ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾನ್‌ ಬ್ರಾಡ್ಮನ್‌ಗಿಂತ ತೆಂಡೂಲ್ಕರ್‌ ಶ್ರೇಷ್ಠ...

ಇಂದು ಸಚಿನ್‌ 41ನೇ ಹುಟ್ಟುಹಬ್ಬ; ‘ಗ್ರೇಟರ್‌ ದೆನ್‌ ಬ್ರಾಡ್ಮನ್‌’ ಪುಸ್ತಕದಲ್ಲಿ ವಿಶ್ಲೇಷಣೆ
Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್ಮನ್‌ಗಿಂತಲೂ ಬ್ಯಾಟಿಂಗ್‌ ಚಾಂಪಿಯನ್ ಸಚಿನ್‌ ತೆಂಡೂಲ್ಕರ್‌ ಶ್ರೇಷ್ಠ. ಸರ್ವಕಾಲಕ್ಕೂ ಸಚಿನ್‌ ಅತ್ಯುತ್ತಮ ಆಟಗಾರ. ಅವರಂಥ ಬ್ಯಾಟ್ಸ್‌ಮನ್‌ ಮತ್ತೊಬ್ಬರಿಲ್ಲ...’
ಚೆನ್ನೈ ಮೂಲದ ಲೇಖಕ ರುಡಾಲ್ಫ್‌ ಲ್ಯಾಂಬರ್ಟ್‌ ಫೆರ್ನಾಂಡಿಸ್‌ ಬರೆದಿರುವ  ‘ಗ್ರೇಟರ್‌ ದೆನ್‌ ಬ್ರಾಡ್ಮನ್‌’ ಪುಸ್ತಕದಲ್ಲಿ ವಿಶ್ಲೇಷಿಸಿರುವ ಮಾಹಿತಿಯಿದು.

ಇಬ್ಬರು ಖ್ಯಾತ ಕ್ರಿಕೆಟಿಗರ ನಡುವೆ ಶ್ರೇಷ್ಠ ಯಾರು ಎನ್ನುವ ಪ್ರಶ್ನೆ ಸಾಕಷ್ಟು ಸಲ ಉದ್ಭವವಾಗಿದೆ. ಸಚಿನ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಗುರುವಾರ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿಯೇ ಪುಸ್ತಕ ಚರ್ಚೆಗೆ ನಾಂದಿ ಹಾಡಿದೆ. ಮುಂಬೈನ ಆಟಗಾರನಿಗೆ  ಗುರುವಾರ 41ನೇ ವರ್ಷದ ಹುಟ್ಟುಹಬ್ಬ.

‘ನಾನು ಬರೆದಿರುವ ಪುಸ್ತಕ ಸಚಿನ್‌ ಅಥವಾ ಬ್ಯಾಡ್ಮನ್‌ ಕುರಿತ ಆತ್ಮಕಥೆ ಅಲ್ಲ. ಈ ಹಿಂದೆ ಪ್ರಕಟವಾಗಿರುವ ಸಂದರ್ಶನಗಳ ಸಂಗ್ರಹ ರೂಪವೂ ಅಲ್ಲ. ಇಬ್ಬರೂ ಕ್ರಿಕೆಟಿಗರ ಅಂಕಿಅಂಶಗಳ ಸಾಧನೆಯನ್ನು ಅವಲೋಕಿಸಿ ವಿಶ್ಲೇಷಣೆ ಮಾಡಿದ್ದೇನೆ. ಇದರಿಂದ ಸಚಿನ್‌ ಸರ್ವಕಾಲಕ್ಕೂ ಒಪ್ಪುವ ಶ್ರೇಷ್ಠ ಆಟಗಾರ ಎನ್ನುವುದು ಗೊತ್ತಾಗುತ್ತದೆ’ ಎಂದು ಲೇಖಕ ಫೆರ್ನಾಂಡಿಸ್‌ ಹೇಳಿದ್ದಾರೆ.

ಈ ಪುಸ್ತಕವನ್ನು ಸಚಿನ್ ಸಹೋದರ ಅಜಿತ್‌, ಪತ್ನಿ ಅಂಜಲಿ ತೆಂಡೂಲ್ಕರ್‌ ಮತ್ತು ಮೊದಲ ಕೋಚ್‌ ರಮಾಕಾಂತ್ ಆಚ್ರೇಕರ್‌ ಅವರಿಗೆ ನೀಡಲು ಫೆರ್ನಾಂಡಿಸ್‌ ಬಯಸಿದ್ದಾರೆ.

‘ಪುಸ್ತಕವನ್ನು ಸಚಿನ್‌ ಕುಟುಂಬಕ್ಕೆ ನೀಡಲು ಕಾತರದಿಂದ ಕಾಯುತ್ತಿದ್ದೇನೆ. ಪುಸ್ತಕದ ಬಗ್ಗೆ ಅಜಿತ್‌, ಅಂಜಲಿ ಮತ್ತು ಆಚ್ರೇಕರ್‌ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಕುತೂಹಲವಿದೆ. ಪುಸ್ತಕದಿಂದ ಸಚಿನ್‌ ಹೇಗೆ ಶ್ರೇಷ್ಠ ಕ್ರಿಕೆಟಿಗ ಎನ್ನುವುದು ತಿಳಿಯುತ್ತದೆ. ಜೊತೆಗೆ ಅವರು ಸಾಕಷ್ಟು ಗೌರವಕ್ಕೆ ಪಾತ್ರರಾದ ವ್ಯಕ್ತಿ ಎನ್ನುವುದೂ ಗೊತ್ತಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘21ನೇ ಶತಮಾನದ ಕ್ರಿಕೆಟ್ ಓದುಗರು ಡಾನ್‌ ಬ್ರಾಡ್ಮನ್‌ ಅವರನ್ನು ತೀರಾ ಹತ್ತಿರದಿಂದ ನೋಡಬೇಕಿದೆ. ಅವರ ಬಗ್ಗೆ ತಿಳಿದುಕೊಳ್ಳಬೇಕಿದೆ. ಸಚಿನ್‌ ತೆಂಡೂಲ್ಕರ್‌ ಜೊತೆಗೂ ಹೋಲಿಕೆ ಮಾಡಬೇಕಿದೆ. ಆಸ್ಟ್ರೇಲಿಯಾದ ಬ್ಯಾಡ್ಮನ್‌ ಎಷ್ಟೊಂದು ಸಲ ರನ್‌ ಗಳಿಸದೇ ಔಟ್‌ ಆಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಪುಸ್ತಕ ಸಚಿನ್‌ ಅವರ ಪೂರ್ಣ ಕ್ರಿಕೆಟ್‌ ಜೀವನವನ್ನು ಅವಲೋಕಿಸಿ ಬರೆದಿದ್ದು. ಹೊಸ ದೃಷ್ಟಿಕೋನದಿಂದ ನೋಡಲಾಗಿದೆ’ ಎಂದು ಫೆರ್ನಾಂಡಿಸ್‌ ಹೇಳಿದ್ದಾರೆ.

‘ಒಂದು ಕಾಲಮಿತಿಯಲ್ಲಿ ಸಚಿನ್‌ ತೋರಿದ ಸಾಧನೆಯನ್ನು ಪರಿಗಣಿಸಿ  ಅವರು ಶ್ರೇಷ್ಠ ಎಂದು ನಾನು ಹೇಳುತ್ತಿಲ್ಲ. ಕ್ರಿಕೆಟ್‌ ಜೀವನದಲ್ಲಿನ ಒಟ್ಟಾರೆ ಸಾಧನೆಯನ್ನು ಗಮನಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದೂ ಅವರು ಹೇಳಿದ್ದಾರೆ. ಇದೇ ವರ್ಷದ ಮೇ ಅಥವಾ ಜೂನ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ಸಚಿನ್‌ ಅವರನ್ನು ಸನ್ಮಾನಿಸಲು ಯೋಜಿಸಿದೆ. ಆಗ ಅವರ ಪುಸ್ತಕ ಸಿಗಲಿದೆ.

ಲಂಡನ್‌ನಲ್ಲಿರುವ ಲಾರ್ಡ್ಸ್‌್ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗಿ ಇದೇ ವರ್ಷದ ಜುಲೈಗೆ ಭರ್ತಿ 200 ವರ್ಷವಾಗಲಿದೆ. ಈ ನೆನಪಿಗಾಗಿ ನಡೆಯಲಿರುವ 50 ಓವರ್‌ಗಳ ಕ್ರಿಕೆಟ್‌ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ಎಂಸಿಸಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯ ವಿಶ್ವ ಇತರೆ ತಂಡದ ಎದುರು ನಡೆಯಲಿದೆ. ಶೇನ್‌ ವಾರ್ನ್‌ ಈ ತಂಡಕ್ಕೆ ನಾಯಕರಾಗಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಹೋದ ವರ್ಷದ ನವೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ತಮ್ಮ ಕೊನೆಯ ಹಾಗೂ 200ನೇ ಟೆಸ್ಟ್‌್ ಪಂದ್ಯವನ್ನು ಹುಟ್ಟೂರು ಮುಂಬೈನಲ್ಲಿಯೇ ಆಡಿದ್ದರು. ಬಲಗೈ ಬ್ಯಾಟ್ಸ್‌ಮನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 15921 ರನ್‌ ಗಳಿಸಿದ್ದಾರೆ. ಅವರು ನಿವೃತ್ತಿಯಾದಾಗ ಸರಾಸರಿ 53.78 ಇತ್ತು. ಏಕದಿನ ಮಾದರಿಯಲ್ಲಿ 463 ಪಂದ್ಯಗಳಿಂದ 18426 ರನ್‌ ಕಲೆ ಹಾಕಿದ್ದಾರೆ. ಶತಕಗಳ ಶತಕ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಯೂ ಅವರ ಹೆಸರಿನಲ್ಲಿದೆ.

ಈ ಪುಸ್ತಕವು ಶೀಘ್ರದಲ್ಲಿಯೇ ಆನ್‌ಲೈನ್‌ ಮೂಲಕ ಲಭಿಸಲಿದೆ. ಅದಕ್ಕಾಗಿ www.flipkart.com ಮತ್ತು www.infibeam.com ಇಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT