ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿಯ ಸಾಂಸ್ಕೃತಿಕ ಮೇರು ‘ಎಫೆಸಸ್‌ ’

Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

‘ಏಷ್ಯಾ ಮೈನರ್’ (ಆಧುನಿಕ ಟರ್ಕಿ) ಎಂದೇ ಹೆಸರಾಗಿದ್ದ ಈಗಿನ ಟರ್ಕಿ ಭೂಭಾಗದ ಪಶ್ಚಿಮ ತಟದಲ್ಲಿನ ಪುರಾತನ ನಗರಿ ಎಫೆಸಸ್‌. ಇದನ್ನು ಹಳೆಯ ಮೆಡಿಟರೇನಿಯನ್ ವಿಶ್ವದ ಪ್ರಮುಖ ವ್ಯಾಪಾರಿ ಮತ್ತು ಆಧ್ಯಾತ್ಮಿಕ ಕೇಂದ್ರವೆಂದು ಪರಿಗಣಿಸಲಾಗಿತ್ತು. ಗ್ರೀಕರು, ಪರ್ಷಿಯನ್ನರು, ರೋಮನ್ನರು, ಬೈಜಾಂಟೈನರು ಮತ್ತು ಒಟ್ಟೊಮಾನ್‌ ದೊರೆಗಳ ಆಳ್ವಿಕೆಯ ಕಲೆ, ಸಂಸ್ಕೃತಿ, ಜ್ಞಾನ, ವೈಭವ, ಜನಜೀವನದ ಕುರುಹುಗಳನ್ನು ಕಾಣಬಹುದಾದ ಎಫೆಸಸ್‌ ನಗರವನ್ನು ‘ಏಷ್ಯಾ ಮೈನರ್’ ಪ್ರಾಚೀನತೆಯನ್ನು ಸಂರಕ್ಷಿಸಲ್ಪಟ್ಟ ಅತ್ಯುತ್ತಮ ಸ್ಥಳವೆನ್ನಲಾಗಿದೆ.

ವಿವಿಧ ಸಂಸ್ಕೃತಿ ಮತ್ತು ಜನಾಂಗಗಳಿಂದ ಶತಮಾನಗಳ ಕಾಲ ಆಳ್ವಿಕೆಗೊಳಗಾದ ಎಫೆಸಸ್‌, ಎಲ್ಲರ ಆಳ್ವಿಕೆಯಲ್ಲೂ ಸದಾ ಚಟುವಟಿಕೆಯಿಂದ ಕೂಡಿದ ಪ್ರಸಿದ್ಧ ಸಾಂಸ್ಕೃತಿಕ ಕೇಂದ್ರವಾಗಿತ್ತು. ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ (ಕ್ರಿ.ಶ. 2ರಲ್ಲಿ) ಈ ನಗರದಲ್ಲಿ 3 ಲಕ್ಷ ಮಂದಿ ವಾಸಿಸುತ್ತಿದ್ದರಂತೆ. ಸಮುದ್ರದ ತಟದ ನಗರವಾದ್ದರಿಂದ ಏಷ್ಯಾ, ಗ್ರೀಸ್‌, ಇಟಲಿ ಮುಂತಾದೆಡೆಗಳಿಂದ ಅದು ಸಂಪರ್ಕ ಹೊಂದಿತ್ತು.

ಕ್ರಿ.ಪೂ. 10ನೇ ಶತಮಾನದಲ್ಲಿ ಈ ನಗರ ಅಥೆನ್ಸ್‌ನಿಂದ ಬಂದ ವಸಾಹತುದಾರರಿಂದ ಸ್ಥಾಪಿತವಾಗಿ, ವ್ಯಾಪಾರ ವಹಿವಾಟಿನಿಂದ ಏಳಿಗೆ ಹೊಂದಿತು. ಗ್ರೀಕ್‌ ದೇವಾಲಯಗಳಲ್ಲಿ ಅತ್ಯಂತ ದೊಡ್ಡದಾದ ಅಯೋನಿಕ್‌ ಶೈಲಿಯ ದೇವಾಲಯ ಎಫೆಸಸ್‌ ಪ್ರಸಿದ್ಧಿಗೆ ಕಾರಣವಾಯಿತು. ಮಾತೃತ್ವ ಮತ್ತು ಫಲವಂತಿಕೆಗಳ ಪೌರಸ್ತ್ಯ ದೇವತೆ ಆರ್ಟೆಮಿಸ್‌ಗಾಗಿ ಕ್ರಿ.ಪೂ 550ರಲ್ಲಿ ನಿರ್ಮಾಣ ವಾದ ಅಲ್ಲಿನ ಬೃಹತ್‌ ದೇವಸ್ಥಾನವನ್ನು ಜಗತ್ತಿನ ಪ್ರಾಚೀನ ಸಪ್ತ ವಿಸ್ಮಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಲೆಟೊ ಮತ್ತು ಜೀಯಸ್‌ರ ಮಗಳು ಹಾಗೂ ಅಪೊಲೊನ ಅವಳಿ, ಆರ್ಟೆಮಿಸ್‌. ಈಕೆ ಫಲವತ್ತತೆಯ ದೇವತೆ. ಆರ್ಟೆಮಿಸ್‌ ಆಗಿನ ‘ಏಷ್ಯಾ ಮೈನರ್’ ಪ್ರದೇಶದ ಗ್ರೀಕರಿಗೆ ಪ್ರಮುಖ ದೇವತೆ. ಎಫೆಸಸ್‌ನಲ್ಲಿ ಈಕೆಯನ್ನು ಫಲವಂತಿಕೆಯ ದೇವತೆಯಾಗಿ ಪೂಜಿಸುತ್ತಿದ್ದರು. ಎಫೆಸಸ್‌ನ ದೇವಾಲಯದ ಈಕೆಯ ಶಿಲ್ಪದ ಎದೆಯ ಮೇಲೆ ಹಲವಾರು ಗ್ರಂಥಿಗಳು ನೆಟ್ಟಗೆ ನಿಂತಂತೆ ಇದ್ದು, ಕೆಲವರು ಅವನ್ನು ಸ್ತನಗಳೆನ್ನುವರು.

ರೋಮನ್ ಲೇಖಕ, ತತ್ವಜ್ಞಾನಿ ಹಾಗೂ ರೋಮನ್ ಸಾಮ್ರಾಜ್ಯದ ನೌಕಾ ಮತ್ತು ಸೇನಾ ಕಮಾಂಡರ್ ಆಗಿದ್ದ ಪ್ಲೀನಿ, ‘ಸಂಪೂರ್ಣ ಅಮೃತಶಿಲೆಯ ಈ ದೇವಾಲಯ 425 ಅಡಿ ಉದ್ದವೂ 225 ಅಡಿ ಅಗಲವೂ ಇದೆ. ಇಲ್ಲಿ 60 ಅಡಿ ಎತ್ತರದ 127 ಕಂಬಗಳಿವೆ. ಅವುಗಳಲ್ಲಿ ಕೆಲವನ್ನು ಉಬ್ಬುಕೆತ್ತನೆಗಳಿಂದ ಅಲಂಕಾರ ಗೊಳಿಸಲಾಗಿದೆ’ ಎಂದು ಬಣ್ಣಿಸಿದ್ದಾನೆ. ಸುಮಾರು ಒಂದು ಶತಮಾನ ಕಾಲದ ಶ್ರಮದಿಂದ ಪೂರ್ಣಗೊಂಡ ಅದು ಕ್ರಿ.ಪೂ. 356ರಲ್ಲಿ ಬೆಂಕಿಯಿಂದ ನಾಶವಾಯಿತು.

ಈಗ ಕೇವಲ ಕೆಲವು ಕಂಬಗಳು ದೇವಾಲಯದ ಕುರುಹಾಗಿ ಉಳಿದಿವೆ. ಆದರೆ ನಗರದ ಹಿಂದಿನ ವೈಭವದ ಗುರುತಾಗಿ ಹಲವಾರು ಸಂಗತಿಗಳು ಇಲ್ಲಿವೆ. ಅದ್ಭುತ ದೇವಾಲಯಗಳ ಪಳೆಯುಳಿಕೆಗಳು, ಮನೆಗಳ ಹಸಿಚಿತ್ರಣ, ಕಾರಂಜಿಗಳು ಹಾಗೂ ಪೋರ್ಟಿಕೋಗಳು, ಮೊಸಾಯಿಕ್‌ ಬಳಸಿ ಮಾಡಿದ ಚಿತ್ರಣಗಳು, ಮೂರು ಅಂತಸ್ತಿನ ಸೆಲ್ಸಸ್ ಲೈಬ್ರರಿ, ಕ್ಯುರೇಟಸ್‌ ಬೀದಿಯ ಹಡ್ರಿಯನ್‌ ದೇವಾಲಯ, ಟ್ರೋಜನ್ ಫೌಂಟೇನ್ ಹಾಗೂ ಗ್ರ್ಯಾಂಡ್ ಥಿಯೇಟರ್, ನಾಲ್ಕನೇ ಶತಮಾನದಲ್ಲಿ ನಿರ್ಮಿತವಾದ ಸೇಂಟ್ ಜಾನ್ ಚರ್ಚ್ ಮುಂತಾದವು ಒಂದು ಪುರಾತನ ನಾಗರಿಕತೆಯ ಸಾಕ್ಷಿಯಾಗಿವೆ.

ಇಡೀ ನಗರದ ಕುರುಹುಗಳಲ್ಲಿ ಶೇಕಡ 5ರಷ್ಟು ಮಾತ್ರ ಸಂರಕ್ಷಿಸಲ್ಪಟ್ಟರೂ, ನಿರಂತರವಾಗಿ ಉಚ್ಛ್ರಾಯ ಸ್ಥಿತಿ ಮತ್ತು ಪತನವನ್ನು ಕಂಡ ಈ ಸ್ಥಳ, ಹಲವಾರು ಐತಿಹ್ಯಗಳ ಖಜಾನೆಯಂತೆ ಕಂಡುಬರುತ್ತದೆ. ರೋಮನ್ನರು ಪ್ರಾಚೀನ ಗ್ರೀಸ್ ಪರಂಪರೆ ಯಿಂದ ಅನೇಕ ಸಂಪ್ರದಾಯಗಳು, ಸಾಂಸ್ಕೃತಿಕ ಅಂಶಗಳು ಮತ್ತು ತಾತ್ವಿಕ ವಿಚಾರಗಳನ್ನು ಪಡೆದುಕೊಂಡಿರುವುದು ಅಲ್ಲಿ ಕಂಡುಬರುತ್ತದೆ. ರೋಮನ್ನರು ನಿರ್ಮಿಸಿದ್ದ ನೀರಿನ ಕಾಲುವೆಗಳು, ಅವರ ಜನಜೀವನ, ಗೃಹಪಂಕ್ತಿಗಳು, ಸಾರ್ವಜನಿಕ ಶೌಚಾಲಯಗಳು ಅಲ್ಲಿವೆ.

ಕ್ರಿ.ಶ. 104ರಲ್ಲಿ ನಿರ್ಮಿಸಲಾದ ಟ್ರೋಜನ್ ಚಿಲುಮೆ ಎಫೆಸಸ್‌ನ ಅತ್ಯುತ್ತಮ ಸ್ಮಾರಕವಾಗಿದೆ. ಅದನ್ನು ಚಕ್ರವರ್ತಿ ಟ್ರೋಜನ್ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ನೈಕ್‌ ಅಥವಾ ವಿಕ್ಟೋರಿಯಾ ದೇವತೆಯ ಶಿಲ್ಪವೂ ಇಲ್ಲಿದೆ. ಈ ಶಿಲ್ಪದ ಪ್ರೇರಣೆಯಿಂದ ಪ್ರಸಿದ್ಧ ನೈಕ್‌ ಕಂಪೆನಿಯ ಲೋಗೊ ಸಿದ್ಧವಾಯಿತು ಎನ್ನುತ್ತಾರೆ. ರೆಕ್ಕೆಗಳಿರುವ ದಂಡವೊಂದಕ್ಕೆ ಬಳ್ಳಿಯಂತೆ ಎರಡು ಹಾವುಗಳು ಹಬ್ಬಿರುವ ಈಗಿನ ವೈದ್ಯಕೀಯ ಲಾಂಛನಕ್ಕೆ ಪ್ರೇರಣೆಯಾಗಿ ಪ್ರಾಚೀನ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ಸ್ಥಳದ ಹೊರಗೆ ಗ್ರೀಕ್‌ ಶಿಲ್ಪಚಿತ್ರವಿದೆ.

ಅಲ್ಲಿನ ಸಾರ್ವಜನಿಕ ಶೌಚಾಲಯಗಳು ಆಗಿನವರು ನೈರ್ಮಲ್ಯಕ್ಕೆ ಕೊಡುತ್ತಿದ್ದ ಆದ್ಯತೆಯನ್ನು ತೋರಿಸುತ್ತದೆ. ಅಲ್ಲಿಯೇ ನೀರು ಹರಿಯಲು ಕಾಲುವೆಯನ್ನೂ ನಿರ್ಮಿಸಿದ್ದಾರೆ. ಚಳಿಗಾಲದಲ್ಲಿ ಕುಳಿತರೆ ಥಂಡಿಯಾಗುತ್ತದೆಂದು ಶ್ರೀಮಂತರು ಸೇವಕರನ್ನು ಮೊದಲು ಶೌಚಕ್ಕೆ ಕಳಿಸಿ ನಂತರ ತಾವು ಹೋಗಿ ಕೂರುತ್ತಿದ್ದರಂತೆ!

ಪ್ರಾಚೀನ ವಿಶ್ವದ ಬಹುದೊಡ್ಡ ಮೂರು ಶ್ರೇಣೀಕೃತ ಬಯಲು ರಂಗಭೂಮಿಯಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಸುಮಾರು 25 ಸಾವಿರ ಮಂದಿ ಕುಳಿತುಕೊಳ್ಳಲು ಅನುಕೂಲವಿದೆ. ಹಿಂದೆ ಕಲೆ ಮತ್ತು ಸಾರ್ವಜನಿಕ ಭಾಷಣದ ನೆಲೆಯಾಗಿದ್ದ ಈ ರಂಗಮಂದಿರ, ರೋಮನ್ನರ ಆಗಮನದ ನಂತರ ಸಾಯುವವರೆಗೂ ಹೋರಾಡುವ ಗ್ಲೇಡಿಯೇಟರ್‌ ಕುಸ್ತಿಮಲ್ಲರ ಮೃತ್ಯುಕೂಪವಾಗಿ ಬದಲಾಯಿತು. ಆಗಿನ ಕಾಲದ ಅತ್ಯಂತ ದೊಡ್ಡ ಗ್ರಂಥಾಲಯವೆಂದೇ ಹೆಸರಾಗಿದ್ದ ಮೂರು ಅಂತಸ್ತಿನ ಸೆಲ್ಸಸ್ ಲೈಬ್ರರಿಯಲ್ಲಿ ಸುಮಾರು 12 ಸಾವಿರ ಸುರುಳಿಗಳ ರೂಪದ ಪುಸ್ತಕ ಸಂಗ್ರಹವಿತ್ತಂತೆ.

ಈ ನಗರ ಪ್ರಸಿದ್ಧವಾಗಿದ್ದುದು ಕೇವಲ ದೇವಾಲಯಗಳಿಗಲ್ಲ– ಕವಿಗಳು, ತತ್ವಜ್ಞಾನಿಗಳು, ಸುಂದರ ಸ್ತ್ರೀಯರು, ವ್ಯಾಪಾರಿಗಳು, ಕಲಾಪೋಷಕರು, ವಿಲಾಸಿಗರು ಎಲ್ಲವೂ ಬೆರೆತ ಸುಂದರ ನಗರಿಯೆಂದೇ ಹೆಸರಾಗಿತ್ತು. ಒಂದು ಕಾಲದಲ್ಲಿ ಪ್ರಸಿದ್ಧ ವ್ಯಾಪಾರಿ ನಗರಿಯಾಗಿದ್ದ, ನಂತರ ಕ್ರಿಶ್ಚಿಯನ್‌ ಯುಗದ ಮುಖ್ಯ ಧಾರ್ಮಿಕ ಕೇಂದ್ರವಾಗಿದ್ದ ಎಫೆಸಸ್‌ ಈಗ ಟರ್ಕಿ ದೇಶದ ಪ್ರಮುಖ ಪ್ರವಾಸಿ ಸ್ಥಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT