬಂಧಿಸಿದ 80 ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳು ತಾಳೆಗರಿ ಮೇಲೆಯೇ ಉಳಿದು­ಬಿಟ್ಟಿವೆ. ಅವನ್ನು ಮುಂದಿನ ಪೀಳಿಗೆಗೂ ತಲುಪಿಸುವ ದೃಷ್ಟಿಯಿಂದ ಗಣಕೀಕರಣಕ್ಕೆ ಅಳವಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅಲ್ಪಸಂಖ್ಯಾತ ವ್ಯವ­ಹಾ­ರಗಳ ಸಚಿವೆ ನಜ್ಮಾ ಹೆಪ್ತುಲ್ಲಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೈನ ಧರ್ಮದ ಇತಿಹಾಸ, ಪರಂಪರೆ, ಸಾಹಿತ್ಯ– ಸಂಸ್ಕೃತಿಗೆ ಸಂಬಂಧಿಸಿದ ಅಪರೂಪದ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವುದರಿಂದ ಈ ವಿಷಯದ ಬಗ್ಗೆ ಸಂಶೋಧನೆ ಮಾಡುವವರಿಗೆ ಅನುಕೂಲ­ವಾಗಲಿದೆ. ಈ ಯೋಜನೆ ಕುರಿತು ಪ್ರಾಚ್ಯವಸ್ತು ಇಲಾಖೆ ಜತೆ ಚರ್ಚಿಸಲಾಗಿದೆ. ಗುಜರಾತ್‌ನಲ್ಲಿ ಈ ಕೆಲಸ ಮಾಡಲಾಗಿದ್ದು ಅಲ್ಲಿನ ಪ್ರಾಚ್ಯ ವಸ್ತು ಇಲಾಖೆ ಕ್ಯುರೇಟರ್ ಜತೆ ಮಾತನಾಡಲಾಗಿದೆ ಎಂದರು. 

ಬಸದಿಗಳ ಜೀರ್ಣೋದ್ಧಾರ: ದಕ್ಷಿಣ ಭಾರತದಲ್ಲಿ ಜೈನ ಬಸದಿಗಳು ಹಾಳು ಬಿದ್ದಿವೆ. ಈ ಬಸದಿಗಳಿಗೆ ಶತಮಾನದ ಇತಿಹಾಸವಿದೆ. ಅವುಗಳ ಜೀರ್ಣೋ­ದ್ಧಾರಕ್ಕೆ ವಿಶೇಷ ಕಾರ್ಯ­ಕ್ರಮಗಳನ್ನು ಹಾಕಿಕೊಳ್ಳ­ಲಾಗುತ್ತಿದೆ. ಕೇರಳ ಮೂಲದ ಪ್ರಾಚ್ಯವಸ್ತು ಇಲಾಖೆ ತಜ್ಞ ಅಹಮದ್‌ ಅವರೊಂದಿಗೆ ಬಸದಿಗಳ ಜೀರ್ಣೋದ್ಧಾರ ಕುರಿತು ಸಮಾಲೋಚನೆ ಮಾಡ­ಲಾಗಿದೆ. ಮಧ್ಯ ಪ್ರದೇಶದಲ್ಲಿ ಅವರು ಹಲವು ಬಸದಿಗಳ ಜೀರ್ಣೋದ್ಧಾರ ಮಾಡಿದ್ದಾರೆ ಎಂದು ಸಚಿವರು ವಿವರಿಸಿದರು.

ಜೈನ ಬಸದಿಗಳ ಜೀರ್ಣೋದ್ಧಾರ ಮಹತ್ವದ ಕಾರ್ಯಕ್ರಮ. ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗಲಿದೆ. ರಾಜ್ಯಗಳು  ಕೇಂದ್ರ ಸರ್ಕಾರದ ಜತೆ ಕೈ ಜೋಡಿಸಬೇಕು. ಇದರಿಂದ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜೈನರಿಗೂ ಅಲ್ಪಸಂಖ್ಯಾತ ಸ್ಥಾನಮಾನ ದೊರೆತಿದೆ. ಈ ವರ್ಷದಿಂದ ಅಲ್ಪಸಂಖ್ಯಾತ ವರ್ಗಕ್ಕೆ ಲಭ್ಯವಾಗುವ ಎಲ್ಲ ಸೌಲಭ್ಯಗಳು ಈ ಸಮಾಜಕ್ಕೂ ಸಿಗಲಿವೆ. ಅಲ್ಪಸಂಖ್ಯಾತರು ಅಂದರೆ ಮುಸ್ಲಿಮರು ಅಷ್ಟೇ ಅಲ್ಲ, ಕ್ರಿಶ್ಚಿಯನ್ನರು, ಬೌದ್ಧರು, ಪಾರ್ಸಿ ಮತ್ತು ಜೈನರು ಸೇರುತ್ತಾರೆ. ಈ ಎಲ್ಲ ಸಮಾಜಕ್ಕೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ದೊರೆಯಲಿದೆ ಎಂದು ನಜ್ಮಾ ಹೆಪ್ತುಲ್ಲಾ ವಿವರಿಸಿದರು.

ಹಿಂದಿನ ಯುಪಿಎ ಸರ್ಕಾರ ಚುನಾವಣೆಗೆ ಮುನ್ನ ಜೈನ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಈ ಹಣಕಾಸು ವರ್ಷದಿಂದ ಅವರಿಗೆ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT