ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒ: ಉದ್ದೇಶ ಸಫಲವೇ?

Last Updated 22 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಸೇರಿದ ಪ್ರಯೋಗಾಲಯವೊಂದು ಪೌಷ್ಟಿಕಾಂಶಗಳಿರುವ ಉತ್ಪನ್ನಗಳಿಗೆ ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪೆನಿ ಜೊತೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿತು. ಡಿಆರ್‌ಡಿಒ ಮತ್ತು ಫಿಕ್ಕಿಯ ‘ತಂತ್ರಜ್ಞಾನ ಪರಿಶೀಲನೆ ಮತ್ತು ವಾಣಿಜ್ಯೀಕರಣ ವೇಗವರ್ಧಕ’ ಕಾರ್ಯಕ್ರಮದ ಅಡಿ ಈ ಒಪ್ಪಂದ ಜನ್ಮತಾಳಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ನಾಗರಿಕ ಬಳಕೆಯ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಉಪಯೋಗಿಸಿಕೊಳ್ಳಲು ವಾಣಿಜ್ಯಿಕ ಮಾರ್ಗವೊಂದನ್ನು ಕಂಡುಕೊಳ್ಳುವುದು ಈ ಕಾರ್ಯಕ್ರಮದ ಗುರಿ. ಡಾಬರ್ ಲಿಮಿಟೆಡ್, ಗುಜರಾತ್ ಫ್ಲೂರೊಕೆಮಿಕಲ್ಸ್ ಲಿಮಿಟೆಡ್, ಭಿಲಾಯ್ ಎಂಜಿನಿಯರಿಂಗ್ ಕಾರ್ಪೊರೇಷನ್‌ಗಳ ಜೊತೆ ಈ ಹಿಂದೆ ಇದೇ ಮಾದರಿಯ ಒಪ್ಪಂದಗಳು ಆಗಿವೆ.

ಯಾವುದೇ ಉಪಕರಣಗಳ ಉತ್ಪಾದನೆಯಲ್ಲಿ ಡಿಆರ್‌ಡಿಒ ತೊಡಗಿಸಿಕೊಂಡಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿ ಡಿಆರ್‌ಡಿಒ ಪ್ರಾಥಮಿಕ ಜವಾಬ್ದಾರಿ. ತಂತ್ರಜ್ಞಾನ ವರ್ಗಾವಣೆ ಹಂತದವರೆಗೆ ಈ ಸಂಸ್ಥೆಯ ಪಾತ್ರ ಇರುತ್ತದೆ. ತಾನು ಅಭಿವೃದ್ಧಿಪಡಿಸಿದ ಪೌಷ್ಟಿಕ ಆಹಾರ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ‘ಪತಂಜಲಿ’ ಜೊತೆ ಅದು  ಒಪ್ಪಂದ ಮಾಡಿಕೊಂಡಿರುವುದರಲ್ಲಿ ತಪ್ಪಿಲ್ಲ.

ಆದರೆ, ದೇಶದ ಯುದ್ಧ ಸನ್ನದ್ಧತೆ ಜೊತೆ ನೇರ ಸಂಬಂಧ ಹೊಂದಿರುವ ಲಘು ಯುದ್ಧ ವಿಮಾನ, ಕಾವೇರಿ ವಿಮಾನ ಎಂಜಿನ್ ಅಭಿವೃದ್ಧಿ ಯೋಜನೆಗಳು ನಿಧಾನಗತಿಯಲ್ಲಿ ಸಾಗಿವೆ. ಇವೆಲ್ಲವನ್ನೂ ನೋಡಿಕೊಳ್ಳುತ್ತಿರುವುದು ಡಿಆರ್‌ಡಿಒ. ಡಿಆರ್‌ಡಿಒ ಅಸ್ತಿತ್ವಕ್ಕೆ ಬಂದ ಮೂಲ ಉದ್ದೇಶ ಏನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ದೇಶದ ಸಶಸ್ತ್ರ ಪಡೆಗಳಿಗೆ ದೇಸಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಬಲ ಒದಗಿಸುವ ಉದ್ದೇಶದಿಂದ ಸಂಸ್ಥೆಯನ್ನು 1958ರಲ್ಲಿ ಆರಂಭಿಸಲಾಯಿತು.

ಡಿಆರ್‌ಡಿಒ ಜನಿಸಿ 57 ವರ್ಷಗಳು ಕಳೆದ ನಂತರವೂ ಭಾರತ ತನ್ನ ರಕ್ಷಣಾ ಉಪಕರಣಗಳಿಗೆ ಹೊರದೇಶಗಳನ್ನೇ ನಂಬಿಕೊಂಡಿದೆ. ಡಿಆರ್‌ಡಿಒ ಸ್ಥಾಪನೆಯ ಉದ್ದೇಶ ಮತ್ತು ಅದರ ಇದುವರೆಗಿನ ಸಾಧನೆಗಳ ನಡುವೆ ಸಮತೋಲನ ಇಲ್ಲದಿರುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. (ಡಿಆರ್‌ಡಿಒ ಮಾತ್ರವಲ್ಲದೆ, ರಕ್ಷಣಾ ಉದ್ದೇಶಕ್ಕೆ ಸ್ಥಾಪಿಸಿದ ಸಾರ್ವಜನಿಕ ರಂಗದ ಬೇರೆ ಉದ್ದಿಮೆಗಳ ಕತೆಯೂ ಇದೇ ಆಗಿದೆ.) ಡಿಆರ್‌ಡಿಒ ಚಟುವಟಿಕೆಗಳಲ್ಲಿ ಸುಧಾರಣೆ ತರಲು 2007ರಲ್ಲಿ ಕೇಂದ್ರ ಸರ್ಕಾರ ಡಾ. ರಾಮ ರಾವ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಡಿಆರ್‌ಡಿಒದ ಕೆಲವು ಪ್ರಯೋಗಾಲಯಗಳನ್ನು ಬೇರೆ ಸಂಸ್ಥೆಗಳ ಜೊತೆ ವಿಲೀನ ಮಾಡಬೇಕು, ಸುಲಭ ನಿರ್ವಹಣೆಗಾಗಿ ಸಂಸ್ಥೆಯನ್ನು ಸಣ್ಣ ಘಟಕಗಳಾಗಿ ವಿಭಜಿಸಬೇಕು ಎಂದು ಸಮಿತಿ ಸಲಹೆ ನೀಡಿತು.

ಸಮಿತಿಯ ಶಿಫಾರಸುಗಳನ್ನು ಅರೆಮನಸ್ಸಿನಿಂದ ಜಾರಿಗೆ ತರಲಾಗಿದೆ. ಜಗತ್ತಿನ ಬೇರೆ ದೇಶಗಳಲ್ಲಿ ತನ್ನದೇ ಉದ್ದೇಶಗಳ ಸಾಕಾರಕ್ಕೆ ಕೆಲಸ ಮಾಡುತ್ತಿರುವ ಇತರ ಸಂಸ್ಥೆಗಳಷ್ಟು ದಕ್ಷವಾಗಿ ಕೆಲಸ ಮಾಡಲು ಡಿಆರ್‌ಡಿಒ ಸಂಸ್ಥೆಗೆ ಆಗಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲ ಈ ಸಂಸ್ಥೆಗಾಗಿ ಹಣ ಖರ್ಚು ಮಾಡುತ್ತಲೇ ಇವೆ. ಆದರೆ ಈ ಖರ್ಚು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ, ರಾಷ್ಟ್ರದ ಭದ್ರತೆ ಎಂಬುದು ಸಶಸ್ತ್ರ ಪಡೆಗಳು ಮತ್ತು ತೆರಿಗೆ ಪಾವತಿಸುವವರ ನಡುವಿನ ಒಂದು ಸೂಕ್ಷ್ಮ ಸಂಬಂಧ.

ದೇಸಿ ಅಥವಾ ಅಂತರರಾಷ್ಟ್ರೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಸಶಸ್ತ್ರ ಪಡೆಗಳಿಗೆ ಅನಿವಾರ್ಯ. ಪರಿಸ್ಥಿತಿ ಹೀಗಿರುವಾಗ, ಭಾರತೀಯ ಸಂಸ್ಥೆಗಳು ಅಗತ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸದಿದ್ದಾಗ ಸಶಸ್ತ್ರ ಪಡೆಗಳು ಹೊರದೇಶಗಳತ್ತ ಮುಖ ಮಾಡುವುದು ಸಹಜ. ತಮ್ಮ ಪ್ರಾಥಮಿಕ ಕರ್ತವ್ಯವಾದ ರಾಷ್ಟ್ರ ರಕ್ಷಣೆಯನ್ನು ಅವು ಮಾಡಲೇಬೇಕಲ್ಲ. ಡಿಆರ್‌ಡಿಒದಂತಹ ಸಂಸ್ಥೆಗಳನ್ನು ನಡೆಸಲು ಸಾವಿರಾರು ಕೋಟಿ ರೂಪಾಯಿ ಬೇಕು. ಇದರಲ್ಲಿ ತೆರಿಗೆದಾರನ ಹಣವೂ ಸೇರಿರುವಾಗ, ಸಂಸ್ಥೆಯು ತನ್ನ ಮೂಲ ಉದ್ದೇಶ ಈಡೇರಿಸುತ್ತಿಲ್ಲ ಎಂದಾದರೆ, ಅದನ್ನು ಹಾಗೇ ಮುಂದುವರಿಸುವುದು ದೇಶದ ಹಿತಕ್ಕೆ ಪೂರಕವಲ್ಲ. ದೇಶದ ಅಗತ್ಯಗಳನ್ನು ಪೂರೈಸಿಕೊಳ್ಳಲು ಅದೇ ಹಣವನ್ನು ಬೇರೆಡೆ ಹೂಡಬಹುದು.

ದೇಶಭಕ್ತಿ ಮತ್ತು ಸ್ವದೇಶಿ ಹೆಸರಿನಲ್ಲಿ ಸುಧಾರಣೆಗಳಿಗೆ ಹೊದಿಕೆ ಸುತ್ತಿಟ್ಟಿದ್ದ ಪರಿಣಾಮವಾಗಿ, ದೇಶ ರಕ್ಷಣಾ ಸಾಮಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ರಕ್ಷಣಾ ಉತ್ಪನ್ನಗಳ ತಯಾರಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೂ ದೇಶ ಮುಕ್ತ ಮನಸ್ಸು ಹೊಂದಿಲ್ಲ. ರಫ್ತುದಾರ ದೇಶಗಳು ತುರ್ತು ಸಂದರ್ಭದಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ತಪ್ಪಿಸಿಕೊಳ್ಳಲು ರಕ್ಷಣಾ ಉತ್ಪಾದನೆ ನಮ್ಮಲ್ಲೇ ಆಗಬೇಕು ಎಂದು ಭಾರತೀಯ ರಕ್ಷಣಾ ವಲಯ ಹೇಳುತ್ತಿದೆ.

ರಫ್ತುದಾರ ದೇಶಗಳ ಜೊತೆ ಗಟ್ಟಿಯಾದ ಆರ್ಥಿಕ ಸಂಬಂಧ ಬೆಳೆಸಿಕೊಳ್ಳುವುದರಿಂದ ಮತ್ತು ಈಗಾಗಲೇ ಉತ್ತಮ ಆರ್ಥಿಕ ಸಂಬಂಧ ಇರುವ ದೇಶಗಳಿಂದ ರಕ್ಷಣಾ ಉಪಕರಣ ಆಮದು ಮಾಡಿಕೊಳ್ಳುವುದರಿಂದ ತುರ್ತು ಸಂದರ್ಭಗಳಲ್ಲಿ ಇಕ್ಕಟ್ಟಿಗೆ ಸಿಲುಕುವ ಅಪಾಯ ಇರುವುದಿಲ್ಲ. ‘ಅತ್ಯುತ್ತಮ’ಕ್ಕಿಂತ ಕಡಿಮೆ ಎನಿಸುವ ಎಲ್ಲವೂ ರಕ್ಷಣಾ ವಲಯದ ಮಟ್ಟಿಗೆ ವೈಫಲ್ಯಗಳೇ ಆಗಿರುತ್ತವೆ. ಸ್ವಾತಂತ್ರ್ಯ ದೊರೆತ  ನಂತರದ ದಿನಗಳಲ್ಲಿ ದೇಸಿ ಉತ್ಪಾದನೆ ವಿಚಾರದಲ್ಲಿ ವಿಮರ್ಶೆಯಿಲ್ಲದೆ ಅನುಸರಿಸಿದ ನಡೆಗಳು ಸೀಮಿತ ಫಲ ನೀಡಿವೆ.

ದೇಶದ ರಕ್ಷಣಾ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲಾಗದ ಸ್ಥಿತಿಯಲ್ಲಿ ಇಲ್ಲಿನ ಕೈಗಾರಿಕಾ ರಂಗ ಇದೆ. ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲಿಯೇ ತಯಾರಿಸಿಕೊಳ್ಳುವ ಗುರಿ ಇಟ್ಟುಕೊಳ್ಳಬೇಕು ಎಂಬುದು ಸರಿ. ಆದರೆ ಆ ಗುರಿ ತಲುಪುವವರೆಗೂ ರಕ್ಷಣಾ ಉಪಕರಣಗಳ ಅಗತ್ಯ ಇದ್ದೇ ಇರುತ್ತದೆ. ಹಾಗಾಗಿ, ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲಿಯೇ ತಯಾರಿಸುವ ಗುರಿ ತಲುಪುವ ಹಾದಿಯನ್ನು ಅಸಮರ್ಥ ಸಂಸ್ಥೆಗಳಿಂದ ಅಲಂಕರಿಸಬೇಕಿಲ್ಲ.

ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿ, ಖಾಸಗಿ ವಲಯಕ್ಕೆ ಅವಕಾಶ ಕಲ್ಪಿಸಿದರೆ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ವಿಶ್ವದರ್ಜೆಯ ಉತ್ಪನ್ನಗಳನ್ನು ಪೂರೈಸುವ ತಾಕತ್ತು ಭಾರತದ ಉದ್ದಿಮೆಗಳಿಗೂ ದೊರೆಯುತ್ತದೆ. ಡಿಆರ್‌ಡಿಒ ಸಂಸ್ಥೆಯ ಪುನರ್ ರಚನೆಗೆ ಕೇಂದ್ರ ಸರ್ಕಾರ ಡಾ. ರಾಮ ರಾವ್ ಸಮಿತಿಯ ಶಿಫಾರಸುಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು. ಪ್ರಮುಖ ಕೆಲಸಗಳಿಗೆ ಡಿಆರ್‌ಡಿಒ ಹೆಚ್ಚಿನ ಗಮನ ನೀಡಬೇಕು. ಡಿಆರ್‌ಡಿಒ ಇರುವುದು ರಾಷ್ಟ್ರದ ರಕ್ಷಣೆಗೇ ವಿನಾ ಬೇರೆ ಕೆಲಸ ಮಾಡಿಕೊಂಡಿರಲು ಅಲ್ಲ.

ಲೇಖಕರು ಸಾರ್ವಜನಿಕ ನೀತಿ ವಿಶ್ಲೇಷಕರು,
ತಕ್ಷಶಿಲಾ ಸಂಸ್ಥೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT