ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಡ್‌ ನಕ ನಕ...

Last Updated 18 ಜುಲೈ 2014, 19:30 IST
ಅಕ್ಷರ ಗಾತ್ರ

ಹೆಂಗಸರು ತಮಟೆ ಹೊಡೆದರೆ ಮಳೆ ಬರಲ್ಲ ಅಂತ ಜನ ಅನಾದಿ ಕಾಲದಿಂದಲೂ ಹೇಳ್ತಾ ಇದ್ದಾರೆ. ಆದರೆ ಅದ್ಯಾಕೆ ಮಳೆ ಬರಲ್ಲ? ಅದ್ಯಾಕೆ ಹೆಂಗಸರು ತಮಟೆ ಹೊಡೀಬಾರ್ದು? ಒಂದೇಟು ಹಾಕಿ ನೋಡೇ ಬಿಡೋಣ ಅನ್ನಿಸ್ತು. ಗಂಡಸರು ತಮಟೆ ಹೊಡೆದರೆ ಮಾತ್ರ ಮಳೆ ಬರಬೇಕೆ?

ಬರಪೀಡಿತ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಟ್ರೀಸ್‌ ಸಂಸ್ಥೆಯ 32ರ ಹರೆಯದ ಸರಸ್ವತಿ ಅವರ ಪ್ರಶ್ನೆಯಲ್ಲೇ ಉತ್ತರವೂ ಇತ್ತು. ಏಕೆಂದರೆ ಅವರ ಜೊತೆಗೆ ಸುಮಾರು 20 ಹೆಂಗಸರು ತಮಟೆ ಕಲಿತು ಎರಡು ವರ್ಷವಾಗಿದೆ. ಬರುವ ಮಳೆ ಅಷ್ಟೋ ಇಷ್ಟೋ ಬರುತ್ತಲೇ ಇದೆ. ಮಳೆ ಕಡಿಮೆಯಾಗಿರಬಹುದು. ಆದರೆ ನಾವು ತಮಟೆ ಕಲಿತೆವು ಎಂಬ ಕಾರಣಕ್ಕೆ ಮಳೆ ಬರೋದೇನೂ ನಿಲ್ಲಲಿಲ್ಲವಲ್ಲ.

ಇಷ್ಟಕ್ಕೂ, ಗಂಡಸರು ತಮಟೆ ಬಾರಿಸುವುದಕ್ಕೂ ಮಳೆ ಬರುವುದಕ್ಕೂ ಸಂಬಂಧವನ್ನು ಕಲ್ಪಿಸಿದ ಆ ಮಹಾಪುರುಷನಾದರೂ ಯಾರು?
ಸೇರಿಗೆ ಸವ್ವಾ ಸೇರು ಎಂಬ ಸವಾಲು ಅವರ ಮಾತುಗಳಲ್ಲಿ ಇರುವಂತೆ ಕಂಡರೂ ಅದನ್ನೂ ಮೀರಿ ಅಲ್ಲಿ ಹೊಸತನ್ನು ಕಲಿಯುವ ಕುತೂಹಲ ನಂತರದ ಹೆಮ್ಮೆಯೇ ಹೆಚ್ಚು ಹೊಳೆಯುತ್ತದೆ.

ಗುಂಪುಗೂಡಿರುವ ಕಡೆ ಗಂಡಸರು ಲೀಲಾಜಾಲವಾಗಿ, ಮೋಹಕ ವರಸೆಗಳಲ್ಲಿ ತಮಟೆ ಹೊಡೆಯುವುದನ್ನು ನೋಡಿ ಮೈ ಝಮ್ಮೆಂದು ಹುಚ್ಚಾಪಟ್ಟೆ ಕುಣಿಯುವ ಜನ, ಕೆನೆಬಣ್ಣದ ಸೀರೆ ಸಮವಸ್ತ್ರ ಉಟ್ಟ ಈ ಮಹಿಳೆಯರು ತಮಟೆ ಹೊಡೆಯುತ್ತಾ ಗಟ್ಟಿ ಹೆಜ್ಜೆ ಹಾಕುವುದನ್ನು ನೋಡುತ್ತಾ ಬೆರಗಿನಿಂದ ಮೈ ಮರೆಯುತ್ತಾರೆ. ದಲಿತ ಮಹಿಳಾ ಒಕ್ಕೂಟಕ್ಕೆ ಈಗ ತಮಟೆಯ ಸಾಂಗತ್ಯ ದೊರಕಿದೆ. ಈ ಮಹಿಳೆಯರಿಗೆ ತಮಟೆ ಕೇವಲ ಒಂದು ಸಂಗೀತ ಸಾಧನವಲ್ಲ. ಸಂಪಾದನೆಯ ಹಾದಿಯೂ ಅಲ್ಲ. ಒಂದು ಸಾಧನೆಯ ಹಾದಿ. ಅಷ್ಟೆಯೇ? ಜಾಗೃತಿಯ ಹಾದಿಯೂ...

ಭೂಮಿ ಹೋರಾಟದ ಮೂಲಕ ಗುರುತಿಸಿಕೊಂಡಿರುವ ಟ್ರೀಸ್‌ ಸಂಸ್ಥೆಯ ಈಗಿನ ಕಲಾ ತಂಡದಲ್ಲಿರುವ ಸರಸ್ವತಿ, ಸೌಮ್ಯ, ಭಾಗ್ಯ, ಯಶೋದಾ, ಅಶ್ವಿನಿ ಅವರೆಲ್ಲ ಕೋಲಾರವಲ್ಲದೇ ದೇಶದ ಆಚೆಗೂ ತಮ್ಮ ತಮಟೆಯ ಸದ್ದನ್ನು ವಿಸ್ತರಿಸಿದ್ದಾರೆ ಎಂಬುದು ವಿಶೇಷ. ಕೋಲಾರ, ಮಾಲೂರು, ಬಂಗಾರಪೇಟೆ ತಾಲ್ಲೂಕುಗಳಲ್ಲಿ ತಮಟೆ ಹಿಡಿಯುವ, ಹೊಡೆಯುವ ಮಹಿಳೆಯರನ್ನು ಹುಟ್ಟುಹಾಕಿದ ಕೀರ್ತಿಯೂ ಟ್ರೀಸ್ ಸಂಸ್ಧೆಗೆ ಸೇರುತ್ತದೆ.

ಸಾಹಿತ್ಯ ಸಮ್ಮೇಳನ, ಕೃಷಿ ಮೇಳ, ಜಾಗೃತಿ ಕಾರ್ಯಕ್ರಮ, ಪ್ರತಿಭಟನಾ ಮೆರವಣಿಗೆ, ಹೋರಾಟ... ಏನೇ ಇರಲಿ. ಆಹ್ವಾನ ಬಂತೆಂದರೆ ಅಲ್ಲಿಗೆ ಹೋಗಲು ಸಿದ್ಧರಾಗುತ್ತಾರೆ. ತಮಟೆಯ ಮುಂದೆ ಇವೆಲ್ಲ ನೆಪವಷ್ಟೆ. ತಮಟೆಯ ಮೂಲಕ ತಮ್ಮ ಜಗತ್ತನ್ನು ವಿಸ್ತರಿಸಿಕೊಳ್ಳುವುದೇ ಮುಖ್ಯ. ಇವರ ಪೈಕಿ ಕೆಲವರಿಗೆ ಮದುವೆಯಾಗಿ ಮಕ್ಕಳಿವೆ. ಕೆಲವರು ಅವಿವಾಹಿತರು, ವಿದ್ಯಾರ್ಥಿನಿಯರು. ಕಿವಿ ಮತ್ತು ಎದೆಯೊಳಗೆ ತಮಟೆಯ ನಾದವನ್ನು ತುಂಬಿಕೊಂಡವರು. 

ಇದೆಲ್ಲ ಹೇಗಾಯ್ತು ಎಂದು ಕೇಳಿದರೆ ಟ್ರೀಸ್ ಸಂಸ್ಥೆಯ ಐಪಲ್ಲಿ ನಾರಾಯಣಸ್ವಾಮಿ ಮತ್ತೆ ನೆನಪಿಗೆ ಜಾರುತ್ತಾರೆ. ‘ನಮ್ಮ ಹೆಣ್ಣು ಮಕ್ಕಳು ತಮಟೆ  ಕಲಿಯಬಾರದೇಕೆ ಎಂಬ ಪ್ರಶ್ನೆ ಸುಮ್ಮನೇ ಹುಟ್ಟಿದ್ದು.  ಹೀಗಾಗಿಯೇ ನೆಲ್ಲೂರಿನ ಡತ್ತುಲ ರಾಮದಾಸ್‌ ಅವರನ್ನು ಕರೆಸಿ ನಮ್ಮ ಹೆಣ್ಣು ಮಕ್ಕಳಿಗೆ ಒಂದು ತಿಂಗಳ ತರಬೇತಿ ಕೊಡಿಸಿದೆವು. ಮೂರು ತಂಡ ಕಟ್ಟಿದೆವು... ಅವರಲ್ಲಿ ಹಲವರಿಗೆ ಮದುವೆಯಾಯಿತು. ಊರು ತೊರೆದರು. ಈಗ ನಮ್ಮೊಂದಿಗೆ 9 ಮಂದಿ ಇದ್ದಾರೆ.’

ಅದೇನು ಸುಲಭವೇ?
ತಮಟೆ ಹೊಡೆಯುವುದು ಸುಲಭದ್ದಲ್ಲ. ಎಡಗೈಯಲ್ಲಿ ಒಂದು ಕಡ್ಡಿ, ಬಲಗೈಯಲ್ಲಿ ಒಂದು ಕಡ್ಡಿಯನ್ನು ತಾಳಕ್ಕೆ ತಕ್ಕಂತೆ ಹೊಡೆಯುವುದನ್ನು ಕಲಿಯಲು ಮೊದಲಿಗೆ ಆಗಲೇ ಇಲ್ಲ. ಎಡಗೈಯಲ್ಲಿ ಕಡ್ಡಿಯನ್ನು ಚಲಿಸುವುದು ಅತಿ ಕಷ್ಟವಾಗಿತ್ತು. ಎರಡೂ ಕೈಯಲ್ಲಿ ತಮಟೆ ಬಾರಿಸುತ್ತಾ ಹೆಜ್ಜೆ ಹಾಕುವುದು ಇನ್ನೂ ಕಷ್ಟ. ಅದಕ್ಕೊಂದು ತನ್ಮಯತೆ ಬೇಕು. ಸುಲಭಕ್ಕೆ ತಮಟೆಯೂ ಒಲಿಯುವುದಿಲ್ಲ ಅಂತ ಗೊತ್ತಾಯಿತು ಎನ್ನುತ್ತಾರೆ ಕೆ.ಸೌಮ್ಯ.

ಕೋಲಾರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗಲೇ ತಮಟೆ ಬಾರಿಸಬೇಕು ಎಂಬ ಆಸೆ ಇತ್ತು. ಕಲಿಯುವಾಗ ಮುಜುಗರವಾಗುತ್ತಿತ್ತು. ತಮಟೆ ಬಾರಿಸುವೆ ಎಂದರೆ ಸಹಪಾಠಿಗಳು ತಮಾಷೆ ಮಾಡುತ್ತಿದ್ದರು. ಹೆಂಗಸಾಗಿ ತಮಟೆ ಬಾರಿಸ್ತೀಯಾ? ಎಂದು ಹೀಯಾಳಿಸುತ್ತಿದ್ದರು, ಆದರೆ ಒಮ್ಮೆ ಕಾಲೇಜಿನ ವೇದಿಕೆಯಲ್ಲಿ ನಾನು ತಮಟೆ ಪ್ರದರ್ಶನ ನೀಡಿದ ಬಳಿಕ, ಅವರೆಲ್ಲರೂ ತಮಟೆ ಕಲಿಯುವ ಆಸೆ ವ್ಯಕ್ತಪಡಿಸಿದರು! ತಮಟೆ ಬಗ್ಗೆ ಹೆಮ್ಮೆ ಮೂಡಿದ ಕ್ಷಣ ಅದು.

ಇದು ಸೌಮ್ಯ ಅವರ ನೆನಪು. ತಮಟೆ ಹಿಡಿಯುವ, ಹೊಡೆಯುವ ತಂಡದ ಪ್ರತಿಯೊಬ್ಬ ಮಹಿಳೆಯದ್ದು ಇಂಥದ್ದೇ ಕತೆ, ನೆನಪಿದೆ.
ಈಗ ಏನಿದ್ದರೂ ಕಟು ವಾಸ್ತವ. ಅದಕ್ಕೆ ತಮಟೆಯ ಮೂಲಕ ಉತ್ತರ ಕೊಡಲು, ಜಾಗೃತಿಯ ಹಾಡು ಹಾಡಲು ಈ ಮಹಿಳೆಯರು ಸದಾ ಸಿದ್ಧ. ಅವರ ಕೈ ಚಳಕ, ಗಟ್ಟಿ ಹೆಜ್ಜೆ, ಸಮವಸ್ತ್ರದ ಶಿಸ್ತು. ಸಾಮಾಜಿಕ ಕಾಳಜಿ, ಬದ್ಧತೆಗೆ ತಮಟೆಯೇ ಕನ್ನಡಿ ಹಿಡಿಯುತ್ತಿದೆ. ಅನ್ಯ ರಾಜ್ಯಗಳಿಂದಲೂ ಅವರಿಗೆ ಕರೆ ಬರುತ್ತಿದೆ. ತಮಟೆ ನಾದ ಕೇಳುತ್ತಿದೆಯೇ..?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT