ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲ್ಫಿನ್ಸ್‌ ಸವಾಲಿಗೆ ಸೂಪರ್‌ ಕಿಂಗ್ಸ್‌ ಸಜ್ಜು

ಚಾಂಪಿಯನ್ಸ್ ಲೀಗ್‌ ಕ್ರಿಕೆಟ್: ಉದ್ಯಾನನಗರಿಯಲ್ಲಿ ಇಂದು ಮೊದಲ ಪಂದ್ಯ
Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿಯಲ್ಲಿ ಈಗ ಮತ್ತೆ ಚುಟುಕು ಕ್ರಿಕೆಟ್‌ನ ಸಡಗರ. 2010ರ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ದಕ್ಷಿಣ ಆಫ್ರಿಕಾದ ಡಾಲ್ಫಿನ್ಸ್‌  ತಂಡಗಳು ಸೋಮವಾರ ನಡೆಯಲಿರುವ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ.

ಎರಡು ವರ್ಷಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್‌ ಲೀಗ್‌   ಪಂದ್ಯ ಆಯೋಜನೆಯಾಗಿದೆ. ಮೂರು ತಿಂಗಳ ಹಿಂದೆ ಇಲ್ಲಿ ಐಪಿಎಲ್ ಫೈನಲ್‌ ನಡೆದಿತ್ತು. ಈಗ ಮತ್ತೆ ಚುಟುಕು ಕ್ರಿಕೆಟ್‌್ ಬಂದಿರುವುದು ಕ್ರಿಕೆಟ್‌ ಪ್ರೇಮಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

2011ರಲ್ಲಿ ಆರ್‌ಸಿಬಿ ಹಾಗೂ ನ್ಯೂ ಸೌತ್ ವೇಲ್ಸ್‌ ನಡುವೆ ಇಲ್ಲಿ ಕೊನೆಯ ಸಲ ಚಾಂಪಿಯನ್ಸ್‌ ಲೀಗ್‌  ಪಂದ್ಯ ನಡೆದಿತ್ತು. 2012ರಲ್ಲಿ ಟೂರ್ನಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿತ್ತು. ಹೋದ ಸಲ ಯಾವ ಪಂದ್ಯಗಳೂ ಬೆಂಗಳೂರಿನಲ್ಲಿ ನಡೆದಿರಲಿಲ್ಲ.

ಸೂಪರ್‌ ಕಿಂಗ್ಸ್‌ ನೆಚ್ಚಿನ ತಂಡ
ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಸೂಪರ್‌ ಕಿಂಗ್ಸ್ ತಂಡ ಉದ್ಘಾಟನಾ ಪಂದ್ಯದಲ್ಲಿ ಐಪಿಎಲ್‌ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಸೋಲು ಕಂಡಿತ್ತು. ದಕ್ಷಿಣ ಆಫ್ರಿಕಾದ ದೇಸಿ ಟ್ವೆಂಟಿ–20  ಟೂರ್ನಿಯಲ್ಲಿ ಚಾಂಪಿಯನ್‌ ಆಗಿರುವ ಡಾಲ್ಫಿನ್ಸ್‌  ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ಪರ್ತ್ ಸ್ಕಾಚರ್ಸ್‌ ಎದುರು ಸೋಲು ಕಂಡಿದೆ. ಹರಿಣಗಳ ನಾಡಿನ ಡಾಲ್ಫಿನ್ಸ್‌ ಮತ್ತು ಸೂಪರ್‌ ಕಿಂಗ್ಸ್ ತಂಡಗಳು ಸಮಬಲ ಹೊಂದಿರುವ ಕಾರಣ ಈ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಆದರೆ, ಸೂಪರ್‌ ಕಿಂಗ್ಸ್‌ ಗೆಲುವು ಪಡೆಯಲಿ ಎನ್ನುವುದು ಇಲ್ಲಿನ ಕ್ರಿಕೆಟ್‌ ಪ್ರೇಮಿಗಳ ಹಾರೈಕೆ.

ದೋನಿ ಪಡೆ  ನೈಟ್ ರೈಡರ್ಸ್‌ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗಿತ್ತು. ಆರಂಭಿಕ ಜೋಡಿ ಡ್ವೇನ್‌ ಸ್ಮಿತ್‌ ಮತ್ತು ಬ್ರೆಂಡನ್‌ ಮೆಕ್ಲಮ್‌ ಗಟ್ಟಿ ಬುನಾದಿ ನಿರ್ಮಿಸುವಲ್ಲಿ ವಿಫಲರಾಗಿದ್ದರು. ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್ ಸುರೇಶ್‌ ರೈನಾ, ಫಾಫ್‌ ಡು ಪ್ಲೆಸಿಸ್‌ ಮತ್ತು ನಾಯಕ ದೋನಿ ವೈಫಲ್ಯ ಅನುಭವಿಸಿದ್ದ ಕಾರಣ ತಂಡಕ್ಕೆ ಸೋಲು ಎದುರಾಗಿತ್ತು. ಆದರೆ, ಇವರು ಪಂದ್ಯದ ಗತಿ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ.  ಹೋದ ಸಲದ ಚಾಂಪಿಯನ್ಸ್ ಲೀಗ್‌ನಲ್ಲಿ ರೈನಾ (ಒಟ್ಟು 608) ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿದ್ದರು.

ವೇಗಿಗಳಾದ ಆಶಿಶ್‌ ನೆಹ್ರಾ, ಈಶ್ವರ್‌ ಪಾಂಡೆ, ಮೋಹಿತ್‌ ಶರ್ಮ, ಅನುಭವಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಆರ್‌. ಅಶ್ವಿನ್‌ ಡಾಲ್ಫಿನ್ಸ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈ ಬೌಲರ್‌ಗಳು ‘ಡೆತ್‌’ ಓವರ್‌ಗಳಲ್ಲಿ ಹೆಚ್ಚು ರನ್‌ ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸಬೇಕಿದೆ. ತಂಡದ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಇದೇ ಮಾತು ಹೇಳಿದರು. ‘ಕೊನೆಯ ಓವರ್‌ಗಳಲ್ಲಿ ಹೆಚ್ಚು ರನ್‌ ಬಿಟ್ಟುಕೊಡದಿದ್ದರೆ ಗೆಲುವು ಕಷ್ಟವೇನಲ್ಲ’ ಎಂದು ಅವರು ನುಡಿದರು.

ಮೂರು ದಿನಗಳ ಹಿಂದೆಯೇ ನಗರಕ್ಕೆ ಬಂದಿರುವ ಸೂಪರ್‌ ಕಿಂಗ್ಸ್‌ ಸಾಕಷ್ಟು ವಿಶ್ರಾಂತಿ ಪಡೆದಿದೆ. ಜೊತೆಗೆ ಅಭ್ಯಾಸಕ್ಕೂ ಒತ್ತು ನೀಡಿದೆ. ನಿರಂತರವಾಗಿ ಕ್ರಿಕೆಟ್‌ ಗುಂಗಿನಲ್ಲಿದ್ದ ದೋನಿ ಭಾನುವಾರ ಬ್ಯಾಡ್ಮಿಂಟನ್‌ ಆಡಿ ದೈಹಿಕ ಕಸರತ್ತು ನಡೆಸಿದ್ದಾರೆ. ಚುಟುಕು ಕ್ರಿಕೆಟ್‌ ಸಂಭ್ರಮಕ್ಕೆ ಚಿನ್ನಸ್ವಾಮಿ ಅಂಗಳವೂ ಸಿಂಗಾರಗೊಂಡಿದೆ. ಪ್ರೇಕ್ಷಕರು ಟಿಕೆಟ್‌ ಗಿಟ್ಟಿಸಲು ಮುಗಿ ಬಿದ್ದಿದ್ದು ಚಾಂಪಿಯನ್ಸ್ ಲೀಗ್‌ ಅಭಿಮಾನಿಗಳಲ್ಲಿ ಮೂಡಿಸಿರುವ ಕುತೂಹಲಕ್ಕೆ ಸಾಕ್ಷಿ.

ಪುಟಿದೇಳುವ ತವಕ
ಬಲಿಷ್ಠ ತಂಡವೆನಿಸಿರುವ ಡಾಲ್ಫಿನ್ಸ್‌ ಮೊದಲ ಸೋಲಿನಿಂದ ಹೊರಬಂದು ಗೆಲುವು ಪಡೆಯುವ ವಿಶ್ವಾಸ ಹೊಂದಿದೆ. ಮೊಹಾಲಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡಾಲ್ಫಿನ್ಸ್‌ 164 ರನ್‌ ಗಳಿಸಿ ಯೂ ಸೋಲು ಕಂಡಿತ್ತು. ಖಾಯಾ ಜೊಂಡೊ (63) ಅರ್ಧಶತಕ ಬಾರಿಸಿದ್ದರು. ಆದರೆ, ಈ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿಲ್ಲ. ಇದು ಸೂಪರ್‌ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಹೊಳೆ ಹರಿಸಲು ನೆರವಾಗಬಹುದು.


ತಂಡಗಳು
ಚೆನ್ನೈ ಸೂಪರ್‌ ಕಿಂಗ್ಸ್‌: ಮಹೇಂದ್ರ ಸಿಂಗ್‌ ದೋನಿ (ನಾಯಕ), ಸುರೇಶ್‌ ರೈನಾ, ಆಶಿಶ್ ನೆಹ್ರಾ, ಮಿಥುನ್‌ ಮನ್ಹಾಸ್‌, ರವಿಚಂದ್ರನ್‌ ಅಶ್ವಿನ್‌, ಈಶ್ವರ್‌ ಪಾಂಡೆ, ಪವನ್‌ ನೇಗಿ, ರವೀಂದ್ರ ಜಡೇಜ, ಮೋಹಿತ್‌ ಶರ್ಮ, ಡ್ವೇನ್‌ ಸ್ಮಿತ್‌, ಡ್ವೇನ್ ಬ್ರಾವೊ, ಜಾನ್‌ ಹಾಸ್ಟಿಂಗ್‌, ಬ್ರೆಂಡನ್‌ ಮೆಕ್ಲಮ್‌, ಸ್ಯಾಮುಯೆಲ್ ಬದ್ರಿ ಮತ್ತು ಫಾಫ್‌ ಡು ಪ್ಲೆಸಿಸ್‌.
ಡಾಲ್ಫಿನ್ಸ್‌: ಮಾರ್ನ್‌ ವಾನ್‌ ವಾಕ್‌ (ನಾಯಕ), ಕೇಲ್‌ ಅಬಟ್‌, ಕ್ರೆಗ್‌ ಅಲೆಕ್ಸಾಂಡರ್‌, ಕೋಡಿ ಚೆಟ್ಟಿ, ಕ್ಯಾಮರೂನ್‌ ಡಾಲ್‌ಪೋರ್ಟ್‌್, ಡ್ರ್ಯಾನ್‌ ಡುಪಾವಿಲೊನ್‌, ರಾಬಿ ಫ್ರೈಲಿಂಕ್‌, ಕೇಶವ್‌ ಮಹಾರಾಜ್‌, ಸಿಬೊನೆಲೊ ಮೇಕನ್‌, ಅಂಡಿಲೆ ಪೆಹ್ಲುಕಿವಾಯಿ, ಡೇರ್ನ್‌ ಸ್ಮಿತ್‌, ಪ್ರಣೇಲನ್ ಸುಬ್ರಯನ್‌, ಜೊನಾಥನ್‌ ವಂಡಿಯಿರ್‌, ವಾಗನ್ ವಾನ್‌ ಜಾರ್ಸೆವೆಲ್ಡ್‌ ಮತ್ತು ಖಾಯಾ ಜೊಂಡೊ.
ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ.
ಆರಂಭ: ರಾತ್ರಿ 8ಕ್ಕೆ.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT