ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್‌ಗೆ ವಿರೋಧ ಕಾನೂನು ಬಾಹಿರ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭಾರಿ ದಂಡ
Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಬ್ಬಿಂಗ್‌ ವಿರೋಧಿಸುತ್ತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಟಿವಿ ಒಕ್ಕೂಟ ಮತ್ತು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಗಳನ್ನು  ಭಾರತೀಯ ಸ್ಪರ್ಧಾ ಆಯೋಗ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಡಬ್ಬಿಂಗ್‌ ವಿರೋಧಿಸುವುದು ಮತ್ತು ತಡೆಯುವುದು  ಭಾರತೀಯ ಸ್ಪರ್ಧಾ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಆಯೋಗ, ಈ ಮೂರೂ ಸಂಘಟನೆಗಳಿಗೆ ದಂಡ ವಿಧಿಸಿದೆ.  ದಂಡದ ಹಣವನ್ನು 2 ತಿಂಗಳಲ್ಲಿ ಪಾವತಿಸಲು ಸೂಚಿಸಿದೆ.

ಕನ್ನಡ ಗ್ರಾಹಕರ ಕೂಟ ಮತ್ತು ಗಣೇಶ್‌ ಚೇತನ್‌ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಜುಲೈ 27ರಂದು ಆದೇಶ ಹೊರಡಿಸಿರುವ ಆಯೋಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಇತರ ಎರಡು ಸಂಘಗಳ ವರ್ತನೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದೆ.

ಡಬ್ಬಿಂಗ್‌ಗೆ ವಿರೋಧಿಸುವುದು, ಥಿಯೇಟರ್‌ಗಳಿಗೆ ಹೋಗಿ ಗಲಾಟೆ ಮಾಡುವುದು ಈ ಸಂಘಟನೆಗಳ ಚಾಳಿ ಎಂದು ಅದು ಜರೆದಿದೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಕರ್ನಾಟಕ ಚಲನಚಿತ್ರ, ಕಲಾವಿದರು, ನೌಕರರು ಮತ್ತು ತಂತ್ರಜ್ಞರ ಸಂಘಗಳು ಕೂಡ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದರೂ, ಈ ವಿಚಾರದಲ್ಲಿ ಈ ಸಂಘಟನೆಗಳ ಹೆಚ್ಚಿನ ಪಾತ್ರವಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

1962ರಿಂದ ಕರ್ನಾಟಕದಲ್ಲಿ ಡಬ್ಬಿಂಗ್‌ಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿರುವ ಆಯೋಗ, ‘ಕನ್ನಡ ಭಾಷೆ, ಚಲನಚಿತ್ರ ಉದ್ಯಮ ಮತ್ತು ಟಿವಿ ಉದ್ಯಮವನ್ನು ರಕ್ಷಿಸುವ ನೆಪದಲ್ಲಿ ಯಾವುದೇ ಕಾನೂನಿನ ಬಲ ಇಲ್ಲದೆ ಈ ಮೂರು ಸಂಘಗಳು ಡಬ್ಬಿಂಗ್‌ಗೆ ವಿರೋಧಿಸುತ್ತಾ ಬಂದಿವೆ’ ಎಂದು ತರಾಟೆಗೆ ತೆಗೆದುಕೊಂಡಿದೆ.

ಆಯೋಗ ಹೇಳಿದ್ದು
*ಡಬ್ಬಿಂಗ್‌ ಸಿನಿಮಾ, ಟಿವಿ ಧಾರಾವಾಹಿಯನ್ನು ಕೇಂದ್ರ ಅಥವಾ ಕರ್ನಾಟಕ ಸರ್ಕಾರ ನಿಷೇಧಿಸಿಲ್ಲ

*  ಡಬ್ಬಿಂಗ್‌ ನೋಡುವಂತೆ ವೀಕ್ಷಕರ ಮೇಲೆ ಯಾರ ಒತ್ತಡವೂ ಇಲ್ಲ. ಇಷ್ಟ ಇಲ್ಲದಿದ್ದರೆ ನೋಡದೇ ಇರುವ ಆಯ್ಕೆ ಅವರಿಗಿದೆ
* ಸಿನಿಮಾ ವಾಣಿಜ್ಯ ಸಂಘಗಳು ಸ್ಥಳೀಯ ಭಾಷೆ, ಸಂಸ್ಕೃತಿಯ ಸ್ವಯಂಘೋಷಿತ ರಕ್ಷಕರೇನಲ್ಲ
* ಬೇರೆ ಭಾಷೆಯಲ್ಲಿ ಡಬ್‌ ಮಾಡಬೇಕೆ ಬೇಡವೇ ಎಂದು ತೀರ್ಮಾನಿಸುವುದು ನಿರ್ಮಾಪಕ, ಕಲಾವಿದರ ಹಕ್ಕು
* ಗೃಹಿಣಿಯರು, ಮಕ್ಕಳು ಸೇರಿದಂತೆ ವಿವಿಧ ವರ್ಗಗಳಿಗೆ ಟಿವಿಗಳು ವೈವಿಧ್ಯಮಯ ಕಾರ್ಯಕ್ರಮ ನೀಡುತ್ತಿವೆ
* ಪರಭಾಷೆಗಳ ಎದುರು ಕನ್ನಡ ಮನರಂಜನಾ ಉದ್ಯಮ ಸೊರಗುತ್ತದೆ ಎನ್ನುವ ವಾದ ಒಪ್ಪುವುದಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT