ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿ 9, ನ್ಯೂಸ್‌ 9 ಪ್ರಸಾರ ಮತ್ತೆ ಆರಂಭ

Last Updated 25 ನವೆಂಬರ್ 2014, 19:31 IST
ಅಕ್ಷರ ಗಾತ್ರ

ಬೆಂಗಳೂರು:  ರಾಜ್ಯ ಸರ್ಕಾರದ ಮಧ್ಯಸ್ಥಿಕೆ­ಯಿಂದಾಗಿ ಟಿವಿ 9 ಹಾಗೂ ನ್ಯೂಸ್ 9 ಸುದ್ದಿ ವಾಹಿನಿಗಳ ಪ್ರಸಾರ ಮಂಗಳ­ವಾರ ಸಂಜೆಯಿಂದ ಮತ್ತೆ ಆರಂಭ­ವಾಗಿದೆ. 

ಸೋಮವಾರ ಸಂಜೆ ಆರು ಗಂಟೆಯಿಂದ ಎರಡೂ ಚಾನೆಲ್‌­ಗಳ ಪ್ರಸಾರ ಸ್ಥಗಿತಗೊಳ್ಳುತ್ತಿದ್ದಂತೆ ವಿವಾದ ಉಂಟಾಗಿತ್ತು.
ಬೆಸ್ಕಾಂಗೆ ಸೇರಿದ ವಿದ್ಯುತ್‌ ಕಂಬಗಳ ಮೇಲೆ ಕೇಬಲ್‌ ಎಳೆದಿರುವುದಕ್ಕೆ ಶುಲ್ಕ ವಿಧಿಸುವ ಸಂಬಂಧ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಸಭೆ ನಡೆದ ನಂತರ ಈ ಬೆಳವಣಿಗೆ ನಡೆದಿತ್ತು.

‘ಸಚಿವ ಡಿ.ಕೆ. ಶಿವಕುಮಾರ್‌ ಅವರ ಸೂಚನೆಯ ಮೇರೆಗೆ ಎರಡೂ ಸುದ್ದಿ ವಾಹಿನಿಗಳ ಕೇಬಲ್ ಮೂಲಕ ಪ್ರಸಾರವನ್ನು ಸ್ಧಗಿತಗೊಳಿಸಲಾಗಿದೆ’ ಎಂದು ಟಿವಿ 9 ಕರ್ನಾಟಕ ಪ್ರೈವೇಟ್‌ ಲಿಮಿಟೆಡ್‌ ಆರೋಪಿಸಿತ್ತು.

ಬುಧವಾರ  ಬೆಳಿಗ್ಗೆ ವಿವಿಧ ಚಾನೆಲ್‌ ಮತ್ತು ಪತ್ರಿಕೆಗಳ ಮುಖ್ಯಸ್ಥರು ಹಾಗೂ ಸಂಪಾದಕರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಪರಿಹರಿಸು­ವಂತೆ ಮನವಿ ಮಾಡಿದರು.

ಈ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿ­ಯನ್ನು ಸಿದ್ದರಾಮಯ್ಯ ಅವರು ಸಚಿವರಾದ ಆರ್‌. ರೋಷನ್‌ ಬೇಗ್‌ ಮತ್ತು ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ವಹಿಸಿದರು.

ಕೇಬಲ್‌ ಆಪರೇಟರ್‌ ಸಂಘ­ದ ಪದಾಧಿಕಾರಿ­ಗಳೊಂದಿಗೆ ಮಾತುಕತೆ ನಡೆಸಿದ ಸಚಿವರು, ಸಂಜೆ ವೇಳೆಗೆ ಬಿಕ್ಕಟ್ಟನ್ನು ಪರಿಹರಿಸಲು ಸಫಲ­ರಾದರು. ಸಂಜೆ ಐದು ಗಂಟೆ ನಂತರ ಎರಡೂ ಚಾನೆಲ್‌ಗಳನ್ನು ಪ್ರಸಾರ ಮಾಡಲು ಕೇಬಲ್‌ ಆಪರೇಟರ್‌ಗಳು ಸಮ್ಮತಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್‌ ಬೇಗ್‌, ‘ಈ ಪ್ರಕರಣ­ದಲ್ಲಿ ಸರ್ಕಾರದ ಕೈವಾಡ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಇದು ಚಾನೆಲ್‌ ಮತ್ತು ಕೇಬಲ್‌ ಆಪ­ರೇಟರ್‌­ಗಳ ನಡುವಣ ವಿಚಾರ. ಇದರಲ್ಲಿ ಸರ್ಕಾರದ ಕೈವಾಡ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಕೇಬಲ್‌ ಆಪರೇಟರ್‌ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ಮಾತನಾಡಿ ‘ಚಾನೆಲ್‌ ಹಾಗೂ ನಮ್ಮ ನಡುವೆ ಭಿನ್ನಾಭಿ­ಪ್ರಾಯಗಳಿರುವುದು ನಿಜ. ಇದನ್ನು ಮಾತುಕತೆಯ ಮೂಲಕ ಬಗೆಹರಿಸುತ್ತೇವೆ. ಇದರಲ್ಲಿ ಡಿ.ಕೆ. ಶಿವಕುಮಾರ್‌ ಅವರ ಪಾತ್ರ ಏನೂ ಇಲ್ಲ. ಊಹೆ ಮಾಡಿಕೊಂಡು ಚಾನೆಲ್‌­ನಲ್ಲಿ ಸುಳ್ಳು ಆರೋಪಗಳನ್ನು ಮಾಡ­ಲಾ­ಗು­ತ್ತಿದೆ’ ಎಂದರು.

ಆರೋಪ ಸುಳ್ಳು:  ‘ಟಿವಿ 9 ಪ್ರಸಾರ ಸ್ಥಗಿತಗೊಳಿಸುವಂತೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಈ ಸುದ್ದಿ ವಾಹಿನಿಯ ಪ್ರಸಾರವನ್ನು ಕೇಬಲ್‌ ಆಪರೇಟರ್‌ಗಳು ಸ್ಥಗಿತಗೊಳಿಸಿದ್ದರೆ ಅದಕ್ಕೆ ನಾನಾಗಲಿ, ಸರ್ಕಾರ­ವಾಗಲಿ ಕಾರಣವಲ್ಲ’ ಎಂದು ಡಿ.ಕೆ.ಶಿವಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT