ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಟ್: ತಥ್ಯ ಮಿಥ್ಯ

Last Updated 22 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸುಮಾರು ಮೂರು ದಶಕಗಳ ಕಾಲ ಪೌಷ್ಟಿಕಾಂಶ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಶೀಲಾ ಕೃಷ್ಣಮೂರ್ತಿ. ಊಟದಲ್ಲಿ ಏನಿರಬೇಕು, ಎಷ್ಟಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಡಯಟ್ ಬಗ್ಗೆ ಪಾಠ ಮಾಡುವ ಅವರು ಅದನು ಸ್ವತಃ ಪಾಲಿಸುವುದೆಷ್ಟು?

ಡಯಟ್ ಎನ್ನುವ ಪದವನ್ನು ತಪ್ಪಾಗಿ ಅರ್ಥ ಮಾಡಿಕೊಂಡವರೇ ಹೆಚ್ಚು. ಡಯಟ್ ಎಂದರೆ ಉಪವಾಸ ಇರುವುದಲ್ಲ. ಕೆಲವು ಪದಾರ್ಥಗಳನ್ನು ಸಂಪೂರ್ಣವಾಗಿ ವರ್ಜಿಸುವುದೂ ಅಲ್ಲ. ನಮ್ಮಿಷ್ಟದ ಆಹಾರವನ್ನು ದೂರ ಸರಿಸಿ ಕೊರಗುವುದಲ್ಲ. ಎಲ್ಲವನ್ನೂ ಮಿತವಾಗಿ ಸೇವಿಸುವುದೇ ಡಯಟ್. ಸರಿಯಾದ ಸಮಯಕ್ಕೆ ಸೇವಿಸುವುದು ಮತ್ತು ಹಿತಕಾರಿಯಾದ ಕೆಲವು ಸರಳ ವ್ಯಾಯಾಮ ಮಾಡುವುದು ಮುಖ್ಯ.

ಡಯಟ್ ಎನ್ನುವ ಪದವನ್ನು ಕೆಲವರು ಅನಗತ್ಯವಾಗಿ ಹಿಗ್ಗಿಸಿಬಿಟ್ಟಿದ್ದಾರೆ.  ತಪಸ್ಸಿನ ರೀತಿಯಲ್ಲಿ ಡಯಟ್ ಮಾಡುವ ಅಗತ್ಯವೇನೂ ಇಲ್ಲ. ಅದು ಸ್ವಾಭಾವಿಕವಾಗಿ ನಮ್ಮ ಜೀವನಶೈಲಿ, ಆಹಾರ ಕ್ರಮದ ಭಾಗವಾಗಬೇಕು.

ವ್ಯಾಯಾಮವೂ ಅಷ್ಟೇ. ಪ್ರತಿದಿನ 40 ನಿಮಿಷ ಕಟ್ಟುನಿಟ್ಟಾಗಿ ಮಾಡಲೇಬೇಕು ಎಂದೇನೂ ಇಲ್ಲ. ಎಂಜಾಯ್ ಮಾಡುತ್ತ, ನಿಮಗೆ ಇಷ್ಟವಾಗುವ, ನಿಮ್ಮ ದೇಹಗುಣಕ್ಕೆ ಒಗ್ಗುವ ಸರಳ–ಸುಲಭ ವ್ಯಾಯಾಮಗಳನ್ನು ಮಾಡಬೇಕು. ಒಂದೇ ದಿನ ಹತ್ತಾರು ಮೈಲಿ ಓಡಿ ಸುಸ್ತಾಗುವ ಬದಲು,  ಪ್ರತಿದಿನ ಒಂದೊಂದು ಮೈಲಿ ಹೆಚ್ಚು ಓಡುವುದನ್ನು ರೂಢಿಸಿಕೊಳ್ಳಬೇಕು. ದೇಹ ಪ್ರಕೃತಿಗೆ ತಕ್ಕಷ್ಟು ನಡೆಯುವುದು, ಓಡುವುದು ಮಾಡಬೇಕು.

ಸಪೂರ ಆಗುವುದಷ್ಟೇ ಅಲ್ಲ
ಕಡ್ಡಿಯಂತಹ ಸಪೂರ ದೇಹ ಹೊಂದುವುದೇ ಆರೋಗ್ಯವಲ್ಲ. ನಮ್ಮ ದೇಹಕ್ಕೆ ಅಗತ್ಯ ಚೈತನ್ಯ ಇರಲೇಬೇಕು. ಹಾಗೆ ನೋಡಿದರೆ ‘ಮಾದರಿ ತೂಕ’ ಎನ್ನುವ ಪದವೇ ತಪ್ಪು.  ಅವರವರ ದೇಹ ಪ್ರಕೃತಿ, ಕೌಟುಂಬಿಕ ಇತಿಹಾಸ, ವಯಸ್ಸು ಹೀಗೆ ಅನೇಕ ಸಂಗತಿಗಳು ಇದರಲ್ಲಿ ತಮ್ಮದೇ ಪಾತ್ರ ವಹಿಸುತ್ತವೆ.

ಉಪಾಹಾರ ತಪ್ಪಿಸಬೇಡಿ

ಸರ್ವಶಕ್ತ ಡ್ರೈ ಫ್ರೂಟ್ಸ್

ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾದಂತಹ ಬೀಜಗಳು ಸರ್ವಶಕ್ತ ಎನ್ನುವುದರಲ್ಲಿ ಸಂದೇಹವಿಲ್ಲ. ಇವು ಅಗತ್ಯ ಪ್ರಮಾಣದ ಪ್ರೊಟೀನ್ ನೀಡುವ ಮೂಲಕ ದೇಹಕ್ಕೆ ಚೈತನ್ಯ ಒದಗಿಸುತ್ತವೆ.

ಸಂಜೆಯ ಸ್ನಾಕ್‌ ಸೇವನೆ ಸಮಯದಲ್ಲಿ ಪಿಜ್ಜಾ–ಬರ್ಗರ್, ಬ್ರೆಡ್, ಬಿಸ್ಕತ್‌ಗಳ ಮೊರೆಹೋಗುವ ಬದಲು ಬ್ಯಾಗಿನಲ್ಲಿ ಒಂದು ಹಿಡಿ ಡ್ರೈ ಫ್ರೂಟ್ಸ್ ಇಟ್ಟುಕೊಳ್ಳುವುದು ಹೆಚ್ಚು ಲಾಭದಾಯಕ. ಇದು ನಿಮಗೆ ಅಗತ್ಯ ಶಕ್ತಿಯನ್ನು ನೀಡುವ ಜೊತೆಗೆ ರಾತ್ರಿ ಊಟದ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ಹಾಗೆಂದು ಇದು ಉಪಾಹಾರಕ್ಕೆ ಪರ್ಯಾಯ ಅಲ್ಲ. ದೇಹಕ್ಕೆ ಅಗತ್ಯವಾದ ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಅಂಶ ದೊರಕುವುದು ಸಮಪ್ರಮಾಣದ ಆಹಾರದಿಂದಲೇ.

ಕಟ್ಟುನಿಟ್ಟಲ್ಲ
ಊಟ–ತಿಂಡಿ, ವ್ಯಾಯಾಮದಲ್ಲಿ ಒಂದು ಶಿಸ್ತು ಇರಬೇಕು. ಅದಂತೂ ಇದ್ದೇ ಇದೆ. ಕ್ರಮಬದ್ಧವಾಗಿ ಊಟ–ಉಪಾಹಾರ–ವ್ಯಾಯಾಮ ಮಾಡುವುದು ಜೀವನ ಶೈಲಿಯ ಒಂದು ಭಾಗವಾಗಿ ಹೋಗಿದೆ. ಹೆಚ್ಚಾಗಿ ನೀರು, ತಾಜಾ ಜ್ಯೂಸ್ (ಸಕ್ಕರೆ ರಹಿತ), ಸೂಪ್‌ನಂತಹ ದ್ರವ ರೂಪದ ಆಹಾರ ಸೇವಿಸುತ್ತೇನೆ. ನನ್ನ ಬ್ಯಾಗಿನಲ್ಲಿ ಯಾವತ್ತೂ ಒಂದು ಹಿಡಿ ಬಾದಾಮಿ ಇದ್ದೇ ಇರುತ್ತವೆ.
ಶೀಲಾ ಕೃಷ್ಣಮೂರ್ತಿ

ಈಚೆಗಷ್ಟೇ ಕೊಂಡ ಪ್ರೀತಿಯ ಹೊಸ ಪ್ಯಾಂಟ್ ಒಂದಿಂಚು ಬಿಗಿಯಾದರೆ ಸಾಕು. ‘ಅಯ್ಯೋ, ದಪ್ಪ ಆಗುತ್ತಿದ್ದೇನಾ?’ ಎಂದು ಪೇಚಾಡಿಕೊಳ್ಳುವುದುಂಟು. ಆಗ ಅನೇಕರು ಅನುಸರಿಸುವ ಮೊದಲ ಉಪಹಾರ ತಪ್ಪಿಸುವುದು.

ಇದು ಅವೈಜ್ಞಾನಿಕ ಕ್ರಮ. ಉಪಾಹಾರ ತಪ್ಪಿಸುವುದರಿಂದ ಅನಾನುಕೂಲವೇ ಹೆಚ್ಚು. ಉಪಾಹಾರ ತ್ಯಜಿಸಿದರೆ ಮಧ್ಯಾಹ್ನ ಹಸಿವು ಹೆಚ್ಚಾಗುತ್ತದೆ. ಆಗ ಯದ್ವಾತದ್ವಾ ತಿಂದು ಬಿಡುತ್ತೇವೆ. ಅನಗತ್ಯ ಕ್ಯಾಲೊರಿ ಹೊಟ್ಟೆ ಸೇರುತ್ತದೆ. ಅಲ್ಲದೇ, ರಾತ್ರಿ ಪೂರ್ತಿ ನಾವು ಏನನ್ನೂ ಸೇವಿಸಿರುವುದಿಲ್ಲ. ಬೆಳಿಗ್ಗೆಯೂ ಖಾಲಿ ಹೊಟ್ಟೆಯಿಂದ ಓಡಾಡಿದರೆ ಸುಸ್ತು, ತಲೆನೋವು, ಆಯಾಸ, ಆಸಿಡಿಟಿಯಂತಹ ಸಮಸ್ಯೆಗಳು ಬೆನ್ನಟ್ಟುತ್ತವೆ. ಬೆಳಿಗ್ಗೆ ಒಂದು ಬಟ್ಟಲು ಧಾನ್ಯ, ಅಥವಾ ಗಂಜಿ ಅಥವಾ ಹಣ್ಣು ಸೇವಿಸುವುದು ಉತ್ತಮ.

ತರಕಾರಿ–ಹಣ್ಣು ಹೆಚ್ಚಿರಲಿ
ಊಟ ಹಾಗೂ ಉಪಾಹಾರದಲ್ಲಿ ಅಧಿಕ ಪ್ರಮಾಣದ ತಾಜಾ ತರಕಾರಿ–ಹಣ್ಣುಗಳಿರಲಿ. ಯಾವುದೇ ಒಂದು ಬಗೆಯ ಹಣ್ಣು–ತರಕಾರಿಯನ್ನೇ ಹೆಚ್ಚಾಗಿ ಸೇವಿಸುವುದು ಬೇಡ. ಎಲ್ಲಾ ಪ್ರಕಾರದ ತರಕಾರಿಗಳನ್ನು, ಹಣ್ಣುಗಳನ್ನು ಸಮಪ್ರಮಾಣದಲ್ಲಿ ಸೇವಿಸಿ.

ಸೂಪ್ ಉತ್ತಮ ಆಯ್ಕೆ
ತೂಕ ಇಳಿಸುವ ಪ್ರಯತ್ನದಲ್ಲಿ ಸೂಪ್ ಕುಡಿಯುವುದು ಉತ್ತಮ ಆಯ್ಕೆ. ಊಟ ಮಾಡುವ ಮೊದಲು ಸೂಪ್ ಕುಡಿಯುವುದರಿಂದ ಊಟದ ಪ್ರಮಾಣ ಕಡಿಮೆ ಆಗುತ್ತದೆ. ಆದರೆ ಸಾಧಾರಣವಾದ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೊರಿಗಳಿಲ್ಲದ ಸೂಪ್ ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

ಅಯೋಡಿನ್ ಅಂಶವೂ ಬೇಕು
ದೇಹ ಸುಸ್ಥಿತಿಯಲ್ಲಿರಲು ಅಯೋಡಿನ್ ಅಂಶ ಬಹಳ ಮುಖ್ಯ. ಥೈರಾಯ್ಡ್‌ನ ಕಾರ್ಯಕ್ಷಮತೆ ಹೆಚ್ಚಿಸಲು ಸಹ ಇದು ಸಹಕಾರಿ. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಶಕ್ತಿ ಕಡಿಮೆಯಾಗುತ್ತದೆ. ಮೈಗ್ರೇನ್, ಅಧಿಕ ತೂಕ, ಸೋಂಕು, ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರಬಹುದು.

ಹಾಲು–ಮೊಸರು ಇರಲಿ
ಆಹಾರದಲ್ಲಿ ಹಾಲು, ಮೊಸರು, ಎಲೆಕೋಸು, ಪಾಲಾಕ್ ಸೊಪ್ಪು ಸೇರಿರಲಿ. ಈ ಪದಾರ್ಥಗಳಲ್ಲಿರುವ ಕ್ಯಾಲ್ಸಿಯಂ ಅಂಶ ಮಾನಸಿಕ ಒತ್ತಡವನ್ನು ನಿವಾರಿಸಿ, ಖಿನ್ನತೆಯನ್ನು ದೂರ ಮಾಡುತ್ತದೆ. ಕ್ಯಾಲ್ಸಿಯಂ ಕೊರತೆಯಾದರೆ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿ ದೇಹದ ತೂಕ ಹೆಚ್ಚಾಗುತ್ತದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT