ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿಸಿಸಿ ವರದಿಯೇ ದೋಷಪೂರ್ಣ: ಆಯುಕ್ತರ ಸ್ಪಷ್ಟನೆ

Last Updated 21 ಆಗಸ್ಟ್ 2014, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧಿನಗರ ಉಪ ವಿಭಾಗದಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆಯುಕ್ತರ ತಾಂತ್ರಿಕ ತನಿಖಾ ಕೋಶ (ಟಿವಿಸಿಸಿ) ನೀಡಿದ ವರದಿಯೇ ದೋಷದಿಂದ ಕೂಡಿದೆ’ ಎಂದು ಸ್ವತಃ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ.ಲಕ್ಷ್ಮೀನಾರಾಯಣ ಸ್ಪಷ್ಟಪಡಿಸಿದರು.

ಟಿವಿಸಿಸಿ ತನಿಖೆ ಆಧರಿಸಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿರುವ ಕಾರಣ ಆಯುಕ್ತರು ಗುರುವಾರ ಪತ್ರಿಕಾಗೋಷ್ಠಿ ಕರೆದು ಈ ಸ್ಪಷ್ಟನೆಯನ್ನು ನೀಡಿದರು.

‘ಗಾಂಧಿನಗರದ ವಾರ್ಡ್‌ ನಂ. 94ರಲ್ಲಿ ನಿರ್ಮಿಸಲಾದ ರಸ್ತೆಗಳಿಗೆ ಸಂಬಂಧಿಸಿದಂತೆ ವರದಿ ನೀಡಿರುವ ಟಿವಿಸಿಸಿ, ರಸ್ತೆಗಳು ಚೆನ್ನಾಗಿವೆ ಎಂಬ ಉಲ್ಲೇಖ ಮಾಡಿದರೂ ಯಾವ ವೆಚ್ಚದ ಅಡಿ ಮತ್ತು ಯಾವ ಸಂಸ್ಥೆಯಿಂದ ಈ ಕಾಮ­ಗಾರಿ ನಡೆಸಲಾಗಿದೆ ಎಂಬ ಮಾಹಿತಿ­ಯನ್ನೇ ನೀಡಿಲ್ಲ. ಇದರಿಂದಲೇ ಗೊಂದಲ ಸೃಷ್ಟಿಯಾಗಿ ಡಾಂಬರು ಹಾಕಲಾದ ರಸ್ತೆಗಳನ್ನೇ ಮತ್ತೆ ದುರಸ್ತಿಗೆ ಆಯ್ದುಕೊಳ್ಳಲಾ­ಗಿದೆ ಎಂಬ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗಿದೆ’ ಎಂದು ವಿವರಿಸಿದರು.

‘ದುರಸ್ತಿಗೊಂಡ ಯಾವ ರಸ್ತೆಗೂ ಎರಡನೇ ಸಲ ಡಾಂಬರು ಹಾಕಲು ನಮ್ಮ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ಅಲ್ಲದೆ ಹಣಕಾಸಿನ ದುರುಪಯೋಗವೂ ಆಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಕರ್ನಾಟಕ ರಸ್ತೆ ಮೂಲಸೌಕರ್ಯ ಅಭಿ­ವೃದ್ಧಿ ನಿಯಮಿತ  (ಕೆಆರ್‌ಐಡಿಎಲ್‌) ಸಂಸ್ಥೆಯೇ ಈ ರಸ್ತೆಗಳ ದುರಸ್ತಿ ಮಾಡಿದ್ದು, ಆ ಸಂಸ್ಥೆಗೆ ಇದುವರೆಗೆ ಗುತ್ತಿಗೆ ಮೊತ್ತವನ್ನು ಬಿಡುಗಡೆ ಮಾಡಿಲ್ಲ. ವಾಸ್ತವ ಸಂಗತಿ ಹೀಗಿರುವಾಗ ನಡೆದಿರುವ ಹಳೇ ಕಾಮಗಾರಿಗಳಿಗೆ ಹೊಸ ಬಿಲ್‌ ಪಾವತಿಯಾಗುವ ಪ್ರಶ್ನೆಯೇ ಉದ್ಭವಿ­ಸುವುದಿಲ್ಲ’ ಎಂದು ಹೇಳಿದರು.

‘2013ರ ಫೆಬ್ರುವರಿಯಲ್ಲಿ ಆಗ ಶಾಸಕ­ರಾಗಿದ್ದ ದಿನೇಶ್‌ ಗುಂಡೂರಾವ್‌ ಅವರ ಸೂಚನೆ ಮೇರೆಗೆ ವಾರ್ಡ್‌ ನಂ. 94ರ ರಸ್ತೆಗಳ ದುರಸ್ತಿಗೆ ಅನುಮೋದನೆ ನೀಡಿ ಕಾಮಗಾರಿ ಸಂಖ್ಯೆಯನ್ನೂ (ಟಿ2434) ಕೊಡಲಾಗಿತ್ತು. ವಿಧಾನಸಭೆ ಚುನಾವಣೆ ಬಂದಿದ್ದರಿಂದ ಆಗ ಆಯುಕ್ತರಾಗಿದ್ದ ಸಿದ್ದಯ್ಯ ಅವರು ಈ ಕಾಮಗಾರಿಗಳನ್ನು ತಡೆಹಿಡಿದಿದ್ದರು. ಚುನಾವಣೆ ಮುಗಿದ ಬಳಿಕವೂ ಮಳೆಗಾಲ ಬಂದಿದ್ದರಿಂದ ಕೆಲಸ ನಡೆದಿರಲಿಲ್ಲ’ ಎಂದು ವಿವರಿಸಿದರು.

‘ಗಾಂಧಿನಗರ ಕ್ಷೇತ್ರದಿಂದ ಮತ್ತೆ ಚುನಾಯಿತ­ರಾದ ಮೇಲೆ ದಿನೇಶ್‌ ಗುಂಡೂರಾವ್‌ ಅವರು ರಸ್ತೆಗಳ ದುರಸ್ತಿ ಮಾಡುವಂತೆ ಪುನಃ ಪತ್ರ ಬರೆ­ದಿದ್ದರು. ಕಾಮಗಾರಿ ನಡೆಸಲು ನಾನು ಅನುಮತಿ ನೀಡಿದ್ದೆ. ಹಾಳಾಗಿದ್ದ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಾಗಿದ್ದರಿಂದ ಕೆಆರ್‌ಐಡಿಎಲ್‌ಗೆ ವಹಿಸಿ ಕೊಡಲಾಯಿತು’ ಎಂದು ಹೇಳಿದರು.

‘ಒಟ್ಟು ಒಂಬತ್ತು ರಸ್ತೆಗಳ ಪೈಕಿ ಕೆಆರ್‌­ಐಡಿಎಲ್‌ ಎಂಟು ರಸ್ತೆಗಳ ದುರಸ್ತಿ ಮಾಡಿದೆ. ಅದರಲ್ಲಿ ಡಬ್ಲ್ಯು.ಎಚ್‌. ಹನುಮಂತಪ್ಪ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಆ ರಸ್ತೆಯನ್ನು ಮರು ದುರಸ್ತಿ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ರಸ್ತೆ ಗುಣಮಟ್ಟವನ್ನು ಖಾತರಿ ಮಾಡಿಕೊಂಡ ಬಳಿಕ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಭವಿಷ್ಯದಲ್ಲಿ ಇಂತಹ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ನಗರದ ಎಲ್ಲ 18,000 ಕಿ.ಮೀ. ಉದ್ದದ ರಸ್ತೆ ಜಾಲದ ದತ್ತಾಂಶ ಶೇಖರಿಸಲಾಗುತ್ತಿದೆ. ರಸ್ತೆ ಇತಿಹಾಸ ಘಟಕವನ್ನೂ ತೆರೆಯಲಾಗುತ್ತದೆ. ಯಾವುದೇ ಕಾಮಗಾರಿಗೆ ಕೋಡ್‌ ಸಂಖ್ಯೆ ನೀಡುವಾಗ ರಸ್ತೆ ಇತಿಹಾಸ ಘಟಕದ ಪರಿಶೀಲನೆಗೆ ಒಳಪ ಡುವುದನ್ನು ಕಡ್ಡಾಯ ಮಾಡಲಾಗುತ್ತದೆ’ ಎಂದು ಹೇಳಿದರು.

‘ನಿಮ್ಮ ಉಸ್ತುವಾರಿಯಲ್ಲೇ ಕಾರ್ಯ ನಿರ್ವಹಿಸುವ ಟಿವಿಸಿಸಿ ತಪ್ಪು ಮಾಡುತ್ತಿದೆಯೇ’ ಎಂದು ಪ್ರಶ್ನಿಸಿದಾಗ, ‘ಗಾಂಧಿನಗರ ಪ್ರಕರಣ ವೊಂದರಲ್ಲಿ ಮಾತ್ರ ದೋಷಪೂರ್ಣ ವರದಿ ಬಂದಿದೆ’ ಎಂದು ಆಯುಕ್ತರು ಉತ್ತರಿಸಿದರು.

ಪ್ರಮಾದಕ್ಕೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ
‘ಗಾಂಧಿನಗರ ಉಪ­ವಿಭಾ­­ಗದಲ್ಲಿ ರಸ್ತೆಗಳ ದುರಸ್ತಿ ಕಾಮಗಾರಿ­ಗ­ಳನ್ನು ಟೆಂಡರ್‌ ಕರೆ­ಯದೆ ಕೆಆರ್‌ಐಡಿಎಲ್‌ಗೆ ವಹಿಸಿ­ಕೊಡುವಾಗ ಪಶ್ಚಿಮ ವಲಯದ ಕಾರ್ಯ­ನಿರ್ವಾಹಕ ಎಂಜಿ­ನಿ­ಯರ್‌ ನನ್ನ ಅನು­ಮತಿ ಪಡೆಯದೆ ಕರ್ತವ್ಯ­ಲೋಪ ಎಸಗಿದ್ದಾರೆ’ ಎಂದು ಆಯುಕ್ತರು ಮಾಹಿತಿ ನೀಡಿದರು.
‘ಲೆಟರ್‌ ಆಫ್‌ ಇಂಟೆಂಟ್‌ (ಉದ್ದೇಶ ಪತ್ರ) ಕೊಟ್ಟು ಕಾಮಗಾರಿ ನಡೆಸು­ವಂತಿಲ್ಲ. ಈ ಸಂಬಂಧ ಹೈಕೋರ್ಟ್‌ ಆದೇಶವೂ ಇದೆ. ಕೆಆರ್‌ಐಡಿಎಲ್‌ಗೆ ಅಧಿಕಾರಿಗಳು ಕಾರ್ಯದ ಆದೇಶ (ವರ್ಕ್‌ ಆರ್ಡರ್‌) ಕೊಡುವ ಬದಲು ಲೆಟರ್‌ ಆಫ್‌ ಇಂಟೆಂಟ್‌ ಕೊಟ್ಟು ಕೆಲಸ ಮಾಡಿಸಿ ಇನ್ನೊಂದು ಪ್ರಮಾದ ಎಸಗಿದ್ದಾರೆ’ ಎಂದು ತಿಳಿಸಿದರು.

‘ಈ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸೇರಿದಂತೆ ಎಲ್ಲ ಅಧಿ­ಕಾರಿಗಳಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮವನ್ನೂ ಕೈಗೊಳ್ಳ­ಲಾಗುತ್ತದೆ’ ಎಂದು ಹೇಳಿದರು. ‘ಸಚಿವರ ಪರವಾಗಿ ಸ್ಪಷ್ಟನೆ ನೀಡು­ತ್ತಿರುವಿರಾ’ ಎಂಬ ಪ್ರಶ್ನೆಗೆ, ‘ಯಾರ ಪರ ಇಲ್ಲವೆ ವಿರುದ್ಧವೂ ನಾನು ಮಾತನಾಡುತ್ತಿಲ್ಲ. ಬಿಬಿಎಂಪಿ ಕುರಿತ ತಪ್ಪುಗ್ರಹಿಕೆ ಹೋಗ­ಲಾಡಿಸಲು ಈ ಸ್ಪಷ್ಟನೆ ನೀಡಿದ್ದೇನೆ’ ಎಂದು ತಿಳಿಸಿದರು.

ಎಲ್ಲ ಕಡೆಯಿಂದ ಒತ್ತಡ
ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಸಚಿ-­ವರು, ಶಾಸಕರು, ಮೇಯರ್‌, ಉಪ­ಮೇಯರ್‌, ಬಿಬಿ­ಎಂಪಿ ಸದಸ್ಯರು ಸೇರಿದಂತೆ ಎಲ್ಲ ಕಡೆಗ­ಳಿಂ­ದಲೂ ಅಧಿಕಾರಿಗಳ ಮೇಲೆ ಒತ್ತಡ ಬರುತ್ತದೆ. ಹಲವು ಸಂದರ್ಭದಲ್ಲಿ ನಾನೂ ಅವರ ಮೇಲೆ ಒತ್ತಡ ಹಾಕಿದ್ದಿದೆ. ಒತ್ತಡಕ್ಕೆ ಸಿಲುಕುವ ಅಧಿ­ಕಾರಿಗಳು ದುರಸ್ತಿಗೆ ತುರ್ತಾಗಿ ಒಂದು ಮಾರ್ಗ ಕಂಡುಕೊಳ್ಳು­ತ್ತಾರೆ. ಕೆಲ­ವೊಮ್ಮೆ ಅದ­ರಲ್ಲಿ ಲೋಪ–ದೋಷ­­ಗಳು ಆಗು­ತ್ತವೆ. ಕಡತ­ಗಳು ಟೇಬಲ್‌ನಿಂದ ಟೇಬಲ್‌ಗೆ ಹೋಗುವ ವೇಗ­ಕ್ಕಿಂತ ಕಾಮಗಾರಿ ವೇಗ ಹೆಚ್ಚಾಗಿರುತ್ತದೆ.
–ಎಂ.ಲಕ್ಷ್ಮೀನಾರಾಯಣ,
ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT