ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾರ್ ಕಂಟಕ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

15 ವರ್ಷದ ಮನ್ಸೂರ್ ರಕ್ತ ಕ್ಯಾನ್ಸರ್ ರೋಗಿ. ಪ್ರೌಢಶಾಲೆಯ ಮೆಟ್ಟಿಲೇರಬೇಕಿದ್ದವನು ಮೂರು ವರ್ಷ ಆಸ್ಪತ್ರೆಗೆ ಸೇರಿದ. ತಾಯಿ ಊದುಬತ್ತಿ ಹೊಸೆದರಷ್ಟೇ ಹೊತ್ತಿನ ಊಟ. ಆದರೆ ಮಗನಿಗಾಗಿ ನಾಲ್ಕು ವರ್ಷಗಳಲ್ಲಿ ಆಕೆ ಖರ್ಚು ಮಾಡಿದ್ದು 5 ಲಕ್ಷದ ಗಡಿ ದಾಟಿದೆ. ಅವನ ಕಾಯಿಲೆ ಗುಣವಾಗುವುದೋ ಇಲ್ಲವೋ ವೈದ್ಯರೂ ತಿಳಿಸಿಲ್ಲ, ಸದ್ಯ ಓಡಾಡುತ್ತಿದ್ದಾನಷ್ಟೇ.

ಇದು ಕೇವಲ ಆ ಪುಟ್ಟ ಬಾಲಕನ ಕಥೆಯಲ್ಲ. ನೆಲಮಂಗಲ-ಸೊಂಡೆಕೊಪ್ಪ ರಸ್ತೆಯಲ್ಲಿನ ಮಂಟನಕುರ್ಚಿ, ಅಂಜನನಗರ ಕೆಂಪನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳ ಮಕ್ಕಳು, ದೊಡ್ಡವರು ಇಲ್ಲಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ, ಆಗುತ್ತಿದ್ದಾರೆ. ಗ್ರಾಮಸ್ಥರಿಗೆ ಗಂಟಲು ಊತ, ಉರಿತ, ಕೆಮ್ಮು, ಕಫ ಸಾಮಾನ್ಯ. ಉಸಿರಾಟ ಸಂಬಂಧಿ ಕಾಯಿಲೆಯಿಂದ ಈಗಾಗಲೇ ನಾಲ್ವರು ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣ ಊರಂಚಿನಲ್ಲಿರುವ ಟಾರ್ ಮಿಶ್ರಣ ಘಟಕ ಎನ್ನುತ್ತಾರೆ ಗ್ರಾಮಸ್ಥರು.

ಆರು ವರುಷಗಳ ಹಿಂದೆ ಟಾರ್ ಮಿಶ್ರಣ ಘಟಕಗಳಿಗೆ ತಮ್ಮ ಭೂಮಿಯನ್ನು ಕೊಟ್ಟಿದ್ದರ ಪರಿಣಾಮ ಇಂದು ಎದುರಿಸುತ್ತಿರುವ ಅರಿವು ಗ್ರಾಮಸ್ಥರಿಗೆ ಆಗಿದೆ. ಊರಿನ ಎರಡೂ ಬದಿಯಲ್ಲಿರುವ ಟಾರ್ ಮಿಕ್ಸಿಂಗ್ ಘಟಕಗಳು. ಕೆಂಪನಹಳ್ಳಿಯಲ್ಲಿನ ಘಟಕ ಸಂಪೂರ್ಣವಾಗಿ ಕಾರ್ಯ ಸ್ಥಗಿತಗೊಳಿಸಿದ್ದರೆ, ಮಂಟನಕುರ್ಚಿಯಲ್ಲಿ ಇನ್ನೂ ಕಾರ್ಯ ನಿರ್ವಹಿಸುತ್ತಿರುವ ದೊಡ್ಡ ಘಟಕ ಜನರನ್ನು ಕಾಡುತ್ತಿದೆ. ಪಶ್ಚಾತ್ತಾಪದ ಬೇಗೆಯಲ್ಲಿ ಗ್ರಾಮಸ್ಥರು ಬೇಯುತ್ತಿದ್ದಾರೆ. ಪ್ರತಿಭಟನೆಯ ಧ್ವನಿ ಗಟ್ಟಿಯಾಗತೊಡಗಿದೆ. 

ಬೋರ್ಡ್ ಇಲ್ಲದ ಮಂಟನಕುರ್ಚಿಯಲ್ಲಿನ ಟಾರ್ ಮಿಶ್ರಣದ ಘಟಕ ಬೆಂಗಳೂರಿನ ರಸ್ತೆ ಗುತ್ತಿಗೆದಾರರೊಬ್ಬರಿಗೆ ಸೇರಿದ್ದು. ಹಿಂದಿನಂತೆ ರಸ್ತೆಯಲ್ಲೇ ಟಾರ್ ಬೇಯಿಸಿ, ದಿನಗಟ್ಟಲೆ ರಸ್ತೆ ಮಾಡಲು ಯಾವ ಗುತ್ತಿಗೆದಾರರಿಗೂ ಸಾವಧಾನವಿಲ್ಲ. ಎಲ್ಲವೂ ದಿಢೀರ್ ಮುಗಿದು, ಶರವೇಗದಲ್ಲಿ ಚೆಕ್ ಕೈಸೇರಬೇಕಷ್ಟೆ. ಹಾಗಾಗಿ ನಗರದ ಹೊರಪ್ರದೇಶಗಳಲ್ಲಿ ಟಾರ್ ಮಿಕ್ಸಿಂಗ್ ನಡೆಯುತ್ತಿದೆ. ಜಲ್ಲಿಪುಡಿ, ಜಲ್ಲಿ, ಕಾದ ಟಾರ್‌ನ ಮಿಶ್ರಣವನ್ನು ತುಂಬಿದ 100ಕ್ಕೂ ಹೆಚ್ಚಿನ ಲಾರಿಗಳು ನಗರಗಳತ್ತ ಹೊರಡುತ್ತವೆ. ಈ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಹೊಗೆ, ವಾಸನೆ, ವಿಷಯುಕ್ತ ಅನಿಲಗಳು ಇಡೀ ಜೀವಸಂಕುಲವನ್ನೇ ನಾಶಮಾಡಿಬಿಡಬಲ್ಲಷ್ಟು ಮಾರಕವಾಗಿರುತ್ತವೆ. 

‘ಟಾರ್ ಬೇಯಿಸುವಾಗ ಅದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ತಂದೊಡ್ಡುವ ಡಯಾಕ್ಸಿನ್‌ಗಳು ಬಿಡುಗಡೆಯಾಗುತ್ತವೆ. ಕಾರ್ಬನ್ ಡೈ ಆಕ್ಸೈಡ್‌ಗಿಂದ ಹೆಚ್ಚಿನ ಮೋನೊಆಕ್ಸೈಡ್ ಬಿಡುಗಡೆಯಾಗುತ್ತವೆ. ದೂಳಿನಿಂದ ಸಿಲಿಕೊಸಿಸ್ ಕಾಯಿಲೆಯಾಗಿ ಶ್ವಾಸಕೋಶಕ್ಕೆ ರಂಧ್ರ ಆಗುತ್ತದೆ.

ಸಿಲಿಕೊಸಿಸ್‌ನಿಂದ ಅಸ್ತಮಾ ಶುರುವಾಗಿ ಶ್ವಾಸಕೋಶ ಹಾನಿಗೊಳಗಾಗುತ್ತದೆ. ದೂಳಿನ ಕಣಗಳು ಗಿಡ ಮರಗಳ ಮೇಲೆ ಕುಳಿತು ಸಿಲ್ಟಿಂಗ್ ಆಗುವುದರಿಂದ, ನೈಸರ್ಗಿಕವಾಗಿ ನಡೆಯುವ ಪರಾಗಸ್ಪರ್ಶ ಅಥವಾ ಪಾಲಿನೇಷನ್ ಸಾಧ್ಯವಾಗುವುದಿಲ್ಲ. ದೂಳಿನ ಕಣದಿಂದ ಭಾರವಾದ ಪೋಲೆನ್ ಗಾಳಿಯಲ್ಲಿ ತೇಲಿಹೋಗಿವಷ್ಟು ಹಗುರವಾಗಿರುವುದಿಲ್ಲ. ಇದರಿಂದ ಎಲ್ಲಾ ಬೆಳೆಗಳ ಇಳುವರಿಯೂ ಕುಗ್ಗುತ್ತದೆ. ಕೆಂಪನಹಳ್ಳಿಯಲ್ಲಿ ಹಿಂದಿನಿಂದಲೂ ರೂಢಿಯಲ್ಲಿದ್ದ ರೇಷ್ಮೆ ಹುಳು ಸಾಕಣೆ ಇತ್ತೀಚೆಗೆ ವಿಫಲವಾಗುತ್ತಿದೆ.

ಸಮಸ್ಯೆಯೇನೆಂದರೆ ರೇಷ್ಮೆ ಹುಳುಗಳು ಸೊಪ್ಪು ತಿನ್ನುತ್ತಿಲ್ಲ. ಸೊಪ್ಪು ತಿಂದ ಹುಳುಗಳು ಬದುಕುವುದಿಲ್ಲ. ಸೊಪ್ಪಿನಲ್ಲಿ ವಿಷವಿರುವುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಪರಿಸರವಾದಿ ಯಲ್ಲಪ್ಪ ರೆಡ್ಡಿ. ಮಂಟನಕುರ್ಚಿಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಿದೆ. ಇವು ಟಾರ್ ಮಿಕ್ಸಿಂಗ್ ಕಾರ್ಖಾನೆಗೆ ಹತ್ತಿರ ಇದೆ. ಹೊಗೆಯನ್ನು ಕುಡಿದ ಮಕ್ಕಳಿಗೆ ಹೊಟ್ಟೆ ತೊಳೆಸಿದಂತಾಗಿ ಊಟ ಸೇರುವು ದಿಲ್ಲ. ಅಂಗನವಾಡಿಯ 25 ಮಕ್ಕಳು ತಾವು ಹಾಕಿಸಿಕೊಂಡ ಊಟದ ಅರ್ಧವನ್ನೂ ತಿನ್ನದೇ ಹೊರಚೆಲ್ಲುತ್ತಾರೆ ಎನ್ನುತ್ತಾರೆ ಅಡುಗೆ ಮಾಡುತಿದ್ದ ಫಾತಿಮಾ. ಇದರ ಜೊತೆ ವಿವಿಧ ಕಾಯಿಲೆ. ಅನಾರೋಗ್ಯದಿಂದ ಮಕ್ಕಳು ಶಾಲೆಗೆ ಗೈರು.

ಅನುಮತಿ ಇಲ್ಲ!
ಟಾರ್ ಘಟಕಕ್ಕೆ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲ ಎನ್ನುತ್ತಾರೆ ಪಂಚಾಯಿತಿ ಸದಸ್ಯರು, ಆರು ವರ್ಷಗಳ ಹಿಂದೆ ಕೃಷಿ ಸಂಬಂಧಿತ ಯೋಜನೆಯನ್ನು ಮಾಡುತ್ತೇವೆ ಎಂದು ಪಂಚಾಯಿತಿಯಿಂದ ಒಂದು ಅನುಮತಿ ಪತ್ರ ಪಡೆದಿದ್ದಾರೆಯೇ ಹೊರೆತು, ಟಾರ್ ಕಾರ್ಖಾನೆ ಅಥವಾ ಇನ್ನಾವುದೇ ಉದ್ಯಮ ಮಾಡಲು ಅಲ್ಲ ಎನ್ನುತ್ತಾರೆ. ಮೇಲಾಗಿ ಮಂಟನಕುರ್ಚಿ ಗ್ರಾಮ, ಅರ್ಕಾವತಿ ಅಧಿನಿಯಮದಡಿಯಲ್ಲಿನ ಪ್ರಮುಖ ಗ್ರಾಮವಾಗಿದ್ದು, ಹಸಿರು ವಲಯದಲ್ಲಿದೆ. ಹಾಗಾಗಿ ಯಾವುದೇ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಸಾಧ್ಯವಿಲ್ಲ. ಆದರೂ ಇದು ನಿರಾತಂಕವಾಗಿ ನಡೆದಿದೆ. ಊರ ಜನಗಳು ಅಡುಗೆಗೂ ಕೂಡ ಬಳಸಬಹುದಾದಷ್ಟು ಶುದ್ಧವಾಗಿದ್ದ ಕೃಷ್ಣಗೋವಿಹೊಂಡ ಹಳ್ಳದ ನೀರು ಈ ಘಟಕದಿಂದಾಗಿ ವಿಷಪೂರಿತವಾಗಿದೆ.


ಹಳ್ಳದ ಮೇಲೆಯೇ ಮನೆ!

ಸೂಕ್ತ ಪರವಾನಗಿ ಪಡೆಯದೆ ಕಾನೂನು ಬಾಹಿರವಾಗಿ ಘಟಕ ನಿರ್ಮಿಸಿರುವುದು ತಪ್ಪಲ್ಲವೇ? ಎಂದು ಘಟಕದ ನಿರ್ವಹಣೆ ಮಾಡುತ್ತಿರುವವರನ್ನು ಪ್ರಶ್ನಿಸಿದಾಗ ‘ಕಾನೂನು ಕಾನೂನು ಎಂದರೆ ಯಾವ ಕೆಲಸಾನೂ ಆಗಲ್ಲ ಸಾರ್. ನನ್ನ ಮನೆ ಅರ್ಕಾವತಿ ಹಳ್ಳದ ಮೇಲೆನೇ ಕಟ್ಟಿದ್ದೇನೆ. ಏನೂ ಆಗಿಲ್ಲವಲ್ಲ’ ಎಂಬ ಉತ್ತರ!

‘ನಮಗೂ ಊರಿನ ಒಳಿತು ಬೇಕು. ಅದಕ್ಕಾಗಿ ಗ್ರಾಮದ ಮಧ್ಯೆ ಒಂದು ದೇವಾಲಯ ಕಟ್ಟುತ್ತಿದ್ದೇವೆ. ಗ್ರಾಮಸ್ಥರು ಘಟಕ ಬೇಡವೆಂದರೆ ಕನಿಷ್ಠ ಆರು ತಿಂಗಳು ಸಮಯ ಕೊಡಲಿ.

ಸದ್ಯ ರಾಶಿ ಇರುವ ಎಲ್ಲಾ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಬೇರೆಡೆ ಹೋಗುತ್ತೇವೆ’ ಎಂದರು. ಆದರೆ ಈಗಾಗಲೇ ಒಂದು ದೇವಸ್ಥಾನ ಸನಿಹದಲ್ಲಿಯೇ ಇದ್ದರೂ ಇನ್ನೊಂದು ಕಟ್ಟುತ್ತಿರುವ ಉದ್ದೇಶ ನಿಗೂಢವಾಗಿದೆ. ಸದ್ಯ ಗ್ರಾಮಸ್ಥರ ಪ್ರತಿಭಟನೆ ಜೋರಾಗಿ ನಡೆದಿರುವ ಕಾರಣ, ಘಟಕ ಸ್ಥಗಿತಗೊಂಡಿದೆ.

ಆದರೆ ಹಿಂದಿನಂತೆ ಮತ್ತೆ ಯಾವಾಗಲಾದರೂ ಶುರುವಾಗುವ ಭೀತಿಯಲ್ಲಿದ್ದಾರೆ ಗ್ರಾಮಸ್ಥರು. ಈ ಬಗ್ಗೆ ಸಂಬಂಧಿತರು ಗಮನ ಹರಿಸಿ ತಮ್ಮ ಹಾಗೂ ಪರಿಸರದ ಆರೋಗ್ಯ ರಕ್ಷಣೆ ಮಾಡುವಂತೆ ಗ್ರಾಮಸ್ಥರು ಕೋರಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT