ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಹ್ರಾ ಹೇಳಿದ (ಉಪ) ಕಥೆಗಳು

Last Updated 19 ಜುಲೈ 2014, 19:30 IST
ಅಕ್ಷರ ಗಾತ್ರ

ಅಪ್ರತಿಮ ಕಲಾವಿದೆ ಜೋಹ್ರಾ ಸೆಹಗಲ್ (ಏಪ್ರಿಲ್‌ 27, 1912 – ಜುಲೈ 10, 2014)ಅವರ ನಿಧನದ ರಾತ್ರಿ ದೂರದರ್ಶನದ ಉರ್ದು ವಾಹಿನಿ ಪ್ರಸಾರ ಮಾಡಿದ (ಸುಮಾರು ಇಪ್ಪತ್ತು ವರ್ಷ ಹಿಂದೆ ನಡೆದ) ಸುಮಾರು ಒಂದೂವರೆ ತಾಸಿನ ಸುದೀರ್ಘ ಸಂದರ್ಶನದಲ್ಲಿನ ಅನೇಕ ಸಂಗತಿಗಳು, ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ-ಲಿಂಗಸಮಾನತೆ ನಿರ್ವಚನೆಯ ಹಲವು ಒಳನೋಟಗಳನ್ನು ನೀಡುತ್ತಿರುವುದು ನಿರೀಕ್ಷಿತವಷ್ಟೇ ಅಲ್ಲ, ಅಭ್ಯಾಸಯೋಗ್ಯವೂ ಹೌದು.

ಈ ಮಾತುಕತೆ ನಡೆಸಿಕೊಟ್ಟವರು ಜೋಹ್ರಾರ ಸಮಕಾಲೀನೆ, ಗೆಳತಿ, (ಬಹುಶಃ ಸ್ಪರ್ಧಿ), ಸಾಂಸ್ಕೃತಿಕ ಕ್ಷೇತ್ರದ ಮತ್ತೊಬ್ಬ ದುರಂಧರೆ, ಕಪಿಲಾ ವಾತ್ಸ್ಯಾಯನ. ಯಾವುದೇ ಕೃತಕ ಸಿಂಗ್-ಸಾಂಗ್ ನಿರೂಪಣೆ, ರೋಚಕ ಪ್ರಶ್ನೆ ಕೇಳುವಾಗಿನ ಸ್ವಾನಂದ, ತಲೆ ಆಡಿಸುವಿಕೆ ಇಲ್ಲದೆ, ಮೆಲುವಾಗಿ ಆರಂಭವಾಗಿ, ಸಾಂದ್ರವಾಗತ್ತಾ ನಡೆದು, ‘ಕ್ಯಾಮೆರಾ ಪ್ರಜ್ಞೆ’ಯ ಲವಲೇಶವೂ ಇಲ್ಲದಂತೆ (ತೋರುತ್ತಾ) ಮುಗಿದ ಸಂದರ್ಶನ, ಕಣ್ಣು-ಕಿವಿ-ಮನಸ್ಸುಗಳಿಗೆ ಹಬ್ಬವಾಗಿತ್ತು.

ದಿಲ್ಲಿಯಲ್ಲಿ ನೆಲೆಸಿದ್ದ, ಮೇಲ್ಮಧ್ಯಮ ವರ್ಗದ, ಸುಶಿಕ್ಷಿತ, ವೈಚಾರಿಕ, ನಂಬಿಕೆ, ನಡವಳಿಕೆಗಳಲ್ಲಿ ಆಧುನಿಕವಾಗಿದ್ದ ‘ನವಾಬ’ ಕುಟುಂಬದಲ್ಲಿ ಬೆಳೆದು, ಬಾಲ್ಯ ಕಳೆದ ಜೋಹ್ರಾ, ಅವರೇ ಹೇಳಿಕೊಳ್ಳುವಂತೆ, ತೀರಾ ಸಾಧಾರಣ ರೂಪಿನ ಹುಡುಗಿ. ಆದರೆ, ತಮ್ಮ ಅಪ್ರತಿಮ ಸುಂದರಿ, ಸುಗುಣೆ, ಸೋದರಿಯೊಂದಿಗೆ ಹಾರ್ದಿಕ ಸಂಬಂಧವನ್ನು ಕಡೆಯತನಕ ಇಟ್ಟುಕೊಳ್ಳಬಲ್ಲವರಾಗಿದ್ದರು. ತಮ್ಮಿಬ್ಬರ ನಡುವಣ ‘ವೈದೃಶ್ಯ’ವನ್ನು ಸಭೆ, ಸಮಾರಂಭಗಳಲ್ಲಿ ಎತ್ತಿ ಆಡುತ್ತಿದ್ದ, ಪರಿಚಿತ-ಅರೆ ಪರಿಚಿತ-ಅಪರಿಚಿತರನ್ನು ಕೊಂದುಬಿಡುವಷ್ಟು ಸಿಟ್ಟು ಬರುತ್ತಿತ್ತು ಎಂದು ಮುಕ್ತವಾಗಿ ಹೇಳಿಕೊಳ್ಳಬಲ್ಲ ಗಟ್ಟಿ ಹುಡುಗಿ, ತನ್ನ ಕಲೆ, ಒನಪು, ಲಾವಣ್ಯಗಳಿಂದಲೇ ‘ಸುಂದರಿ’ ಎನಿಸಿಕೊಳ್ಳುತ್ತಿದ್ದರು.

ವಿಶ್ವವಿಖ್ಯಾತ ನೃತ್ಯಪಟು ಪಂ. ಉದಯಶಂಕರ್ ಕಟ್ಟಿದ ನೃತ್ಯತಂಡದಲ್ಲಿ ಒಬ್ಬರಾಗಿ, ಕಲೆಯ ಮತ್ತು ಆ ಮೂಲಕ, ಒಂದು ಮುಖ್ಯ ಸಾಂಸ್ಕೃತಿಕ ಸಮುದಾಯದಲ್ಲಿ ಜಾಗ ಗಿಟ್ಟಿಸಿದ್ದ (ಎಲ್ಲ ಕಲಾರಾಧಕ ಮೇಲ್ಮಧ್ಯಮ ವರ್ಗದ ತರುಣಿಯರಿಗೂ ಈ ಅನುಕೂಲ ಇರುತ್ತದೆ) ಜೋಹ್ರಾ ನಿಜವಾಗಿಯೂ ಮಿಂಚಿದ್ದು ಅಭಿನಯ ಕ್ಷೇತ್ರದಲ್ಲಿ. ದುಡಿಮೆಯ ವೇಳೆ, ಕಡು ಮೋಹ ಮತ್ತು ಜಿದ್ದಿನಿಂದ ತಮ್ಮ ಪಾತ್ರ, ಅದರ ಪೋಷಣೆ (ಪೋಷಾಕಿನ ಠಾಕುಠೀಕು) ಎಂದೆಲ್ಲ ವ್ಯಸ್ತರಾಗಿರುತ್ತಿದ್ದ ಆಕೆ ತಮ್ಮ ಅವಧಿ ಸಮೀಪಿಸಿತು ಎನ್ನುವಾಗ, ಸಾವನ್ನು ಆಹ್ವಾನಿಸುವ ಛಾತಿಯುಳ್ಳವರಾಗಿದ್ದರು.

‘ನನ್ನ ದೇಹದ ಬೂದಿ/ ಕ್ರಿಮೆಟೋರಿಯಂ ಶೌಚಾಲಯದಲ್ಲಿ ಫ್ಲಷ್ ಮಾಡಿಬಿಡಿ...’ ಎಂಬ ಅವರ ನುಡಿ, ಸಾವಿನ ಕುರಿತು ಅತಿ ಭಾವುಕತೆ ಇಟ್ಟುಕೊಂಡಿರುವ ಮತ್ತು ಆ ಮೂಲಕ ಸ್ವಂತ ಸಾವಿನ ಭಯ ಕಳೆದುಕೊಳ್ಳಲೆತ್ನಿಸುವ ಭಾರತೀಯ ಮನಸ್ಸಿಗೆ ಎಷ್ಟೊಂದು ದೂರ!
ಆದರೆ ಜೋಹ್ರಾರಂತಹ ಜೋಹ್ರಾ ಕೂಡ ಅರ್ಧ ಆಯಸ್ಸಿಗೇ ಉಂಟಾದ ಪತಿ ವಿಯೋಗದಿಂದ ಕಂಗೆಟ್ಟರು. ‘ಸ್ಥಳ ಬದಲಾವಣೆಗೆ ವಾರ-ಹದಿನೈದು ದಿನ ಇದ್ದುಬರುತ್ತೇನೆ’ ಎಂದು ಇಂಗ್ಲೆಂಡ್‌ಗೆ ಹೋದವರು ಅಲ್ಲಿ ವರ್ಷಗಟ್ಟಲೆ, ವಸತಿಶಾಲೆ, ಅಜ್ಜಿಯ ಮನೆಗಳಲ್ಲಿ ಬಿಟ್ಟಿದ್ದ ಎಳೆಯ ಮಕ್ಕಳನ್ನಗಲಿ ರಂಗಪ್ರಯೋಗಗಳಲ್ಲಿ ತೊಡಗಿಕೊಳ್ಳಬೇಕಾಯಿತು.

ಒಂದಾದ ಮೇಲೊಂದು ಅವಕಾಶ ದೊರಕಿ, ಇಂಗ್ಲಿಷ್ ರಂಗಭೂಮಿಯಲ್ಲಿ ಅವರು ಭದ್ರರಾದರು ಎನ್ನುವ ವೇಳೆಗೆ ಭಾರತ-ಚೀನಾ ಯುದ್ಧ ಶುರುವಾಗಿ ಸಂಕಷ್ಟಗಳ ಸರಮಾಲೆ ಕಾಲಿಗೆ ತೊಡರುವ ಬಳ್ಳಿಯಾಯಿತು. ಮಕ್ಕಳನ್ನು ದೂರ, ಅಪಾಯಕಾರಿ ಪ್ರದೇಶದಲ್ಲಿ ಬಿಟ್ಟಿರಲು ಮನಸ್ಸೊಪ್ಪದೆ ತಮ್ಮ ಬಳಿಯೇ ಇರಲು ಇಂಗ್ಲೆಂಡ್‌ಗೆ ಕರೆಸಿಕೊಂಡದ್ದಕ್ಕಾಗಿ, ಹೆಚ್ಚಿನ ಖರ್ಚು ತೂಗಿಸಲು, ಭಾರತದ ಶ್ರೀಮಂತ ಕುಟುಂಬದ ಈ ಮಹಿಳೆ, ಗಾರ್ಮೆಂಟ್ ಕೆಲಸವೂ ಸೇರಿದಂತೆ ಅನೇಕ ಅನಾಮಿಕ ಕೆಲಸಗಳನ್ನು ಮಾಡುತ್ತಾ ಕಷ್ಟ ಪಡಬೇಕಾಯಿತು.

ಆಗಿನ ತಮ್ಮ ಸ್ಥಿತಿಯನ್ನು ವರ್ಣಿಸುತ್ತಾ, ಜೋಹ್ರಾ ಹೀಗೆ ಹೇಳಲು ಹಿಂಜರಿಯುವುದಿಲ್ಲ: ‘ಒಂದೊಮ್ಮೆ ನಾನು ಸಣ್ಣಪ್ರಾಯದವಳಾಗಿದ್ದಿದ್ದರೆ ಅಥವಾ ಕಪಿಲಾ, ನಿಮ್ಮಂತೆ ಸುಂದರಿಯಾಗಿದ್ದಿದ್ದರೆ, ಯಾವನಾದರೂ ಪುರುಷ ನನ್ನನ್ನು ಸಲಹಬಹುದಿತ್ತೋ ಏನೋ, ಆದರೆ ಅವೆರಡೂ ಶಕ್ಯವಿರಲಿಲ್ಲ... ನನಗಾಗಲೇ ಐವತ್ತು ವರ್ಷ ದಾಟಿತ್ತು...’. ತಮ್ಮ ಇಂಗ್ಲೆಂಡ್ ವಾಸದ ದಿನಗಳಲ್ಲಿ ಪುರುಷರ ನಗ್ನ ನೃತ್ಯ ‘ಸ್ಟ್ರಿಪ್ ಟೀಸ್" ವೀಕ್ಷಿಸಿದ್ದನ್ನು ಎಂಬತ್ತರ (ಸಂದರ್ಶನ ನಡೆದಾಗ) ಈ ಅಜ್ಜಿ, ಸರೀಕಳಾಗಿದ್ದ ಗೆಳತಿಗೆ, ಕಣ್ಣಿಗೆ ಕಟ್ಟುವಂತೆ, ಬಾಯಿಯಲ್ಲಿಯೇ ಸಂಗೀತದ ತಾಳಗಳನ್ನು ಹಾಡುತ್ತಾ ವಿವರಿಸಿದರು.

ಅದನ್ನು ಗಮನವಿಟ್ಟು ಆಲಿಸಿದ ಕಪಿಲಾ, ನಂತರದ ತಮ್ಮ ಪ್ರಶ್ನೆಯನ್ನು ಚುರುಕಾಗಿ ಸಂಯೋಜಿಸಿಕೊಂಡರು. ವಿಷಯ ಸ್ಪಷ್ಟತೆಗಾಗಿ ಅವೆರಡನ್ನೂ ಸ್ವಲ್ಪದರಲ್ಲಿ ವಿವರಿಸುವುದು ಇಲ್ಲಿ ಅವಶ್ಯಕ: ತಮ್ಮ ಸಹಚಾರಿಣಿಯರಾಗಿದ್ದ ಭಾರತೀಯ ಕುಟುಂಬದ ಕೆಲ ತರುಣಿಯರೊಂದಿಗೆ ಅಕಸ್ಮಾತ್ತಾಗಿ ಜೋಹ್ರಾ ಈ ಕ್ಲಬ್‌ಗೆ ಹೋಗಿರುತ್ತಾರೆ. ಹೋಗಿ ಕುಳಿತ ಮೇಲೆ, ಮಹಿಳೆಯರಿಗಾಗಿ ಆಯೋಜಿಸಿದ್ದ ಪುರುಷರ ನಗ್ನ ನರ್ತನ ನಡೆಯುತ್ತಿದೆ ಎಂದು ಅರಿವಾಗುತ್ತದೆ. ಹಂತಹಂತವಾಗಿ ಉಡುಪು ಕಳಚಿ ಎಸೆಯುವ ಕಲಾವಿದರಲ್ಲಿ ಒಬ್ಬ, ಹತ್ತಿರ ಹೋಗಿ, ಜೋಹ್ರಾರನ್ನು ಜತೆಯಲ್ಲಿ ನೃತ್ಯ ಮಾಡಲು ಆಹ್ವಾನಿಸುತ್ತಾನೆ.

ಎಲ್ಲ ತಮಾಷೆ, ಕೇಕೆ, ಚಿಯರಿಂಗ್ ನಡುವೆ ಸಂಕೋಚ, ನಾಚಿಕೆಯಿಂದ ಮುದ್ದೆಯಾಗಿದ್ದ ಈಕೆ ವೇದಿಕೆಗೆ ನಡೆದು ಒಂದೆರಡು ಹೆಜ್ಜೆ ಹಾಕುತ್ತಾರೆ. ನಂತರದ ಸರದಿ ಅವರೊಂದಿಗೆ ಬಂದಿದ್ದ ತರುಣಿಯದ್ದು... ಪತಿಯ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ದೂರದೇಶಕ್ಕೆ ಬಂದಿದ್ದ ಅವಳು ಉತ್ಸಾಹದಿಂದಲೇ ಇದಕ್ಕೆ ಸ್ಪಂದಿಸುತ್ತಾಳೆ. ಆದರೆ, ಯಾವುದೋ ನೃತ್ಯಭಂಗಿಯಲ್ಲಿ ಆಕೆಯ ಕತ್ತಿನ ಕೆಳಗೆ ಸಿಗರೇಟಿನಿಂದ ಸುಟ್ಟ ಗುರುತುಗಳು ಕಂಡು ಇಡೀ ಸನ್ನಿವೇಶ, ವಿನೋದ, ವಿಲಾಸಗಳಿಂದ ದುರಂತಕ್ಕೆ ಜಾರುತ್ತದೆ...

ಸೌಮ್ಯ ಮುಖಭಾವದಲ್ಲಿ, ನಿರಾಲಂಕೃತ, ನಿರಾಭರಣರಾಗಿದ್ದರಿಂದಲೇ ಸೂಸುವ ಒಂದು ಬುದ್ಧಿವಂತ ಕಳೆಯಲ್ಲಿ ಪ್ರಶ್ನೆ ಕೇಳುತ್ತಿದ್ದ ಕಪಿಲಾ ಥಟ್ಟನೆ ಸ್ವಲ್ಪ ಆವೇಶಗೊಂಡು ಹೀಗೆಂದರು: ‘‘ಹೀಗೆ, ಇಷ್ಟೊಂದು ಮುಕ್ತವಾಗಿ, ನಾಗರಿಕವಾಗಿ, ಕಲಾತ್ಮಕವಾಗಿ, (ಲೈಂಗಿಕವಾಗಿ) ಉತ್ತೇಜಿತರಾಗದೆ, ಗಂಡು-ಹೆಣ್ಣು ವ್ಯವಹರಿಸುತ್ತಿದ್ದುದು, ಅದಕ್ಕೆ ಅಗತ್ಯವಿರುವ ಒಂದು ಸಾಂಸ್ಕೃತಿಕ ಔದಾರ್ಯ ಈಗ ಸಾಧ್ಯವೆ? ವಯಸ್ಕ ಗಂಡು-ಹೆಣ್ಣುಗಳ ನಡುವಣ ಸೌಮ್ಯ ಚಕ್ಕಂದ ‘ಫ್ಲರ್ಟೇಷನ್’ ಈಗ ಲೈಂಗಿಕ ಛೇಡನೆ– ಸೆಕ್ಷ್ಯಅಲ್ ಹರಾಸ್ ಮೆಂಟ್’ ಎಂಬ ಭೀಷಣ ಪದವಾಗಿ ಮಾರ್ಪಟ್ಟಿದೆಯಲ್ಲ? ‘ನಾನು ಹೆಣ್ಣು’ ಎಂಬ ಲಿಂಗಪ್ರಜ್ಞೆ ನಿಮ್ಮ ವೃತ್ತಿಜೀವನದಲ್ಲಿ ಎಂದಾದರೂ ಹೀನಾಯ ಅನುಭವಿಸುವಷ್ಟು ಕಾಡಿದೆಯೆ?’’.

ಜೋಹ್ರಾರ ಉತ್ತರ ಏನಾಗಿತ್ತು ಎಂದು ಯಾರಾದರೂ ಊಹಿಸಬಹುದು. ಆದರೆ ಇಲ್ಲಿ ಪ್ರಶ್ನೆ ಏಳುವುದು, ಜೋಹ್ರಾ, ಕಪಿಲಾರಂತಹ ಮಹಿಳೆಯರು ತರುಣಿಯರಾಗಿದ್ದಾಗ ಇದ್ದ ಪರಿಸರದ ಸೌಲಭ್ಯ ನಮ್ಮಲ್ಲಿ ಎಷ್ಟು ಮಹಿಳೆಯರಿಗೆ ಇದೆ? ಅನುಪಮಾ ಮತ್ತು ನಿರಂಜನರ ಲವ್ ಅಫೇರ್ ಅನ್ನು ಅನಂತಮೂರ್ತಿಯವರ ನಾಯಕತ್ವದ ಒಂದು ಗೆಳೆಯರ ತಂಡ ಪ್ರೋತ್ಸಾಹಿಸುತ್ತಿತ್ತು, ತಡರಾತ್ರಿ, ಅನುಪಮಾರನ್ನು ಹಾಸ್ಟೆಲ್‌ಗೆ ಮುಟ್ಟಿಸಿಬರಲು ಇದೇ ಪಡೆ ಸಿದ್ಧವಿರುತ್ತಿತ್ತು... ಎಂಬೆಲ್ಲ ಐತಿಹ್ಯಗಳನ್ನು ಓದಿರುವ ನೆನಪೇನೋ ಸಿಹಿಯಾಗಿದೆ, ಆದರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT