ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ಗೆ ಏಕರೂಪ ಬೆಲೆ; ರಾಜ್ಯಗಳ ಜತೆ ನಾಳೆ ಸಭೆ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಾದ್ಯಂತ ಏಕರೂಪದ ಡೀಸೆಲ್‌ ಬೆಲೆ ನಿಗದಿಪ­ಡಿಸುವ ಸಂಬಂಧ ಕೇಂದ್ರ ಸರ್ಕಾರ, ಕರ್ನಾಟಕ ಸೇರಿದಂತೆ 12 ರಾಜ್ಯಗಳ ಸಭೆ ಕರೆದಿದೆ.

ಇದೇ ಜುಲೈ 30 , 31ರಂದು ಕರ್ನಾಟಕ, ಕೇರಳ, ಅಸ್ಸಾಂ, ಬಿಹಾರ, ಹರಿಯಾಣ, ಉತ್ತರಾಖಂಡ ರಾಜ್ಯಗಳ ಸಭೆ ಹಾಗೂ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ತಾನ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಸಭೆಯನ್ನು ಆಗಸ್ಟ್‌ 5, 6ರಂದು ಕರೆಯಲಾಗಿದೆ. ಈ ರಾಜ್ಯಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ವಿವಿಧ ಹಂತಗಳಲ್ಲಿ ವಿಧಿಸಲಾಗುವ ರಾಜ್ಯ ತೆರಿಗೆಗಳನ್ನು ಕಡಿತಗೊಳಿಸುವುದು ಮತ್ತು ದೇಶದಾದ್ಯಂತ ಡೀಸೆಲ್‌ ಮೇಲೆ ಏಕರೂಪದ ತೆರಿಗೆ ಪದ್ಧತಿ ಅಳವಡಿಸುವ ಮೂಲಕ ಡೀಸೆಲ್‌ ಬೆಲೆಯನ್ನು ತಗ್ಗಿಸಲು ಪೆಟ್ರೋಲಿಯಂ ಸಚಿವಾಲಯ ಈ ಸಭೆ ಕರೆದಿದೆ.

ರಾಜ್ಯಗಳಲ್ಲಿ ಜಾರಿಯಲ್ಲಿರುವ ಹಲವು ಹಂತಗಳ ತೆರಿಗೆ ನೀತಿ ಕೈಬಿಟ್ಟು ಏಕರೂಪ ತೆರಿಗೆ ನೀತಿ ಅಳವಡಿಸಿ­ಕೊಳ್ಳುವಂತೆ  ಪೆಟ್ರೋಲಿಯಂ ಸಚಿವಾ­ಲಯ ಜುಲೈ 9ರಂದು 12 ರಾಜ್ಯಗಳಿಗೆ ಪತ್ರ ಬರೆದಿತ್ತು. ಸ್ಥಳೀಯ ಸೇವಾ ತೆರಿಗೆ, ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌), ಅಕ್ಟ್ರಾಯ್‌ ಮುಂತಾದ ತೆರಿಗೆಗಳಿಂದ ಈ ರಾಜ್ಯಗಳ ಗ್ರಾಹಕರು ಪ್ರತಿ ಲೀಟರ್‌ ಡೀಸೆಲ್‌ಗೆ ಸುಮಾರು ಏಳು ರೂಪಾಯಿ ಹೆಚ್ಚುವರಿಯಾಗಿ ನೀಡುತ್ತಿದ್ದಾರೆ.

ದೆಹಲಿಯಲ್ಲಿ ಒಂದು ಲೀಟರ್‌ ಡೀಸೆಲ್‌ ಬೆಲೆ 57.84 ರೂಪಾಯಿಗ­ಳಾದರೆ ಮುಂಬೈನಲ್ಲಿ  66.01 ರೂಪಾಯಿ ಆಗಿರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಈ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಇದೇ ರೀತಿಯ ವ್ಯತ್ಯಾಸ ಪೆಟ್ರೋಲ್‌ ಬೆಲೆಯಲ್ಲೂ ಕಂಡು ಬರುತ್ತವೆ. ದೆಹಲಿಯಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 73.54 ರೂಪಾಯಿ­ಗಳಾದರೆ ಮುಂಬೈನಲ್ಲಿ 81.68 ರೂಪಾಯಿ ಹಾಗೂ ಮಹಾರಾಷ್ಟ್ರದ ಇನ್ನುಳಿದ ಸ್ಥಳಗಳಲ್ಲಿ 82.16 ರೂಪಾಯಿಗಳಾಗಿರುತ್ತದೆ.
ಸ್ಥಳೀಯ ತೆರಿಗೆಗಳಿಂದ ಈ ರಾಜ್ಯ­ಗಳಲ್ಲಿ ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆ ಸಹಜವಾಗಿ ದುಬಾರಿಯಾಗಿದೆ. ಇದರಿಂದ ನೆರೆಯ ರಾಜ್ಯಗಳಿಗೆ ಆದಾಯ ಹರಿದು ಹೋಗುತ್ತದೆ.

ಒಂದು ವೆಳೆ ಎಲ್ಲ ರಾಜ್ಯಗಳಲ್ಲೂ ಏಕರೂಪ ತೆರಿಗೆ ವ್ಯವಸ್ಥೆ ಜಾರಿಯಾದರೆ ಎಲ್ಲ ಗ್ರಾಹಕರಿಗೂ ಅನುಕೂಲ­ವಾಗುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT