ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ನಿಲುವಿಗೆ ವಿಶ್ವಸಂಸ್ಥೆ ಖಂಡನೆ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಎಎಫ್‌ಪಿ): ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಐತಿಹಾಸಿಕ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲಿದೆ ಎಂಬ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಿಲುವನ್ನು ವಿಶ್ವಸಂಸ್ಥೆ ಶನಿವಾರ ಖಂಡಿಸಿದೆ. ಭೂಮಿಯನ್ನು ಉಳಿಸಬೇಕಾದರೆ ಈ ಒಪ್ಪಂದ ನಿರ್ಣಾಯಕವಾಗಲಿದೆ ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ.

‘ಭೂಮಿಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ವರ್ಗಾಯಿಸಲು ಅನುಕೂಲ ಕಲ್ಪಿಸುವ ಈ ಮಹತ್ವದ ಒಪ್ಪಂದಕ್ಕೆ ಬರಲು ವಿಶ್ವನಾಯಕರು ದಿಟ್ಟತನ ಪ್ರದರ್ಶಿಸಿದ್ದಾರೆ. ಇದೊಂದು ಸಾಧನೆ’ ಎಂದು ವಿಶ್ವಸಂಸ್ಥೆ ವಕ್ತಾರ ಫರಾನ್ ಹಕ್ ಹೇಳಿದ್ದಾರೆ.

ಅಮೆರಿಕ ಸೇರಿ ಜಗತ್ತಿನ 175 ದೇಶಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಈ ಹಿಂದೆಯೂ  ಪ್ಯಾರಿಸ್‌ ಒಪ್ಪಂದದ ವಿರುದ್ಧವಾಗಿಯೇ ಮಾತನಾಡಿದ್ದ ಟ್ರಂಪ್,

ಈ ಬಾರಿ ಒಪ್ಪಂದದಿಂದ ತಮ್ಮ ದೇಶ ಹೊರಬರಲಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಅಲ್ಲದೆ, ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಯೋಜನೆಗೆ ಅಮೆರಿಕನ್ನರ ತೆರಿಗೆ ಹಣವನ್ನು ನೀಡುವುದಿಲ್ಲ ಎಂದೂ ಹೇಳಿದ್ದರು.

ಮನವೊಲಿಕೆ ಇಲ್ಲ: ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಅವರು ಒಪ್ಪಂದದ ಮಹತ್ವದ ಬಗ್ಗೆ ಟ್ರಂಪ್ ಅವರಿಗೆ ಮನವರಿಕೆ ಮಾಡಿಕೊಡುವ ಯಾವ ಆಲೋಚನೆಯೂ ಸದ್ಯಕ್ಕಿಲ್ಲ ಎಂದು ಫರಾನ್ ಹಕ್ ಹೇಳಿದ್ದಾರೆ.

ರ್‍ಯಾಲಿಯಲ್ಲಿ ಘರ್ಷಣೆ: 35 ಬಂಧನ
ವಾಷಿಂಗ್ಟನ್ (ಪಿಟಿಐ):
ಸ್ಯಾನ್ ಡಿಯಾಗೋದಲ್ಲಿ ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹಾಗೂ ಪ್ರತಿಭಟನಾಕಾರರ ಮಧ್ಯೆ ನಡೆದ ಘರ್ಷಣೆ ವೇಳೆ 35 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೆಕ್ಸಿಕನ್ ಗಡಿಗೆ ಸಮೀದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ಜೂನ್ 7 ರಂದು ಪ್ರಾಥಮಿಕ ಚುನಾವಣೆ ನಡೆಯಲಿದೆ. ಮೆಕ್ಸಿಕನ್ ವಲಸಿಗರ ತಡೆಗೆ ಗೋಡೆ ನಿರ್ಮಿಸುವುದಾಗಿ ಹೇಳಿ ಟ್ರಂಪ್ ಮೆಕ್ಸಿಕನ್ನರ ಕೋಪಕ್ಕೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT