ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿನೋಟಿಫೈ ಆರೋಪ ತಳ್ಳಿಹಾಕಿದ ಜಯಚಂದ್ರ

Last Updated 28 ಜುಲೈ 2014, 10:12 IST
ಅಕ್ಷರ ಗಾತ್ರ

ತುಮಕೂರು: ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶದಂತೆ ಅರ್ಕಾವತಿ ಬಡಾವಣೆ ಭೂಮಿ ಡಿನೋಟಿಫೈ  ಆಗಿದೆ. ಸಂಬಂಧಿಸಿರುವ ಎಲ್ಲ ದಾಖಲೆಗಳನ್ನು ಮುಖ್ಯಮಂತ್ರಿ ಸದನದ ಮುಂದಿಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಅರ್ಕಾವತಿ ಬಡಾವಣೆ ಮೂಲ ಯೋಜನೆಗೆ ನೀಡಿದ ೩೮೩೯ ಎಕರೆಯಲ್ಲಿ ೯೮೩ ಎಕರೆ ಭೂಮಿ ಅಧಿಸೂಚನೆಯಿಂದ ಕೈ ಬಿಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಹೊಸದಾಗಿ ೫೪೧ ಎಕರೆ ಡಿನೋಟಿಫೈ ಮಾಡಿದೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಈ ಸಂಬಂಧ ಸದನ ಸಮಿತಿ, ಸಿಐಡಿ ಅಥವಾ ನ್ಯಾಯಾಂಗ ತನಿಖೆಗೂ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಅರ್ಕಾವತಿ ಬಡಾವಣೆ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒತ್ತಾಯಿಸುವ ಬಿಜೆಪಿ ನಾಯಕರು ನೈಸ್‌ ಯೋಜನೆ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಕಲಾಪಕ್ಕೆ ಅಡ್ಡಿ ಪಡಿಸುತ್ತಿದೆ. ಸಾವಿರಾರು ಕೋಟಿ ಮೊತ್ತದ ಬಿಲ್‌ಗಳಿಗೆ ಅನುಮೋದನೆ ಪಡೆಯಬೇಕಿದೆ. ಈ ಹಂತದಲ್ಲಿ ಸದನ ಬಹಿಷ್ಕರಿಸಿದರೆ ಜನರು ಸಹಿಸುವುದಿಲ್ಲ. ಪರಿಸ್ಥಿತಿ ಅರ್ಥ ಮಾಡಿಕೊಂಡು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

ಬೆಳಗಾವಿಯಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ಎಂಇಎಸ್‌ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಎಂಇಎಸ್‌, ಶಿವಸೇನೆ ಹಾಗೂ ಎಂಎನ್‌ಎಸ್‌ ಸಂಘಟನೆಗಳು ಹದ್ದುಮೀರಿ ವರ್ತಿಸುತ್ತಿವೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದರು.

ಅತ್ಯಾಚಾರ ಆರೋಪಿಗಳನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಎರಡೂ ಸದನಗಳಲ್ಲಿ ಗೂಂಡಾ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸೋಮವಾರ ಮಂಡಿಸಲಾಗುವುದು ಎಂದರು.

ಉತ್ತಮ ಅವಕಾಶ: ಮುಜರಾಯಿ ಇಲಾಖೆಯ ಉಸ್ತುವಾರಿ ವಹಿಸಿದರೆ ಹುದ್ದೆ ಕಳೆದುಕೊಳ್ಳಬಹುದೆಂಬ ಮೂಢನಂಬಿಕೆಗೆ ನನ್ನ ಜಾತಕದಲ್ಲಿ ಸ್ಥಾನವಿಲ್ಲ. ರಾಜ್ಯದಾದ್ಯಂತ ಇರುವ ೩೫ ಸಾವಿರ ಧರ್ಮದತ್ತಿಗಳಲ್ಲಿ ಸಾವಿರಾರು ಎಕರೆ ಭೂಮಿ ಅತಿಕ್ರಮಣವಾಗಿದೆ. ಭೂಕಬಳಿಕೆದಾರ ವಿರುದ್ಧ ಕಾನೂನು ಕ್ರಮ ಜರುಗಿಸಲು ದೇವರೇ ಈ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT