ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿ ನಿರೂಪಕಿಯ ಜತೆ ಪ್ರೇಮ ಒಪ್ಪಿಕೊಂಡ ದಿಗ್ವಿಜಯ್‌ ಸಿಂಗ್‌

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಟಿವಿ ನಿರೂಪಕಿ ಜತೆ ಸಂಬಂಧ ಇರುವುದನ್ನು ಕಾಂಗ್ರೆಸ್‌ ಮುಖಂಡ, 67 ವರ್ಷದ ದಿಗ್ವಿಜಯ್‌ ಸಿಂಗ್‌ ಬುಧವಾರ ದೃಢೀಕರಿಸಿದ್ದಾರೆ.
ಈ ವಿಷಯ ಸಾಮಾಜಿಕ ಜಾಲ­ತಾಣ­ದಲ್ಲಿ ಹರಿದಾಡಲು ಆರಂಭಿಸಿದ ಬಳಿಕ  ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್‌ ಸಿಂಗ್‌, ತಾವು ಆಕೆಯನ್ನು ಮದುವೆ­ಯಾಗಲು ನಿರ್ಧರಿಸಿರು­ವುದಾಗಿ ಟ್ವಿಟರ್‌ನಲ್ಲಿ ಬರೆದು­ಕೊಂಡಿದ್ದಾರೆ.

‘ಅಮೃತಾ ರಾಯ್‌ ಅವರೊಂದಿಗೆ ಸಂಬಂಧ ಹೊಂದಿರುವುದನ್ನು ಒಪ್ಪಿ­ಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಅಮೃತಾ ಹಾಗೂ ಅವರ ಪತಿ ಈಗಾಗಲೇ ಪರಸ್ಪರ ಸಮ್ಮತಿಯ ವಿಚ್ಛೇದನ ಪ್ರಕರಣ ದಾಖಲಿಸಿದ್ದಾರೆ. ಆ ಪ್ರಕರಣ ಇತ್ಯರ್ಥ ಆದ ನಂತರ ನಮ್ಮ ಸಂಬಂಧ ಅಧಿಕೃತಗೊಳಿಸುತ್ತೇವೆ’ ಎಂದು ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

‘ಆದರೆ, ನಮ್ಮ ಖಾಸಗಿ ಜೀವನದಲ್ಲಿ ಇತರರು ಮೂಗು ತೂರಿಸುವುದನ್ನು ನಾನು ಖಂಡಿಸುತ್ತೇನೆ’ ಎಂದು ಇಬ್ಬರ ಸಂಬಂಧದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದ ನಂತರ ಸಿಂಗ್‌ ಹೇಳಿದ್ದಾರೆ.

ಸಿಂಗ್‌ ಅವರ ಪತ್ನಿ ಆಶಾ, ದೀರ್ಘ ಕಾಲದ ಅಸೌಖ್ಯದಿಂದಾಗಿ ಕಳೆದ ವರ್ಷ ನಿಧನ ಹೊಂದಿದ್ದರು. ಸಿಂಗ್‌ ಅವರಿಗೆ  ಒಬ್ಬ ಮಗ ಮತ್ತು ನಾಲ್ವರು ಪುತ್ರಿಯರು ಇದ್ದಾರೆ.

ಪತಿಯಿಂದ ವಿಚ್ಛೇದನ ಪಡೆದ ನಂತರ ತಾವು ದಿಗ್ವಿಜಯ್‌ ಅವರನ್ನು ವರಿಸುವು­ದಾಗಿ 40ರ ಹರೆಯದ ಅಮೃತಾ ರಾಯ್‌ ಕೂಡ ಟ್ವೀಟ್‌ ಮಾಡಿದ್ದಾರೆ.
‘ನಾನು ಪತಿಯಿಂದ ಬೇರ್ಪಟ್ಟಿದ್ದೇನೆ. ನಾವಿಬ್ಬರೂ ಪರಸ್ಪರ ಸಮ್ಮತಿಯ ವಿಚ್ಛೇದನ ಅರ್ಜಿ ಸಲ್ಲಿಸಿದ್ದೇವೆ. ನಂತರ ದಿಗ್ವಿಜಯ್‌ ಸಿಂಗ್‌ ಅವರನ್ನು ಮದುವೆ­ಯಾಗಲು ನಿರ್ಧರಿಸಿದ್ದೇನೆ’ ಎಂದು ಅಮೃತಾ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ತಮ್ಮ ಇ–ಮೇಲ್‌ ಮತ್ತು ಕಂಪ್ಯೂ­ಟರ್‌ ಹ್ಯಾಕ್‌ ಮಾಡಲಾಗಿದೆ ಎಂದೂ ಅವರು ದೂರಿದ್ದಾರೆ. 

ಪ್ರತಿಕ್ರಿಯಿಸದ ಕಾಂಗ್ರೆಸ್‌:  ದಿಗ್ವಿಜಯ್‌ ಸಿಂಗ್‌ ಹಾಗೂ ಅಮೃತಾ ರಾಯ್‌ ನಡುವಣ ಸಂಬಂಧದ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಕೀಲ್‌ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಆ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ನೈತಿಕತೆ ಪ್ರಶ್ನಿಸಿದ ಬಿಜೆಪಿ:  ಇನ್ನೊಂದೆಡೆ ಬಿಜೆಪಿ ಈ ಪ್ರಕರಣದಲ್ಲಿ ನೈತಿಕತೆ ಮತ್ತು ನ್ಯಾಯಬದ್ಧತೆಯ ಕುರಿತಾಗಿ ಪ್ರಶ್ನೆ­ಗಳನ್ನು ಎತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT