ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಿಗಳ ಪೇಟೆಯ ರುಚಿ ದಾರಿಗಳು....

ಆಹಾರ ಬೀದಿ
Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಸಾಹಿತ್ಯಾಸಕ್ತರ ನೆಚ್ಚಿನ ತಾಣ ಎನಿಸಿರುವ ಚಾಮರಾಜಪೇಟೆ ಜ್ಞಾನದ ಜತೆಗೆ ಹೊಟ್ಟೆಯ ದಾಹ, ನಾಲಿಗೆಯ ರುಚಿ ನೀಗಿಸುವ ಬಡಾವಣೆಯಾಗಿಯೂ ಹೆಸರುವಾಸಿ.

ಬಸವನಗುಡಿ ಮುಖ್ಯರಸ್ತೆಯಲ್ಲಿ  ಸಿಗುವ ಕರ್ನಾಟಕ ಬೇಲ್‌ ಹೌಸ್‌, ದಾವಣಗೆರೆ ಬೆಣ್ಣೆ ದೋಸೆ, ಪೂರ್ಣಿಮ ಜ್ಯೂಸ್‌ ಸೆಂಟರ್‌ ಹಾಗೂ ಉಮಾ ಥಿಯೇಟರ್‌ ಪಕ್ಕದಲ್ಲಿರುವ ಗುರುರಾಜ ಬೋಂಡಾ ಸ್ಟಾಲ್‌ ಹೀಗೆ ಇಲ್ಲಿನ ಸಾಲು ಸಾಲು ಅಂಗಡಿಗಳು ಜನರ ಜಿಹ್ವಾ ಚಾಪಲ್ಯ ತಣಿಸಲು ಪಣತೊಟ್ಟಿವೆ.

1975ರಲ್ಲಿ ಬೆಂಗಳೂರಿನಲ್ಲಿ ಚಾಟ್ ಸಂಸ್ಕೃತಿ ಅಷ್ಟಾಗಿ ಬೇರೂರದಿದ್ದರೂ ಅಲ್ಲೊಂದು ಇಲ್ಲೊಂದು ತಳ್ಳುಗಾಡಿಗಳಲ್ಲಿ ಮಸಾಲೆ ಪೂರಿ, ಪಾನಿ ಪೂರಿಗಳನ್ನು ನೀಡುವ ಕೇಂದ್ರಗಳಿದ್ದವು.

ಪ್ರಭುಲಿಂಗದೇವ್ ಅವರು ಸ್ನೇಹಿತರೊಬ್ಬರ ಒತ್ತಾಯದ ಮೇರೆಗೆ ಮಳಿಗೆಯಲ್ಲಿ ಚಾಟ್‌ ಸೆಂಟರ್‌ ಆರಂಭಿಸುವ ಸಂಕಲ್ಪ ಮಾಡಿ ಅದಕ್ಕೆ ‘ಕರ್ನಾಟಕ ಬೇಲ್ ಹೌಸ್’ ಎಂದು ಹೆಸರಿಟ್ಟರು. ಆಗ ಅವರೊಂದಿಗೆ ಸೇರಿಕೊಂಡ ರಾಜಣ್ಣ ಎಂಬ ಬಾಣಸಿಗರು ಸಿದ್ಧಪಡಿಸಿದ ಇಲ್ಲಿನ ಚಾಟ್ ಸೂತ್ರ ಚಾಮರಾಜಪೇಟೆ ಮಾತ್ರವಲ್ಲ, ಇಡೀ ಬೆಂಗಳೂರಿಗೇ ಹೊಸ ರುಚಿಯನ್ನು ಕೊಟ್ಟಿತು.

ಇಲ್ಲಿನ ಪಾನಿ ಪೂರಿಯ ರುಚಿ ನೋಡಿಯೇ ಬಿಡುವ ಎಂದು ಕರ್ನಾಟಕ ಬೇಲ್‌ ಹೌಸ್‌ಗೆ ಅಡಿಯಿಟ್ಟೆ. ಸೇವ್‌ ಪೂರಿಗೆ ಆರ್ಡರ್‌ ಮಾಡಿ, ಯಾವಾಗ ಪ್ಲೇಟ್‌ ನನ್ನ ಕೈಗೆ ಸಿಗುವುದೊ ಎಂದು ಕಣ್ಣರಳಿಸಿಕೊಂಡು ಪಾನಿ ಪೂರಿ ಹಾಕುವವರನ್ನೇ ನೋಡುತ್ತ ಬಾಯಲ್ಲಿ ನೀರುರಿಸುತಿತ್ತು.

ಸ್ವಲ್ಪ ಸಮಯಕ್ಕೆ  ಸೇವ್‌ ಪೂರಿ ಎಂಬ ಧ್ವನಿ ಕೇಳಿತು. ಪ್ಲೇಟ್‌ ತೆಗೆದುಕೊಂಡೆ. ಇಷ್ಟೆಲ್ಲ ಜನರನ್ನು ಸೇರಿಸಿರುವ ಇಲ್ಲಿನ ಚಾಟ್‌ನಲ್ಲಿರುವ ವಿಶೇಷತೆ ಏನು ಎಂದುಕೊಂಡೇ ಮೊದಲ ತುತ್ತು ಬಾಯಿಗಿಟ್ಟೆ. ನಿಜಕ್ಕೂ ಬೇರೆಡೆಗಿಂತ ವಿಶಿಷ್ಟ ರುಚಿ ಅಲ್ಲಿಯದು.

ಕುರುಕಲು ತಿಂಡಿ ಇಷ್ಟಪಡು­ವವರಿಗೆ ಇಲ್ಲಿನ ಪೂರಿ ಬಾಯಿಚಪ್ಪರಿಸುವಂತೆ ಮಾಡುತ್ತದೆ. ಜತೆಗೆ ಹೆಚ್ಚು ಖಾರವೂ ಅಲ್ಲದ, ರುಚಿಕಟ್ಟಾದ ಮಸಾಲೆ ಹಾಗೂ ಅಮೆರಿಕದಿಂದ ಆಮದಾದ ಹಸಿರು ಬಟಾಣಿ ಮೇಲೆ ದಪ್ಪವಾಗಿ ಉದುರಿಸಿದ ಮೊಸರು ಹಾಕಿ ಸಿದ್ಧಪಡಿಸಲಾದ ಸೇವ್‌ನ ರುಚಿ ನಾಲಿಗೆಯಲ್ಲಿ ಉಳಿಯುತ್ತದೆ.
ಅಲ್ಲಿ ಎಲ್ಲರೂ ತನ್ಮಯರಾಗಿ ಪಾನೀಪುರಿ ತಿನ್ನುತ್ತ ಚಾಟ್ಸ್ ಆಸ್ವಾದಿಸುತ್ತಿರುವುದರ ಕಾರಣ ಆಗ ತಿಳಿಯಿತು.

‘ಇಲ್ಲಿಗೆ ಬಂದ ಗ್ರಾಹಕರು ತಮ್ಮ ಇಷ್ಟದ ಚಾಟ್ಸ್ ಪಡೆಯಲು ಕಾಯದಂತೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ’ ಎನ್ನುತ್ತಾರೆ ‘ಕರ್ನಾಟಕ ಬೇಲ್ ಹೌಸ್’ ಮಾಲೀಕ ಸತೀಶ್.

‘ಕರ್ನಾಟಕ ಬೇಲ್ ಹೌಸ್‌ಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೇರೆ ಬೇರೆ ಬಡಾವಣೆಗಳಲ್ಲೂ ನಮ್ಮ ಕೇಂದ್ರಗಳನ್ನು ತೆರೆಯುವ ಯೋಜನೆ ಇದೆ. ಕೇಟರಿಂಗ್ ಕೂಡ ನಿರ್ವಹಿಸಲಾಗುತ್ತಿದೆ’ ಎಂದು ಸತೀಶ್ ತಿಳಿಸಿದರು.

ತಂದೆಯಿಂದ ಬಳುವಳಿಯಾಗಿ ಬಂದ ಈ ಉದ್ಯೋಗ ಹಾಗೂ ತಿನಿಸಿನ ‘ರೆಸಿಪಿ’ಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಹೀಗಾಗಿ ರಹಸ್ಯ ರೆಸಿಪಿ ಮನೆಯಲ್ಲೇ ಸಿದ್ಧಗೊಳ್ಳುತ್ತದೆ. ಕೈಯಿಂದ ಯಾವುದೇ ತಿನಿಸುಗಳನ್ನು ತಯಾರಿಸಲಾಗುವುದಿಲ್ಲ. ಪ್ರತಿಯೊಂದೂ ಯಂತ್ರಗಳ ಸಹಾಯದಿಂದ ತಯಾರಾಗುವುದರಿಂದ ಚಾಟ್ಸ್ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ.

ಚಲನಚಿತ್ರ ನಟ ನಟಿಯರು, ಕಿರುತೆರೆ ಕಲಾವಿದರು, ಪ್ರಸಿದ್ಧ ರಾಜಕಾರಣಿಗಳೂ ಆಗಾಗ ಇಲ್ಲಿನ ಚಾಟ್ಸ್ ರುಚಿಯನ್ನು ಸವಿಯಲು ಬರುತ್ತಾರೆ.
ಇದರಿಂದ ಸ್ಪಲ್ಪ ಮುಂದೆ ಹೋದರೆ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌. ದಾವಣಗೆರೆಯ ಪ್ರಸಿದ್ಧ ಬೆಣ್ಣೆ ದೋಸೆಯನ್ನು ಅಲ್ಲಿನದೇ ಆದ ವಿಶೇಷ ಚಟ್ನಿಯೊಂದಿಗೆ ಸವಿಯಲು  ಬಹಳಷ್ಟು ಮಂದಿ ಭೇಟಿ ನೀಡುತ್ತಾರೆ.

ಖಾಲಿ ದೋಸೆ ಆರ್ಡರ್‌ ಮಾಡಿ, ಕಾಯುತ್ತಾ ನಿಂತಿದ್ದಾಗ, ಬೆಣ್ಣೆ ದೋಸೆ, ಬೆಣ್ಣೆ ಮಸಾಲೆ, ಮಸಾಲೆ ದೋಸೆ, ಬೆಣ್ಣೆ ಖಾಲಿ ದೋಸೆ ಹೀಗೆ ಒಬ್ಬೊಬ್ಬರು ಒಂದೊಂದು ಬಗೆಯನ್ನು ಕೇಳುತ್ತಿದ್ದಾಗಲೂ ಬಾಯಲ್ಲಿ ನೀರೂರಿಸುತ್ತಿತ್ತು.

ಕಾಯಿಯನ್ನು ಹೆಚ್ಚು ಹಾಕಿ, ಖಾರವೂ ಸ್ವಲ್ಪ ಹೆಚ್ಚಾಗಿರುವ ಚಟ್ನಿ ಮತ್ತು ಆಲೂಗಡ್ಡೆ ಪಲ್ಯದೊಂದಿಗೆ ನೀಡುವ ದೋಸೆಯನ್ನು ಸವಿಯುತ್ತಿದ್ದರೆ ಒಂದು ಪ್ಲೇಟ್‌ಗೆ ನೀಡುವ ಎರಡು ಖಾಲಿ ದೋಸೆ ಕೂಡ ಸಾಲದು ಎನಿಸುತ್ತದೆ. ಅಪ್ಪಟ ದಾವಣಗೆರೆಯ ರುಚಿಯಲ್ಲಿಯೇ ದೋಸೆ.

ಅಲ್ಲಿಂದ ಹಾಗೆ ಮುಂದೆ ಹೋದರೆ ಉಮಾ ಥಿಯೇಟರ್‌ ಪಕ್ಕದಲ್ಲೇ ಸುಮಾರು 60 ವರ್ಷಗಳಿಂದ ಇರುವ ರಾಘವೇಂದ್ರ ಸ್ಟೋರ್ (ಗುರುರಾಜ ಖಾರ ಸ್ಟಾಲ್‌). ಇಲ್ಲಿ ಖಾರ, ಪಕೋಡ, ವಡೆ, ಬೋಂಡ ತಿನ್ನಲು ಜನ ಸಾಲುಗಟ್ಟಿರುತ್ತಾರೆ.

ಈರುಳ್ಳಿ, ಬೆಳ್ಳುಳ್ಳಿ ಉಪಯೋಗಿಸಿ ಈ ಖಾದ್ಯಗಳನ್ನು ತಯಾರಿಸುವುದು ಇಲ್ಲಿನ ವಿಶೇಷ. ಸಂಜೆ ದೊರೆಯುವ ಆಲೂ ಬೋಂಡಾ, ಆಂಬೊಡೆ, ಮೆಣಸಿನಕಾಯಿ ಬಜ್ಜಿ, ಕ್ಯಾಪ್ಸಿಕಮ್‌ ಬೋಂಡ, ಬಾಳೆಕಾಯಿ ಬಜ್ಜಿ ಎಲ್ಲದ್ದಕ್ಕೂ ಅವರದೇ ಆದ ಮಸಾಲೆಯನ್ನು ಬಳಸುವುದರಿಂದ ಬೇರೆಲ್ಲೆಡೆಗಿಂದ ವಿಶಿಷ್ಟ ರುಚಿ ಇಲ್ಲಿ ಸಿಗುತ್ತದೆ.


ಬೆಳಿಗ್ಗೆ 7 ಗಂಟೆಗೇ ಅಂಗಡಿ ತೆರೆದಿರುತ್ತದೆ. ಬಿಸಿ ಬಿಸಿಯ ಜಿಲೇಬಿಯನ್ನು ಸಹ ಇಲ್ಲಿ ಸವಿಯಬಹುದು. ನಟ ರಜಿನಿಕಾಂತ್‌ ಸಹ ಇಲ್ಲಿಗೆ ಬಂದು ಬೋಂಡಾದ ರುಚಿ ಸವಿದಿದ್ದಾರೆ.

*
ಇಲ್ಲಿ ಸಿಗುವ ಚಾಟ್ಸ್ ರುಚಿ ಹಾಗೂ ಗುಣಮಟ್ಟ ಬಹಳ ಇಷ್ಟವಾಗುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಇಲ್ಲಿಗೆ ಭೇಟಿ ನೀಡುತ್ತೇವೆ. ಸೇವ್‌ಪೂರಿ, ಬೇಲ್‌ಪೂರಿ ನಮ್ಮ ಅಚ್ಚುಮೆಚ್ಚು.
–ದೀಪಾ, ಸಾಫ್ಟ್‌ವೇರ್‌ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT