ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂರ್ನಿಯಿಂದ ಹೊರಬಿದ್ದ ಫೆಡರರ್‌

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ; ಸೆಮಿಫೈನಲ್‌ಗೆ ಇವಾನೊವಿಚ್‌, ಸಫರೋವಾ ಜಯದ ಓಟ
Last Updated 2 ಜೂನ್ 2015, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌ (ರಾಯಿಟರ್ಸ್‌/ ಎಎಫ್‌ಪಿ): ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರ ಆಸೆ  ಕೊನೆಗೂ ಈಡೇರಲಿಲ್ಲ. ಕ್ವಾರ್ಟರ್ ಫೈನಲ್‌ ಹೋರಾಟದಲ್ಲಿ ತಮ್ಮದೇ ದೇಶದ ಸ್ಟಾನಿಸ್ಲಾಸ್‌ ವಾವ್ರಿಂಕ ಎದುರು ಸೋಲು ಕಂಡ ಅವರು ಟೂರ್ನಿಯಿಂದ ನಿರ್ಗಮಿಸಿದರು.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹೋರಾಟದಲ್ಲಿ ವಾವ್ರಿಂಕ 6–4, 6–3, 7–6ರಲ್ಲಿ ತಮ್ಮ ಸಹ ಆಟಗಾರನ ಎದುರು ವಿಜಯದ ನಗೆ ಚೆಲ್ಲಿದರು. ಈ ಮೂಲಕ ಫೆಡರರ್‌ ಎದುರು ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಮೊದಲ ಗೆಲುವಿನ ಸವಿಕಂಡರು.
ಡೇವಿಸ್‌ ಕಪ್‌ನಲ್ಲಿ ತಮ್ಮ ರಾಷ್ಟ್ರದ ಪರ ಡಬಲ್ಸ್‌ ವಿಭಾಗದಲ್ಲಿ ಉಭಯ ಆಟಗಾರರು ಜತೆಯಾಗಿ ಆಡುವುದ ರಿಂದ ಈ ಪಂದ್ಯ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಫೆಡರರ್‌ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮೊದಲ ಸೆಟ್‌ನ ಮೂರನೇ ಗೇಮ್‌ ಮುರಿದ ವಾವ್ರಿಂಕ ಸುಲಭವಾಗಿ ಮುನ್ನಡೆ ಗಳಿಸಿದರು. ಆ ಬಳಿಕವೂ ಅವರು ಆಕ್ರಮಣಕಾರಿ ಆಟ ಮುಂದುವರಿಸುವಲ್ಲಿ ಸಫಲರಾದರು. ಈ ಮೂಲಕ ಮೊದಲ ಸೆಟ್‌ ಗೆದ್ದು ಮುನ್ನಡೆ ಗಳಿಸಿದರು.

ಎರಡನೇ ಸೆಟ್‌ನಲ್ಲಿ ಅನುಭವಿ ಫೆಡರರ್‌ ತಿರುಗೇಟು ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ವಾವ್ರಿಂಕ ಇದಕ್ಕೆ ಅವಕಾಶ ನೀಡಲಿಲ್ಲ.  ಪಂದ್ಯದ ವೇಳೆ ಗಾಳಿಯ ಅಬ್ಬರ ಜೋರಾಗಿದ್ದ ರಿಂದ ಫೆಡರರ್‌ಗೆ ಎಂದಿನ ಲಯದಲ್ಲಿ ಆಡಲು ಆಗಲಿಲ್ಲ. ಇದರ ಪೂರ್ಣ ಲಾಭ ಎತ್ತಿಕೊಂಡ ವಾವ್ರಿಂಕ ಎರಡನೇ ಸೆಟ್‌ ಗೆದ್ದು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದರು.

ಮೂರನೇ ಸೆಟ್‌ನ ವೇಳೆ ಫೆಡರರ್‌ ಲಯ ಕಂಡುಕೊಂಡರು. ಹೀಗಾಗಿ ಉಭಯ ಆಟಗಾರರ ನಡುವೆ ಸೆಟ್‌ನ ಕೊನೆಯವರೆಗೂ  ತುರುಸಿನ ಪೈಪೋಟಿ ಕಂಡುಬಂತು. ಆದರೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ವಾವ್ರಿಂಕ ಬಲಿಷ್ಠ ಸ್ಮ್ಯಾಷ್‌ ಮತ್ತು ರಿಟರ್ನ್‌ಗಳ ಮೂಲ ಎದುರಾಳಿಯನ್ನು ಕಂಗೆಡಿಸಿ ಗೆಲುವಿನ ತೋರಣ ಕಟ್ಟಿದರು.

ಸೆಮಿಗೆ ಇವಾನೊವಿಚ್‌: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸರ್ಬಿಯಾದ ಅನಾ ಇವಾನೊವಿಚ್‌ ಸೆಮಿಫೈನಲ್‌ ಪ್ರವೇಶಿಸಿದರು.
ಕ್ವಾರ್ಟರ್ ಫೈನಲ್‌ ಹೋರಾಟದಲ್ಲಿ ಅಮೋಘ ಆಟ ಆಡಿದ ಇವಾನೊವಿಚ್ 6–3, 6–2ರ ನೇರ ಸೆಟ್‌ಗಳಿಂದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಎದುರು ಜಯಭೇರಿ ಮೊಳಗಿಸಿದರು.

ಈ ಟೂರ್ನಿಗೂ ಮುನ್ನ ನಡೆದಿದ್ದ ಸ್ಟಟ್‌ಗರ್ಟ್‌ ಮತ್ತು ಮ್ಯಾಡ್ರಿಡ್‌ ಓಪನ್‌ ಟೂರ್ನಿಗಳಲ್ಲಿ ನಿರೀಕ್ಷಿತ ಆಟ ಆಡದೆ ನಿರಾಸೆ ಅನುಭವಿಸಿದ್ದ ಇವಾನೊವಿಚ್‌ ಈ ಪಂದ್ಯದ ಎರಡೂ ಸೆಟ್‌ಗಳಲ್ಲಿ ಪೂರ್ಣ ಪ್ರಭುತ್ವ ಸಾಧಿಸಿ ನಿರಾಯಾಸವಾಗಿ ಗೆಲುವು ಕಂಡರು.

ಸೆಮಿಫೈನಲ್‌ನಲ್ಲಿ ಇವಾನೊವಿಚ್‌ ಜೆಕ್‌ ಗಣರಾಜ್ಯದ ಲೂಸಿ ಸಫರೋವಾ ಅವರ ಸವಾಲು ಎದುರಿಸಲಿದ್ದಾರೆ.

ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಮರಿಯಾ ಶರಪೋವಾಗೆ ಆಘಾತ ನೀಡಿದ್ದ ಸಫರೋವಾ ಕ್ವಾರ್ಟರ್ ಫೈನಲ್‌ನಲ್ಲಿ 7–6, 6–3ರಲ್ಲಿ ಗಾರ್ಬೈನ್‌ ಮುಗುರುಜ ಅವರನ್ನು ಮಣಿಸಿದರು. ಫ್ರೆಂಚ್‌ ಓಪನ್‌ನಲ್ಲಿ ಸಫರೋವ ನಾಲ್ಕರ ಘಟ್ಟ ಪ್ರವೇಶಿಸಿದ್ದು ಇದೇ ಮೊದಲು.

ನಾಲ್ಕರ ಘಟ್ಟಕ್ಕೆ ಲೂಸಿ ಜೋಡಿ: ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್ ಫೈನಲ್‌ ಹೋರಾಟಗಳಲ್ಲಿ ಲೂಸಿ ಹ್ರಾಡೆಕಾ ಮತ್ತು ಮಾರ್ಷಿನ್‌ ಮಟಕೌಸ್ಕಿ 7–6, 3–6, 10–8ರಲ್ಲಿ ಟೈಮಿ ಬಾಬೊಸ್‌ ಮತ್ತು ಅಲೆಕ್ಸಾಂಡರ್‌ ಪೇಯ ಎದುರೂ, ಬೆಥನಿ ಮಟೆಕ್‌ ಹಾಗೂ ಮೈಕ್‌ ಬ್ರಯಾನ್‌ 6–0, 7–6ರಲ್ಲಿ ಅನಸ್ತೇಷಿಯ ರೊಡಿನೋವ ಮತ್ತು ಐಸಾಮ್‌ ಖುರೇಷಿ ವಿರುದ್ಧವೂ ಗೆದ್ದು ಸೆಮಿಫೈನಲ್‌ ತಲುಪಿದರು.

ಕ್ವಾರ್ಟರ್‌ಗೆ ಪ್ರಾಂಜಲ ಜೋಡಿ: ಭಾರತದ ಪ್ರಾಂಜಲ ಯಡ್ಲಪಳ್ಳಿ ಮತ್ತು ಚೀನಾದ ವುಶುವಾಂಗ್‌ ಜೆಂಗ್‌ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಜೂನಿಯರ್‌ ಬಾಲಕಿಯರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ‍ಪ್ರೀ ಕ್ವಾರ್ಟರ್ ಫೈನಲ್‌ ಹೋರಾಟದಲ್ಲಿ ಪ್ರಾಂಜಲ ಮತ್ತು ಜೆಂಗ್‌ 7–5, 6–4ರಲ್ಲಿ ಅನಸ್ತೇಷಿಯಾ ಗಸನೋವಾ ಮತ್ತು ಮಯಿಯಾ ಲುಮ್ಸ್‌ಡೆನ್‌ ಎದುರು ವಿಜಯಿಯಾದರು.

ಬಾಲಕರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಸುಮಿತ್‌ ನಗಾಲ್‌ ಎರಡನೇ ಸುತ್ತಿನಲ್ಲಿ 6–2, 3–6, 4–6ರಲ್ಲಿ ಕೊರಿಯಾದ ಯುನ್‌ಸೆಯೊಂಗ್‌ ಚುಂಗ್‌ ಎದುರು ಸೋತು ಟೂರ್ನಿಯಿಂದ ನಿರ್ಗಮಿಸಿದರು.

ಅಭಿಮಾನಿಗೆ ಗಾಯ
ಗಾಳಿಯ ರಭಸಕ್ಕೆ ಅಂಗಳದ ವಿಡಿಯೋ ಪರದೆ ಮೇಲೆ ಹಾಕಲಾಗಿದ್ದ ದೊಡ್ಡ ತಗಡಿನ ಶೀಟ್‌ವೊಂದು ಕಳಚಿ ಅಭಿಮಾನಿಗಳ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಅಭಿಮಾನಿಯೊಬ್ಬರಿಗೆ ಗಾಯವಾಗಿದೆ.

ಜಪಾನ್‌ನ ಕೀ ನಿಶಿಕೋರಿ ಮತ್ತು ಫ್ರಾನ್ಸ್‌ನ ಜೊ ವಿಲ್ಫ್ರೆಡ್‌ ಸೊಂಗಾ ಅವರ ನಡುವಣ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.

ಹೀಗಾಗಿ ಪಂದ್ಯವನ್ನು ಅರ್ಧಗಂಟೆಯ ಕಾಲ ನಿಲ್ಲಿಸಲಾಯಿತು.  ಅಭಿಮಾನಿಗಳನ್ನು ಅಲ್ಲಿಂದ  ಬೇರೆಡೆಗೆ ಕಳುಹಿಸಿದ ನಂತರ ಆಟ ಮತ್ತೆ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT