ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀವಿ ಸ್ಥಳಾಕಾರದ ಪಲ್ಲಟ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಹಳೆಯ ವಿನ್ಯಾಸದ ಟೀವಿಗಳಿಗೂ ಈಗಿನ ಟೀವಿಗಳ ಆಕಾರಕ್ಕೂ ಬಹಳ ವ್ಯತ್ಯಾಸವಿದೆ. ಅಂತೆಯೇ ಅವನ್ನು ಇಡಲು ವ್ಯವಸ್ಥೆ ಮಾಡುವಾಗ ಒಳಾಂಗಣ ವಿನ್ಯಾಸದಲ್ಲೂ ಮಾರ್ಪಾಟುಗಳಾಗಿವೆ.

ಮರದಿಂದ ಮಾಡಿದ ದೊಡ್ಡ ಕಪಾಟು. ಅದಕ್ಕೆ ಮೂರೂ ದಿಕ್ಕಿನಿಂದ ಹಲಗೆಯಿಂದ ರಕ್ಷಣೆ. ಎದುರಿಗೆ ಸ್ಲೈಡ್‌ ಅಥವಾ ಮುಚ್ಚುವ, ತೆರೆಯುವ ಬಾಗಿಲು. ಇಷ್ಟು ಸಾಲದೆಂಬಂತೆ ಟೆಲಿವಿಷನ್‌ ಸೆಟ್‌ನ ರಕ್ಷಣೆಗಾಗಿ ಅದರ ಪರದೆಗೆ ಮತ್ತೊಂದು ಗಾಜಿನ ಹೊದಿಕೆ. ಕೇವಲ ದಶಕಗಳಷ್ಟು ಹಿಂದಿನ ಮನೆಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದ ದೃಶ್ಯಗಳಿವು.

ಟೀವಿ ಎಂದರೆ ಅತಿ ಅಮೂಲ್ಯವಾದ ಹಾಗೂ ಅತಿ ಹೆಚ್ಚು ಸುರಕ್ಷೆಯನ್ನು ಬಯಸುವ ಸೂಕ್ಷ್ಮ ಸಾಧನ ಎಂಬ ಭಾವನೆ ಜನರಲ್ಲಿತ್ತು. ಬೆನ್ನನ್ನು ಮಾರುದ್ದ ಹಿಗ್ಗಿಸಿಕೊಂಡ ‘ಡೂಮ್‌’ ಟೀವಿಗಳೆಂದರೆ ಸಾಮಾನ್ಯ ಬಣ್ಣದ ಟೀವಿಗಳ ಜಗತ್ತಿನಿಂದ ನಮಗೆ ವರ್ಣಮಯ ಜಗತ್ತನ್ನು ತೋರಿಸಿದ ಅಚ್ಚರಿ. ಹೀಗಾಗಿ ಅವುಗಳಿಗೆ ವಿಶೇಷ ಆರೈಕೆ.

ಟೀವಿ ಖರೀದಿಸುವ ಮುನ್ನವೇ ಅದನ್ನು ಇರಿಸುವ ಸ್ಥಳ ಮತ್ತು ಮುಖ್ಯವಾಗಿ ಅದನ್ನು ಸ್ಥಾಪಿಸಲು ಅದಕ್ಕೆಂದೇ ತಯಾರಾದ ಟೀಪಾಯಿ ಅಥವಾ ಮೇಜು ಬೇಕಲ್ಲವೇ? ಟೀವಿಗೆ ಬಿಸಿಲು, ಮಳೆ, ಗಾಳಿಯ ಬಾಧೆ ತಟ್ಟಬಾರದು ಎಂಬಂತೆ ಅದನ್ನು ಬಂದೋಬಸ್ತ್‌ ಮಾಡುವಂತಹ ಬಹೂಪಯೋಗಿ ‘ಪೆಟ್ಟಿಗೆ’ಗಳನ್ನು ಬಳಸಲಾಗುತ್ತಿತ್ತು. ಅಷ್ಟೂ ಸಾಲದೆಂಬಂತೆ ಅದರ ಮೇಲೆ ದೂಳು ಕೂರದಂತೆ ಬಟ್ಟೆಯ ಹೊದಿಕೆ. ಇನ್ನು ಅನೇಕರು ಮನೆ ಕಟ್ಟಿಸುವಾಗಲೇ ಟೀವಿಗಾಗಿ ಗೋಡೆಯಲ್ಲಿ ಗೂಡು ನಿರ್ಮಿಸುತ್ತಿದ್ದರು.

ಇದಲ್ಲದೆ, ಟೀವಿ ಇರಿಸುವ ಜಾಗ ಎಂದಾಗ ನಮ್ಮ ಮನಸಿಗೆ ಬರುವ ಚಿತ್ರಣವೆಂದರೆ, ಮರದ ಅಥವಾ ಕಬ್ಬಿಣದ ಮೇಜು. ಅದರಲ್ಲಿ ಪುಸ್ತಕ, ಪತ್ರಿಕೆ, ಅಲಂಕಾರಿಕ ವಸ್ತುಗಳನ್ನು ಇರಿಸುವ ಕಪಾಟು ಮತ್ತು ಎಂದಿನಂತೆ ಶಾಲು ಹೊದ್ದುಕೊಂಡ ಟೀವಿ ಹಾಗೂ ಅದರ ಮೇಲೊಂದು ಹೂದಾನಿ. ಟೀವಿ ಮನರಂಜನೆ ತಣಿಸುವ ಸಾಧನವಷ್ಟೇ ಅಲ್ಲ; ಅದು ಪ್ರತಿಷ್ಠೆಯ ಸಂಕೇತವೂ ಆಗಿತ್ತು.

ಅದು ಆಧುನಿಕ ಯುಗದಲ್ಲಿ ಡಯೆಟ್‌, ಜಿಮ್‌ನ ಮೊರೆಹೊಕ್ಕು ‘ಫಿಟ್‌’ ಮತ್ತು ‘ಸ್ಲಿಮ್‌’ ಎನಿಸಿಕೊಳ್ಳುವ ಮನುಷ್ಯನಂತೆ ತನ್ನ ಉಬ್ಬಿದ ಬೆನ್ನನ್ನು ಕರಗಿಸಿಕೊಂಡು, ಎದುರು ಸಣ್ಣಗೆ ಮುಂದೆ ಬಂದಿದ್ದ ಹೊಟ್ಟೆಯನ್ನು ‘ಸಿಕ್ಸ್‌’ ಪ್ಯಾಕ್‌ ಮಾಡಿಕೊಂಡು, ಪಕ್ಕೆಲುಬುಗಳನ್ನು ಸಪಾಟಾಗಿಸಿಕೊಂಡು ನಮ್ಮೆದುರು ನಿಂತಿದೆ.

ಬದಲಾದ ಟೀವಿ ಜಗತ್ತು...
‘ಡೂಮ್‌’ ಟೀವಿಗಳು ಗುಜರಿ ಸೇರುತ್ತಿರುವ ಮತ್ತು ಬೆಡ್‌ರೂಂನಲ್ಲಿ ಒಂದಿರಲಿ ಎಂಬ ಆಸೆಯೊಂದಿಗೆ ಇನ್ನೂ ಮನೆಯಲ್ಲಿಯೇ ಅಸ್ತಿತ್ವ ಉಳಿಸಿಕೊಂಡಿರುವ, ಶೀಘ್ರದಲ್ಲಿಯೇ ಮರೆಯಾಗಲಿರುವ ನಮ್ಮ ಬದುಕಿನ ಮರೆಯಲಾಗದ ಸಾಧನಗಳಾಗಲಿವೆ. ಮೊಬೈಲ್‌ ನೋಟ್‌ಬುಕ್‌ ಗಾತ್ರದ ಪರದೆಯಿಂದ ಅದರ ಸೌಲಭ್ಯಗಳು, ಗಾತ್ರ ಮತ್ತು ಆಕಾರ ಕಾಲಕಾಲಕ್ಕೆ ಬದಲಾಗುತ್ತಾ ಬಂದವು.

ಭಾರತದಲ್ಲಿ ಬಿಪಿಎಲ್‌ ಕಂಪೆನಿಯ ಟೀವಿಗಳು ಒಂದು ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿದ್ದವು. ಬಿಪಿಎಲ್‌ ಟೀವಿಗಳೆಂದರೆ ‘ಕಪ್ಪು–ಬಿಳುಪು’ ಟೀವಿಗಳು ಎಂದೇ ಭಾವಿಸುತ್ತಿದ್ದರು.

‘ಕಲರಾ? ಬಿಪಿಎಲ್ಲಾ?’ ಎಂದು ಕೇಳುವ ದಿನಗಳಿದ್ದವು. ಮುಂಭಾಗದ ಪರದೆ ಸಪಾಟಾಗಿರುವ ಟೀವಿಗಳು (ಫ್ಲಾಟ್‌) ಮನೆಗಳನ್ನು ತಲುಪಿ ಹೆಚ್ಚು ಸಮಯವಾಗಿಲ್ಲ. ಹೀಗೆ ವಿಸ್ಮಯಕಾರಿಯಾಗಿ ಬೆಳೆದ ಟೆಲಿವಿಷನ್‌ ಉದ್ಯಮದಲ್ಲಿನ ಒನಿಡಾ, ಬಿಪಿಎಲ್‌ ಫಿಲಿಪ್ಸ್‌, ಸ್ಯಾಮ್‌ಸಂಗ್‌ ಮುಂತಾದ ಕಂಪೆನಿಗಳ ಡೂಮ್‌ ಟೀವಿಗಳು ಇತಿಹಾಸದ ಪುಟ ಸೇರಲು ಹೆಚ್ಚು ಸಮಯ ಬೇಕಾಗಲಿಲ್ಲ.

ಎಲ್‌ಸಿಡಿ/ಎಲ್‌ಇಡಿ ಟೆಲಿವಿಷನ್‌ಗಳು ಭಾರತಕ್ಕೆ ಕಾಲಿರಿಸಿದ್ದು 2007ರಲ್ಲಿ. ಈಗ ಅಲ್ಟ್ರಾ ಹೈ ಡೆಫಿನಿಷನ್‌ (ಎಚ್‌ಡಿ) ಸೆಟ್‌ಗಳು ಜನಪ್ರಿಯವಾಗುತ್ತಿವೆ. ಅದರ ಬೆನ್ನಲ್ಲೇ ಆರ್ಗ್ಯಾನಿಕ್‌ ಲೈಟ್‌ ಎಮಿಟಿಂಗ್‌ ಡಿಯೋಡ್ಸ್ (ಒಎಲ್‌ಇಡಿ) ಟೀವಿಗಳು, ಬಿಲ್ಲಿನಂತೆ ಬಾಗಿಕೊಂಡ ಕರ್ವ್ಡ್‌ ಟೀವಿಗಳೂ ಬಂದಿವೆ. ನೂರಾರು ಸೌಲಭ್ಯಗಳ, ಬಣ್ಣ, ಶಬ್ದಗಳಿಂದ ವಿಭಿನ್ನ ಅನುಭವ ನೀಡುವ, ಪುಟ್ಟ ಗಾತ್ರದಿಂದ ಸಿನಿಮಾ ಪರದೆಯಷ್ಟು ದೊಡ್ಡ ಗಾತ್ರಗಳ ಟೀವಿಗಳು ಈಗ ಲಭ್ಯ.
ಮನೆಯೊಳಗಣ ಟೀವಿ–ಠೀವಿ

ಗೂಡೊಳಗೆ, ಹೊದಿಕೆಯ ಮರೆಯಲ್ಲಿ ಬೆಚ್ಚಗೆ ಅವಿತುಕೊಳ್ಳುತ್ತಿದ್ದ ಟೀವಿಗಳೀಗ ಬಂಧಮುಕ್ತಗೊಳ್ಳುತ್ತಿವೆ. ಅವುಗಳಿಗೆ ಸಿಗುತ್ತಿದ್ದ ಮರ್ಯಾದೆಯಲ್ಲಿ ಅಂತಹ ವ್ಯತ್ಯಾಸವಾಗದಿದ್ದರೂ ಅವುಗಳ ಸ್ವರೂಪ ಬದಲಾದಂತೆ ಆವಾಸ ಸ್ಥಾನವೂ ಬದಲಾಗಿದೆ. ಹಾಗೆಯೇ ಅವು ಬೆತ್ತಲಾಗುತ್ತಿವೆ. ಇದು ಟೀವಿಗಳನ್ನು ಗೋಡೆಗೆ ಅಳವಡಿಸುವ ಕಾಲ. ಟೀವಿಯೂ ಗೋಡೆಯ ಅಂದವನ್ನು ಹೆಚ್ಚಿಸಲೆಂದೇ ಜೋಡಿಸಿರುವ ಆಲಂಕಾರಿಕ ವಸ್ತುವಿನಂತೆ ಭಾಸವಾಗುತ್ತದೆ.

ಎಲ್‌ಇಡಿ, ಎಲ್‌ಸಿಡಿಯ ಬೃಹತ್‌ ಪರದೆಯ ಟೀವಿಗಳು ತೀರಾ ಕಡಿಮೆ ಬೆಲೆಗೆ ದೊರಕುತ್ತಿರುವಾಗ ‘ಮೂರ್ಖರ ಪೆಟ್ಟಿಗೆ’ಯ ಸೆಳೆತಕ್ಕೆ ಒಳಗಾಗದವರಿರುತ್ತಾರೆಯೇ? ನೀಳ ಮತ್ತು ತೆಳು ಕಾಯದ ಟೀವಿಗಾಗಿ ನಾವು ಮನೆಯೊಳಗೆ ಹೆಚ್ಚು ಜಾಗ ವ್ಯರ್ಥಮಾಡುವ ಅಗತ್ಯವಿಲ್ಲ. ಗೋಡೆಗೆ ಅಂಟಿಸುವ ಬಯಕೆ ಇಲ್ಲದಿದ್ದರೆ ಪುಟ್ಟದೊಂದು ಟೇಬಲ್‌ ಸಾಕು. ಮನೆ ಕಟ್ಟಿಸುವಾಗ ಟೀವಿ ಇರಿಸುವ ಸ್ಥಳವೂ ಚರ್ಚೆಗೆ ಒಳಗಾಗುತ್ತದೆ.

ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಟೀವಿಗಳಿಗೆ ಒಂದು ಮೂಲೆಯಲ್ಲಿ ಜಾಗ ಮೀಸಲಿರುತ್ತದೆ. ಆಧುನಿಕ ಮನೆಗಳು ಮೂಲೆಯಲ್ಲಿ ಅದನ್ನು ಪ್ರತಿಷ್ಠಾಪಿಸಲು ಒಪ್ಪುವುದಿಲ್ಲ. ಅದೇನಿದ್ದರೂ ಗೋಡೆಯ ಮಧ್ಯಭಾಗದಲ್ಲಿ ಸ್ಥಾಪಿತವಾಗಬೇಕು.

ಐಷಾರಾಮಿ ಮನೆಗಳಲ್ಲಿ ದುಬಾರಿ ವೆಚ್ಚದ ಹೋಂ ಥಿಯೇಟರ್‌ಗಳನ್ನು ಅಳವಡಿಸುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ಟೀವಿ ವೀಕ್ಷಣೆಗೇ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡುತ್ತಾರೆ. ಮೇಲ್ಮಧ್ಯಮ, ಮಧ್ಯಮ ವರ್ಗದ ಮನೆಗಳಲ್ಲಿ ಹಾಲ್‌ನಿಂದ ಟೀವಿ ಬೇರೆಡೆ ಹೋಗುವುದಿಲ್ಲ.

ಆದರೆ, ಟೀವಿಯನ್ನು ಸುಮ್ಮನೆ ಇರಿಸಲಾಗುವುದಿಲ್ಲ. ಅದನ್ನು ಅಳವಡಿಸುವ ಜಾಗ ಎಲ್ಲ ರೀತಿಯಿಂದಲೂ ಪ್ರಶಸ್ತವಾಗಿರಬೇಕು. ಸೂರ್ಯನ ಬಿಸಿಲು ಬೀಳುವಂತಿರಬಾರದು. ಓಡಾಡುವ ಜಾಗದಲ್ಲಿರಿಸಬಾರದು. ತೀರಾ ತೆರೆದ ಜಾಗವಾದರೆ ಶಬ್ದ ಗ್ರಹಿಕೆಗೆ ತೊಂದರೆಯಾಗುತ್ತದೆ. ಕಿಟಕಿ, ಬಾಗಿಲ ಸಮೀಪ ಇರಿಸಿದರೆ ಹಾಳಾಗುವ ಸಾಧ್ಯತೆಯೂ ಇರುತ್ತದೆ.

ಈಗ ಟೀವಿಗಳಿಗೆ ಪ್ರತ್ಯೇಕ ಟೇಬಲ್‌ ಅಥವಾ ಗೂಡು ಮಾಡಿಸುವುದಿಲ್ಲ. ಈ ಪದ್ಧತಿಯೇ ವಿಶಿಷ್ಟ. ಟೀವಿಯನ್ನಿಡುವ ಜಾಗವನ್ನು ಆಲಂಕಾರಿಕ ವಸ್ತುಗಳನ್ನು ಇರಿಸುವಂತೆ ತೆರೆದ ಷೋಕೇಸ್‌ಗಳನ್ನು ಮಾಡಿಸುವ ಟ್ರೆಂಡ್‌ ಹುಟ್ಟಿಕೊಂಡಿದೆ. ಆದರೆ ಬಹುತೇಕರು ಅವುಗಳನ್ನು ಖಾಲಿ ಬಿಡುತ್ತಾರೆ. ಹೆಚ್ಚೆಂದರೆ ಒಂದೆರಡು ಫೋಟೊ ಅಥವಾ ಚಿಕ್ಕದೊಂದು ಹೂದಾನಿಗಷ್ಟೇ ಆ ಷೋಕೇಸ್‌ ಮೀಸಲು.

ಟೀವಿಯನ್ನು ಅಳವಡಿಸುವ ಗೋಡೆಯೂ ವಿನ್ಯಾಸಮಯವಾಗಿರಬೇಕು ಎಂಬ ಬಯಕೆ ಹಲವರದು. ಇದಕ್ಕಾಗಿ ಅವರು ಬಳಸುವುದು ಮರದ ಸಾಮಗ್ರಿಗಳನ್ನು. ಅದೇ ರೀತಿಯ ಅಥವಾ ಬೇರೆ ಬಣ್ಣದ ಮರದ ಸಾಮಗ್ರಿಗಳು ಸುತ್ತಲಿನ ಷೋಕೇಸ್‌ ಗೂಡುಗಳಿಗೆ ಬಳಕೆಯಾಗುತ್ತವೆ. ಹಳೆಯ ಮನೆಗಳಲ್ಲಿ ಕೇಬಲ್, ಸೆಟ್‌ಟಾಪ್‌ ಬಾಕ್ಸ್‌ ಮತ್ತು ಪವರ್‌ ಪೂರೈಕೆ ವೈರ್‌ಗಳು ಅಡ್ಡಾದಿಡ್ಡಿ ಹರಡಿಕೊಂಡಿರುತ್ತಿದ್ದವು.

ಇಲ್ಲಿ ವೈರ್‌ಗಳನ್ನು ಕಣ್ಣಿಗೇ ಕಾಣದಂತೆ ಮಾಡುವ ವ್ಯವಸ್ಥೆಯಿದೆ. ನವತಂತ್ರಜ್ಞಾನದ ಟೀವಿಗಳು ವಿದ್ಯುತ್‌ ಪೂರೈಕೆಯನ್ನು ನಿಯಂತ್ರಿಸುವ ಸೌಲಭ್ಯ ಹೊಂದಿರುತ್ತವೆ. ಹೀಗಾಗಿ ಇಲ್ಲಿ ಸ್ಟೆಬಲೈಜರ್‌ನ ಅಗತ್ಯವೇ ಇರುವುದಿಲ್ಲ.

ಇನ್ನು ಸೆಟ್‌ಟಾಪ್‌ ಬಾಕ್‌ ಇರಿಸಲು ಚಿಕ್ಕದೊಂದು ಸ್ಟ್ಯಾಂಡ್‌ ಸಾಕು. ಅದಕ್ಕೆ ಸಂಪರ್ಕ ಹೊಂದುವ ಕೇಬಲ್‌ ಮತ್ತು ಆಡಿಯೊ ವಿಡಿಯೊ ವೈರ್‌ಗಳನ್ನು ಮರದ ಚೌಕಟ್ಟಿನ ಹಿಂಬದಿಯಿಂದಲೇ ಜೋಡಿಸಬಹುದು. ಹೀಗಾಗಿ ಟೀವಿ ಮತ್ತದರ ಸುತ್ತಲಿನ ಜಾಗ ಅಂದವಾಗಿ ಕಾಣಿಸುತ್ತದೆ.

ತಿಳಿ ಬಣ್ಣವಿರಲಿ
ಗಟ್ಟಿಯಾದ ಪ್ಲೈವುಡ್‌ನ ಚೌಕಟ್ಟು ಸಾಮಾನ್ಯವಾಗಿ ಜನಪ್ರಿಯವಾಗಿರುವ ಮಾದರಿ. ಇಲ್ಲಿ ಗೋಡೆಗೆ ಬಳಸುವ ಬಣ್ಣವೂ ಮುಖ್ಯ. ಗಾಢವಾದ ಬಣ್ಣ ಇಲ್ಲಿನ ಗೋಡೆಗೆ ಒಳಿತಲ್ಲ ಎನ್ನುವುದು ಪರಿಣತರ ಅಭಿಪ್ರಾಯ. ಟೀವಿ ಇರಿಸುವ ಗೋಡೆಯ ಬಣ್ಣ ಯಾವಾಗಲೂ ತಿಳಿಯಾಗಿರಬೇಕು.

ಗಾಢವರ್ಣ ಕಣ್ಣಿಗೆ ರಾಚುವುದರಿಂದ ಟೀವಿ ವೀಕ್ಷಣೆಗೆ ಹಿತವೆನಿಸುವುದಿಲ್ಲ. ಹಾಗೆಯೇ ಟೀವಿಯನ್ನು ಹೆಚ್ಚು ಎತ್ತರದಲ್ಲಿ ಅಳವಡಿಸುವುದೂ ಸರಿಯಲ್ಲ. ಅದು ನಮ್ಮ ಕಣ್ಣಿನ ಅಳತೆಗೆ ನೇರವಾಗಿರಬೇಕು.

ಕೆಲವರು ಟೀವಿಯ ಮೇಲ್ಭಾಗ ಹಾಗೂ ಕೆಳಭಾಗದಿಂದ ಬಣ್ಣಬಣ್ಣದ ಬೆಳಕು ಹರಿಸುವ ದೀಪಗಳನ್ನು ಬಳಸುತ್ತಾರೆ. ಇದು ಅಂದವನ್ನು ಇಮ್ಮಡಿಗೊಳಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಟೀವಿ ವೀಕ್ಷಣೆಗೆ ಬಣ್ಣದ ಬೆಳಕು ಅಡ್ಡಿಮಾಡುತ್ತದೆ. ಮೇಲ್ಭಾಗದಿಂದ ಮಂದವಾದ ಬಿಳಿ ಬೆಳಕು ಇದ್ದರೆ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಟೀವಿ ಅಡುಗೆ ಮನೆ, ಪೂಜಾ ಕೋಣೆ ಮತ್ತು ಸ್ಟಡಿ ರೂಂಗಳಿಂದ ದೂರವಿದ್ದರೆ ಒಳ್ಳೆಯದು. ಹಾಲ್‌ನಲ್ಲಿಯೂ ಅದು ಬಾಗಿಲ ಸಮೀಪ ಅಥವಾ ಸಂಪೂರ್ಣ ತೆರೆದುಕೊಂಡಂತ ಜಾಗದಲ್ಲಿ ಇರುವುದು ಸೂಕ್ತವಲ್ಲ. ಇದರಿಂದ ಟೀವಿಯ ಸದ್ದು ಸರಿಯಾಗಿ ಕೇಳದಿರಬಹುದು.

ಟೀವಿ ಇರಿಸುವ ಜಾಗವನ್ನು ಬೇರೆ ಉಪಯೋಗಗಳಿಗೆ ಬಳಸುವುದು ರೂಢಿಯಿಂದ ಬಂದಿರುವಂಥದ್ದು. ಅಂದವನ್ನು ಕೆಡಿಸದಂತಹ ಸ್ಲೈಡಿಂಗ್‌ ಬಾಗಿಲುಳ್ಳ ಬಾಕ್ಸ್‌ಗಳನ್ನು ನಿರ್ಮಿಸಿ ಅದರಲ್ಲಿ ಪುಸ್ತಕಗಳನ್ನು ಮತ್ತು ಅತಿ ಅಗತ್ಯವೆನಿಸುವ ವಸ್ತುಗಳನ್ನು ಇರಿಸುತ್ತಾರೆ. ತೆರೆದ ಶೆಲ್ಫ್‌ ಅಂದವಾಗಿ ಕಾಣಲಾರದು ಎಂದು ಪರಿಣತರು ಹೇಳುತ್ತಾರೆ.

ಲಿವಿಂಗ್‌ ರೂಂ, ಅಡುಗೆ ಮನೆಗಳಿಗೂ ಟೀವಿ ಪ್ರವೇಶಿಸಿವೆ. ಕಿರು ಪರದೆಯ ಟೀವಿಯನ್ನು ಅಡುಗೆ ಮನೆಯಲ್ಲಿ ಇಡಲು ಚಿಕ್ಕ ಶೆಲ್ಫ್‌ ಮಾಡಿಕೊಳ್ಳುತ್ತಾರೆ. ಇವು ಅಡುಗೆ ಮಾಡುತ್ತಲೇ ಟೀವಿ ನೋಡುವ ಸರಳ ವ್ಯವಸ್ಥೆ. ಇದರಿಂದ ಅಡುಗೆ ಮನೆಯ ವಸ್ತುಗಳನ್ನು ಇರುವ ಶೆಲ್ಫ್‌ಗಳಿಗೆ ಅಡ್ಡಿಪಡಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT