ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಲಿಯರ್ಸ್‌ ಭಯದಲ್ಲಿ ಐರ್ಲೆಂಡ್‌

ಇಂದು ಪೈಪೋಟಿ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ದಕ್ಷಿಣ ಆಫ್ರಿಕಾ ತಂಡ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ (ಪಿಟಿಐ): ಎಬಿ ಡಿವಿಲಿಯರ್ಸ್‌ ಅವರನ್ನು ಕಟ್ಟಿ ಹಾಕುವುದು ಹೇಗೆ? ಐರ್ಲೆಂಡ್‌್ ತಂಡದ ಆಟಗಾರರನ್ನು ಕಾಡುತ್ತಿರುವ ಪ್ರಶ್ನೆ ಇದು. ವಿಶ್ವಕಪ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ ಐರ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿವೆ. ಹಿಂದಿನ ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಯುಎಇ ವಿರುದ್ಧ ಗೆಲುವು ಪಡೆದಿರುವ ಐರ್ಲೆಂಡ್‌ಗೆ ಮಂಗಳವಾರದ ಪಂದ್ಯ ಅಗ್ನಿಪರೀಕ್ಷೆ ಎನಿಸಿದೆ.

ಎಬಿ ಡಿವಿಲಿಯರ್ಸ್‌ ಎಂಬ ಅಪ್ರತಿಮ ಆಟಗಾರ ಐರ್ಲೆಂಡ್‌ ತಂಡದವರಿಗೆ ಭಯ ಮೂಡಿಸಿರುವುದು ನಿಜ. ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಡಿವಿಲಿಯರ್ಸ್‌ ಕೇವಲ 66 ಎಸೆತಗಳಲ್ಲಿ 162 ರನ್‌ ಗಳಿಸಿದ್ದರು. ಡಿವಿಲಿಯರ್ಸ್‌ ಅಬ್ಬರಿಸಲು ಆರಂಭಿಸಿದರೆ ಅವರನ್ನು ತಡೆಯಲು ಯಾವುದೇ ಬೌಲರ್‌ಗೂ ಸಾಧ್ಯವಿಲ್ಲ. ಆದ್ದರಿಂದ ಐರ್ಲೆಂಡ್‌ ಬೌಲರ್‌ ಗಳಿಗೆ ಈ ಪಂದ್ಯ ಒಡ್ಡಲಿರುವ ಸವಾಲು ಅಷ್ಟಿಷ್ಟಲ್ಲ.

ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಡಿವಿಲಿಯರ್ಸ್‌ ಅಲ್ಲದೆ, ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಎಲ್ಲ ಬ್ಯಾಟ್ಸ್‌ಮನ್‌ಗಳೂ ಉತ್ತಮ ಆಟವಾಡಿದ್ದರು. ಹಾಶಿಮ್‌ ಆಮ್ಲಾ, ಫಾಫ್‌ ಡು ಪ್ಲೆಸಿಸ್‌ ಮತ್ತು ರಿಲೀ ರೂಸೊ ಲಯ ಕಂಡುಕೊಂಡಿದ್ದು, ಅದೇ ರೀತಿಯ ಆಟವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಸತತ ಎರಡು ಗೆಲುವು ಪಡೆದಿರುವ ಕಾರಣ ಐರ್ಲೆಂಡ್‌ ಆಟಗಾರರ ಆತ್ಮವಿಶ್ವಾಸ ಹೆಚ್ಚಿದೆ. ಆದ್ದರಿಂದ ವಿಲಿಯಮ್‌ ಪೋರ್ಟರ್‌ಫೀಲ್ಡ್‌ ಬಳಗ ದಕ್ಷಿಣ ಆಫ್ರಿಕಾಕ್ಕೆ ಪ್ರಬಲ ಪೈಪೋಟಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ ನೀಡಿದ್ದ 304 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಪಡೆಯಲು ಐರ್ಲೆಂಡ್‌ ಯಶಸ್ವಿ ಯಾಗಿತ್ತು. ಪೌಲ್ ಸ್ಟರ್ಲಿಂಗ್‌, ಎಡ್‌ ಜಾಯ್ಸ್‌ ಮತ್ತು ನೀಲ್‌ ಒಬ್ರಿಯನ್‌ ಅವರಂತಹ ಆಟ ಗಾರರು ಬ್ಯಾಟಿಂಗ್‌ ವಿಭಾಗದ ಬಲ ಎನಿಸಿಕೊಂಡಿದ್ದಾರೆ.

ಮನುಕಾ ಓವಲ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಯೋಗ್ಯವಾಗಿದೆ. ಆದ್ದರಿಂದ ಮೊದಲು ಬ್ಯಾಟ್‌ ಮಾಡಲು ಅವಕಾಶ ಲಭಿಸಿದರೆ ಉತ್ತಮ ಮೊತ್ತ ಪೇರಿಸುವ ಸಾಮರ್ಥ್ಯವನ್ನು ಐರ್ಲೆಂಡ್‌ ಹೊಂದಿದೆ. ದಕ್ಷಿಣ ಆಫ್ರಿಕಾದ ಬೌಲರ್‌ಗಳಿಂದ ಇನ್ನೂ ಪ್ರಭಾವಿ ಆಟ ಕಂಡುಬಂದಿಲ್ಲ. ಅದರಲ್ಲೂ ಡೇಲ್‌ ಸ್ಟೇಯ್ನ್‌ ಅವರ ಫಾರ್ಮ್‌ ಚಿಂತೆಗೆ ಕಾರಣವಾಗಿದೆ. ಈ ಘಾತಕ ವೇಗಿ ನೈಜ ಸಾಮರ್ಥ್ಯದಿಂದ ಬೌಲ್‌ ಮಾಡಲು ವಿಫಲ ರಾಗಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನ ಜ್ವರದಿಂದ ಬಳಲಿದ್ದ ಸ್ಟೇಯ್ನ್‌ ಇನ್ನೂ ಲಯ ಕಂಡುಕೊಂಡಿಲ್ಲ.

ಐರ್ಲೆಂಡ್‌ ವಿರುದ್ಧದ ಹಣಾಹಣಿ ಸ್ಟೇಯ್ನ್‌ಗೆ 100ನೇ ಏಕದಿನ ಪಂದ್ಯ ಎನಿಸಿಕೊಂಡಿದೆ. ಎದುರಾಳಿ ತಂಡದ ಕೆಲವೊಂದು ವಿಕೆಟ್‌ಗಳನ್ನು ಪಡೆದು ಈ ಪಂದ್ಯವನ್ನು ಸ್ಮರಣೀಯ ವನ್ನಾಗಿಸಿಕೊಳ್ಳುವುದು ಅವರ ಗುರಿ. ದಕ್ಷಿಣ ಆಫ್ರಿಕಾ ಬೌಲರ್‌ಗಳಲ್ಲಿ ಇದುವರೆಗೆ ಮಿಂಚಿದ್ದು ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಮಾತ್ರ. ಅವರು ಒಟ್ಟು ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಐರ್ಲೆಂಡ್‌ ಬ್ಯಾಟ್ಸ್‌ಮನ್‌ಗಳಿಗೆ ತಾಹಿರ್‌ ಸವಾಲಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ. ಮಾರ್ನ್‌ ಮಾರ್ಕೆಲ್‌ ಮತ್ತು ವೇಯ್ನ್‌ ಪಾರ್ನೆಲ್‌ ಶಿಸ್ತಿನ ಬೌಲಿಂಗ್‌ ಮಾಡಿದರೆ ಐರ್ಲೆಂಡ್‌ಗೆ ಪ್ರತಿ ರನ್‌ ಗಳಿಸಲೂ ಸಾಕಷ್ಟು ಪರಿಶ್ರಮ ಪಡಬೇಕು.

ವೆಸ್ಟ್‌ ಇಂಡೀಸ್‌ನ ಫಿಲ್‌ ಸಿಮನ್ಸ್‌ ಕೋಚ್‌ ಆಗಿ ನೇಮಕಗೊಂಡ ಬಳಿಕ ಐರ್ಲೆಂಡ್‌ ತಂಡ ದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ‘ವಿಂಡೀಸ್‌ ವಿರುದ್ಧ ನಮ್ಮವರು ಆಡಿದ ರೀತಿ ನೋಡಿದಾಗ ಹೆಮ್ಮೆ ಉಂಟಾಗುತ್ತದೆ’ ಎಂದು ಸಿಮನ್ಸ್‌ ನುಡಿದಿದ್ದಾರೆ. ‘ನಮ್ಮ ಬ್ಯಾಟ್ಸ್‌ಮನ್‌ಗಳು ವೇಗದ ಬೌಲಿಂಗ್‌ ಮುಂದೆ ತಡಕಾಡುವರು ಎಂದು ಭಾವಿಸಿ ವಿಂಡೀಸ್‌ ತಂಡ ನಾಲ್ಕು ವೇಗಿಗಳನ್ನು ಕಣಕ್ಕಿಳಿಸಿತ್ತು. ಆದರೆ ನಾವು ವೇಗಿಗಳನ್ನು ಸಮರ್ಥವಾಗಿ ಎದುರಿಸಿ ನಿಂತೆವು’ ಎಂದಿದ್ದಾರೆ. ದ. ಆಫ್ರಿಕಾದ ವೇಗದ ಬೌಲಿಂಗ್‌ ದಾಳಿಯನ್ನು ಮೆಟ್ಟಿನಿಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್‌ ತಂಡ ವಿಶ್ವಕಪ್‌ನಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾ ಜತೆ ಮೂರು ಸಲ ಪೈಪೋಟಿ ನಡೆಸಿದ್ದು, ಒಮ್ಮೆಯೂ ಗೆಲುವು ಪಡೆದಿಲ್ಲ.

ತಂಡಗಳು: ದಕ್ಷಿಣ ಆಫ್ರಿಕಾ: ಎಬಿ ಡಿವಿಲಿಯರ್ಸ್‌ (ನಾಯಕ), ಹಾಶಿಮ್‌ ಆಮ್ಲಾ, ಕ್ವಿಂಟನ್‌ ಡಿ ಕಾಕ್‌, ಫರ್ಹಾನ್‌ ಬೆಹರ್ದೀನ್‌, ಜೆ.ಪಿ. ಡುಮಿನಿ, ಫಾಫ್‌ ಡು ಪ್ಲೆಸಿಸ್‌, ಇಮ್ರಾನ್‌ ತಾಹಿರ್‌, ಡೇವಿಡ್‌ ಮಿಲ್ಲರ್‌, ಮಾರ್ನ್‌ ಮಾರ್ಕೆಲ್‌, ಡೇಲ್‌ ಸ್ಟೇಯ್ನ್‌, ಕೈಲ್‌ ಅಬಾಟ್‌, ವೇಯ್ನ್‌ ಪಾರ್ನೆಲ್‌, ಆ್ಯರನ್‌ ಫಂಗಿಸೊ, ರಿಲೀ ರೂಸೊ

ಐರ್ಲೆಂಡ್‌: ವಿಲಿಯಮ್‌ ಪೋರ್ಟರ್‌ಫೀಲ್ಡ್‌ (ನಾಯಕ), ಆ್ಯಂಡ್ರ್ಯೂ ಬಾಲ್ಬರ್ನಿ, ಪೀಟರ್‌ ಚೇಸ್‌, ಅಲೆಕ್ಸ್‌ ಕ್ಯುಸ್ಯಾಕ್‌, ಜಾರ್ಜ್‌ ಡಾಕ್ರೆಲ್‌, ಎಡ್ ಜಾಯ್ಸ್‌, ಆ್ಯಂಡ್ರ್ಯೂ ಮೆಕ್‌ಬ್ರೈನ್‌, ಜಾನ್‌ ಮೂನಿ, ಕೆವಿನ್‌ ಒಬ್ರಿಯನ್‌, ನೀಲ್‌ ಒಬ್ರಿಯನ್‌, ಮ್ಯಾಕ್ಸ್‌ ಸೊರೆನ್ಸೆನ್‌, ಪೌಲ್‌ ಸ್ಟರ್ಲಿಂಗ್‌, ಸ್ಟುವರ್ಟ್‌ ಥಾಮ್ಸನ್‌, ಗ್ಯಾರಿ ವಿಲ್ಸನ್‌, ಕ್ರೆಗ್‌ ಯಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT