ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗುಳದ ನೆನಪಿರಲಿ ಜೀವಕ್ಕೆ ಜತೆಯಿರಲಿ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮನುಷ್ಯನ ಭಾವನಾತ್ಮಕ ಅಗತ್ಯಗಳಲ್ಲಿ ಪ್ರೀತಿಯೂ ಒಂದು ಎನ್ನುವುದನ್ನು ಇಷ್ಟೊಂದು ಅಗಲ ತಳಹದಿಯ ಮೇಲೆ, ಸಾರಸಂಗ್ರಹವಾಗಿ ಹೇಗೆ ಹಿಡಿದಿಟ್ಟಿದೆಯಲ್ಲವೆ ಎಂದು ಈ ಸಾಲುಗಳನ್ನು ಮೆಲುಕು ಹಾಕಿದಾಗಲೆಲ್ಲ ಅನಿಸುತ್ತದೆ. ಬರೆದವರಿಗೆ ಒಂದು ನಡು ಬಾಗಿಸಿದ ನಮನ!

ಬೇರೆ ಬೇರೆ ‘ನಿರ್ವಚನ, ಸಂಕಥನ’ಗಳಲ್ಲಿ (ಕತೆ, ವ್ಯಾಖ್ಯಾನ ಎನ್ನುವುದಕ್ಕೆ ಇವು ಹೊಸ ಹೆಸರುಗಳು ಅಷ್ಟೆ) ಮರೆಮಾಚಿಕೊಂಡಿರುವ ಪ್ರೀತಿಗಾಗಿ ತಪಿಸುವವರ ಪ್ರಕರಣ  ಓದಿ/ ನೋಡಿ/ ಕೇಳಿದಾಗಲೆಲ್ಲ ಘನ ಸರಕಾರ, ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’ಗಳ ತರಹ ‘ಪ್ರೀತಿಭಾಗ್ಯ’ ಯೋಜನೆಯನ್ನೂ ಜಾರಿಗೊಳಿಸಲು ಸಾಧ್ಯವೆ ಎಂಬ ಅಸಾಧ್ಯ ಊಹೆ ಮೂಡುತ್ತದೆ!

ಪ್ರೀತಿ ಎಂಬುದು ಸತ್ಯವೆ, ಮಿಥ್ಯೆಯೆ, ಮೋಹವೆ, ಮಾತ್ಸರ್ಯರಹಿತವೆ, ಅನುಕೂಲಸಿಂಧುವೆ, ಅಸಾಧಾರಣ ತ್ಯಾಗವನ್ನು ಬೇಡುತ್ತದೆಯೆ ಎಂಬ ಮಂಥನಗಳನ್ನೆಲ್ಲ ಈ ಸಮುದ್ರ ತಾಳಿಕೊಂಡು, ಆಯಾ ಕಾಲದಿಂದ ಪ್ರಭಾವಿತವಾಗಿ, ಅದಕ್ಕೆ ತಕ್ಕುದಾದ ಉತ್ಪನ್ನಗಳನ್ನು ನೀಡುತ್ತಾ ಬಂದಿರುವುದನ್ನು ಗಮನಿಸಬಹುದು. love is not love if it alters when it alteration finds ಎಂಬ ತರಹದ ಶೇಕ್ಸ್‌ಪಿಯರ್ ಗ್ರಹಿಕೆಗಳನ್ನೂ ಮೀರಿ ಈ ಕಾಲದ ಪ್ರೀತಿ ಸಂಕೀರ್ಣಗೊಂಡಿದೆ.

ನಿನ್ನೆ ಮೊನ್ನೆಯ ತನಕ ಎಷ್ಟೊಂದು ಅನುರೂಪ ಜೋಡಿ ಅನಿಸಿಕೊಂಡವರೂ, ಒಂದು ಸಣ್ಣ ಬದಲಾವಣೆಗೆ ಹೊಂದಿಕೊಳ್ಳದೆ ಕೈ ಕೊಡವಿ ಬೇರೆಯಾಗುತ್ತಾರೆ. ಅವರು ಸಿನಿಮಾ ತಾರೆ, ಸೆಲೆಬ್ರಿಟಿಗಳೋ ಆಗಿದ್ದರಂತೂ, ಮಾಮೂಲಿ ಮನುಷ್ಯರು ‘ಛೆ, ಛೆ ಅದ್ಹೇಗೆ  ಹೀಗಾಗಲು ಸಾಧ್ಯ’ ಎಂದು ಮರುಗುತ್ತಾರೆ.

‘ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೆ’ ಎಂದು ಸವಾಲು ಹಾಕುವಷ್ಟು ಸಮೃದ್ಧ ಭಾವಿಸಿಕೊಳ್ಳುವ ಶಕ್ತಿಯುಳ್ಳ, ಗಟ್ಟಿಯಾದ ‘ಗಟ್’ ಫೀಲಿಂಗ್ ಹೊಂದಿರುವವರೂ ಪ್ರೀತಿ ವೈಫಲ್ಯ ಎದುರಿಸುತ್ತಾರೆ. ಅದರ ಹಿಂದೆ ಹಲವು ವ್ಯಕ್ತಿಗತ ಗುಣ-ಸ್ವಭಾವ, ಪರಿಸ್ಥಿತಿ, ‘ಡೆಸ್ಟಿನಿ’ಯ ಕಾರಣವಿರುತ್ತದೆ. ಇವೆಲ್ಲವನ್ನು ಕೂದಲು ಸೀಳುವ ಸೂಕ್ಷ್ಮದಲ್ಲಿ ವಿವರಿಸುವ ‘ಪ್ರೀತಿ ಗುರು’ಗಳು, ಪತ್ರಿಕೆ-–ನಿಯತಕಾಲಿಕಗಳ ತುಂಬ ಅವವೇ ಚಿರಂತನ ಪ್ರೀತಿ ವೈಫಲ್ಯದ ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸೀ, ಕುತೂಹಲಕ್ಕಾಗಿ ಈ ಕಾಲಂಗಳನ್ನು ಓದುವವರಿಗೆ ದ್ರೋಣಾಚಾರ್ಯರಾಗಿರುತ್ತಾರೆ! ‘ದೂರ ಕಲಿಕೆ’ಯ ಈ ಏಕಲವ್ಯರು, ತಾವು ಬರೆಯುವ ಸರದಿ ಬಂದಾಗ (ಬ್ಲಾಗ್, ವೆಬ್‌ಸೈಟ್, ವೆಬ್‌ಮ್ಯಾಗಜೀನ್ ವಗೈರೆಗಳಲ್ಲಿ) ‘ಸಂಬಂಧಕ್ಕೊಂದು ಹೆಸರು ನೀಡಬೇಕೆ?’, ‘ದೂರದಿಂದಲೇ ಪ್ರೀತಿಸಿದರೆ ಸಾಲದೆ?’, ‘ಪ್ರಾಪಂಚಿಕ ಸಂಬಂಧಗಳು ಹುಸಿಹೋದಾಗಲೂ ‘ಪ್ರೀತಿ’ ಅನುಭೂತಿಯನ್ನು ಕಾಯ್ದಿಟ್ಟುಕೊಳ್ಳಬಾರದೇಕೆ?’ ಮುಂತಾದ ಲಹರಿಗಳನ್ನು ಬರೆದು ‘ಪ್ರೀತಿ ಸೇವೆ’ ಮಾಡುತ್ತಿರುತ್ತಾರೆ! (ಇದು ಅಂತಹುದೇ ಒಂದು ಸದುದ್ದೇಶದ ಲಹರಿ ಎಂಬುದು ಓದುಗರಲ್ಲಿ ಲೇಖಕಿಯ ನಮ್ರ ಅರಿಕೆ!) 

ಇನ್ನು ಜೋಗುಳದ ನೆನಪು. ಪ್ರೀತಿ, ಆರೈಕೆಯ ಅಭಿವ್ಯಕ್ತಿಯೇ ಜೋಗುಳ. ಮನುಷ್ಯನ ಸುಪ್ತಪ್ರಜ್ಞೆಯಲ್ಲಿ ಠಸ್ಸೆ ಹೊಡೆದಿರುವ ಇದರ ನೆನಪು, ಮುಂಬರುವ ದಿನಗಳ ಪ್ರೀತಿ ಹೋರಾಟ ಮತ್ತು ಇತರ ಬಗೆಯ ಹೋರಾಟಗಳಿಗೂ ಭದ್ರ ಬುನಾದಿ ಒದಗಿಸುತ್ತದೆ ಎನ್ನುವುದು ಎಷ್ಟೊಂದು ಮಾರ್ಮಿಕ ಅಂಶ! ಹೊಸ ಜೀವವೊಂದು ಕುಟುಂಬದಲ್ಲಿ ಕಣ್ತೆರೆದಾಗ, ಅದನ್ನು ಎದೆಗಪ್ಪಿ ಬರಮಾಡಿಕೊಂಡು, ವರುಷವೆರಡು ವರುಷ ಪ್ರೀತಿ ಸುರಕ್ಷಾಚಕ್ರದಲ್ಲಿ ಬಂಧಿಸಿದರೆ, ಅಷ್ಟರಮಟ್ಟಿಗೆ  ಆ ಮಕ್ಕಳ ಭವಿಷ್ಯ ಉಜ್ವಲ ಎನ್ನುವ ಮನೋವೈಜ್ಞಾನಿಕ ಸತ್ಯವನ್ನು ನವಯುಗದ ಪಾಲಕರು ಅರ್ಥಮಾಡಿಕೊಂಡಂತಿದೆ. ಆದರೆ ಅದು, ಕೇವಲ ಗುಣಮಟ್ಟದ ಸವಲತ್ತು, ಸಲಕರಣೆಗಳನ್ನು ಒದಗಿಸುವ, ಅಥವಾ ಪಂಚತಾರಾ ಸೌಲಭ್ಯದ ಆಸ್ಪತ್ರೆಗಳಲ್ಲಿ ಮುಹೂರ್ತ ನಿಗದಿಪಡಿಸಿ ಅವರನ್ನು ಈ ಜಗತ್ತಿಗೆ ಬರಮಾಡಿಕೊಳ್ಳುವ ಬಾಹ್ಯಾಡಂಬರಕ್ಕಷ್ಟೇ ಸೀಮಿತಗೊಂಡರೆ ಕಷ್ಟ.

ಇವೆಲ್ಲಕ್ಕಿಂತ ಮುಖ್ಯವಾದ ಅಂತಃಸ್ಫುರಣೆಯ ಪ್ರೀತಿ, ಮಕ್ಕಳ ವಿಕಾಸ, ಬೆಳವಣಿಗೆಗೆ ಬೇಕು. ಕಡುಬಡತನದಲ್ಲೂ ಮಕ್ಕಳಿಗೆ ತುಂಬ ಪ್ರೀತಿ ಕೊಟ್ಟು ಬೆಳೆಸಿದ ತಂದೆತಾಯಿ, ಅದರ ಫಲವನ್ನು  ಬಹುಪಾಲು ಚೆನ್ನಾಗಿಯೇ ಉಣ್ಣುತ್ತಾರೆ: ಸ್ವಲ್ಪ ದೊಡ್ಡವರಾಗುತ್ತಲೇ ಮನೆಯ ಪರಿಸ್ಥಿತಿ ಅರಿತು, ಜವಾಬ್ದಾರಿಗೆ ಹೆಗಲು ಕೊಡುವ ಮಕ್ಕಳು, ಮುಂಬರುವ ದಿನಗಳಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಆಶಯವನ್ನು ಪೋಷಿಸಿಕೊಂಡು ಬರುತ್ತಾರೆ. ಈಡೇರಿಸಿಕೊಳ್ಳುತ್ತಾರೆ. ಜತೆಗೆ ಹುಟ್ಟಿ ಬೆಳೆದ ಅಕ್ಕ–-ತಂಗಿ -ಅಣ್ಣ-–ತಮ್ಮರ ಕಡೆಯೂ ಅವರ ಪ್ರೀತಿ ವೃಕ್ಷ ಚಿಗುರುತ್ತದೆ.

ಜೋಗುಳದ ಪ್ರೀತಿ, ಸುತ್ತಮುತ್ತ ಅಮ್ಮ-ಅಪ್ಪರ ಸುಳಿದಾಟ ನಿರಂತರ ಎಂಬುದು ಮನಸ್ಸಿನಲ್ಲಿ ಛಾಪೊತ್ತಿದ ನಂತರ ಬರುವುದೇ, ‘ತನಗೆ ಬೇಕಾದಾಗ ಅಮ್ಮ ಮನೆಯಲ್ಲಿರಲಿಲ್ಲ’ ಎಂದು ದೂರುವ ಹಂತ.

ಈಗ ಪ್ರಖ್ಯಾತ ಲೇಖಕನಾಗಿರುವ ತನ್ನ ಹಿರಿಯ ಮಗ ವಿಕ್ರಮ್ ಸೇಠ್ ಸಹ ಇಂತಹ ‘ಆಪಾದನೆ’ಯನ್ನು ಮಾಡಿದ್ದ ಎಂದು ನಿವೃತ್ತ ನ್ಯಾಯಾಧೀಶೆ ಲೀಲಾ ಸೇಠ್, ಒಂದು ಸಂದರ್ಶನದಲ್ಲಿ ಹೇಳಿದ್ದರು. ಅದಕ್ಕೆ ಪರಿಹಾರವನ್ನೂ ಅವರು ವಿವರಿಸಿದರು: ಶಾಲೆ ಕಲಿಯುವ, ಸುತ್ತಲಿನ ಪ್ರಪಂಚ ಕುರಿತ ಜ್ಞಾನದ ಕಿಟಕಿಯನ್ನು ಹಂತ ಹಂತವಾಗಿ ತೆರೆದು ಕೊಳ್ಳುತ್ತಿರುವ ಮಕ್ಕಳನ್ನು ಕೂರಿಸಿ ತನ್ನ ಹುದ್ದೆಯ ಮಹತ್ವ, ಅದರ ಕಡೆ ತನಗಿರುವ ಸೆಳೆತ, ಈ ಕರ್ತವ್ಯ ನಿರ್ವಹಣೆಯೂ ಮನೆ ನೋಡಿಕೊಳ್ಳುವಷ್ಟೇ ಮುಖ್ಯ ಎನ್ನುವುದನ್ನು ತಾಯಿ ಮನದಟ್ಟು ಮಾಡಿಕೊಡಬೇಕು. ಮಕ್ಕಳನ್ನು ಆಗಾಗ ಕಚೇರಿಗೆ ಅಥವಾ ಕಚೇರಿ ಕೆಲಸದ ಕಾರಣವಾಗಿ ಹೊರಡುವ ಪ್ರಯಾಣಗಳಲ್ಲಿ ಕರೆದೊಯ್ಯುವ ತಾಯಂದಿರೂ ಇದ್ದಾರೆ. ಈ ಹೊತ್ತಿಗೆ ಊಟ, ಉಡುಪು, ಶೌಚ ಇತ್ಯಾದಿ ಸಂಗತಿಗಳಲ್ಲಿ ಸ್ವಾವಲಂಬನೆ ಬೆಳೆಸಿಕೊಂಡಿರುವ ಮಕ್ಕಳು, ಎಡರು ತೊಡರೆನಿಸದೆ ಪುಟ್ಟ ಸ್ನೇಹಿತರಾಗಿ ಮಾರ್ಪಡುವುದನ್ನು ಗುರುತಿಸಿ ಆನಂದಿಸುತ್ತಾರೆ.

ಆನಂತರ ಮಕ್ಕಳು ಪ್ರೌಢರಾಗುವ ಸಮಯ ಬರುತ್ತದೆ. ಈಗ  ಮಕ್ಕಳ ‘ಜೀವಕ್ಕೆ ಜತೆ’ ಕಲ್ಪಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಈವತ್ತಿಗೆ ಸುಮಾರು ಐದಾರು ದಶಕಗಳ ಹಿಂದೆ ಹೆಣ್ಣುಮಕ್ಕಳಿಗೆ ಶಿಕ್ಷಣ, ನಂತರ ಒಂದು ಉದ್ಯೋಗ, ಆ ಮೂಲಕ ಆರ್ಥಿಕ ಸ್ವಾವಲಂಬನೆ ಎಂಬ ಮೂರಂಶದ ಕಾರ್ಯಕ್ರಮ ಜಾರಿಗೊಳಿಸಲು ಸುಶಿಕ್ಷಿತ ಮಧ್ಯಮ ವರ್ಗದ ತಂದೆ ಮತ್ತು ಅವರ ಮೇಲ್ಪಂಕ್ತಿ ಅನುಸರಿಸಿ ಇತರರು ಉದ್ಯುಕ್ತರಾದರು. ಭಾವನಾತ್ಮಕ ಭದ್ರತೆ ಒದಗಿಸಿಕೊಡುವ, ವಿವಾಹ ಅಥವಾ ಸೂಕ್ತ ಸಂಗಾತಿಯನ್ನು ಹುಡುಕಿ ಕೊಡುವುದು ಇದರ ಜತೆಜತೆಯೇ ಸಾಗಬೇಕು ಎನ್ನುವ ಧಾವಂತವೂ ಅವರಲ್ಲಿ ಬಹುತೇಕರಿಗೆ ಇದ್ದಿತು. ಮಗಳು ಸ್ವಲ್ಪ ಪೀಚು ಎನ್ನುವ ಕಾರಣಕ್ಕಾಗಿ ಐದಾರು ಸಂಬಂಧಗಳು ಕೈತಪ್ಪಿ ಹೋದಾಗ, ‘ಮಗಳೆ, ನಿನಗೊಬ್ಬ ಯೋಗ್ಯ ಸಂಗಾತಿಯನ್ನು ದೊರಕಿಸಿಕೊಡುವ ವಿಷಯದಲ್ಲಿ ನಾನು ಅಸಮರ್ಥನಾಗಬಹುದು... ಒಂದು ವೇಳೆ ಹಾಗಾದರೆ ನಿನ್ನ ಕ್ಷಮೆಯಿರಲಿ’ ಎಂದು ಹಂಚಿಕೊಂಡಿದ್ದ ಗೆಳತಿಯ ತಂದೆ ನೆನಪಾಗುತ್ತಾರೆ.

ಹೀಗಿದ್ದೂ, ಪಾಲಕರು, ನಾನಾ ಕಾರಣಗಳಿಂದಾಗಿ ತಮ್ಮ ಈ ಜವಾಬ್ದಾರಿ ನಿರ್ವಹಿಸಲಾಗದೇ ಹೋಗುತ್ತಾರೆ. ಆರ್ಥಿಕ ಮುಗ್ಗಟ್ಟು, ಅವ್ಯವಹಾರಿಕತೆ, ಮಕ್ಕಳ ಮನೋಭಾವ ಅರ್ಥಮಾಡಿಕೊಳ್ಳದೆ ತಮ್ಮದೇ ಜಗಳ-ಕದನ -ವ್ಯಸನ- ವೈಮನಸ್ಯಗಳಲ್ಲಿ ಮುಳುಗಿರುವುದು ಅವುಗಳಲ್ಲಿ ಕೆಲವು. ಆಗೆಲ್ಲ ಸ್ವತಃ ಮಕ್ಕಳು, ಅವರ ಸ್ನೇಹಿತರು, ಸಹೋದ್ಯೋಗಿಗಳು, ವಿಸ್ತರಿಸಿದ ಕುಟುಂಬದ ಬಂಧುಗಳು ಈ ಕೆಲಸಕ್ಕೆ ಮುಂದಾಗುವುದು, ನಮ್ಮ ಭಾರತೀಯ ಸಮಾಜದ ಒಂದು ಇತ್ತ್ಯಾತ್ಮಕ ಅಂಶ. ಇವೆಲ್ಲವೂ ವಿಫಲವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಈ ಸನ್ನಿವೇಶಕ್ಕೆ ಯಾರೂ- ಸಿನಿಮಾ ತಾರೆಯರು, ಸಿದ್ಧ-ಪ್ರಸಿದ್ಧರು, ವೃತ್ತಿಜೀವನದಲ್ಲಿ ಅತಿ ಉತ್ತಮ ‘ರಿಪೋರ್ಟ್ ಕಾರ್ಡ್’ ಪಡೆದುಕೊಂಡವರು, ತಾರಾ ವರ್ಚಸ್ಸಿನ ಲೇಖಕರು, ಶ್ರೀಮಂತ ಸೋಷಿಯಲೈಟ್‌ಗಳು -ಯಾರೂ ಪಕ್ಕಾಗಬಹುದು. ಆದರೂ, ಪಶ್ಚಿಮ ದೇಶಗಳಲ್ಲಿರುವಂತೆ, ಬದುಕಿನ ಯಾವುದೇ ಹಂತ, ವಯೋಮಾನದಲ್ಲೂ, ಹೆಣ್ಣಾಗಲೀ ಗಂಡಾಗಲೀ, ‘ಜೀವಕ್ಕೆ ಜತೆ’ ಹುಡುಕಿಕೊಳ್ಳಲು ಸಾಧ್ಯವಿರುವ ಮುಕ್ತ ಸಾಮಾಜಿಕ ಧೋರಣೆ ನಮ್ಮಲ್ಲೂ ಈಗ ಕಣ್ಣು ಬಿಡುತ್ತಿದೆ.

ಇಂತಹ ಸದವಕಾಶಗಳನ್ನು ಬಳಸಿ, ಪ್ರಜ್ಞಾಪೂರ್ವಕವಾಗಿಯೇ ನಮ್ಮ ಈ ಭಾವನಾತ್ಮಕ ಅಗತ್ಯ ಪೂರೈಸಿ ಕೊಳ್ಳುವುದು, ಸದಾ ಬೇಕು-–ಬೇಡದ ಸಂಗತಿಗಳಿಂದ ಗಿಜಿಗುಡುವ ಮನಸ್ಸಿಗೊಂದು ಮೌನದ ದೀಕ್ಷೆ ಕೊಡುವುದು, ಅದರ ಸ್ಪೀಡ್‌ಗೊಂದು ಬ್ರೇಕ್ ಹಾಕಿ ಜತೆಯ ಜೀವದ ಸಹವಾಸದಲ್ಲಿ ಕಾಲದ ನಿರಂತರತೆಯನ್ನು ಅನುಭವಿಸುವುದು, ಶಾಂತರಾಗಿ, ಸುತ್ತಲಿರುವ ಸಹಮಾನವ, ಪ್ರಾಣಿ ಜೀವಗಳ ಕಡೆಗೂ ಸ್ಪಂದನಶೀಲರಾಗಿರುವುದು... ಹುಟ್ಟಿನ ಗಮ್ಯವಾದ ಸಾವನ್ನು ಸಂತಸದಿಂದ, ಸಮಾಧಾನದಿಂದ ತಲುಪಲು ಸಾಧ್ಯ  ಎಂದರೆ ಬೆಚ್ಚಿಬೀಳುವುದಕ್ಕಿಂತ ಈ ಯೋಚನೆಯನ್ನೊಮ್ಮೆ ಮೆಲುಕು ಹಾಕುವುದು ಲಾಭಕರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT