ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್ಪಿ ಹತ್ಯೆ: ಸಚಿವ ರಾಜೀನಾಮೆ

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ತೀವ್ರ ಗದ್ದಲ, ಸಿಬಿಐ ತನಿಖೆಗೆ ಮುಖ್ಯಮಂತ್ರಿ ಸಮ್ಮತಿ
Last Updated 4 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಲಖನೌ:  ಡಿವೈಎಸ್‌ಪಿ ಒಬ್ಬರನ್ನು ಹಾಡಹಗಲಲ್ಲೇ ಅಮಾನುಷವಾಗಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಉತ್ತರ ಪ್ರದೇಶದ ಅಪರಾಧ ಹಿನ್ನೆಲೆಯ ವಿವಾದಾತ್ಮಕ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಸೋಮವಾರ ರಾಜೀನಾಮೆ ನೀಡಿದ್ದಾರೆ.

ಡಿವೈಎಸ್‌ಪಿ ಜಿಯಾ-ಉಲ್-ಹಕ್ ಹತ್ಯೆ ಪ್ರಕರಣವು ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ತೀವ್ರ ಕೋಲಾಹಲವನ್ನೇ ಉಂಟುಮಾಡಿತು. ಪ್ರತಿಪಕ್ಷಗಳ ತೀಕ್ಷ್ಣ ಟೀಕೆಗೆ ಗುರಿಯಾದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರನ್ನು ಸಂಪುಟದಿಂದ ಕೈಬಿಡುವುದಾಗಿ ಹೇಳಿ, ರಾಜಾ ಭಯ್ಯಾ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದರು. 

ಈ ಮಧ್ಯೆ, ಮುಖ್ಯಮಂತ್ರಿಗಳು ಬರುವವರೆಗೂ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಿವೈಎಸ್‌ಪಿ ಹಕ್ ಅವರ ಪತ್ನಿ ಪರ್ವೀನ್ ಅಜಾದ್ ಪಟ್ಟುಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ದೆವೋರಿಯಾ ಜಿಲ್ಲೆಯಲ್ಲಿರುವ ಹಕ್ ಅವರ ಗ್ರಾಮ ನೂನ್‌ಖರ್‌ಗೆ ಭೇಟಿ ನೀಡಿದ್ದ ಅಖಿಲೇಶ್ ಯಾದವ್, ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಸಮ್ಮತಿಸಿದ್ದಾರೆ.

ಹಕ್ ಅವರ ಕುಟುಂಬಕ್ಕೆ ರೂ 50 ಲಕ್ಷ ಮತ್ತು ಕುಟುಂಬದ ಇಬ್ಬರು ಸದಸ್ಯರಿಗೆ ಉದ್ಯೋಗ ನೀಡುವ ಭರವಸೆಯನ್ನೂ ಅವರು ನೀಡಿದ್ದಾರೆ.

ಪತ್ನಿಯ ಒತ್ತಾಯ: ಪತಿಯ ಹತ್ಯೆಯ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಈ ಪ್ರಕರಣದ ತನಿಖೆಯನ್ನು ರಾಜ್ಯದ ಪೊಲೀಸರು ನಿಷ್ಪಕ್ಷಪಾತವಾಗಿ ನಡೆಸುವುದಿಲ್ಲ. ಆದ್ದರಿಂದ ಇದನ್ನು ಸಿಬಿಐ ತನಿಖೆ ಒಪ್ಪಿಸಬೇಕು ಎಂದು ಪರ್ವೀನ್ ಒತ್ತಾಯಿಸಿದ್ದರು.

ಒಂದು ವೇಳೆ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಖ್ಯಮಂತ್ರಿ ಅವರ ನಿವಾಸದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಅವರು ಬೆದರಿಕೆ ಹಾಕಿದ್ದರು.

ಎಂಟು ಮಂದಿ ಅಮಾನತು: ಹಕ್ ಅವರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಅವರೊಟ್ಟಿಗೆ ಇದ್ದ ಮತ್ತು ಸ್ಥಳದಿಂದ ಪರಾರಿಯಾಗಿರುವ ಎಂಟು ಮಂದಿ ಪೊಲೀಸರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಅಮಾನತುಗೊಂಡವರಲ್ಲಿ ಕುಂದಾ ಕೋಟ್ವಾಲಿ ಠಾಣೆ ಇನ್‌ಸ್ಪೆಕ್ಟರ್ ಮತ್ತು ಡಿವೈಎಸ್‌ಪಿ ಅವರ ಅಂಗರಕ್ಷಕರು ಸೇರಿದ್ದಾರೆ.

ರಾಜಾ ಭಯ್ಯಾ ಮತ್ತು ಅವರ ನಾಲ್ವರು ಆಪ್ತರ ವಿರುದ್ಧ  ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಚು ರೂಪಿಸಿದ ಆಪಾದನೆ ಮೇಲೆ ಎಫ್‌ಐಆರ್ ದಾಖಲಾಗಿದೆ. ಆರೋಪಗಳಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.

ಡಿವೈಎಸ್‌ಪಿ ಹಕ್ ಅವರನ್ನು ಅಮಾನುಷವಾಗಿ ಕೊಂದಿರುವ ವಿಚಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ  ಉಂಟುಮಾಡಿತು. ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಹಿಗ್ಗಾಮಗ್ಗಾ ವಾಗ್ದಾಳಿ ನಡೆಸಿದರು. ಪ್ರಶ್ನೋತ್ತರ ಅವಧಿ ಕೈಬಿಟ್ಟು, ಸರ್ಕಾರ ವಜಾ ಮಾಡುವ ಕುರಿತು ಮಂಡಿಸಿರುವ ನಿಲುವಳಿ ಸೂಚನೆ ಮೇಲೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದೂ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸರ್ಕಾರ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಬದ್ಧವಾಗಿದೆ ಎಂದರು. ಸಚಿವ ರಾಜಾ ಭಯ್ಯಾ ಅವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಪಕ್ಷ ಸದಸ್ಯರು ಒತ್ತಾಯಿಸಿದರು.

ಈ ಬಗ್ಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿರುವ ರಾಜಾ ಭಯ್ಯಾ, `ಹಕ್ ಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಈ     ವಿಷಯದಲ್ಲಿ ನಾನು ಅಮಾಯಕ. ಸಿಬಿಐ ಸೇರಿದಂತೆ ಯಾವುದೇ ಸಂಸ್ಥೆಯಿಂದಲಾದರೂ ತನಿಖೆ ನಡೆಸಲಿ, ನಾನು ಅದನ್ನು ಎದುರಿಸಲು ಸಿದ್ಧ' ಎಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.

`ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಯಾವ ಕೆಲಸವನ್ನೂ ನಾನು ಮಾಡಿಲ್ಲ. ಹಕ್ ಅವರನ್ನು ಗ್ರಾಮಸ್ಥರು ಪ್ರತೀಕಾರದಿಂದ ಕೊಲೆ ಮಾಡಿದ್ದಾರೆ' ಎಂದು ಅವರು ಆಪಾದಿಸಿದರು.

ಹಿನ್ನೆಲೆ: ಗ್ರಾಮದ ಮುಖ್ಯಸ್ಥರೊಬ್ಬರ ಕೊಲೆ ಹಿನ್ನೆಲೆಯಲ್ಲಿ ಕುಂದಾ ವಿಭಾಗದ ಡಿವೈಎಸ್‌ಪಿ  ಜಿಯಾ-ಉಲ್-ಹಕ್ ಅವರು ಕೆಲವು ಸಿಬ್ಬಂದಿ ವರ್ಗದವರೊಂದಿಗೆ ಪ್ರತಾಪಗಡ ಜಿಲ್ಲೆಯ ವಾಲಿಪುರ್ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದರು.

ಉದ್ರಿಕ್ತವಾಗಿದ್ದ ಗ್ರಾಮದಲ್ಲಿ ಪೊಲೀಸರ ತಂಡಕ್ಕೆ ಮುತ್ತಿಗೆ ಹಾಕಲಾಯಿತು. ಇದೇ ಸಂದರ್ಭದಲ್ಲಿ ಗಲಭೆ ಕೂಡ ಉಂಟಾಯಿತು. ಗುಂಪೊಂದು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡ ತೊಡಗಿತು. ಆಗ ಹಕ್ ಅವರೊಂದಿಗೆ ಬಂದಿದ್ದ ಸಿಬ್ಬಂದಿ ವರ್ಗದವರು ಪರಾರಿಯಾದರು. ಇದೇ ವೇಳೆಗೆ ಹಕ್  ಅವರಿಂದ ಪಿಸ್ತೂಲ್ ಕಿತ್ತುಕೊಂಡು ದುರುಳರು ಅವರ ಮೇಲೆಯೇ ಗುಂಡು ಹಾರಿಸಿದರು.
ಹಕ್ ಅವರ ದೇಹದಲ್ಲಿ ಮೂರು ಗುಂಡುಗಳು ಪತ್ತೆಯಾಗಿವೆ. ಆದರೆ, ಹತ್ಯೆಗೆ ಬಳಸಿದ ಪಿಸ್ತೂಲ್ ನಾಪತ್ತೆಯಾಗಿದೆ.

ಪರ್ವೀನ್ ಆಪಾದನೆ
`ಅವರು (ಹಕ್) ಎಂದೂ ಸಚಿವ ರಾಜಾ ಭಯ್ಯಾ ಅವರ ತಾಳಕ್ಕೆ ಕುಣಿದವರಲ್ಲ. ಸಚಿವರು ಪಾಳೇಗಾರಿಕೆಯಿಂದ ನಡೆಸುತ್ತಿದ್ದ `ದರ್ಬಾರ್'ಗಳಿಗೆ (ನ್ಯಾಯ ಪಂಚಾಯಿತಿ) ಹೋಗಿ ಸಲಾಂ ಹೊಡೆದವರಲ್ಲ. ಆದ್ದರಿಂದಲೇ ಅವರನ್ನು ಹತ್ಯೆ ಮಾಡಲಾಗಿದೆ' ಎಂದು ಹಕ್ ಅವರ ಪತ್ನಿ ಪರ್ವೀನ್ ಆಜಾದ್ ಅವರು ಸುದ್ದಿಗಾರರಿಗೆ ತಿಳಿಸಿದರು.

`ಕುಂದಾ ಕ್ಷೇತ್ರದ ಶಾಸಕರೂ ಆದ ಸಚಿವ ರಾಜಾ ಭಯ್ಯಾ ಪಾಳೇಗಾರಿಕೆ ನಡೆಸುತ್ತಿದ್ದರು. ಯಾರೊಬ್ಬರು ಸಚಿವರ ವಿರುದ್ಧ ಸೊಲ್ಲೆತ್ತುತ್ತಿರಲಿಲ್ಲ. ಅವರು (ಹಕ್) ಎಂದೂ ರಾಜಾಕೀಯ ಒತ್ತಡಗಳಿಗೆ ಬಗ್ಗಿದವರಲ್ಲ. ಆ ಕಾರಣದಿಂದಲೇ ಈಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ' ಎಂದು  ಆಪಾದಿಸಿದರು.

ಬುಖಾರಿಗೆ ತಡೆ
ನೂನ್‌ಖರ್‌ಗೆ ತೆರಳುತ್ತಿದ್ದ ದೆಹಲಿಯ ಜಾಮಾ ಮಸೀದಿಯ ಮೌಲ್ವಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಅವರನ್ನು ಗೌರಿ ಬಜಾರ್ ಪ್ರದೇಶದಲ್ಲಿ ಪೊಲೀಸರು ತಡೆದಿದ್ದಾರೆ. ಬುಖಾರಿ ಅವರು ಹಕ್ ಅವರ ಮನೆಗೆ ಭೇಟಿ ನೀಡಲು ಬರುತ್ತಿದ್ದರು.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಅವರಿಗೆ ನೂನ್‌ಖರ್‌ಗೆ ಹೋಗದಂತೆ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT