ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು ಸುಧಾರಣೆ ಎಂಬ ಮರೀಚಿಕೆ

Last Updated 4 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕೈದಿಗಳು ಬಿಡುಗಡೆಯ ನಂತರ ಗೌರವಯುತ ಬದುಕು ಸಾಗಿಸಲು ಪೂರಕವಾದ ವಾತಾವರಣ ನಿರ್ಮಿಸುವುದು ಸರ್ಕಾರ ಮತ್ತು ನಾಗರಿಕ ಸಮಾಜದ ಕರ್ತವ್ಯ.

ಗಣರಾಜ್ಯೋತ್ಸವದಂದು ಜೈಲಿನಿಂದ ಬಿಡುಗಡೆಗೊಂಡ ತಾಯಿಯೊಬ್ಬಳು ಮರಳಿ ಜೈಲಿನ ಬಾಗಿಲನ್ನೇ ಬಡಿಯುವಂತಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂಥ ವಿಚಾರ. ನಮ್ಮದು ಕಲ್ಯಾಣ ರಾಜ್ಯ ಎಂದು ಹೇಳಿಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ. ಬಿಡುಗಡೆಗೊಂಡ ಇನ್ನೊಬ್ಬರು ಕೂಡ ಗೊತ್ತುಗುರಿ ಇಲ್ಲದೆ ತಿರುಗಾಡುವಂತಾಗಿರುವ ಸುದ್ದಿ ಬೆಳಗಾವಿಯಿಂದ ವರದಿಯಾಗಿದೆ.

ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿ ಕೈತೊಳೆದುಕೊಂಡ ಸರ್ಕಾರ ಮತ್ತು ನೊಂದುಬೆಂದು ಜೈಲಿನಿಂದ ಹೊರಬಂದ ಜೀವಗಳಿಗೆ ಸೂಕ್ತ ರಕ್ಷಣೆ ಕೊಡುವಲ್ಲಿ ಸೋತ ಸಮಾಜ ಈ ವೈಫಲ್ಯದ ಹೊಣೆ ಹೊರಲೇಬೇಕು. ಆ ತಾಯಿ (ಶಿರಿನ್ ತಾಜ್‌) ಯಾವುದೋ ಕೆಟ್ಟ ಗಳಿಗೆಯಲ್ಲಿ ಕೊಲೆ ಮಾಡಿರಬಹುದು. ಅದಕ್ಕಾಗಿ ಕಾನೂನು ಕ್ರಮಕ್ಕೆ ಒಳಗಾಗಿ ಜೈಲಿನಲ್ಲಿ ಒಂದೂವರೆ ದಶಕಕ್ಕೂ ಹೆಚ್ಚು ಕಾಲ  ಜೀವ ತೇದಿದ್ದಾಳೆ. ಬಿಡುಗಡೆಯ ಕನಸು ಕಾಣುತ್ತಿದ್ದ ಆಕೆಗೆ ಹೊರಬಂದ ಮೇಲೆ ‘ಅಯ್ಯೋ ಇಲ್ಲಿರಲಾರೆ, ಜೈಲೇ ಉತ್ತಮ’ ಎನಿಸಿರುವುದು, ಸುಧಾರಣೆಯನ್ನು ಮುಕ್ತವಾಗಿ ಒಪ್ಪಿಕೊಳ್ಳದ ಸಮಾಜ ಮತ್ತು ಸರ್ಕಾರದ ಮನೋಭಾವಕ್ಕೆ ಕನ್ನಡಿ ಹಿಡಿದಿದೆ. 

ಬಂಧುಬಾಂಧವರು, ಮಿತ್ರರು, ಕುಟುಂಬದ ಸದಸ್ಯರಾರೂ ಈ ವರ್ಷಗಳಲ್ಲಿ ಆಕೆಯನ್ನು ಭೇಟಿಯಾಗಿಲ್ಲ. ಜೈಲು ಸುಧಾರಣೆ, ಜೈಲುವಾಸಿಗಳ ಕಾಳಜಿ, ರಕ್ಷಣೆ ಮರೀಚಿಕೆಯಾಗಿಯೇ ಉಳಿದಿದೆ ಎಂಬುದನ್ನೂ ಈ ತಾಯಿಗಾದ ಪಾಡು ಎತ್ತಿತೋರಿಸುತ್ತದೆ. ಜೈಲುಗಳಲ್ಲೂ ಉಳ್ಳವರಿಗೊಂದು, ಇತರರಿಗೊಂದು ರೀತಿ ನೀತಿ ಇದೆಯೆಂಬುದು ಅಷ್ಟೇನೂ ಗುಟ್ಟಾಗಿ ಉಳಿದಿಲ್ಲ. ಕೆಲವು ಪ್ರಭಾವಿ ವ್ಯಕ್ತಿಗಳು ಒಳಗೆ ವಿಲಾಸಿ ಜೀವನ ನಡೆಸಿರುವುದು ಕೆಲವು ಸಲ ವರದಿಯಾಗಿದೆ. ಇನ್ನೊಂದೆಡೆ ವಿಚಾರಣಾಧೀನ ಕೈದಿಗಳು ತಮ್ಮ ಅಪರಾಧ ಸಾಬೀತಾಗದೆ ವರ್ಷಗಟ್ಟಲೆ, ಕೋರ್ಟಿಗೆ ಕರೆದುಕೊಂಡು ಹೋಗುವವರೂ ಗತಿಯಿಲ್ಲದೆ ಜೈಲಿನಲ್ಲೇ ಕೊಳೆಯುವ ಪರಿಸ್ಥಿತಿ ಇದೆ.

ಜೈಲಿನಲ್ಲಿ ಖಾಸಗಿತನ ಎಂಬುದು ಇಲ್ಲ ಎಂದು ಕೆಲವು ದಿನ ಜೈಲಿನಲ್ಲಿದ್ದವರೊಬ್ಬರು ಹೇಳುತ್ತಾರೆ. ಕೆಲವೆಡೆ ಶೌಚಾಲಯಗಳಿಗೆ ಬಾಗಿಲುಗಳೇ ಇರುವುದಿಲ್ಲ.  ರೋಗಿಗಳ ಆರೈಕೆ ಅಷ್ಟಕ್ಕಷ್ಟೆ. ಊಟದ ಗುಣಮಟ್ಟ ಕೇಳುವವರಿಲ್ಲ. ಇದನ್ನೆಲ್ಲ ಪ್ರತಿಭಟಿಸಿ ಜೈಲುವಾಸಿಗಳು ಆಗಾಗ ಮುಷ್ಕರ ಹೂಡುವುದು ಹೊಸದೇನಲ್ಲ. ಮೂಲಭೂತ ಸೌಲಭ್ಯಗಳ ವಿಚಾರವೇ ಹೀಗೆಂದ ಮೇಲೆ ಜೈಲುವಾಸಿಗಳ ಮಾನಸಿಕ ಯಾತನೆಯನ್ನು ಗಮನಿಸುವವರಾರು?

ಅವರ ಖಿನ್ನತೆಯನ್ನು ಸೂಕ್ತ ಸಮಯದಲ್ಲಿ ಕಂಡುಹಿಡಿದು ಪರಿಹಾರ ಒದಗಿಸುವವರಾರು? ಒಬ್ಬ ತಾಯಿಯನ್ನು ಆಕೆಯ ಮಕ್ಕಳು, ಬಂಧುಬಾಂಧವರು ಬಂದು ನೋಡುತ್ತಿಲ್ಲವೆಂಬುದು ಜೈಲು ಅಧಿಕಾರಿಗಳಿಗೆ ದೊಡ್ಡ ವಿಷಯವಾಗುವುದಿರಲಿ, ಅವರ ಗಮನಕ್ಕೆ ಬಾರದೆ ಹೋಗುವ ಸಂಭವವೇ ಹೆಚ್ಚು. ಜೈಲಿನಿಂದ ಬಿಡುಗಡೆಯಾಗುವ ಎಲ್ಲರೂ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಆಗಬೇಕು. ತಮ್ಮ ಜೀವನ ನಡೆಸುವಷ್ಟನ್ನಾದರೂ ಸಂಪಾದನೆ ಮಾಡಿಕೊಳ್ಳುವಂತೆ ಮಾಡಬೇಕು. ತಮ್ಮ ಕಾಲಮೇಲೆ ತಾವು ನಿಲ್ಲುವವರನ್ನು ಸಮಾಜ ಕಾಲಕ್ರಮೇಣ ಒಪ್ಪಿಕೊಳ್ಳುತ್ತದೆ. ಅವರಿಗೂ ಅತ್ಮವಿಶ್ವಾಸ ಮೂಡುತ್ತದೆ.

ಹಾಗಾಗುವವರೆಗೆ ಸರ್ಕಾರ ಮತ್ತು ಅವರ ಸುತ್ತ ಇರುವವರು ಸಹಾಯ ಮಾಡಬೇಕು. ಹೊರಗೆ ಇರುವುದಕ್ಕಿಂತ ಜೈಲಿನಲ್ಲಿ ಇರುವುದೇ ವಾಸಿ ಎಂದು ಅವರಿಗೆ ಅನಿಸಿದರೆ ಅವರನ್ನು ಬಿಡುಗಡೆ ಮಾಡಿದ ಉದ್ದೇಶ ವಿಫಲವಾಗುತ್ತದೆ. ಮಾನಸಿಕ ತಜ್ಞರು, ಆಪ್ತ ಸಮಾಲೋಚಕರು, ತೊಂದರೆಯಲ್ಲಿರುವ ಮಹಿಳೆ ಮತ್ತು ಆಕೆಯ ಮಕ್ಕಳೊಡನೆ ಮಾತನಾಡಿ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ, ತಮ್ಮ ತಾಯಿಯನ್ನು ಅವರು ಒಪ್ಪಿಕೊಂಡು ಆಕೆಯನ್ನು ಸಮಾಜವೂ ಒಪ್ಪಿಕೊಳ್ಳುವಂತೆ ಮಾಡಿದರೆ ಆಕೆಯನ್ನು ಬಿಡುಗಡೆ ಮಾಡಿದ್ದು ಸಾರ್ಥಕವಾದೀತು. ಇದೇ ಕೆಲಸ ಇತರ ಕೈದಿಗಳ ವಿಷಯದಲ್ಲೂ ಆಗಬೇಕು.

ವರ್ಷಗಟ್ಟಲೆ ಜೈಲಿನಲ್ಲಿರುವ ಕೈದಿಗಳು ತಮ್ಮನ್ನು ಯಾರೂ ನೋಡಲು ಬಾರದ  ಕಾರಣಕ್ಕೆ ಮಾನಸಿಕವಾಗಿ ಅಸ್ವಸ್ಥಗೊಳ್ಳುವ ಅಪಾಯ ಇರುತ್ತದೆ. ಕೈದಿಗಳನ್ನು ಮುಕ್ತ ಜೈಲುಗಳಲ್ಲಿ ಇಡುವುದು, ಅವರಿಗೆ ವೃತ್ತಿ ಕೌಶಲ ತರಬೇತಿ, ಏಕ ರೂಪದ ಸೇವಾ ಸೌಲಭ್ಯ ಇನ್ನೂ ಈಡೇರದ ಬೇಡಿಕೆಗಳಾಗಿವೆ. ಇವೆಲ್ಲ ಕೈಗೂಡಿದಾಗ ಗಾಂಧೀಜಿ ಹೇಳಿದಂತೆ ‘ಅಪರಾಧವನ್ನು ದ್ವೇಷಿಸಿ, ಅಪರಾಧಿಯನ್ನಲ್ಲ’ ಎಂಬ ಮಾತನ್ನು ನಡೆಸಿಕೊಟ್ಟಂತಾಗುತ್ತದೆ.

ಸುನಿಲ್ ಭಾತ್ರ ವರ್ಸಸ್ ದೆಹಲಿ ಆಡಳಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌  ‘ಕುಟುಂಬದ ಸದಸ್ಯರು ಹಾಗೂ ಮಿತ್ರರ ಭೇಟಿಯು ಜೈಲಿನಲ್ಲಿ ಒಂಟಿಯಾಗಿರುವವರಿಗೆ ಒಂದು ಆಶಾಕಿರಣ, ರಕ್ಷಾಕವಚ...’ ಎಂದು ಹೇಳಿದೆ. ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸ್ವತಃ ಕುಟುಂಬದವರನ್ನು ಕರೆತಂದು ಭೇಟಿ ಮಾಡಿಸಿದರೂ ತಪ್ಪಲ್ಲ.

ಅದರಿಂದ ವಿಸ್ತೃತ ಸಮಾಜಕ್ಕೆ ಲಾಭವಿದೆ. ಇಂಗ್ಲೆಂಡ್‌ ನ್ಯಾಯ ಸಚಿವಾಲಯದ ಅಧಿಕೃತ ವರದಿಯೊಂದರ ಪ್ರಕಾರ, ಕೈದಿಗಳ ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವುದು, ಅವರು ಮತ್ತೆ ಅಪರಾಧ ಎಸಗುವುದನ್ನು ಐದರಲ್ಲಿ ಎರಡು ಭಾಗದಷ್ಟು ಕಡಿಮೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ಟ್ರಬಲ್ಡ್‌ ಫ್ಯಾಮಿಲೀಸ್ ಪ್ರೋಗ್ರಾಂ, ಕೈದಿಗಳು ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ನಮ್ಮ ದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಈ ಕೆಲಸ ಮಾಡಬಹುದು.

ಜೈಲಿನಲ್ಲಿರುವವರಿಗೂ ಹೊರಗಿರುವವರಂತೆ ಎಲ್ಲ ಮೂಲಭೂತ ಹಕ್ಕುಗಳು ಇರುತ್ತವೆ. ಆದರೆ ಕೆಲವು ನಿರ್ಬಂಧಗಳಿರುತ್ತವೆ ಅಷ್ಟೆ. ಅವುಗಳನ್ನು ಮಾನ್ಯ ಮಾಡಿ ಅವರ ಸರ್ವತೋಮುಖ ಬೆಳವಣಿಗೆಯಾಗುವಂತೆ ಮಾಡುವುದು ಅಗತ್ಯ. ಬಿಡುಗಡೆಯಾದವರು ಮರಳಿ ಅಪರಾಧ ಮಾಡುವುದರಿಂದ ರಾಷ್ಟ್ರಕ್ಕಾಗುವ ನಷ್ಟ ಎಷ್ಟೆಂಬುದನ್ನು ಕೆಲವು ದೇಶಗಳು ಲೆಕ್ಕ ಹಾಕಿವೆ. ಮರು ಅಪರಾಧ ತಡೆಗಟ್ಟುವ ಯೋಜನೆಗಳಿಗೆ ಹಣ ಹೂಡುತ್ತಿವೆ. ಇದು ನಮಗೂ ಮಾದರಿ ಆಗಬಹುದು.

ಜೈಲುವಾಸಿಗಳೊಡನೆ ಕೆಲಸ ಮಾಡುವ ಸಂಸ್ಥೆಗಳು ವಿರಳವಾಗಿವೆ. ಕೈದಿಗಳನ್ನು ಖುದ್ದಾಗಿ ಭೇಟಿ ಮಾಡುತ್ತ ಅವರ ತೊಂದರೆಗಳಿಗೆ ಮಿಡಿಯುವ ಒಂದು ಪಡೆಯನ್ನೇ ರಾಜ್ಯದಾದ್ಯಂತ ಹೊಂದಿರುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂದರೆ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯಬಹುದು. ಈ ಕೆಲಸಕ್ಕೆ ಯಾರೇ ಮುಂದೆ ಬಂದರೂ ಸರ್ಕಾರ ಮುಕ್ತ ಮನಸ್ಸಿನಿಂದ ಪ್ರೋತ್ಸಾಹ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT