ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ತಳಿಗೆ ಹೊಸ ಅತಿಥಿ ಚೆರ್ರಿ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಟೊಮೆಟೊ ಹಣ್ಣು ಎಂದಾಕ್ಷಣ ನಮಗೆ ಅದರಲ್ಲಿರುವ 2-3 ತಳಿಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಆದರೆ ವಾಸ್ತವದಲ್ಲಿ ಟೊಮೆಟೊ ಹಣ್ಣಿನಲ್ಲಿ ಸುಮಾರು 700 ತಳಿಗಳು ಇವೆ!
ಈ ತಳಿಗಳ ಪೈಕಿ ಚೆರ್ರಿ ಟೊಮೆಟೊ ತಳಿ ಕೂಡ ಒಂದು. ಬಹೂಪಯೋಗಿ ಆಗಿರುವ ಈ ತಳಿಯ ಪರಿಚಯ ಮಾತ್ರ ಅನೇಕ ರೈತಾಪಿ ವರ್ಗಕ್ಕೆ ಇಲ್ಲ. ಇಂಥದ್ದೊಂದು ಅಪರೂಪದ ತಳಿಯ ಬಗ್ಗೆ ಅಧ್ಯಯನ ನಡೆಸಿ, ಅದನ್ನು ರೈತಾಪಿ ವರ್ಗಕ್ಕೆ ಪರಿಚಯಿಸುತ್ತಿದೆ ‘ಪೀಪಲ್ ಟ್ರೀ’ ಸಂಸ್ಥೆ.

ಅಕ್ಟೋಬರ್‌ನಿಂದ  ಏಪ್ರಿಲ್‌ವರೆಗೆ ಪಾಳುಭೂಮಿ, ತೋಟದ ಬೇಲಿಗಳ ಮೇಲೆ ಗೋಲಿ ಗಾತ್ರದ ಗೊಂಚಲು ಹಣ್ಣುಗಳನ್ನು ಬಿಟ್ಟು ಮಳೆಗಾಲದಲ್ಲಿ ಕಣ್ಮರೆಯಾಗುತ್ತವೆ. ಟೊಮೆಟೊದಲ್ಲಿ ಆಕರ್ಷಕ ಮತ್ತು ದಪ್ಪ ಗಾತ್ರದ ತಳಿಗಳಿಂದಾಗಿ ಚೆರ್ರಿ ಟೊಮೆಟೊದ ಬಳಕೆ ಕಡಿಮೆಯಾಯಿತು. ಇತ್ತೀಚೆಗೆ ಮಹಾನಗರಗಳ ಸೂಪರ್ ಮಾರುಕಟ್ಟೆಗಳ ಟ್ರೇಗಳಲ್ಲಿ ಅಂದವಾಗಿ ಕಾಣಿಸಿಕೊಳ್ಳುತ್ತಿದೆ.

ಸುಮಾರು5–6 ಅಡಿಗಳಷ್ಟು ಎತ್ತರ ಬೆಳೆದ ಮುಖ್ಯ ಕಾಂಡದ ಬುಡದಿಂದ ಸುಳಿಯವರೆಗೆ ಹತ್ತಾರು ಕವಲುಗಳು ಬಂದು ಆ ಹತ್ತಾರು ಕವಲುಗಳಲ್ಲಿ ಮತ್ತೆ ಕವಲುಗಳು ಮೂಡಿ ಬಳ್ಳಿಯಂತೆ ಹಬ್ಬುತ್ತವೆ. ಬಳ್ಳಿಯ ಪ್ರತಿ ಗಿಣ್ಣಿನಲ್ಲೂ ಗೊಂಚಲು ಗೊಂಚಲು ಹಣ್ಣುಗಳು. ಟೊಮೆಟೊವನ್ನು ಸಾಮಾನ್ಯವಾಗಿ ಬಾಧಿಸುವ ಕಾಯಿ ಕೊರೆಯುವ ಹುಳ, ಬೇರು ಗಂಟುಹುಳ, ಬಿಳಿನೊಣ, ಮಲ್ಲೆರೋಗ ಚೆರ್ರಿ ಟೊಮೆಟೊವನ್ನು ಕಾಡುವುದಿಲ್ಲ.

ಹಿತ್ತಲಲ್ಲಿ ಒಂದೆರಡು ಚೆರ್ರಿ ಟೊಮೆಟೊ ಗಿಡಗಳಿದ್ದರೆ ನಾಲ್ಕೈದು ತಿಂಗಳವರೆಗೆ ಹಣ್ಣುಗಳು ಸಿಗುತ್ತಿರುತ್ತವೆ. ಮಣ್ಣಿನ ತೇವಾಂಶ ಕೊರತೆಗೆ ಹೊಂದಿಕೊಂಡು ಬೆಳೆಯುವ ಗುಣವಿದ್ದು, ಹಣ್ಣುಗಳಲ್ಲಿ ಎ ಮತ್ತು ಸಿ ಜೀವಸತ್ವ ಸಮೃದ್ಧವಾಗಿವೆ. ನಾಗರಹೊಳೆಯ ಕಾಡಿನಲ್ಲಿರುವ ಆದಿವಾಸಿಗಳು ಚೆರ್ರಿ ಟೊಮೆಟೊವನ್ನು ಅಂದಲೆಹಣ್ಣು, ಗುಳೇರಿಹಣ್ಣು ಎನ್ನುತ್ತಾರೆ. ಕರಿಮೆಣಸು, ಬೆಳ್ಳುಳ್ಳಿ, ಬೆಂಕಿಯಲ್ಲಿ ಸುಟ್ಟ ಈರುಳ್ಳಿ, ಮೆಣಸಿನಕಾಯಿ , ಜೀರಿಗೆ, ಕೊತ್ತಂಬರಿಸೊಪ್ಪು, ಉಪ್ಪು ಇವುಗಳಲ್ಲಿ ರುಬ್ಬಿ  ವಿಶೇಷವಾದ ಚಟ್ನಿ ಮಾಡುತ್ತಾರೆ. ರಾಗಿರೊಟ್ಟಿ, ಮುದ್ದೆ ಮತ್ತು ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಬೆಳೆಸುವುದು ಹೀಗೆ
ಬೀಜಗಳನ್ನು ಸಸಿ ಮಡಿಗಳಲ್ಲಿ ಅಥವಾ ಕುಂಡಗಳಲ್ಲಿ ಬಿತ್ತಬೇಕು. 25 ದಿವಸಗಳ ಪ್ರಾಯದ ಸಸಿಗಳನ್ನು ಚಳಿಗಾಲದ ಪ್ರಾರಂಭ ಮತ್ತು ಬೇಸಿಗೆ ಕಾಲದಲ್ಲಿ ಗಿಡದಿಂದ ಗಿಡಕ್ಕೆ ನಾಲ್ಕು ಅಡಿ ಅಂತರಕೊಟ್ಟು ನೆಡಬೇಕು. ಗಿಡಗಳು ಬೆಳೆದಂತೆಲ್ಲಾ ಕೋಲುಗಳನ್ನ ಆಧಾರವಾಗಿ ನಿಲ್ಲಿಸಿ ಬಳ್ಳಿಗಳು ನೆಲಕ್ಕೆ ಬೀಳದಂತೆ ಕಟ್ಟಬೇಕು. ಮನೆಯ ಮಾಳಿಗೆ ಮೇಲೆ ಕೂಡ ದೊಡ್ಡಗಾತ್ರದ ಕುಂಡಗಳಲ್ಲಿ ಬೆಳೆಸಲು ಸೂಕ್ತ.

ಬೀಜ ಸಂವರ್ಧನೆ
ತಳಿಯ ಶುದ್ಧತೆ ಕಾಪಾಡಬೇಕಾದರೆ ಸಮೀಪದಲ್ಲಿ ಬೇರೆ ಟೊಮೆಟೊ ತಳಿಗಳನ್ನು ಬೆಳೆಸಬಾರದು. ಗಿಡದಲ್ಲಿ ಚೆನ್ನಾಗಿ ಮಾಗಿದ ಹಣ್ಣುಗಳನ್ನು ತಣ್ಣೀರಿನಲ್ಲಿ ಸುಮಾರು ಒಂದು ವಾರ ಕಳಿಸಬೇಕು. ಕಳಿಸಿದ ಹಣ್ಣುಗಳನ್ನ ನೀರಿನಲ್ಲಿ ತೊಳೆದು ಹಣ್ಣಿನ ತಿರುಳನ್ನು ತೆಗೆದು ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಶೇಖರಿಸಿಡಬೇಕು. ಆದಿವಾಸಿಗಳ ಜೊತೆ ಕೆಲಸ ಮಾಡುತ್ತಿರುವ ಪೀಪಲ್ ಟ್ರೀ ಸಂಸ್ಥೆ, ಕಾಡು ತಳಿ ಚೆರ್ರಿ ಟೊಮೆಟೊವನ್ನು ಸಂಸ್ಥೆಯ ತೋಟದಲ್ಲಿ ಬೆಳೆಸಿ ಬೀಜ ಸಂವರ್ಧನೆ ಮಾಡಿ ಆಸಕ್ತ ರೈತರಿಗೆ ವಿತರಿಸುತ್ತಿದೆ. ಚೆರ್ರಿ ಟೊಮೆಟೊ ಬೆಳೆಸುವ ಆಸಕ್ತರು ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದು–9945219836.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT