ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ವಿರುದ್ಧ ಸಾಕ್ಷ್ಯ ಇಲ್ಲ: ಸಚಿವ

ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಪ್ರಕರಣ
Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಪಾತ್ರ­ವಿರುವ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ ಎಂದು ಸಹಕಾರ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ತಿಳಿಸಿದರು.

ಗುರುವಾರ ಕೆಪಿಸಿಸಿ ಕಚೇರಿಗೆ ಭೇಟಿನೀಡಿ ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿ­ವರು, ‘ಪ್ರಕರಣಕ್ಕೆ ಸಂಬಂಧಿಸಿದ ಕಡತ­ವನ್ನು ನಾನು ಸಮಗ್ರವಾಗಿ ಪರಿ­ಶೀಲಿ­ಸಿದ್ದೇನೆ. ಎಲ್ಲಿಯೂ ಶಿವಕುಮಾರ್‌ ಹೆಸ­ರಿಲ್ಲ. ಅವರು ಪತ್ರ ವ್ಯವಹಾರ ನಡೆಸಿರುವುದಕ್ಕೂ ದಾಖಲೆಗಳಿಲ್ಲ. ಅವರ ವಿರುದ್ಧ ದೂರುಗಳಿರುವ ಮಾಹಿತಿಯೂ ಇಲ್ಲ’ ಎಂದರು.

ಜನವರಿಯಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮತ್ತು ಭೂ ಕಬಳಿಕೆ ವಿರೋಧಿ ವೇದಿಕೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅವರು, ‘ಶಾಂತಿ­ನಗರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿದ 66 ಎಕರೆ ಜಮೀನು ಕಬ­ಳಿಸಿದ ಪ್ರಕರಣದಲ್ಲಿ ಡಿ.ಕೆ.ಶಿವ­ಕುಮಾರ್‌ ಭಾಗಿಯಾ­ಗಿದ್ದಾರೆ’ ಎಂದು ಆರೋಪಿಸಿದ್ದರು. ಇಂಧನ ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಹಕಾರ ಸಚಿವರ ಕಚೇರಿ ಎದುರು ಧರಣಿಯನ್ನೂ ನಡೆಸಿದ್ದರು.

ಈ ಕುರಿತು ಮಹದೇವ ಪ್ರಸಾದ್‌ ಅವರನ್ನು ಪ್ರಶ್ನಿಸಿದಾಗ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆಯಲಾಗುವುದು. ಕಾನೂನು ತಜ್ಞರು ನೀಡುವ ಸಲಹೆ ಆಧರಿಸಿ ಮುಂದಿನ ಕ್ರಮ ಜರುಗಿಸಲಾ­ಗುವುದು’ ಎಂದರು.
‘ಶಾಂತಿನಗರ ಗೃಹ ನಿರ್ಮಾಣ ಸಹ­ಕಾರ ಸಂಘಕ್ಕೆ ಸಂಬಂಧಿಸಿದ ವ್ಯಾಜ್ಯಗಳು ವಿವಿಧ ನ್ಯಾಯಾಲಯ­ಗಳಲ್ಲಿ ಇತ್ಯರ್ಥ­ವಾಗಿದೆ. ಎಲ್ಲ ವ್ಯವ­ಹಾರ­ಗಳು 2003ರಿಂದ 2006ರ ಅವಧಿ­ಯಲ್ಲಿ ನಡೆದಿವೆ. ಸಂಘದ ಷೇರುದಾರರು ಮತ್ತು ನಿವೇಶನ ಕೋರಿದವರು ದೂರು ನೀಡಿಲ್ಲ’ ಎಂದರು.

ಕಾಯ್ದೆಗೆ ತಿದ್ದುಪಡಿ: ಗೃಹ ನಿರ್ಮಾಣ ಸಹಕಾರ ಸಂಘಗಳು ತ್ವರಿತವಾಗಿ ಜಮೀನು ಖರೀದಿ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಸಹಕಾರ ಸಂಘ­ಗಳ ಕಾಯ್ದೆಗೆ ತಿದ್ದುಪಡಿ ತರ­ಲಾ­ಗುವುದು. ವಿಧಾನಮಂಡಲದ ಬಜೆಟ್‌ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದರು.

ಈಗ ಜಾರಿಯಲ್ಲಿರುವ ಕಾಯ್ದೆಯ ಪ್ರಕಾರ ಗೃಹ ನಿರ್ಮಾಣ ಸಹಕಾರ ಸಂಘಗಳು ಒಂದು ಬಾರಿಗೆ 50 ಎಕರೆ­ಗಿಂತ ಹೆಚ್ಚಿನ ಜಮೀನು ಖರೀದಿಸಲು ಅವಕಾಶವಿಲ್ಲ. ಅದನ್ನು ಹೆಚ್ಚಿಸುವ ಪ್ರಸ್ತಾವವಿದೆ. ಜಮೀನು ಖರೀದಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನೂ ಸರಳೀಕರಿಸಲಾಗುವುದು ಎಂದರು.

ಮತ್ತೊಂದು ನೋಟಿಸ್‌: ಹಣಕಾಸು ದುರ್ಬಳಕೆ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಅಧ್ಯಕ್ಷ ಪಿ.ನಾಗರಾಜ್‌ ಅವರಿಗೆ ಮತ್ತೊಂದು ನೋಟಿಸ್‌ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT