ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾಪಕಶಕ್ತಿ ಕಳೆದುಕೊಂಡ ಯುವಕನಿಗೆ ಬೇಕು ಆಸರೆ

Last Updated 28 ನವೆಂಬರ್ 2014, 6:17 IST
ಅಕ್ಷರ ಗಾತ್ರ

ಗಜೇಂದ್ರಗಡ: ಉಂಡಾಡುವ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ತಾಯಿಯ ಅಗಲುವಿಕೆಯ ನೋವಿನಲ್ಲಿಯೇ ಅಂಗವಿಕಲ  ಸಹೋದರ, ವಯೋವೃದ್ಧ ತಂದೆ, ಅಸಹಾಯಕ ತಮ್ಮನ ಜವಾಬ್ದಾರಿಯ ನೊಗ ಹೊತ್ತು ಕುಟುಂಬದ ಆಧಾರ ಸ್ತಂಭದಂತಿದ್ದ 24 ವರ್ಷದ ಯುವಕನಿಗೆ ಅನಿರೀಕ್ಷಿತ ರಸ್ತೆ ಅಪಘಾತ ಪ್ರಜ್ಞಾ ಹೀನ ಸ್ಥಿತಿಗೆ ದೂಡಿದೆ. ಗಜೇಂದ್ರಗಡದ ಜನತಾ ಪ್ಲಾಟ್‌ ನಿವಾಸಿ ಹನುಮಂತಪ್ಪ ಗಿಡ್ಡಪ್ಪ ಗುಡೂರ ಎಂಬ  ಯುವಕನ ದುಃಸ್ಥಿತಿಯಿದು.

ಕಲಿಯುವ ಹಂಬಲವಿದ್ದರೂ ಕುಟುಂಬದ ಆರ್ಥಿಕ ಹೀನಾಯ ಸ್ಥಿತಿ  ಆತನನ್ನು ಕಟ್ಟಡ ನಿರ್ಮಾಣ ಕಾರ್ಯಕ್ಕೆ ತಳ್ಳಿತು. ವಿಧಿಯನ್ನು ಶಪಿಸುತ್ತಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕುಟುಂಬದ ನೊಗವನ್ನು ಹೊತ್ತು ಸಾಗುತ್ತಿರುವಾಗಲೇ  ಅವಘಡವೊಂದು ಸಂಭವಿಸಿತು. 

ಕಟ್ಟಡ ನಿರ್ಮಾಣ ಕಾರ್ಯ ಮುಗಿಸಿಕೊಂಡು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮ ಸಾಗರದಿಂದ ಗಜೇಂದ್ರಗಡಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ವೇಳೆ ಅಪಘಾತ ಸಂಭವಿಸಿ ಹನುಮಂತಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಜ್ಞಾಪಕ ಶಕ್ತಿ ಹಾಗೂ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿವೆ.

ಕುಟುಂಬಕ್ಕೆ ಆಸರೆಯಾಗಿದ್ದ ಯುವಕನಿಗೆ ಮರ್ಮಾಘಾತ ನೀಡಿದ ಅನಿರೀಕ್ಷಿತ ಅಪಘಾತ ದಿಂದ ಕೇವಲ ಕುಟುಂಬ ಮಾತ್ರವಲ್ಲದೆ ಗಜೇಂದ್ರ ಗಡ ಜನತಾ ಪ್ಲಾಟ್‌ನ ನಾಗರಿಕರಿಗೆ ಆಕಾಶವೇ ಕಳಚಿಬಿದ್ದಂತಾಯಿತು. ವಾಸಿಸಲು ಸ್ವಂತ ಸೂರೂ ಇಲ್ಲದ ಗುಡೂರ ಕುಟುಂಬಕ್ಕೆ ಹನುಮಂತಪ್ಪನನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ಕನಸಿನ ಮಾತಾಗಿತ್ತು.

ಗಜೇಂದ್ರಗಡದ ಬೋವಿ ಸಮಾಜದ ಮುಖಂಡರೆಲ್ಲ ಸೇರಿ ಸಮಾಜದ ವತಿಯಿಂದ ಹಾಗೂ ಉದಾರಿಗಳ ನೆರವಿನಿಂದ ₨ 1.50 ಲಕ್ಷ ಸಂಗ್ರಹಿಸಿ ಹನಮಂತಪ್ಪನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹಣ ಇರುವವರೆಗೂ ಚಿಕಿತ್ಸೆ ನೀಡಿದ ಆ ಖಾಸಗಿ ಆಸ್ಪತ್ರೆಯ ವೈದ್ಯರು ಬಳಿಕ ಬೆಂಗಳೂರಿನ ನರರೋಗ ಸಂಶೋಧನಾ ಸಂಸ್ಥೆಯತ್ತ ಬೊಟ್ಟು ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ದಯ ವರ್ತನೆಯಿಂದ ಬೇಸತ್ತ ಹನುಮಂತಪ್ಪನ ಕುಟುಂಬಸ್ಥರು ಹಾಗೂ ಭೋವಿ ಸಮುದಾಯದ ಪ್ರಮುಖರು ಬೇಸರದಿಂದ ಹನುಮಂತಪ್ಪನನ್ನು ಗಜೇಂದ್ರಗಡಕ್ಕೆ ಕರೆ ತಂದಿದ್ದಾರೆ. ಅಂಗವಿಕಲ ಸಹೋದರ ಅಂದಪ್ಪ ತಮ್ಮನ ಆರೈಕೆಯಾಗಿ ಜಲ್ಲಿಕಲ್ಲು ತಯಾರಿಕೆಯನ್ನು ಆರಂಭಿಸಿದ್ದಾನೆ. 

ನರರೋಗ ಸಂಸ್ಥೆಗೆ ಸಹೋದರ ಹನುಮಂತಪ್ಪ ನನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿ ಮೊದಲಿ ನಂತಾಗಿಸಬೇಕು ಎಂಬ ಹೆಬ್ಬಯಕೆ ಅಂಗವಿಕಲ ಸಹೋದರನದ್ದು. ಆದರೆ, ಆರ್ಥಿಕ ಬಲವಿಲ್ಲ. ಹನಮಂತಪ್ಪ ಕಾರ್ಮಿಕ ಕಲ್ಯಾಣ ಇಲಾಖೆಯ ಸದಸ್ಯತ್ವ ಹೊಂದಿದ್ದಾನೆ.

ಅಲ್ಲದೆ, ಕಾರ್ಮಿಕ ಕಲ್ಯಾಣ ಇಲಾಖೆಯ ನೆರವಿಗೂ ಸಾಕಷ್ಟು ಮನವಿ ಮಾಡಿದ್ದಾನೆ. ಆದರೆ, ಯಾವುದೇ ಪ್ರಯೋಜನ ವಾಗಿಲ್ಲ. ಜೊತೆಗೆ ಗಜೇಂದ್ರಗಡ ಪುರಸಭೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಆರೋಗ್ಯ ಯೋಜನೆಯಲ್ಲಿ ಹನಮಂತಪ್ಪನ ಆರೋಗ್ಯ ವೆಚ್ಚ ಭರಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ನೋವಿನಿಂದ ಹೇಳಿತ್ತಾರೆ ಅಂಗವಿಕಲ ಅಂದಪ್ಪ.

‘ನನ್ನ ಸಹೋದರನನ್ನು ಮೊದಲಿನಂತೆ ಮಾಡುವ ಹಂಬಲವಿದೆ. ಇದಕ್ಕೆ ಉದಾರಿಗಳು ನೆರವಿನ ಅಭಯ ನೀಡಬೇಕು’ ಎಂದು ಅಂದಪ್ಪ ಕಣ್ಣೀರಿಡುತ್ತಾ ಕಂಡ ಕಂಡವರನ್ನು ಪರಿ–ಪರಿಯಾಗಿ ಬೇಡುತ್ತಿರುವುದು ಎಂಥ ಕಲ್ಲು ಹೃದಯಗಳಿಗೂ ಮರುಕ ಹುಟ್ಟಿಸುವಂತಿದೆ. ನೆರವು ನೀಡ ಬಯಸುವವರು ಮೊ. 8497068170, ಗಜೇಂದ್ರಗಡ ಕೆನರಾ ಬ್ಯಾಂಕ್‌ ಖಾತೆ ಸಂಖ್ಯೆ–20965 (ಗಿಡಪ್ಪ ಗುಡೂರ) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT