ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜೆ ಲೋಕವೆಂಬ ಸೂಜಿಗಲ್ಲು...

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಮುದ್ರಿಸಿಕೊಂಡು ಬಂದ ಕೆಲವು ಹಾಡುಗಳನ್ನು ಪ್ಲೇ ಮಾಡುವ ಸಾಮಾನ್ಯ ತಾಂತ್ರಿಕ ಕೆಲಸ ಡಿಜೆಗಳದ್ದು ಎಂಬ ಭಾವ ಅನೇಕರಲ್ಲಿದೆ. ಆದರೆ ಮೇಲ್ನೋಟಕ್ಕೆ ಕಾಣುವಷ್ಟು ಈ ಕೆಲಸ ಸರಳವಾದದ್ದೇನೂ ಅಲ್ಲ ಎನ್ನುವುದು ಡಿಜೆಗಳನ್ನು ಮಾತನಾಡಿಸಿದಾಗ ತಿಳಿಯುತ್ತದೆ.

ಇಂದು ಮಹಾನಗರದ ಒಂದು ಜನಪ್ರಿಯ ಸಂಸ್ಕೃತಿಯಾಗಿ ಡಿಜೆ (ಡಿಸ್ಕ್‌ ಜಾಕಿ) ಬೆಳೆಯುತ್ತಿದೆ. ಹೊಸ ಹುಡುಗರ ವಲಯದಲ್ಲಿ ಡಿಜೆಗಳಿಗೆ ತಾರಾ ವರ್ಚಸ್ಸಿದೆ. ಜನಪ್ರಿಯ ಕಾರ್ಯಕ್ರಮಗಳಲ್ಲಿ, ಗಂಟೆಯೊಂದಕ್ಕೆ ಲಕ್ಷ ಲಕ್ಷ ಹಣ ನೀಡಿ ಡಿಜೆಗಳನ್ನು ಕರೆಸಲಾಗುತ್ತದೆ. ಡಿಜೆ ಪಾರ್ಟಿ ಎಂದೇ ಕರೆಯಲಾಗುವ ಸಂತೋಷಕೂಟಗಳು ಯುವಮನಸ್ಸುಗಳು ಮೈಮರೆತು ನರ್ತಿಸುವ ನಲ್ದಾಣಗಳಾಗುತ್ತಿವೆ.

ಹಾಡು ಕಟ್ಟುವ ಕೆಲಸ
ಕಳೆದ ಐದು ವರ್ಷಗಳಿಂದ ನಗರದಲ್ಲಿ ಜಾನ್ಸನ್‌ ಅವರು ಡಿಜೆ ಆಗಿ ಕೆಲಸ ಮಾಡುತ್ತಿದ್ದಾರೆ. ‘ಎರಡು ಹಾಡನ್ನು ಸೇರಿಸಿ ಮೂರನೇ ಹಾಡನ್ನು ರೂಪಿಸುವುದೇ ಡಿಜೆ ಕೆಲಸ’ ಎಂದು ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸುತ್ತಾರೆ ಜಾನ್ಸನ್‌.

‘ಈ ಮೊದಲು ರಾಕ್‌ ಮ್ಯೂಸಿಕ್‌ಗೆ ನಗರದಲ್ಲಿ ಬಹಳ ಬೇಡಿಕೆ ಇತ್ತು. ಈಗ ಜನರ ಆದ್ಯತೆ ಬದಲಾಗಿದೆ. ಎಲ್ಲರೂ ಈಗ ಇಡಿಎಂ (ಎಲೆಕ್ಟ್ರಾನಿಕ್‌ ಡಾನ್ಸ್‌ ಮ್ಯೂಸಿಕ್‌) ಬಯಸುತ್ತಾರೆ’ ಎಂದು ನಗರದ ಯುವಕರ ಅಭಿರುಚಿಯಲ್ಲಾದ ಬದಲಾವಣೆಯನ್ನು ಅವರು ಗುರ್ತಿಸುತ್ತಾರೆ. ‘ಡಿಜೆಗಳಿಗೆ ಆಳವಾದ ಸಂಗೀತ ಜ್ಞಾನ ಇರಲೇಬೇಕೆಂದೇನಿಲ್ಲ. ಆದರೆ ಇನ್‌ಸ್ಟ್ರುಮೆಂಟ್ಸ್‌ ಜ್ಞಾನ ಅವಶ್ಯಕ’ ಎನ್ನುವುದು ಜಾನ್ಸನ್‌ ಅಭಿಮತ.

‘ಕೇವಲ ಹಾಡುಗಳನ್ನು ಪ್ಲೇ ಮಾಡಲು ಹೆಚ್ಚಿನ ಸಂಗೀತ ಜ್ಞಾನ ಇರಬೇಕಾಗಿಲ್ಲ. ಆದರೆ ಹಾಡುಗಳನ್ನು ರಿಮಿಕ್ಸ್‌ ಮಾಡಲು ಕೆಲಮಟ್ಟಿಗಾದರೂ ಸಂಗೀತ ಜ್ಞಾನ ಇದ್ದರೆ ಒಳ್ಳೆಯದು. ಬೀಟ್‌, ಪಿಚ್‌ ಮತ್ತೆ ರಾಗಗಳ ಪರಿಚಯವಿದ್ದರೆ ಪರಸ್ಪರ ಎರಡು ಹಾಡುಗಳನ್ನು ಸಮರ್ಥವಾಗಿ ಸೇರಿಸುವುದು ಸಾಧ್ಯ. ಜನರಿಗೆ ಇವೆಲ್ಲವೂ ಮುಖ್ಯವಾಗಿರುವುದಿಲ್ಲ. ಅವರು ಬಯಸುವುದು ಹಜ್ಜೆ ಹಾಕಲು ಸೂಕ್ತವಾದ ಸಂಗೀತವಷ್ಟೇ’ ಎನ್ನುತ್ತಾರೆ ಜಾನ್ಸನ್‌.

‘ಹೇಗೆ ಮತ್ತು ಎಂಥ ಸಂಗೀತವನ್ನು ನೀವು ಆಯ್ದುಕೊಳ್ಳುತ್ತೀರಿ ಎನ್ನುವುದೇ ಡಿಜೆಗಳ ಎದುರಿನ ದೊಡ್ಡ ಸವಾಲು’ ಎನ್ನುವ ಜಾನ್ಸನ್‌, ಸಾಮಾನ್ಯ ಡಿಜೆಗಳು ಮತ್ತು ಯಶಸ್ವೀ ಡಿಜೆಗಳ ನಡುವೆ ಸಾಕಷ್ಟು ಅಂತರವಿದೆ ಎನ್ನುತ್ತಾರೆ. ‘ಡಿಜೆ ಯಾರು ಬೇಕಾದರೂ ಆಗಬಹುದು. ಆದರೆ ಯಶಸ್ವೀ ಡಿಜೆ ಆಗುವುದು ಅಷ್ಟು ಸುಲಭವಲ್ಲ. ಅದಕ್ಕೆ ವಿಶೇಷ ಪರಿಣತಿ ಬೇಕಾಗುತ್ತದೆ. ಜನರ ಬದಲಾಗುತ್ತಿರುವ ಮೂಡ್‌ ಅನ್ನು ಅರಿತು ಅದಕ್ಕೆ ತಕ್ಕ ಸಂಗೀತವನ್ನು ಪ್ಲೇ ಮಾಡುವ ಚಾಣಾಕ್ಷತೆ ಬೇಕಾಗುತ್ತದೆ.

ಅವನು ಹಾಡು ಪ್ಲೇ ಮಾಡುವವನಷ್ಟೇ ಅಲ್ಲ, ಹಾಡು ಕಟ್ಟುವವನೂ ಹೌದು. ಒಂದು ಒಳ್ಳೆಯ ರಿಮಿಕ್ಸ್‌ ಸಂಗೀತ ಒಬ್ಬ ಡಿಜೆಯನ್ನು ರಾತ್ರಿ ಬೆಳಗಾಗುವುದರೊಳಗೆ ಜನಪ್ರಿಯ ಗೊಳಿಸುವಷ್ಟು ಶಕ್ತಿಯುತವಾಗಿ ಇರುತ್ತದೆ’ ಎಂದು ಡಿಜೆಗಳ ಕೆಲಸದಲ್ಲಿನ ಸೃಜನಶೀಲ ಅವಶ್ಯಕತೆಗಳ ಬಗ್ಗೆ ಅವರು ಗಮನ ಸೆಳೆಯುತ್ತಾರೆ. ‘ಇಂದು ಒಬ್ಬ ಡಿಜೆ ಹತ್ತು ಡಿಜೆಗಳನ್ನು ರೂಪಿಸುತ್ತಾನೆ. ಆ ಹತ್ತು ಜನರಿಂದ ನೂರು ಡಿಜೆಗಳು ರೂಪುಗೊಳ್ಳುತ್ತಾರೆ. ಹೀಗೆ ತುಂಬ ಜನರು ಡಿಜೆಗಳಾಗುತ್ತಿದ್ದಾರೆ. ಆದರೆ ಯಶಸ್ವಿಯಾಗುವವರು ಕೆಲವೇ ಕೆಲವರು’ ಎನ್ನುತ್ತಾರೆ ಜಾನ್ಸನ್‌.

ಪ್ರತಿಭೆಯೇ ಮಾನದಂಡ
ಡಿಜೆ ಗೋಪು ಅವರ ಪ್ರಕಾರ,  ಡಿಜೆಗಳಿಗೆ ಸಂಗೀತ ಜ್ಞಾನ ಪ್ರಾಥಮಿಕ ಅವಶ್ಯಕತೆ. ‘ಜನರಿಗೆ ಇಷ್ಟವಾಗುವ ಸಂಗೀತವನ್ನು ಯಾವುದೇ ವಿರಾಮವಿಲ್ಲದೆ ಪ್ಲೇ ಮಾಡುವುದೇ ಡಿಸ್ಕ್‌ ಜಾಕಿ ಕೆಲಸ’ ಎನ್ನುವುದು ಗೋಪು ಅವರ ವ್ಯಾಖ್ಯಾನ.

‘ಮೊದಲು ಬೇರೆ ಬೇರೆ ಡಿಸ್ಕ್‌ಗಳನ್ನು  ಬದಲಾಯಿಸಿ ಹಾಡುಗಳನ್ನು ಪ್ಲೇ ಮಾಡುತ್ತಿದ್ದರು. ಆದ್ದರಿಂದಲೇ ಡಿಸ್ಕ್‌ ಜಾಕಿ ಎಂಬ ಹೆಸರು ಬಂದಿದ್ದು. ಆದರೆ ಈಗ ಅದರ ಸ್ವರೂಪ ಬದಲಾಗಿದೆ. ಬೆಂಗಳೂರಿನಲ್ಲಿಯಷ್ಟೇ ಅಲ್ಲ, ಭಾರತದಾದ್ಯಂತ ಡಿಜೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದಿನದಿನವೂ ಹೊಸ ಹೊಸ ತಾಣಗಳು– ಅವಕಾಶಗಳು ತೆರೆದುಕೊಳ್ಳುತ್ತಿವೆ. ಬೆಂಗಳೂರಿನ ಡಿಜೆಗಳಿಗೆ ಹೊರಗಡೆಯೂ ಸಾಕಷ್ಟು ಬೇಡಿಕೆ ಇದೆ’ ಎನ್ನುತ್ತಾರೆ ಗೋಪು. 1999ರಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗೋಪು, ಡಿಜೆ ಲೋಕದ ಒಳಹೊರಗುಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲರು.

‘ಈ ಕ್ಷೇತ್ರದಲ್ಲಿ ಎಷ್ಟು ಅವಕಾಶಗಳಿವೆಯೋ ಅಷ್ಟೇ ಸ್ಪರ್ಧೆಯೂ ಇದೆ. ಅಂತಿಮವಾಗಿ ನೀವು ಪ್ಲೇ ಮಾಡುವ ಸಂಗೀತ ಜನರಿಗೆ ಇಷ್ಟವಾದರೆ ಈ ಕ್ಷೇತ್ರದಲ್ಲಿ ಉಳಿಯುತ್ತೀರಿ. ಇಲ್ಲವಾದರೆ ನಿಮಗೆ ಭವಿಷ್ಯವಿಲ್ಲ’ ಎಂದು ಡಿಜೆ ವೃತ್ತಿಯ ಕುರಿತು ಹೇಳುತ್ತಾರೆ. ‘ಎಲ್ಲರಿಗೂ ಇಷ್ಟವಾಗುವ ಟ್ಯೂನ್‌ ಅನ್ನು ಆಯ್ದುಕೊಳ್ಳಬೇಕು ಎಂದರೂ ಅದಕ್ಕೊಂದು ಸಂಗೀತ ಸಂವೇದನೆ ಬೇಕೇ ಬೇಕು. ಅದಕ್ಕೂ ಮೀರಿದ ಸಂಗೀತ ಜ್ಞಾನ ನಿಮಗಿದ್ದರೂ ಒಳ್ಳೆಯದೇ’ ಎನ್ನುವುದು ಇವರ ಅಭಿಪ್ರಾಯ.

ಡಿಜೆ ಕೆಲಸದಲ್ಲಿ ಸೃಜನಶೀಲತೆ ಇರುವುದಿಲ್ಲ ಎನ್ನುವುದನ್ನು ಇವರು ಸುತರಾಂ ಒಪ್ಪುವುದಿಲ್ಲ. ‘ಒಂದು ಹಾಡಿನ ಟ್ಯೂನ್‌ ಅನ್ನು ಎಡಿಟ್‌ ಮಾಡುವುದು, ಅದಲು ಬದಲು ಮಾಡುವುದು, ಹಿಗ್ಗಿಸುವುದು ಕುಗ್ಗಿಸುವುದು ಇವೆಲ್ಲವನ್ನೂ ಡಿಜೆಗಳು ಮಾಡಬೇಕಾಗುತ್ತದೆ. ಒಂದೇ ಹಾಡನ್ನು ಬೇರೆ ಬೇರೆ ಡಿಜೆಗಳು ರಿಮಿಕ್ಸ್‌ ಮಾಡುವ ಕ್ರಮ ಬೇರೆಯದೇ ಆಗಿರುತ್ತದೆ. ಸೃಜನಶೀಲತೆ ಇಲ್ಲದೆ ಇದು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಗೋಪು.

ಅನುದಿನದ ಅಗ್ನಿಪರೀಕ್ಷೆ
ಡಿಜೆಗಳು ಸಾಮಾನ್ಯವಾಗಿ ರಾತ್ರಿಯಷ್ಟೇ ಕೆಲಸ ಮಾಡುತ್ತಾರಲ್ಲವೇ? ಎಂದು ಕೇಳಿದಾಗ ಗೋಪು ನಕ್ಕು ಬಿಟ್ಟರು. ‘ಡಿಜೆಗಳು ರಾತ್ರಿ ಮಾತ್ರ ಕೆಲಸ ಮಾಡುತ್ತಾರೆ ಎನ್ನುವುದು ತಪ್ಪು ತಿಳಿವಳಿಕೆ. ಷೋಗಳು ಸಾಮಾನ್ಯವಾಗಿ ರಾತ್ರಿಯೇ ಇರುತ್ತವೆ ಎನ್ನುವುದು ನಿಜ. ಅಂಥ ಒಂದು ಕಾರ್ಯಕ್ರಮದಲ್ಲಿ ಎರಡು ಮೂರು ಗಂಟೆಗಳ ಕಾಲ ಒಳ್ಳೆಯ ಸಂಗೀತ ಹಾಕಿ ಜನರನ್ನು ಖುಷಿಪಡಿಸಲು ಡಿಜೆ ಹಲವು ಹಗಲುಗಳನ್ನು ವ್ಯಯಿಸಿರುತ್ತಾನೆ. ನೂರಾರು ಹಾಡುಗಳನ್ನು ಆರಿಸಿಕೊಂಡು ಅವುಗಳನ್ನು ಸಂಸ್ಕರಿಸಿ, ಸರಿಯಾಗಿ ಜೋಡಿಸುವುದು, ರಿಮಿಕ್ಸ್‌ ಮಾಡುವುದು ಇವೆಲ್ಲ ಕೆಲಸಗಳನ್ನೂ ಹಗಲಿನಲ್ಲಿಯೇ ಮಾಡುತ್ತೇವೆ. ನಮಗೆ ನಿದ್ರಿಸಲು ಸಿಗುವ ಸಮಯ ಕಡಿಮೆ’ ಎಂದು ಡಿಜೆಗಳ ಜೀವನಶೈಲಿಯ ಬಗ್ಗೆ ಅವರು ವಿವರಿಸುತ್ತಾರೆ.

‘ಎಕ್ಸಾಮಿನಲ್ಲಿ ಬರೆಯುವುದು ಕೆಲವೇ ಸಾಲಿನ ಉತ್ತರವಾದರೂ ಅದಕ್ಕಾಗಿ ಮಕ್ಕಳು ಎಷ್ಟು ಸಿದ್ಧತೆ ನಡೆಸುತ್ತಾರಲ್ಲವೇ? ಹಾಗೆಯೇ ನಾವು ಬೆಳಿಗ್ಗೆ ಎದ್ದು ಹೋಂವರ್ಕ್‌ ಮಾಡುತ್ತೇವೆ. ಸಂಜೆ ಸಿದ್ಧರಾಗಿ ಸ್ಕೂಲಿಗೆ ಹೋಗುತ್ತೇವೆ’ ಎಂದು ತಮಾಷೆಯಾಗಿ ಹೇಳುವ ಗೋಪಿ, ‘ನಮಗೆ ಪ್ರತಿ ಷೋ ಕೂಡ ಒಂದು ಅಗ್ನಿಪರೀಕ್ಷೆ. ಅದರಲ್ಲಿ ಗೆದ್ದರೆ ಆ ಗೆಲುವಿನ ಖುಷಿ ಸಿಗುತ್ತದೆ. ಸೋತರೆ ಅದರಿಂದ ಹೊರಬರಲು ಮತ್ತೆ ಹತ್ತು ಷೋಗಳಲ್ಲಿ ಪ್ರಯತ್ನಿಸಬೇಕಾಗುತ್ತದೆ’ ಎಂದು ತಮ್ಮ ವೃತ್ತಿಬದುಕಿನ ಅನಿಶ್ಚಿತತೆಯ ಕುರಿತು ಗಮನ ಸೆಳೆಯುತ್ತಾರೆ.

‘ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಯಾವುದೇ ಅಡ್ಡದಾರಿಗಳಿಲ್ಲ. ಪರಿಶ್ರಮ ಮತ್ತು ಬದ್ಧತೆಯೊಟ್ಟಿಗೆ ಪ್ರತಿಭೆಯಿದ್ದರೆ ಮಾತ್ರ ಹೆಸರು ಗಳಿಸಬಹುದು’ ಎಂಬ ಗೋಪಿ ಅವರ ಮಾತು ಡಿಜೆ ಕ್ಷೇತ್ರದಲ್ಲಿನ ಸ್ಪರ್ಧಾತ್ಮಕತೆಯ ಕುರಿತೂ ತಿಳಿಸಿಕೊಡುತ್ತದೆ.

ಯಾರು ಹೆಚ್ಚು ಇಷ್ಟಪಡುವರು?
ಹದಿನೆಂಟರ ಹರೆಯದಲ್ಲಿಯೇ ಡಿಜೆ ಸಂಗೀತಕ್ಕೆ ಮಾರುಹೋಗುವವರ ಸಂಖ್ಯೆ ಹೆಚ್ಚು. ಆದರೆ ಈಗ ಬಹುತೇಕ ಡಿಜೆ ಪಾರ್ಟಿಗಳಲ್ಲಿ ಇಪ್ಪತ್ತೊಂದು ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ‘ಡಿಜೆ ಪಾರ್ಟಿಗಳಲ್ಲಿ ಹಾಡು ಕುಣಿತ ಕುಡಿತ ಸಾಮಾನ್ಯ. ಆದರೆ ಹೀಗೆ ಕುಣಿತದ ಡಿಜೆ  ಪಾರ್ಟಿ ಏರ್ಪಡಿಸಲು ಡಾನ್ಸ್‌ ಲೈಸನ್ಸ್‌ ಕಡ್ಡಾಯವಾಗಿರುತ್ತದೆ. 

ನಗರದ ಕೆಲವು ದೊಡ್ಡ ದೊಡ್ಡ ಹೋಟೆಲ್‌ಗಳು ಮಾತ್ರ ಇಂಥ ಲೈಸನ್ಸ್‌ ಹೊಂದಿವೆ. ಇಂಥ ಸ್ಥಳಗಳಿಗೆ ಯುವಕರು ಮುಗಿಬಿಳುತ್ತಾರೆ. ಉಳಿದ ಸಣ್ಣ ಪುಟ್ಟ ಪಬ್‌ಗಳಲ್ಲಿ ಅದಕ್ಕೆ ಅವಕಾಶವಿರುವುದಿಲ್ಲ. ಅಂಥ ಸ್ಥಳಗಳಲ್ಲಿ ಹೆಚ್ಚಾಗಿ ಎಂಬತ್ತು ತೊಂಬತ್ತರ ದಶಕದ ಹಿಂದಿ ಹಾಡುಗಳನ್ನು ಹೆಚ್ಚಾಗಿ ಹಾಕುತ್ತಾರೆ. ಅಲ್ಲಿಗೆ ಬರುವವರೂ ಹೆಚ್ಚಾಗಿ ವಯಸ್ಸಾದವರೇ ಆಗಿರುತ್ತಾರೆ’ ಎಂದು ಪ್ರೇಕ್ಷಕಗಣ ಅಭಿರುಚಿಗಳನ್ನು ಬಹಿರಂಗಪಡಿಸುತ್ತಾರೆ ಡಿಜೆ ಜಾನ್ಸನ್‌.

ಪರ್ಯಾಯ ಉದ್ಯೋಗ
ಇಂದು ಡಿಜೆ ಎನ್ನುವುದು ಕೇವಲ ವ್ಯಾಮೋಹಕ್ಕಾಗಿ ಮಾಡುವ ಕೆಲಸವಾಗಿ ಮಾತ್ರವಲ್ಲದೆ ಹಣ ಗಳಿಗೆಯ ಮಾರ್ಗವಾಗಿಯೂ ಯುವಕರ ಗಮನ ಸೆಳೆಯುತ್ತಿದೆ. ಅದನ್ನು ಕಲಿಸುವ ಕೋರ್ಸ್‌ಗಳೂ ಇವೆ. ‘ಡಿಜೆ ಕೆಲಸ ಎನ್ನುವುದು ಇಂದು ಡಾಕ್ಟರ್‌, ಎಂಜಿನಿಯರ್‌, ಸಾಫ್ಟ್‌ವೇರ್‌ ಉದ್ಯೋಗಗಳಂತೆಯೇ ಕೈತುಂಬ ಹಣ ತರುವ ವೃತ್ತಿಯಾಗಿದೆ. ಆದರೆ ಇಲ್ಲಿ ನೀವು ಎಷ್ಟು ಹಣ ಗಳಿಸುತ್ತೀರಿ ಎನ್ನುವುದು ನಿಮ್ಮ ಪ್ರತಿಭೆಯ ಮೇಲೆ ಅವಲಂಬಿತವಾಗಿದೆ. ಒಬ್ಬ ಸಾಧಾರಣ ಡಿಜೆ ಕೂಡ ತಿಂಗಳಿಗೆ ಕನಿಷ್ಠ ₨ 20,000 ಹಣ ಗಳಿಸುತ್ತಾನೆ’ ಎಂದು ಗಳಿಕೆಯ ಗುಟ್ಟು ಬಿಟ್ಟುಕೊಡುತ್ತಾರೆ ಗೋಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT