ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರದಿಂದ ಬಳಲಿದ ಶಿವಕುಮಾರ ಸ್ವಾಮೀಜಿ

Last Updated 24 ಜೂನ್ 2016, 20:15 IST
ಅಕ್ಷರ ಗಾತ್ರ

ಬೆಂಗಳೂರು: ಜ್ವರದಿಂದ ಬಳಲಿದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ನಗರದ ಬಿಜಿಎಸ್ ಗ್ಲೋಬಲ್‌ ಆಸ್ಪತ್ರೆಗೆ ಶುಕ್ರವಾರ ದಾಖಲಿಸಲಾಯಿತು.

‘ಶ್ರೀಗಳಿಗೆ ಜ್ವರ ಬಂದಿದೆ. ಅವರಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಅವರಿಗೆ ಆಲ್ಟ್ರಾ ಸೌಂಡ್‌, ಇಸಿಜಿ ಹಾಗೂ ರಕ್ತ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಾಮಾಲೆ ಕಾಯಿಲೆ ಇರುವುದು ಕಂಡುಬಂದಿದೆ. ಪಿತ್ತನಾಳದಲ್ಲಿ ಸಮಸ್ಯೆ ಇದ್ದು, ಶನಿವಾರ ಸಿ.ಟಿ ಸ್ಕ್ಯಾನ್‌ ಮಾಡಲಾಗುತ್ತದೆ. ಹೀಗಾಗಿ ಆಸ್ಪತ್ರೆಯಲ್ಲೇ ಒಂದು ದಿನ ಉಳಿಯುವಂತೆ ಶ್ರೀಗಳಿಗೆ ಮನವಿ ಮಾಡಿದ್ದೇವೆ. ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎಸ್.ಕೆ. ವೆಂಕಟರಮಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ‘ಶ್ರೀಗಳು ಆರೋಗ್ಯವಾಗಿದ್ದು, ನಾಳೆ ಮಠಕ್ಕೆ ತೆರಳಲಿದ್ದಾರೆ. ಭಕ್ತರು ಆತಂಕಪಡುವ ಅಗತ್ಯವಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

ತುಮಕೂರು ವರದಿ: ಸಿದ್ದಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರಿಗೆ ಗುರುವಾರ ಸುಸ್ತು, ಬಳಲಿ, ಜ್ವರದಿಂದ ಬಳಲಿದ ಕಾರಣ  ಮಠದ ಭಕ್ತರು ಆತಂಕಗೊಂಡರು.

ವಾರದಿಂದ ಸ್ವಾಮೀಜಿ ಆಹಾರ ಸೇವನೆ ಕಡಿಮೆ ಮಾಡಿದ್ದರು. ಹೀಗಾಗಿ ಅವರಿಗೆ ಸುಸ್ತು ಕಾಣಿಸಿತು. ಪದೇಪದೇ ಮೂತ್ರಕ್ಕೆ ಹೋಗುತ್ತಿದ್ದರು. ತುಮಕೂರಿನ ಸಿದ್ದಗಂಗಾ ಡಯಾಗ್ನಸ್ಟಿಕ್‌ನಲ್ಲಿ ಹಲವು ಪರೀಕ್ಷೆ ಮಾಡಿಸಲಾಗಿತ್ತು. ಗುರುವಾರವೂ ಸುಸ್ತು ಕಾಣಿಸಿದ ಕಾರಣ ಮಧ್ಯಾಹ್ನದ ವೇಳೆಗೆ ಅವರನ್ನು ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ಕಳುಹಿಸಲಾಯಿತು.

ಮಠದ ಕಾರಿನಲ್ಲಿ ಸ್ವಾಮೀಜಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯ ಡಾ. ವೆಂಕಟರಮಣ, ನರರೋಗ ತಜ್ಞ ಡಾ.ಉಮಾಶಂಕರ್‌, ಡಾ. ಶಿವಪ್ಪ ಹಾಗೂ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಸ್ವಾಮೀಜಿ ಜತೆಗಿದ್ದರು.

ಬೆಳಿಗ್ಗೆ  ಹೊಸ ಮಠದಲ್ಲಿ ಸ್ವಾಮೀಜಿ ಮಲಗುವ ಕೋಣೆಯಲ್ಲೇ  ಅವರಿಗೆ ಗ್ಲುಕೋಸ್‌ ಹಾಕಲಾಗಿತ್ತು. ನಂತರ ಅವರನ್ನು ಒಪ್ಪಿಸಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು.

ಪ್ರತಿ ವರ್ಷ ಮಳೆಗಾಲದ ಅವಧಿಯಲ್ಲಿ ಸ್ವಾಮೀಜಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ದೊಡ್ಡ ಸಮಸ್ಯೆಯೇನಲ್ಲ. ಎಂದಿನಂತೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಊಟ ಕಡಿಮೆ ಮಾಡಿರುವುದರಿಂದ ಅವರಲ್ಲಿ ಸುಸ್ತು ಕಾಣಿಸಿದೆ ಎಂದು ಮಠದ ಮೂಲಗಳು ತಿಳಿಸಿವೆ.
*
ಕಾರು ಹತ್ತಿದ ಸ್ವಾಮೀಜಿ
‘ನಾನು ಹುಟ್ಟಿದ್ದು 1908. ವಯೋಮಾನದ ಕಾಯಿಲೆ ಇದು. ಯಾರಿಗೆ ಬರೋದಿಲ್ಲ ಹೇಳಿ. ಮಠ ಬಿಟ್ಟು ಬರುವುದಿಲ್ಲ’ ಎಂದು ಸ್ವಾಮೀಜಿ ಹಟ ಹಿಡಿದರು. ಆದರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಒಪ್ಪಿಸಲಾಯಿತು. ಮಠದ ಕೋಣೆಯಿಂದ ಯಾರ ಸಹಾಯವೂ ಇಲ್ಲದೇ ಹೊರಗೆ ಬಂದ ಸ್ವಾಮೀಜಿ ಕಾರು ಹತ್ತಿ ಕುಳಿತರು. ಸ್ವಾಮೀಜಿ ಲವಲವಿಕೆ ಕಂಡ ಭಕ್ತರು ಮೂಕವಿಸ್ಮಿತಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT