ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರದ ಹೆಸರಲ್ಲಿ ಕಾಟ

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅವರು ಲಾರಿಗಳಲ್ಲಿ ಬಂದರು. ಬಂದವರೇ ‘ಸೂ... ಮಕ್ಳಾ, ನಿಮ್ಮಿಂದ ಹಂದಿಜ್ವರ ಬಂದು ಮನೆ ಮಕ್ಳು ಎಲ್ಲಾ ಸಾಯ್ತಿದಾರೆ... ಇಡೀ ದೇಶ ನಿಮ್ಮ ಹಂದಿಗಳಿಂದ ಸ್ಮಶಾನ ಆಗ್ತಿದೆ...’ ಎಂದು ಹಂದಿಗಳನ್ನು ಲಾರಿಗಳಿಗೆ ತುಂಬಿಸಿದರು.

ಗುಡಿಸಲುಗಳೊಳಗಿಂದ ಓಡಿಬಂದ ಹೆಂಗಸರು, ಮಕ್ಕಳು ಕಿರುಚುತ್ತಾ ‘ಹಂದಿಗಳನ್ನು ಒಯ್ಯಬೇಡಿ ನನ್ನೊಡೆಯಾ. ನಮ್ಮ ಬದುಕುಗಳನ್ನು ನಾಶಮಾಡಬೇಡಿ. ಆ ವರಾಹ ಬಿಟ್ಟರೆ ನಮಗೆ ಬದುಕಿಲ್ಲ’ ಎಂದು ದುಂಬಾಲುಬಿದ್ದರು. ಹೀಗೆ ಅಡ್ಡಬಂದವರನ್ನು ಪೊಲೀಸರು, ಗೂಂಡಾಗಳು, ಮುನಿಸಿಪಾಲಿಟಿಯವರು  ಸೇರಿ ಒದೆಯತೊಡಗಿದರು. ಇನ್ನೂ ಕಣ್ಣು ಬಿಡುತ್ತಿದ್ದ ಹಂದಿ ಮರಿಗಳನ್ನು ಎತ್ತಿ ಬಂಡೆಗೆ ಒಗೆಯತೊಡಗಿದರು.

ಹಂದಿ ಕಂದಮ್ಮಗಳನ್ನು ತಮ್ಮ ಕಣ್ಣ ಮುಂದೆಯೇ ಅಮಾನುಷವಾಗಿ ಸಾಯಿಸುವುದನ್ನು ಕಂಡು ಮಹಿಳೆಯರು  ಎದೆ ಬಡಿದುಕೊಂಡು ಗೋಳಾಡತೊಡಗಿದರು. ಕ್ಷಣಾರ್ಧದಲ್ಲಿ ಸಾವಿರಾರು ಹಂದಿಗಳನ್ನು ತುಂಬಿಸಿಕೊಂಡು ಲಾರಿಗಳು ಹೊರಟು ಹೋದವು. ಅಲ್ಲಿನ ಜನ ಅತ್ತು ಅತ್ತು ಸುಸ್ತಾಗಿ ನೆಲಕ್ಕೊರಗಿದರು. ವಿಜಾಪುರದ ಹಂದಿಜೋಗಿ ಅಥವಾ ಹಂದಿಗೊಲ್ಲ ಕಾಲೊನಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯಿದು.

ತುಮಕೂರಿನ ಇಂಥದೇ ಒಂದು ಕಾಲೊನಿಯಲ್ಲಿ ಹಂದಿ ಜೋಗಿಗಳೊಂದಿಗೆ ಹಂದಿ ಹೆಳವರು, ಜೋಗಿಗಳು, ಕೊರಚರು ಹಂದಿ ಸಾಕಣೆಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಎಂದೋ ಒಂದು ದಿನ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಲಾರಿಗಳು ಬರುತ್ತವೆ. ಅವರೊಂದಿಗೆ ನಗರಸಭೆಯ ಹೆಲ್ತ್ ಇನ್‌ಸ್ಪೆಕ್ಟರ್, ಪೊಲೀಸ್ ಕಾನ್‌ಸ್ಟೆಬಲ್‌ಗಳು ಇರುತ್ತಾರೆ. ಹಂದಿಗಳನ್ನು ಹಿಡಿದು ಲಾರಿಗೆ ತುಂಬುವ ಕೂಲಿಗಳು ಹಾಗೂ ಸೇಲಂ, ಹೊಸೂರುಗಳಿಂದ ಬಂದವರು ಸೇರಿ ಒಮ್ಮೆಲೆ ಗೂಡು ಬಾಗಿಲುಬಂಡೆ ಕಿತ್ತು ಹಂದಿಗಳನ್ನು ಲಾರಿಗಳಿಗೆ ತುಂಬುತ್ತಾರೆ, ಇವರ ಗೋಳು ಯಾರಿಗೂ ಕೇಳುವುದಿಲ್ಲ.

ಅಡ್ಡಬಂದು ಸ್ವಲ್ಪ ಜೋರು ಮಾಡಿದವರನ್ನು ಪೊಲೀಸರು ಠಾಣೆಗೆ ಎಳೆದೊಯ್ದು ಸಿಕ್ಕಸಿಕ್ಕ ಕೇಸುಗಳಲ್ಲಿ ಈ ಮುಗ್ಧರನ್ನು ಫಿಟ್ ಮಾಡುತ್ತಾರೆ. ಇದು ತುಮಕೂರು ಜಿಲ್ಲೆಯ ತಿಪಟೂರು, ಹುಳಿಯಾರು, ಚಿಕ್ಕನಾಯಕನಹಳ್ಳಿ, ಪಾವಗಡ ಮಾತ್ರವಲ್ಲದೆ ಹಾಸನ, ಚಾಮರಾಜನಗರ, ಕೋಲಾರ, ವಿಜಾಪುರ, ರಾಯಚೂರು ಮೊದಲಾದ ಕಡೆಗಳಲ್ಲೂ ಇರುವ ಪರಿಸ್ಥಿತಿ. ರಾಜ್ಯದಾದ್ಯಂತ ಹಂದಿ ಮಾಫಿಯಾ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸಾವಿರಾರು ಹಂದಿಗಳನ್ನು ಹಿಡಿದು ಆಂಧ್ರ ಪ್ರದೇಶ, ತಮಿಳುನಾಡಿಗೆ ಕೊಂಡೊಯ್ಯುತ್ತಿದ್ದಾರೆ.

ಇದಕ್ಕೆಲ್ಲಾ ನೆಪವಾಗಿ ಒದಗಿಬಂದದ್ದು ಎಚ್‌1ಎನ್‌1. ಜನಸಾಮಾನ್ಯರ ಬಾಯಲ್ಲಿ  ಇದು ಹಂದಿಜ್ವರ ಎಂದೇ ಪ್ರಸಿದ್ಧ.   ಈ ಜ್ವರದ ನೆಪದಲ್ಲಿ ಹಂದಿಗಳನ್ನು ಕೊಂಡೊಯ್ಯುವ ಮಾಫಿಯಾ, ಸ್ಥಳೀಯ ಪೌರಸಂಸ್ಥೆಗಳ ಆರೋಗ್ಯ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ಹಂದಿಜೋಗಿಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ.

ಹಂದಿಜ್ವರ ಎಂಬ ಹೆಸರಿನ ಕಾರಣಕ್ಕೆ ಹಂದಿಗಳಿಂದ ಜನರಿಗೆ ಸೋಂಕು ಹಬ್ಬುತ್ತದೆಂಬ ಸುಳ್ಳನ್ನು ವ್ಯವಸ್ಥಿತವಾಗಿ  ಹರಡಿ, ‘ನಿಮ್ಮಿಂದಲೇ ಹಂದಿಜ್ವರ ಬರುತ್ತಿದೆ’ ಎಂದು ಹಂದಿ ಸಾಕುವ ಬಡವರಲ್ಲಿ ಭಯ ಬಿತ್ತಲಾಗಿದೆ. ಇವರ ಸರ್ವಸ್ವವೂ ಆದ ಹಂದಿಗಳನ್ನು ಸಾರಾಸಗಟಾಗಿ ಕೊಂಡೊಯ್ದು ಲಕ್ಷಾಂತರ ಹಣ ಲೂಟಿ ಮಾಡಲಾಗುತ್ತಿದೆ. ಇದರಿಂದ ಹಂದಿ ಜೋಗಿಗಳ ಬದುಕು ಬೀದಿಗೆ ಬಂದಿದೆ.

ಕೆಲವು ವರ್ಷಗಳ ಹಿಂದೆ ತಮಿಳುನಾಡು, ಆಂಧ್ರ ಮೂಲದ  ಹಂದಿಕಳ್ಳರು ಇವರ ಗುಡಿಸಲಿಗೆ ಬಂದು ಹಂದಿ ಕದಿಯುತ್ತಿದ್ದರು. ಈ ಕಾಟ ವಿಪರೀತಕ್ಕೆ ಹೋದಾಗ ಹಂದಿಜೋಗಿಗಳು ತಮ್ಮ ಗುಡಿಸಲುಗಳ ಮುಂದೆ ಗಸ್ತು ನಿಂತು, ಈ ಕಳ್ಳರನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸುತ್ತಿದ್ದರು. ಇವರು ಜಾಗೃತರಾಗಿರುವುದನ್ನು ಕಂಡುಕೊಂಡ ಕಳ್ಳರು, ಆಂಧ್ರ-ತಮಿಳುನಾಡುಗಳಲ್ಲಿ ಹಂದಿಗಳ ಅಕ್ರಮ ಸಾಗಾಣಿಕೆಗೆ ದುಡ್ಡು ಹಾಕುವ ಮಾಫಿಯಾ ನೆರವು ಪಡೆದು, ಹಂದಿಗಳನ್ನು ಕದಿಯಲು ಹೊಸ ವಿಧಾನ  ಕಂಡುಕೊಂಡರು.

ಹಂದಿ ಮಾಫಿಯಾದವರು ಪೌರ ಸಂಸ್ಥೆಗಳಲ್ಲಿರುವ  ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಮೊದಲು ಬುಕ್ ಮಾಡಿಕೊಂಡು ಅಕ್ರಮ ನೋಟಿಸ್‌ಗಳನ್ನು ಸೃಷ್ಟಿಸಿದರು.  ಈ ನೋಟಿಸ್‌ ಮೂಲಕ, ಹಂದಿಗಳಿಂದಾಗಿ ಹಂದಿಜ್ವರ ಹರಡುತ್ತಿದೆಯೆಂದೂ, ಹಂದಿಗಳನ್ನು ಕೊಂಡೊಯ್ಯಲು ತಮಗೆ ಅನುಮತಿ ಇದೆ ಎಂದೂ ಅಕ್ಷರ ಜ್ಞಾನವಿಲ್ಲದ ಹಂದಿಜೋಗಿಗಳಿಗೆ ಹಸಿ ಸುಳ್ಳು ಹೇಳಿ ಬೆದರಿಕೆ ಒಡ್ಡುತ್ತಾರೆ. ನಗರಸಭೆ, ಪುರಸಭೆಯ ಸಿಬ್ಬಂದಿ, ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಮಾಫಿಯಾ ಜತೆ ಕೈಜೋಡಿಸುತ್ತಾರೆ.  ಗುಂಡಾಗಳ ನೆರವೂ ಪಡೆಯುತ್ತಾರೆ. ಈ ಪಡೆಯನ್ನು  ಕಂಡು ಹಂದಿಜೋಗಿಗಳು ತಬ್ಬಿಬ್ಬಾಗುವಷ್ಟರಲ್ಲಿ ಹಂದಿಗಳನ್ನು ಲಾರಿಗೆ  ತುಂಬಿಸಿ ಆಗಿರುತ್ತದೆ.

ಹೀಗೆ ಕೊಂಡೊಯ್ಯುವ ಹಂದಿಗಳನ್ನು ಯಾವ ಪರ್ಮಿಟ್ ಇಲ್ಲದೆ ಆಂಧ್ರ-ತಮಿಳುನಾಡುಗಳ ಗಡಿಗಳಲ್ಲಿ ಬಿಡಲಾಗುತ್ತದೆ.  ಹಂದಿಜೋಗಿಗಳು  ಮಾತ್ರ ದಿಕ್ಕಿಲ್ಲದವರಂತೆ ಆಗುತ್ತಾರೆ. ಹಂದಿಜೋಗಿಗಳ ವಿರುದ್ಧ ಪುರಸಭೆ, ನಗರಸಭೆಗಳು ಹೂಡುವ ಇನ್ನೊಂದು ವಾದವೆಂದರೆ ‘ಹಂದಿ ಸಾಕುವವರು ಊರಿನ ಮಧ್ಯೆ ಇರಬಾರದು, ಊರಾಚೆ ಇರಬೇಕು’. ಈ ಹಂದಿಜೋಗಿಗಳು ಹಲವಾರು ವರ್ಷಗಳಿಂದ ಊರಿನ ಹೊರಗಿದ್ದವರೇ. ಈಗ ಊರು ಅವರನ್ನು ಆವರಿಸಿಕೊಂಡು ಬೆಳೆದಿದೆ. ಮತ್ತೆ ಈ  ಜೋಗಿಗಳನ್ನು ಊರಿಂದ ಹೊರ ಇಡಬೇಕಾದರೆ ಅಂಥವರಿಗೆ ಊರಾಚೆ ವಸತಿ ಕಲ್ಪಿಸಬೇಕು. ಈ ಜವಾಬ್ದಾರಿಯನ್ನು ಹೊರಲು ನಗರಸಭೆ, ಪುರಸಭೆಗಳು ಸಿದ್ಧವಿಲ್ಲ .

ಹಂದಿಗಳಿಂದ ಮನುಷ್ಯನಿಗೆ ಹಂದಿಜ್ವರ ಬರುತ್ತಿಲ್ಲ ಎಂಬುದು ಪ್ರಜ್ಞಾವಂತರಿಗೆ ಗೊತ್ತಿರುವ ವಿಷಯ.  ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳುವಂತೆ ಎಚ್1ಎನ್1   ಸೋಂಕು ಸ್ಪೈನ್‌ಪ್ಲುಯೆಂಜಾ ಎಂಬ ವೈರಸ್‌ನಿಂದ ಬರುತ್ತದೆ. ಮನುಷ್ಯರಿಂದ ಹಂದಿಗಳಿಗೆ (ಹಂದಿಗಳಿಂದ ಮನುಷ್ಯರಿಗಲ್ಲ) ಹಬ್ಬುವ ಜ್ವರವಾದ್ದರಿಂದ ಇದಕ್ಕೆ ಈ ಹೆಸರು. ಈ ರೋಗ ಹಂದಿಯಿಂದ ಮನುಷ್ಯನಿಗೆ ಹಬ್ಬಿದ ಉದಾಹರಣೆ ಇತ್ತೀಚೆಗೆ ಇಲ್ಲ. ಆದರೆ ತಮ್ಮ ಸುತ್ತಮುತ್ತ ಉಗುಳುವ, ಸೀನುವವರಿಂದಾಗಿ ಹಂದಿಗಳು  ಈ ಜ್ವರಕ್ಕೆ ತುತ್ತಾಗುತ್ತವೆ.

ಸದಾ ಹಂದಿಗಳೊಂದಿಗಿರುವ ಹಂದಿಜೋಗಿಗಳಲ್ಲಿ ಒಬ್ಬರಿಗೂ ಈ ರೋಗ ಕಾಣಿಸಿಕೊಂಡ ದಾಖಲೆ ಇದ್ದಂತಿಲ್ಲ. ಈ ಸೋಂಕು ಕುರಿತ ವೈಜ್ಞಾನಿಕ ಸತ್ಯವನ್ನು ಸರ್ಕಾರದ ವಿವಿಧ ಇಲಾಖೆಗಳು ಜನಸಾಮಾನ್ಯರಿಗೆ ತಿಳಿಸಿ ಹೇಳುವ ಗೋಜಿಗೆ ಹೋಗಿಲ್ಲ. ಸರ್ಕಾರಕ್ಕೆ ಹಂದಿಜೋಗಿಗಳಂತಹ ಅಲೆಮಾರಿಗಳ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ತಕ್ಷಣ ಇವರ ಹಂದಿಗಳನ್ನು ಹಿಡಿಯದಂತೆ ಸುತ್ತೋಲೆ ಹೊರಡಿಸಬೇಕು. ಹಂದಿ ಮಾಫಿಯಾಗೆ ತಡೆ ಒಡ್ಡಬೇಕು. ನತದೃಷ್ಟ ಇವರಿಗೆ ರಕ್ಷಣೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT