ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ 9ರಂದು ಸುವರ್ಣಸೌಧಕ್ಕೆ ಮುತ್ತಿಗೆ

Last Updated 28 ನವೆಂಬರ್ 2014, 6:09 IST
ಅಕ್ಷರ ಗಾತ್ರ

ಮುಂಡರಗಿ: ‘ಸರ್ಕಾರದ ನಿರ್ಧಾರ ಹಾಗೂ ನ್ಯಾಯಾಲಯದ ಆದೇಶದಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಗೆ ₨ 2500 ನೀಡದಿದ್ದರೆ ಡಿಸೆಂಬರ್ 9ರಂದು ಸಾವಿರಾರು ರೈತರೊಂದಿಗೆ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿನೆ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೀರನಗೌಡ ಪಾಟೀಲ ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಬಾಕಿ ಹಣವನ್ನು ಎರಡು ವರ್ಷಗಳ ಕಾಲ ಮಿತಿಯಲ್ಲಿ ಹಂತ ಹಂತವಾಗಿ ವಿತರಿಸಲಾಗುವುದು ಎಂದು ಸಕ್ಕರೆ ಸಚಿವ ಮಹಾದೇವ ಪ್ರಸಾದ ಹೇಳಿರುವುದು ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಸರ್ಕಾರ ನ್ಯಾಯಾಲಯದ ಅದೇಶದಂತೆ ಕಬ್ಬುಬೆಳೆಗಾರರಿಗೆ ನಿಗದಿತ ಹಣವನ್ನು ನೀಡಬೇಕು’ ಎಂದು ಒತ್ತಾಯಿಸಿದರು.

‘ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರ ತಾಳಕ್ಕೆ ತಕ್ಕಂತೆ ಸರ್ಕಾರವು ಕುಣಿಯುತ್ತಿರುವುದು ಇದರಿಂದ ಸ್ಪಷ್ಟವಾಗಿದ್ದು, ಸರಕಾರ ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ನ್ಯಾಯಾಲಯದ ಆದೇಶದಂತೆ ಸಕ್ಕರೆ ಕಾರ್ಖಾನೆ ಗಳ ಮಾಲೀಕರು ಸಕಾಲದಲ್ಲಿ ರೈತರ ಬಾಕಿ ಹಣವನ್ನು ಪಾವತಿಸದಿದ್ದಲ್ಲಿ ಶೇಕಡಾ 15ರಷ್ಟು ಬಡ್ಡಿ ಹಣವನ್ನು ರೈತರಿಗೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

‘ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿಯುತ್ತಿರವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಅವರ ಹಿತ ಕಾಯುವ ಭರಾಟೆಯಲ್ಲಿ ಸರ್ಕಾರ ಕಬ್ಬು ಬೆಳೆದ ರೈತರನ್ನು ಬಲಿಪಶುವನ್ನಾಗಿ ಮಾಡುತ್ತಲಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ನ್ಯಾಯಾಲಯ ಹಾಗೂ ಮುಖ್ಯಮಂತ್ರಿಗಳ ಆದೇಶವನ್ನೇ ಧಿಕ್ಕರಿಸಿದ್ದು, ಅವರೆಲ್ಲ ನ್ಯಾಯಾಲಯಕ್ಕಿಂತಲೂ ದೊಡ್ಡವರೇನು’ ಎಂದು ಅವರು ಪ್ರಶ್ನಿಸಿದರು.

‘ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಂಧ್ರಪ್ರದೇಶ ಮೂಲದ ಸಕ್ಕರೆ ಕಾರ್ಖಾನೆಗೆ ಗದಗ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಕಬ್ಬು ಬೆಳೆಗಾರರು ಕಬ್ಬನ್ನು ಸರಬರಾಜು ಮಾಡುತ್ತಿದ್ದು, ಸಕ್ಕರೆ ಕಾರ್ಖಾನೆಯವರು ಇಲ್ಲಿಯ ರೈತರಿಗೆ ಸುಮಾರು 43 ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ಭಾಗದ ಕಬ್ಬು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಸರ್ಕಾರದ ಆದೇಶದಂತೆ ಸಕ್ಕರೆ ಕಾರ್ಖಾನೆಯವರು ರೈತರಿಗೆ ಬಾಕಿ ಹಣವನ್ನು ಪಾವತಿಸಬೇಕು’ ಎಂದು ಅವರು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಸುರೇಶ ಹಲವಾಗಲಿ, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ, ಕಾರ್ಯದರ್ಶಿ ಫಕ್ಕಿರಗೌಡ ಪಾಟೀಲ, ಹಾಲೇಶ ಶೀಗೇನಹಳ್ಳಿ, ಶಂಕ್ರಪ್ಪ ಚನ್ನಳ್ಳಿ, ಶರಣಪ್ಪ ಜಂತ್ಲಿ, ಗರುಡಪ್ಪ ಜಂತ್ಲಿ, ವೀರಯ್ಯ ಹಿರೇಮಠ, ಈರಣ್ಣ ಕವಲೂರ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT