ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್‌ ಟೆನಿಸ್‌: ವೃತ್ತಿಪರತೆಯ ಅರಿವು ಅಗತ್ಯ

Last Updated 24 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರ ಬೆಳಗಾವಿ ಕ್ಲಬ್‌ನ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಟೇಬಲ್‌ ಟೆನಿಸ್‌ ಸಾಕಷ್ಟು ಸುದ್ದಿ ಮಾಡಿತು.  ಬೆಂಗಳೂರು, ಮೈಸೂರಿನ ಕ್ರೀಡಾಪಟುಗಳ ಕೌಶಲಗಳನ್ನು ಕಂಡ ಟಿಟಿ ಪ್ರಿಯರಲ್ಲಿ ಉತ್ತರ ಕರ್ನಾಟಕ ಭಾಗದ ಆಟಗಾರರನ್ನೂ ಸಜ್ಜುಗೊಳಿಸಬೇಕು ಎಂಬ ಕನಸು ಚಿಗುರಿತು.

ಬೆಳಗಾವಿ, ಧಾರವಾಡ, ವಿಜಾಪುರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಪ್ರದೇಶದ ಮಕ್ಕಳಿಗೆ ಅಭ್ಯಾಸ ನಡೆಸಲು, ತರಬೇತಿ ನೀಡಲು ಉತ್ತಮ ಸೌಲಭ್ಯ, ನುರಿತ ತರಬೇತುದಾರರು, ರಾಜ್ಯ ಮತ್ತು  ರಾಷ್ಟ್ರ ಮಟ್ಟದ ಟೂರ್ನಿಗಳ ಆಯೋಜನೆ ಇತ್ಯಾದಿ ಅಗತ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಚರ್ಚೆಯೂ ನಡೆಯಿತು. ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಆಟಗಾರರನ್ನು ರೂಪಿಸುವ ಮೂಲಕ ವೃತ್ತಿಪರತೆಯ ಸ್ಪರ್ಶ ನೀಡಬೇಕೆಂಬ ಬಗ್ಗೆ ಅರಿವೂ ಮೂಡಿತು. 

ಆಗಸ್ಟ್‌ ಮೂರನೇ ವಾರ ನಡೆದ ‘ಎಲ್‌ಐಸಿ ಕಪ್‌’ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯು ಈ ಕ್ರೀಡೆಗೆ ಸಂಬಂ ಧಿಸಿದಂತೆ ಸಾಕಷ್ಟು ಕೊಡುಗೆ ನೀಡಿತು. ಈ ಹಿಂದಿನಂತೆ ಬೆಂಗಳೂರಿನ ಆಟಗಾರರೇ ಬಹುತೇಕ ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿ ಬಾಚಿಕೊಂಡಿರು ವುದರಿಂದ ಈ ಕ್ರೀಡೆಯನ್ನು ಹೇಗೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಸಬೇಕು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿತು.

ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ವಿಜಾಪುರ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಮೊದಲಿಗಿಂತಲೂ ಟೇಬಲ್‌ ಟೆನಿಸ್‌ ಆಟ ಹೆಚ್ಚು ಜನಮನ್ನಣೆ ಪಡೆಯುತ್ತಿದೆ. ಆದರೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಎತ್ತರದ ಸಾಧನೆ ತೋರುವಂತಹ  ಆಟಗಾರರು ಮಾತ್ರ ಹೊರ ಹೊಮ್ಮುತ್ತಿಲ್ಲ. ಇಲ್ಲಿನ ಹಲವು ಪ್ರತಿಭಾವಂತರು ಜಿಲ್ಲಾಮಟ್ಟಕ್ಕೇ ಸೀಮಿತಗೊಳ್ಳುತ್ತಿದ್ದಾರೆ.

2007ರಲ್ಲಿ ರಾಷ್ಟ್ರ ಮಟ್ಟದ ಚಾಂಪಿಯನ್‌ಷಿಪ್‌ನ ಕೆಡೆಟ್‌ ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಮೈತ್ರೇಯಿ ಬೈಲೂರ ಕಂಚಿನ ಪದಕ ಪಡೆದಿದ್ದು ಬಿಟ್ಟರೆ, ಈ ಭಾಗದ ಯಾವ ಆಟಗಾರರೂ ರಾಷ್ಟ್ರ ಮಟ್ಟದ ಸಾಧನೆಯನ್ನು ಇದುವರೆಗೂ ಮಾಡಿಲ್ಲ. 2010ರಲ್ಲಿ ಜ್ಯೂನಿಯರ್‌, ಯೂಥ್ಸ್‌ ಬಾಲಕಿಯರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ರಾಜ್ಯ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದಿದ್ದ ಮೈತ್ರೇಯಿ, ಈ ವರ್ಷದ ತವರು ಜಿಲ್ಲೆಯ ಟೂರ್ನಿಯಲ್ಲಿ ಮಹಿಳೆಯರ ವಿಭಾಗದ ಸೆಮಿಫೈನಲ್‌ ಸಹ ಪ್ರವೇಶಿಸಲಿಲ್ಲ! ಎಂಜಿನಿಯರಿಂಗ್‌ ಕಾಲೇಜು ಸೇರಿದ ಬಳಿಕ ಹೆಚ್ಚಿನ ಅವಧಿ ಕ್ರೀಡಾಭ್ಯಾಸಕ್ಕೆ ಸಮಯ ನೀಡದೇ ಇರುವುದರಿಂದ ಇವರು ಸೋಲಿನ ಕಹಿ ಅನುಭವಿಸಬೇಕಾಯಿತು.

ಹುಬ್ಬಳ್ಳಿಯ ಸಹನಾ ಕುಲಕರ್ಣಿ (ಯೂಥ್ಸ್‌ ಗರ್ಲ್ಸ್‌) ಹಾಗೂ ಗಾಯತ್ರಿ ಟಂಕಸಾಲಿ (ಸಬ್‌ ಜೂನಿಯರ್‌) ಅವರು ರಾಜ್ಯವನ್ನು ಪ್ರತಿನಿಧಿಸಿದ್ದರೂ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಮೈತ್ರೇಯಿ ಬಿಟ್ಟರೆ ಇದುವರೆಗೂ ಬೆಳಗಾವಿಯಿಂದ ಯಾರೂ ರಾಜ್ಯವನ್ನು ಪ್ರತಿನಿಧಿಸಿಲ್ಲ. ಕೆಡೆಟ್‌ ವಿಭಾಗದಲ್ಲಿ ಸದ್ಯ ಉತ್ತಮ ಪ್ರದರ್ಶನ ತೋರುತ್ತಿರುವ ಬೆಳಗಾವಿಯ ರಾಹುಲ್‌ ಹುಲಮನಿ (4ನೇ ರ್‍ಯಾಂಕಿಂಗ್‌) ಹಾಗೂ ಭಕ್ತಿ ಮನ್ನೂರಕರ (3ನೇ ರ್‍ಯಾಂಕಿಂಗ್‌) ಈ ವರ್ಷ ರಾಜ್ಯವನ್ನು ಪ್ರತಿನಿಧಿಸುವ ಸಾಧ್ಯತೆಗಳಿವೆ.

‘ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೆಡೆಟ್‌, ಸಬ್‌ ಜೂನಿಯರ್‌ ವಿಭಾಗದಲ್ಲಿ ಉತ್ತಮ ಆಟಗಾರರು ಇರುತ್ತಾರೆ. ಆದರೆ, 10ನೇ ತರಗತಿಗೆ ಬಂದ ಬಳಿಕ ಪಾಲಕರ ಒತ್ತಡದಿಂದಾಗಿ ಆಟದಿಂದ ಕ್ರಮೇಣ ದೂರ ಸರಿಯುತ್ತಾರೆ. ಬೆಂಗಳೂರಿನ ಮಕ್ಕಳಿಗೆ ವೃತ್ತಿಪರ ಆಟಗಾರರೊಂದಿಗೆ ಅಭ್ಯಾಸ ನಡೆಸಲು ಅವಕಾಶ ಸಿಗುತ್ತಿದೆ. ಇಲ್ಲಿನ ಮಕ್ಕಳು ತಮ್ಮ ಮಟ್ಟದವರೊಂದಿಗೇ ಆಟ ಆಡುವುದರಿಂದ ಸಾಧನೆ ಮಾಡಲು ಕಷ್ಟವಾಗುತ್ತಿದೆ.

ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಲು ನಿತ್ಯ ಕನಿಷ್ಠ 6 ಗಂಟೆಗಳಾದರೂ ಕ್ರೀಡಾಭ್ಯಾಸ ಮಾಡಬೇಕು. ಆದರೆ, ಈ ಭಾಗದ ಮಕ್ಕಳು ಹೆಚ್ಚೆಂದರೆ 3 ಗಂಟೆ ಅಭ್ಯಾಸ ನಡೆಸುತ್ತಾರೆ. ಈ ಕ್ರೀಡೆಯಲ್ಲೇ ‘ಭವಿಷ್ಯ’ ಕಂಡುಕೊಳ್ಳುವ ಪ್ರಯತ್ನವನ್ನು ಉತ್ತರ ಕರ್ನಾಟಕ ಭಾಗದ ಮಕ್ಕಳು ಮಾಡುತ್ತಿಲ್ಲ’ ಎಂದು ಬೆಳಗಾವಿ ಟೇಬಲ್‌ ಟೆನಿಸ್‌ ಅಕಾಡೆಮಿಯ ತರಬೇತುದಾರ ಸಂಗಮ ಬೈಲೂರ ವಿಷಾದ ವ್ಯಕ್ತಪಡಿಸುತ್ತಾರೆ.

‘ಉತ್ತರ ಕರ್ನಾಟಕ ಭಾಗದಲ್ಲಿ ಟೇಬಲ್‌ ಟೆನಿಸ್‌ ಕ್ಲಬ್‌ಗಳ ಸಂಖ್ಯೆ ಬಹಳ ಕಡಿಮೆ. ಬೆಳಗಾವಿಯಲ್ಲಿ ಟಳಕವಾಡಿ ಕ್ಲಬ್‌ ಮತ್ತು ಯೂನಿಯನ್‌ ಜಿಮ್ಖಾನಾದಲ್ಲಿ ಮಾತ್ರ ಟಿಟಿ ಅಭ್ಯಾಸ ನಡೆಯುತ್ತಿದೆ. ನಗರದಲ್ಲಿ ಒಳಾಂಗಣ ಕ್ರೀಡಾಂಗಣ ಇಲ್ಲದೇ ಇರುವುದರಿಂದ ರಾಜ್ಯ ಮಟ್ಟದ ಟೂರ್ನಿಯನ್ನು ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಟೇಬಲ್‌ ಹಾಕಿ ನಡೆಸುತ್ತಿದ್ದೇವೆ. ಕಳೆದ 14 ವರ್ಷಗಳಿಂದ ನಡೆಸುತ್ತಿರುವ ‘ಎಲ್‌ಐಸಿ ಕಪ್‌’ನಲ್ಲಿ ಈ ಭಾಗದ ಬೆರಳೆಣಿಕೆಯ ಆಟಗಾರರು ಮಾತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ’ ಎನ್ನುತ್ತಾರೆ ಬೆಳಗಾವಿ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯ ಕಾರ್ಯದರ್ಶಿ ವಿಪುಲ್‌ ಚೌಗುಲೆ.

‘ಟೇಬಲ್‌ ಟೆನಿಸ್‌ ಪ್ರಚುರ ಪಡಿಸಬೇಕು ಎಂಬ ಉದ್ದೇಶದಿಂದ ಅಂತರ ಶಾಲಾ ಮಟ್ಟದ ಟೂರ್ನಿಯನ್ನು ಕೆಲವು ವರ್ಷಗಳಿಂದ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ ಈ ಹಿಂದೆ 50 ಆಟಗಾರರು ಇದ್ದರು. ಈಗ ಈ ಸಂಖ್ಯೆ 250ರ ಗಡಿ ದಾಟಿದೆ. ಆದರೆ, ಈ ಕ್ರೀಡೆಯಲ್ಲಿ ಮುಂದುವರಿಯಲು ಮಕ್ಕಳಿಗೆ ಪಾಲಕರಿಂದ ಅಗತ್ಯ ಪ್ರೋತ್ಸಾಹ ಸಿಗುತ್ತಿಲ್ಲ.

ಇಲ್ಲಿನ ಮಕ್ಕಳು ಜಿಲ್ಲಾ ಮಟ್ಟಕ್ಕೇ ಸೀಮಿತರಾಗುತ್ತಿದ್ದಾರೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಟಿಟಿ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಬೇಕು. ಮೇಲಿಂದ ಮೇಲೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಟೂರ್ನಿ ಹಮ್ಮಿಕೊಳ್ಳುವ ಮೂಲಕ ಇಲ್ಲಿನ ಆಟಗಾರರಿಗೆ ತಮ್ಮೊಳಗಿನ ಕ್ರೀಡಾ ಪ್ರತಿಭೆ ಹೊರ ಹಾಕಲು ವೇದಿಕೆ ಕಲ್ಪಿಸಿಕೊಡಬೇಕು’ ಎಂದು ವಿಪುಲ್‌ ಚೌಗುಲೆ ಒತ್ತಾಯಿಸುತ್ತಾರೆ.

‘ವಿವಿಧೆಡೆ ನಡೆಯುವ ರಾಜ್ಯ ಮಟ್ಟದ ಟೂರ್ನಿಯಲ್ಲಿ ಪಾಲ್ಗೊಂಡಾಗ ಉತ್ತಮ ಆಟಗಾರರನ್ನು ಎದುರಿಸುವುದನ್ನು ಕಲಿಯಲು ಸಾಧ್ಯವಾಗುತ್ತದೆ. ವಿವಿಧ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಹಾಗೂ ತರಬೇತಿಗೆ ಒಂದು ವರ್ಷಕ್ಕೆ ಒಬ್ಬ ಆಟಗಾರನಿಗೆ ಸುಮಾರು ₨ 1.50 ಲಕ್ಷ ವೆಚ್ಚವಾಗುತ್ತದೆ. ಟೂರ್ನಿಯಲ್ಲಿ ನಗದು ಬಹುಮಾನವೂ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ.

ಹೀಗಾಗಿ ಹಲವು ಪಾಲಕರು ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಪ್ರತಿಭಾವಂತ ಆಟಗಾರರ ಪ್ರಾಯೋಜಕತ್ವ ವಹಿಸಲು ಸಂಘ ಸಂಸ್ಥೆಗಳು ಮುಂದೆ ಬರಬೇಕು. ಬ್ಯಾಂಕಿಂಗ್‌, ರೈಲ್ವೆ, ತೈಲ ಕಂಪೆನಿಗಳಲ್ಲಿ ಟಿಟಿ ಆಟಗಾರರಿಗೆ ಉದ್ಯೋಗ ಹೆಚ್ಚೆಚ್ಚು ಸಿಗುವಂತಾಗಬೇಕು. ಆಗ ಈ ಭಾಗದಲ್ಲೂ ವೃತ್ತಿಪರ ಆಟಗಾರರ ಸಂಖ್ಯೆ ಹೆಚ್ಚಲು ಸಾಧ್ಯ’ ಎಂದು ಧಾರವಾಡ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕೆಎಸ್‌ಟಿಟಿಎಯ ಜಂಟಿ ಕಾರ್ಯದರ್ಶಿ ತಿಮ್ಮಣ್ಣ ಗಜಾನನ ಉಪಾಧ್ಯ ಅಭಿಪ್ರಾಯ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT