ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಒತ್ತೆಯಿರಿಸಿಕೊಳ್ಳಲು ಉದ್ದೇಶಿಸಿದ್ದ ದಾಳಿಕೋರರು

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಇಸ್ತಾಂಬುಲ್ (ಎಎಫ್‌ಪಿ): ಟರ್ಕಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಳಿ ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಕೋರರು, ನಿಲ್ದಾಣದಲ್ಲಿದ್ದ ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವ ಉದ್ದೇಶ ಹೊಂದಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ದಾಳಿಕೋರರು ನಿಲ್ದಾಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದರು. ಹತ್ಯಾಕಾಂಡ ನಡೆಸುವ ಮುನ್ನ ಡಜನ್‌ಗಟ್ಟಲೆ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲು ಯೋಜಿಸಿದ್ದರು. ಆದರೆ, ತಮ್ಮ ಮೇಲೆ ಶಂಕೆ ಉಂಟಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಯೋಜಿತ ಸಮಯಕ್ಕಿಂತ ಮೊದಲೇ ದಾಳಿ ಪ್ರಾರಂಭಿಸಿದರು ಎಂದು ‘ಸಬಾ’ ಪತ್ರಿಕೆ ವರದಿ ಮಾಡಿದೆ.

‘ಆತ್ಮಾಹುತಿ ದಾಳಿಗಾಗಿ ಸ್ಫೋಟಕಗಳನ್ನು ಅಳವಡಿಸಿದ್ದ ಕೋಟ್‌ಗಳನ್ನು ಉಗ್ರರು ಧರಿಸಿದ್ದರು. ಕಡು ಬಿಸಿಲಿನಲ್ಲಿಯೂ ಈ ಉಡುಪುಗಳನ್ನು ಧರಿಸಿದ್ದು, ನಾಗರಿಕರು ಮತ್ತು ಪೊಲೀಸರ ಗಮನ ಸೆಳೆದಿತ್ತು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ದಾಳಿಯ ಹಿಂದೆ ಐಎಸ್‌ ಸಂಘಟನೆಯ ಕೈವಾಡ ಇದೆ ಎಂದು ಟರ್ಕಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ದಾಳಿಕೋರರು ರಷ್ಯಾ, ಉಜ್ಬೇಕಿಸ್ತಾನ ಮತ್ತು ಕಿರ್ಗಿಸ್ತಾನದ ಮೂಲದವರು ಎಂದು ಗುರುತಿಸಲಾಗಿದೆ.

ರಷ್ಯಾದ ಚೆಚೆನ್ಯಾ ಪ್ರದೇಶದವನಾದ ಐಎಸ್‌ ಇಸ್ತಾಂಬುಲ್‌ ಘಟಕದ ಮುಖ್ಯಸ್ಥ ಅಕ್ಮತ್‌ ಚಟಾಯೆವ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದಾನೆ. ಈ ವರ್ಷದ ಆರಂಭದಲ್ಲಿ ಇಸ್ತಾಂಬುಲ್‌ನಲ್ಲಿ ನಡೆದ ಎರಡು ಭೀಕರ ಬಾಂಬ್‌ ದಾಳಿಗಳನ್ನು ಆತನೇ ರೂಪಿಸಿದ್ದ ಎಂದು ಪತ್ರಿಕೆ ಹೇಳಿದೆ.
ದಾಳಿಕೋರರು ಕಡು ಕಪ್ಪು ಜಾಕೆಟ್‌ ಧರಿಸಿದ್ದು, ಅವರಲ್ಲಿ ಇಬ್ಬರು ಬೇಸ್‌ಬಾಲ್‌ ಟೋಪಿಗಳನ್ನು ಹಾಕಿಕೊಂಡಿದ್ದರು. ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ಈ ವಿಡಿಯೊಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.

ದಾಳಿಕೋರರು ಸಿರಿಯಾ ಮತ್ತು ಅರಬ್‌ ಮೂಲದವರೇ ಹೆಚ್ಚಿರುವ ಇಸ್ತಾಂಬುಲ್‌ನ ಫತಿಹ್ ಜಿಲ್ಲೆಯಲ್ಲಿ  ಫ್ಲಾಟ್‌ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಒಂದು ವರ್ಷದ ಮುಂಗಡ ಬಾಡಿಗೆಯಾಗಿ `5.58 ಲಕ್ಷ  (24 ಸಾವಿರ ಟರ್ಕಿಶ್‌ ಲಿರಾ) ಹಣವನ್ನೂ ನೀಡಿದ್ದರು ಎಂದು ಹುರಿಯತ್‌ ಪತ್ರಿಕೆ ವರದಿ ಮಾಡಿದೆ.
ದಾಳಿ ಬಳಿಕ ಪೊಲೀಸರು ಉಗ್ರರು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ನಡೆಸಿದ್ದರು. ಆ ಮನೆಯ ಕಿಟಕಿ ಬಾಗಿಲುಗಳು ಸದಾ ಮುಚ್ಚಿರುತ್ತಿದ್ದವು ಎಂದು ನೆರೆಮನೆಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT