ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಶಾರುಖ್‌ ಖಾನ್‌ ಜೀವನ ಪಾಠ

Last Updated 23 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಎಡಿನ್‌ಬರೊ ವಿಶ್ವವಿದ್ಯಾಲಯವು ಶಾರುಖ್‌ ಖಾನ್‌ ಗೆ ಗೌರವ ಡಾಕ್ಟರೇಟ್‌ ಪದವಿ ನೀಡುವುದರೊಂದಿಗೆ ಉಪನ್ಯಾಸ ನೀಡಲೂ ಅಹ್ವಾನಿಸಿತ್ತು. ಉಪನ್ಯಾಸದ ವಿಷಯ ಜೀವನಪಾಠಗಳು. ಶಾರುಖ್‌ ತಮ್ಮ ಚಿತ್ರಕತೆಗಳಿಂದಲೇ ಕಲಿತಿದ್ದನ್ನು ಇಲ್ಲಿಯ ವಿದ್ಯಾರ್ಥಿಗಳೊಡನೆ ಹಂಚಿಕೊಂಡರು. ತಮ್ಮ ಮೊದಲ ಚಿತ್ರ ’ದೀವಾನಾ’ ಕತೆಯಿಂದ ಹುಚ್ಚುತನದ ಪಾಠ ಕಲಿಯಲು ಹೇಳಿದರು.

ದೀವಾನಾ: ಪ್ರೀತಿಗಾಗಿ ಹುಚ್ಚರಾಗುವುದು, ಹುಚ್ಚುತನದ ಪ್ರೀತಿ ಇವೆರಡೂ ಯಶಸ್ಸಿನತ್ತ ಸಾಗುವ ಹುಮ್ಮಸ್ಸು ನೀಡುತ್ತವೆ.  ಜಗತ್ತಿನ ಎಲ್ಲ ಸಂಶೋಧನೆಗಳೂ ಇಂಥವೇ ಹುಚ್ಚುತನದ ಫಲಿತಾಂಶವಾಗಿವೆ. ಛಲದಿಂದ ಗುರಿಯತ್ತ ಸಾಗುವ ಹುಚ್ಚುತನ ಇದ್ದರೆ ಬದುಕು ತಾನೇ ಸಲೀಸಾಗುತ್ತದೆ. ಯಾವುದೂ ಕಠಿಣವೆನಿಸದು.

ಚಮತ್ಕಾರ್‌: ಸ್ನೇಹಿತರಿಂದ ವಂಚನೆಗೊಳಗಾಗಿ ಎಲ್ಲವನ್ನೂ ಕಳೆದುಕೊಂಡಾಗಲೂ ಬದುಕು ಮುಗಿಯುವುದಿಲ್ಲ. ಬದುಕು ಅಲ್ಲಿಂದಲೇ ಆರಂಭವಾಗುತ್ತದೆ. ಚಿತ್ರದಲ್ಲಿ ಬರುವಂತೆ ಯಾವುದೇ ಸಹಾಯಕ ಭೂತ ಬರದಿದ್ದರೂ ಹಲವಾರು ಚಮತ್ಕಾರಗಳಂತೂ ಕಾದಿರುತ್ತವೆ. ‘ಬಾರದು ಬಪ್ಪದು ಬಪ್ಪದು ತಪ್ಪದು’ ಎಲ್ಲವೂ ಮುಗಿದು ಹೋಯಿತು ಎಂದುಕೊಂಡಾಗಲೂ ಬದುಕು ಮುಗಿಯುವುದಿಲ್ಲ. ನಿಮ್ಮಲ್ಲಿ ವಿಶ್ವಾಸವಿರಿಸಿಕೊಂಡರೆ, ನಿಮ್ಮ ಸಾಮರ್ಥ್ಯ ಹೆಚ್ಚುತ್ತಲೇ ಹೋಗುತ್ತದೆ. ಕಳೆದು ಹೋದುದರತ್ತ ಗಮನ ನೀಡಬೇಡಿ. ಇನ್ನೇನೋ ಚಮತ್ಕಾರ ಕಾದಿದೆ ಎಂಬ ಸಕಾರಾತ್ಮಕ ನಿರೀಕ್ಷೆ ಇರಲಿ. ನಿಮ್ಮ ಆರೋಗ್ಯಕ್ಕೆ, ನಿಮ್ಮನ್ನು ಹಚ್ಚಿಕೊಂಡವರ ಪ್ರೀತಿಗಾಗಿ ಕೃತಜ್ಞರಾಗಿರಿ. ನಿಮ್ಮನ್ನು ಗೌರವಿಸಿಕೊಳ್ಳಿ. ನಿಮ್ಮ ಬದುಕನ್ನೂ ಗೌರವಿಸಿ. ಅದರಿಂದ ವಿಮುಖರಾಗಿ ನಿಮ್ಮನ್ನು ನೀವೇ ಅವಮಾನಿಸಿಕೊಳ್ಳಬೇಡಿ. ಪ್ರತಿಯೊಂದಕ್ಕೂ ಕೃತಜ್ಞರಾದಾಗ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಯಶಸ್ಸಿಗಾಗಿ ಪ್ರಯತ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಡರ್‌, ಬಾಜಿಗರ್‌: ನಿಮ್ಮ ಸುತ್ತಲಿರುವ ವಿಶ್ವದ ಸೌಂದರ್ಯವನ್ನು ಸವಿಯಿರಿ. ಪ್ರೀತಿಯ ಹರಿವನ್ನು ಗುರುತಿಸಿ. ಪ್ರೀತಿಯನ್ನು ಸ್ವೀಕರಿಸಿ. ಅದನ್ನೇ ಹಂಚಿ. ಬರುವ ವಿಪತ್ತುಗಳನ್ನು ಜೂಜೆಂದು ಭಾವಿಸಿ, ರಿಸ್ಕ್‌ಗಳನ್ನು ಸ್ವೀಕರಿಸಲು ತಯಾರಾಗಿ. ಆಗ ನಿಮ್ಮ ಅಂತಃಶಕ್ತಿ ಹೆಚ್ಚುತ್ತದೆ. ಎಂಥದ್ದೇ ಆಪತ್ಕಾಲವನ್ನೂ ನಿಭಾಯಿಸುವ ಶಕ್ತಿ ನಮ್ಮಲ್ಲಿ ಇದ್ದೇ ಇರುತ್ತದೆ. ಅದನ್ನು ಜಾಗೃತಗೊಳಿಸಬೇಕಷ್ಟೆ.

ಈ ಚಿತ್ರಗಳ ನಂತರ ಹಲವಾರು ನೆಗೆಟಿವ್‌ ಪಾತ್ರಗಳು ನನ್ನನ್ನು ಅರಸಿಬಂದವು. ಕಾರಣ ಹೀರೋ ಆಗಬೇಕಾದ ಮುಖ ನನಗಿರಲಿಲ್ಲ. ನನಗೆ ಚಾಕಲೇಟ್‌ ಹೀರೊ ಲುಕ್‌ ಇರಲಿಲ್ಲ ಎಂದು ನನ್ನ ಸ್ನೇಹಿತರು, ನಿರ್ದೇಶಕರು ಹೇಳಿದ್ದರು. ಆದರೆ ನಟನೆಯ ಒಲವು ನನ್ನಲ್ಲಿತ್ತು. ನನ್ನ ಮುಖಕ್ಕಿಂತಲೂ ನನ್ನ ನಟನೆಯೇ ಹೆಚ್ಚು ಅಂಕಗಳಿಸುತ್ತದೆ ಎನ್ನುವ ವಿಶ್ವಾಸವಿತ್ತು. ನಿಮ್ಮನ್ನು ನೀವು ಪ್ರೀತಿಸಿ. ಆತ್ಮವಿಶ್ವಾಸದ ಖನಿ ನೀವಾಗುವಿರಿ. ನೀವು ಹೇಗೆ ಕಾಣುವಿರಿ ಎನ್ನುವುದಕ್ಕಿಂತಲೂ ನೀವು ಹೇಗಿರುವಿರಿ, ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸುವಿರಿ ಎನ್ನುವುದು ಮುಖ್ಯವಾಗುತ್ತದೆ.

ಕಭಿ ಹಾಂ, ಕಭಿ ನಾ: ಗೊಂದಲ ಈ ಚಿತ್ರದ ಜೀವಾಳವಾಗಿತ್ತು. ಜೀವನದಲ್ಲಿ ಗೊಂದಲಗಳಿರಬೇಕು. ಆಗಲೇ ನಾವು ಸ್ಪಷ್ಟತೆಯತ್ತ ಸಾಗುವ ಯತ್ನವನ್ನು ಮಾಡುತ್ತೇವೆ. ಈ ಗೊಂದಗಳೊಂದಿಗೆ ನಾವು ಜನರನ್ನು ಜನರ ಭಾವನೆಗಳನ್ನು ಗೌರವಿಸುವುದು ಕಲಿಯಬೇಕು.

ಕುಛ್‌ ಕುಛ್‌ ಹೋತಾ ಹೈ: ಜೀವನದಲ್ಲಿ ಸಂಗಾತಿಯನ್ನು ಪ್ರೀತಿಯನ್ನು ಕಳೆದುಕೊಂಡಾಗ ಸ್ನೇಹಿತರು ಬದಕಿನಲ್ಲಿ ಆಸರೆ ನೀಡುತ್ತಾರೆ. ಜೀವನ ಸರಾಗವಾಗಿ ಹರಿಯುವ ನದಿಯಲ್ಲಿ ಈ ನದಿಯಲ್ಲಿನ ದೋಣಿಗಳು ನಾವು. ಕೆಲವೊಮ್ಮೆ ನಾವೇ ಹುಟ್ಟು ಹಾಕಿ ನೂಕಬೇಕು. ಇನ್ನು ಕೆಲವೊಮ್ಮೆ ಅದೇ ಕರೆದೊಯ್ಯುತ್ತದೆ.

ಇದಲ್ಲದೇ ಗುಡ್ಡು, ಜೋಷ್‌, ಕಭಿ ಅಲ್ವಿದಾ ನಾ ಕೆಹನಾ, ಮೈ ನೇಮ್‌ ಈಸ್‌ ಖಾನ್‌, ಚಖ್‌ ದೇ, ಮುಂತಾದ ಚಿತ್ರಗಳಿಂದಲೂ ಹಲವಾರು ಸಕಾರಾತ್ಮಕ ಅಂಶಗಳನ್ನು ಹೆಕ್ಕಿ ವಿದ್ಯಾರ್ಥಿಗಳ ಮುಂದಿಟ್ಟ ಶಾರುಖ್‌ ಖಾನ್‌ ಅವರ ಜೀವನ ಪಾಠವನ್ನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT