ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ ಪಿಂಕ್‌ ಪ್ಯಾಂಥರ್ಸ್‌ಗೆ ಕಿರೀಟ

ಕಬಡ್ಡಿ: ಪೈರೇಟ್ಸ್‌ ಎದುರು ಸೋಲು; ಬುಲ್ಸ್‌ಗೆ ನಾಲ್ಕನೇ ಸ್ಥಾನ
Last Updated 1 ಸೆಪ್ಟೆಂಬರ್ 2014, 5:36 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರೈಡಿಂಗ್‌ ಮತ್ತು ಕ್ಯಾಚಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದವರು ಚೊಚ್ಚಲ ವೃತ್ತಿಪರ ಆಟಗಾರರ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಇಲ್ಲಿನ ಎನ್‌ಎಸ್‌ಸಿಐ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಮಾಲೀಕತ್ವದ ಜೈಪುರ ತಂಡ 35–24 ರಲ್ಲಿ ಯು ಮುಂಬಾ ತಂಡವನ್ನು ಮಣಿಸಿತು.ಜೈಪುರ ತಂಡ ಮಿರುಗುವ ಟ್ರೋಫಿಯ ಜೊತೆಗೆ ₨ 50 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನ ಪಡೆದ ಮುಂಬಾ ತಂಡ ₨ 25 ಲಕ್ಷ ಬಹುಮಾನ ಪಡೆಯಿತು.

ಉತ್ತಮ ಪ್ರದರ್ಶನ ತೋರಿದ ಮಣೀಂದರ್‌ ಸಿಂಗ್‌ ಮತ್ತು ರಾಜೇಶ್‌ ನರ್ವಾಲ್‌ ಅವರು ಜೈಪುರ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರಂಭದಲ್ಲಿ ತುರುಸಿನ ಪೈಪೋಟಿ ಕಂಡುಬಂದ ಫೈನಲ್‌ ಪಂದ್ಯದಲ್ಲಿ ಜೈಪುರ ನಿಧಾನವಾಗಿ ಹಿಡಿತ ಸಾಧಿಸಿತು.
ಮುಂಬಾ ತಂಡದ ನಾಯಕ ಅನೂಪ್‌ ಆರಂಭದಲ್ಲೇ ಮೂರು ಪಾಯಿಂಟ್‌ ಗಿಟ್ಟಿಸಿ ತಂಡಕ್ಕೆ 4–2 ರಲ್ಲಿ ಮುನ್ನಡೆ ತಂದಿತ್ತರು. ಮರುಹೋರಾಟ ನಡೆಸಿದ ಪ್ಯಾಂಥರ್ಸ್‌ 8–6 ರಲ್ಲಿ ಮೇಲುಗೈ ಸಾಧಿಸಿತು. ಮಾತ್ರವಲ್ಲ, ಆ ಬಳಿಕ ಪಂದ್ಯದ ಕೊನೆಯವರೆಗೂ ಮುನ್ನಡೆಯನ್ನು ಎದುರಾಳಿಗೆ ಬಿಟ್ಟುಕೊಡಲಿಲ್ಲ.

13–7 ರಲ್ಲಿ ಮೇಲುಗೈ ಪಡೆದ ಜೈಪುರ ವಿರಾಮಕ್ಕೆ ಮುನ್ನವೇ ಗೆಲುವಿನ ಸೂಚನೆ ನೀಡಿತ್ತು. ಆದರೆ ಮೊದಲರ್ಧ ಕೊನೆಗೊಳ್ಳಲು ಕೆಲ ನಿಮಿಷಗಳಿರುವಾಗ ಮುಂಬಾ ಕೆಲವೊಂದು ಪಾಯಿಂಟ್‌ ಕಲೆಹಾಕಿತು. ವಿರಾಮದ ವೇಳೆಗೆ ಜೈಪುರ 18–14 ರಲ್ಲಿ ಮುನ್ನಡೆ ಪಡೆದಿತ್ತು.
ಎರಡನೇ ಅವಧಿಯ ಆರಂಭದಲ್ಲಿ ಬೆನ್ನುಬೆನ್ನಿಗೆ ಪಾಯಿಂಟ್‌ ಕಲೆಹಾಕಿದ ಜೈಪುರ ಮುನ್ನಡೆಯನ್ನು 27–15ಕ್ಕೆ ಹೆಚ್ಚಿಸಿಕೊಂಡು ಎದುರಾಳಿಗಳ ಮೇಲೆ ಒತ್ತಡ ಹೇರಿತು. ಪ್ಯಾಂಥರ್ಸ್‌ ತಂಡದವರು ರೈಡಿಂಗ್‌ ಮಾತ್ರವಲ್ಲ, ಕ್ಯಾಚಿಂಗ್‌ನಲ್ಲೂ ಹೆಚ್ಚಿನ ಪಾಯಿಂಟ್‌ ಕಲೆಹಾಕಿದರು. ಪ್ರಶಾಂತ್‌ ಚವಾಣ್‌ ಹಲವು ಸಲ ಎದುರಾಳಿ ರೈಡರ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಮುಂಬಾ ತಂಡದ ಸ್ಟಾರ್‌ ರೈಡರ್‌ ಎನಿಸಿರುವ ಅನೂಪ್‌ ಅವರನ್ನು ಕೆಲವು ಸಲ ಔಟ್‌ ಮಾಡಲು ಪ್ಯಾಂಥರ್ಸ್‌ ತಂಡದವರು ಸಫಲರಾದರು. ಶಬ್ಬಿರ್‌ ಬಾಪು ಮತ್ತು ಶರಫುದ್ದೀನ್‌ ಅವರ ಅನುಪಸ್ಥಿತಿಯೂ ಮುಂಬಾ ತಂಡಕ್ಕೆ ಹಿನ್ನಡೆ ಉಂಟುಮಾಡಿತು.
ಅಭಿಷೇಕ್‌ ಬಚ್ಚನ್‌ ಹಾಗೂ ಪತ್ನಿ ಐಶ್ವರ್ಯಾ ರೈ ಅವರು ಜೈಪುರ ತಂಡ ಪ್ರತಿ ಪಾಯಿಂಟ್‌ ಗಿಟ್ಟಿಸುವಾಗಲೂ ಸಂಭ್ರಮಿಸುತ್ತಿದ್ದರು. ಜೈಪುರ ಗೆಲುವು ಪಡೆಯುತ್ತಿದ್ದಂತೆಯೇ ತಾರಾ ದಂಪತಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು. ಆ ಬಳಿಕ ಅಂಕಣಕ್ಕೆ ಬಂದ ಇಬ್ಬರೂ ತಂಡದ ಆಟಗಾರರನ್ನು ಅಭಿನಂದಿಸಿದರು.

ಪಟ್ನಾ ಪೈರೇಟ್ಸ್‌ಗೆ ಮೂರನೇ ಸ್ಥಾನ: ಇದಕ್ಕೂ ಮೊದಲು ಮೂರನೇ ಸ್ಥಾನವನ್ನು ನಿರ್ಣಯಿಸಲು ನಡೆದ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ 29–22 ರಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಮಣಿಸಿತು.ಆರಂಭದಿಂದಲೇ ಮೇಲುಗೈ ಸಾಧಿಸಿದ ಪಟ್ನಾ ತಂಡ ವಿರಾಮದ ವೇಳೆಗೆ 17–9 ರಲ್ಲಿ ಮುನ್ನಡೆ ಪಡೆದಿತ್ತು. ನಾಯಕ ಹಾಗೂ ಪ್ರಮುಖ ಆಟಗಾರ ರಾಕೇಶ್‌ ಕುಮಾರ್‌ ಅವರ ಅನುಪಸ್ಥಿತಿಯಲ್ಲೂ ಪಟ್ನಾ ಉತ್ತಮ ಆಟ ತೋರಿತು. ರವಿ ದಲಾಲ್‌ ಮತ್ತು ಸಂದೀಪ್‌ ನರ್ವಾಲ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೈರೇಟ್ಸ್‌ ಮತ್ತು ಬುಲ್ಸ್‌ ತಂಡಗಳು ತಲಾ ₨ 15 ಹಾಗೂ ₨ 10 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡವು.

* ಇದು ಕಬಡ್ಡಿಯಲ್ಲಿ ನವಕ್ರಾಂತಿ
ಲೀಗ್‌ ಆರಂಭವಾಗಿದ್ದು ಕಬಡ್ಡಿಯಲ್ಲಿ ಹೊಸ ಕ್ರಾಂತಿಗೆ ಕಾರಣ ವಾಗಿದೆ. ಈ ಲೀಗ್‌ಗೆ ಕೇವಲ ದೇಶದಲ್ಲಿ ಅಷ್ಟೇ ಅಲ್ಲ, ವಿದೇಶ ದಲ್ಲಿಯೂ ಜನಪ್ರಿಯತೆ ಸಿಕ್ಕಿದೆ. ತಡವಾಗಿಯಾದರೂ ಭಾರತದಲ್ಲಿ ಇಂಥದ್ದೊಂದು ಹೊಸ ಪ್ರಯತ್ನ ನಡೆದಿದ್ದು ಸ್ವಾಗತಾರ್ಹ.
–ಜಮುನಾ ವೆಂಕಟೇಶ್‌, ಕಬಡ್ಡಿ ಲೀಗ್‌ನಲ್ಲಿ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಿದ ಕರ್ನಾಟಕದ ಆಟಗಾರ್ತಿ.
* ಆಟಗಾರರ ಹುಮಸ್ಸು ಹೆಚ್ಚಿದೆ
ನಮ್ಮ ಶಕ್ತಿಗೂ ಮೀರಿ ಆಡಿದೆವು. ಆದರೆ, ಎದುರಾಳಿ ತಂಡಕ್ಕೆ ಅನಗತ್ಯ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಸೋಲು ಅನುಭವಿಸಬೇಕಾ ಯಿತು. ಯಾರೇ ಸೋಲಲಿ ಅಥವಾ ಗೆಲ್ಲಲಿ. ಒಟ್ಟಿನಲ್ಲಿ ಕಬಡ್ಡಿಗೆ ಇಷ್ಟೊಂದು ಪ್ರಚಾರ ಸಿಕ್ಕಿರುವುದು ಆಟಗಾರರ ಹುಮ್ಮಸ್ಸು ಹೆಚ್ಚಿಸಿದೆ.
–ಜೀವಾ ಕುಮಾರ್‌, ಯು ಮುಂಬಾ ತಂಡದಲ್ಲಿರುವ ಕರ್ನಾಟಕದ ಆಟಗಾರ.

ಆಟಗಾರ  ತಂಡ ಪಾಯಿಂಟ್ಸ್
ರಾಹುಲ್‌ ಚೌಧುರಿ ತೆಲುಗು ಟೈಟಾನ್ಸ್‌  151
ಅನೂಪ್‌ ಕುಮಾರ್‌ ಯು ಮುಂಬಾ  145
ಮಣಿಂದರ್ ಸಿಂಗ್‌ ಜೈಪುರ  121
ಅಜಯ್‌ ಠಾಕೂರ್‌ ಬೆಂಗಳೂರು ಬುಲ್ಸ್‌  120
ಕಾಶಿಲಿಂಗ್ ಅಡಕೆ         ದಬಾಂಗ್‌ ಡೆಲ್ಲಿ  113
ಸುರ್ಜಿತ್‌ ನರ್ವಾಲ್ ದಬಾಂಗ್‌ ಡೆಲ್ಲಿ  113
ಉತ್ತಮ ಪ್ರದರ್ಶನ ತೋರಿದ ಮೊದಲ ಐವರು ಡಿಫೆಂಡರ್‌ಗಳು
ಮನ್‌ಜಿತ್‌ ಚಿಲಾರಾ ಬೆಂಗಳೂರು ಬುಲ್ಸ್‌  46
ಸುರೇಂದರ್‌ ನಾಡಾ ಯು ಮುಂಬಾ  46
ಜಸ್ಮೀರ್‌ ಸಿಂಗ್‌          ದಬಾಂಗ್‌ ಡೆಲ್ಲಿ  39
ರೋಹಿತ್‌ ರಾಣಾ            ಜೈಪುರ  38
ಮೋಹಿತ್‌ ಚಿಲಾರಾ ಯು ಮುಂಬಾ  34

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT