ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟನ್‌ ಈರುಳ್ಳಿಗೆ ಸಿಕ್ಕಿದ್ದು ಕೇವಲ 1 ರೂಪಾಯಿ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಕಷ್ಟಪಟ್ಟು ಬೆಳೆದ ಈರುಳ್ಳಿಯನ್ನು  ಕೃಷಿ ಉತ್ಪನ್ನ ಮಾರಾಟ ಸಮಿತಿಯಲ್ಲಿ (ಎಪಿಎಂಸಿ) ಮಾರಾಟ ಮಾಡಲು ಹೊರಟರೆ ಬೆಳೆಗಾರರಿಗೆ ಪ್ರತಿ ಟನ್‌ಗೆ ಸಿಗುವುದು ಕೇವಲ ಒಂದು ರೂಪಾಯಿ ಅಷ್ಟೇ.

ಅಚ್ಚರಿ ಎನಿಸಿದರೂ ಇದು ನಿಜ ಎನ್ನುತ್ತಾರೆ ಪುಣೆಯ 48 ವರ್ಷದ ರೈತ ದೇವಿದಾಸ್‌ ಪರಭಾನೆ ಅವರು. ಅವರ ಕುಟುಂಬದಲ್ಲಿ ಐವರು ಸದಸ್ಯರಿದ್ದು,  ಜೀವನ ನಿರ್ವಹಣೆಗೆ ಎರಡು ಎಕರೆ ಜಮೀನಿದೆ. ಉತ್ತಮ ಈರುಳ್ಳಿ ಇಳುವರಿ ಬಂದಿದ್ದರೂ ಸೂಕ್ತ ಬೆಲೆ ಸಿಗದೆ ಅವರು ತೀವ್ರ ನಿರಾಸೆಗೊಳಗಾಗಿದ್ದಾರೆ.
ತಮ್ಮ ಸಮಸ್ಯೆಯನ್ನು ಅವರು ವಿವರಿಸಿದ್ದು ಹೀಗೆ...

‘ಈ ಬಾರಿ ಬಂಪರ್‌ ಇಳುವರಿ ಬಂದಿದೆ. ಹೀಗಿದ್ದರೂ ಸಹ ಬೆಲೆ ಕುಸಿತದಿಂದ ಬಹಳಷ್ಟು ರೈತರು ತಾವು ಬೆಳೆದಿರುವ ಬೆಳೆಯನ್ನು ತಕ್ಷಣವೇ ಮಾರಾಟ ಮಾಡಿದ್ದಾರೆ. ಬರ ಪೀಡಿತ ಪ್ರದೇಶದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಸುದ್ದಿಯನ್ನೂ ದಿನವೂ ಕೇಳುತ್ತಿದ್ದೇವೆ. ಇದೀಗ ಈರುಳ್ಳಿ ಬೆಲೆ  ಭಾರಿ ಕುಸಿತ ಕಾಣುತ್ತಿರುವುದರಿಂದ ನನ್ನಂತಹ ರೈತರಿಗೆ ಆತ್ಮಹತ್ಯೆಯ ಹೊರತಾಗಿ ಬೇರಾವುದೇ ದಾರಿಯೆ  ಕಾಣುವುದಿಲ್ಲ’ ಎಂದು ಅವರು ಹತಾಶೆಯಿಂದ ಹೇಳುತ್ತಾರೆ.

‘ಇರುವ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯುತ್ತಿದ್ದೇನೆ. ಇದಕ್ಕಾಗಿ ₹80 ಸಾವಿರ ವೆಚ್ಚ ಮಾಡಿದ್ದೇನೆ.  ಮೇ 10ರಂದು 952 ಕೆ.ಜಿ ಈರುಳ್ಳಿಯನ್ನು ಚೀಲದಲ್ಲಿ ತುಂಬಿ ಲಾರಿಯ ಮೂಲಕ ಪುಣೆಯ ಎಪಿಎಂಸಿಗೆ ಕಳುಹಿಸಿದೆ.   10 ಕೆ.ಜಿಗೆ ನನಗೆ ದೊರೆತಿದ್ದು, ಕೇವಲ ₹16. ಅಂದರೆ ಒಂದು ಕೆ.ಜಿಗೆ ₹1.60  ಮಾತ್ರ.

‘ನಾನು ಕಳುಹಿಸಿದ್ದ ಈರುಳ್ಳಿ ಎಲ್ಲವನ್ನೂ ₹1,523ಕ್ಕೆ ಮಾರಾಟ ಮಾಡಲಾಯಿತು. ಅದರಲ್ಲಿ ಮಧ್ಯವರ್ತಿಗಳು ₹91.35ರಷ್ಟು ಕಮಿಷನ್‌ ಪಡೆದರು. ಕಾರ್ಮಿಕರ ವೆಚ್ಚ ₹75.55. ಇತರೆ ವೆಚ್ಚಗಳಿಗೆ ₹33.30 ನೀಡಿದ್ದೇನೆ. ಲಾರಿ ಚಾಲಕನಿಗೆ ₹1,320   ನೀಡಿದ್ದೇನೆ. ಪ್ರತಿ ಕೆ.ಜಿಗೆ ಕನಿಷ್ಠ ₹3 ಸಿಗುವ ನಿರೀಕ್ಷೆ ಮಾಡಿದ್ದೆ. ಆದರೆ ಅಂದು, ಬೆಲೆ ಭಾರಿ ಕುಸಿತ ಕಂಡಿತ್ತು. ಹೀಗಾಗಿ, ಈ ಎಲ್ಲಾ  ಖರ್ಚುಗಳನ್ನೂ ಭರಿಸಿದ ನಂತರ ನನಗೆ ಒಂದು ಟನ್‌ಗೆ ಸಿಕ್ಕಿದ್ದು ಕೇವಲ ಒಂದು ರೂಪಾಯಿ ಮಾತ್ರ. ನಾಲ್ಕು ತಿಂಗಳ ಕಾಲ ಬಹಳ ಮುತುವರ್ಜಿಯಿಂದ ಕೆಲಸ ಮಾಡಿದೆ.  ಲೋಡ್‌ ಶೆಡ್ಡಿಂಗ್‌ ಇದ್ದಾಗಲೂ ಕಷ್ಟಪಟ್ಟು ನೀರುಣಿಸಿದ್ದೇನೆ. ಹೀಗಿರುವಾಗ ಬೆಳೆಗೆ ನಾನು ಖರ್ಚು ಮಾಡಿದ ಹಣವೂ ಸಿಗದಂತಾಗಿದೆ’ ಎಂದು ಅವರು ತಮ್ಮ  ಸಂಕಟ ತೋಡಿಕೊಂಡಿದ್ದಾರೆ.

ಬೆಲೆ ಕುಸಿತ ತಡೆಯಲು ಮಧ್ಯಪ್ರವೇಶ ಮಾಡುವಂತೆ ಲಾಸಲ್‌ಗಾಂವ್‌ ಮಾರುಕಟ್ಟೆಯ ಸದಸ್ಯರು ಮತ್ತು ಈರುಳ್ಳಿ ವರ್ತಕರ ನಿಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT