ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ದರವೂ ಪ್ರಯಾಣದ ‘ಭಾರ’ವೂ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಡೀಸೆಲ್ ದರ ಪ್ರತಿ ಲೀಟರ್‌ಗೆ ₨ ೪  ಇಳಿಕೆಯಾಗಿದೆ. ಈ ಕಾರಣ ಬಸ್ ಪ್ರಯಾಣ ದರವನ್ನೂ ಇಳಿಸ­ಬೇಕು ಎನ್ನುವ ಜನಸಾಮಾನ್ಯರ ಕೂಗಿಗೆ ಸಾರಿಗೆ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಅಷ್ಟೇ ಅಲ್ಲ, ಪ್ರಯಾಣ ದರ ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದಿದ್ದ ಬಿಜೆಪಿ ನೇತೃತ್ವದ ಸರ್ಕಾರವೂ ಡೀಸೆಲ್ ದರ ಏರಿಕೆಯಾದ ಸಂದರ್ಭಗಳಲ್ಲಿ ಮಾರನೇ ದಿನದಿಂದಲೇ ಜಾರಿ­ಯಾಗು­ವಂತೆ ಮೂರು ಬಾರಿ ಬಸ್ ಪ್ರಯಾಣ ದರ ಏರಿಸಿತ್ತು. ಆದರೆ ಡಿಸೇಲ್ ಬೆಲೆ ಏರಿದ್ದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾದಾಗ ಪ್ರಯಾಣ ದರ ಇಳಿಸಲು ನಿರಾಕರಿಸಿತ್ತು.

ಡೀಸೆಲ್ ದರ ಇಳಿಕೆಯಿಂದ ಸಾರಿಗೆ ನಿಗಮಗಳಿಗಾಗುವ ಲಾಭ­ವನ್ನು ಹೊಸ ಬಸ್‌ಗಳ ಖರೀದಿ ಮತ್ತು ನೌಕರರ ವೇತನ ಹೆಚ್ಚ­ಳಕ್ಕೆ ಹೊಂದಿಸಲಾಗುವುದು ಎಂಬ ಸಮಜಾಯಿಷಿ ನೀಡಿದ್ದರು ಅಂದಿನ ಸಾರಿಗೆ ಸಚಿವ ಆರ್. ಅಶೋಕ. ಪಕ್ಕದ ರಾಜ್ಯಗಳ ಸಾರಿಗೆ ಸಂಸ್ಥೆ ದರಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ಪ್ರಯಾಣ ದರ ಗಮನಾರ್ಹ ಪ್ರಮಾಣದಲ್ಲಿ  ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿನ ಪ್ರಯಾಣ ದರ ರಾಜ್ಯದ­ಲ್ಲಿನ ಪ್ರಯಾಣ ದರಕ್ಕಿಂತಲೂ ಶೇಕಡ ೧೧ರಷ್ಟು ಕಡಿಮೆ ಇದೆ. ನೆರೆ ರಾಜ್ಯದಲ್ಲಿನ ನಗರ ಸಾರಿಗೆ ಪ್ರಯಾಣ ದರಗಳಿಗೆ ಹೋಲಿ­ಸಿದರೆ ರಾಜ್ಯದಲ್ಲಿನ ನಗರ ಸಾರಿಗೆ ಪ್ರಯಾಣ ದರ ಶೇ ೧೦೦ರಿಂದ ೩೦೦ಕ್ಕೂ ಹೆಚ್ಚು ತುಟ್ಟಿ­ಯಾಗಿದೆ. 

ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ನಿಗಮ ಸೇರಿ­ದಂತೆ ಹುಬ್ಬಳ್ಳಿ-–ಧಾರವಾಡ, ಗುಲ್ಬರ್ಗ ಇತರೆಡೆಗಳಲ್ಲಿನ ನಗರ ಸಾರಿಗೆ ದರಗಳು ವಿಪರೀತ ಎನಿಸುವಷ್ಟು ಹೆಚ್ಚು.  ಇದು ಸರ್ಕಾ­ರದ ಹಗಲು ದರೋಡೆ. ಚೆನ್ನೈನಲ್ಲಿ ಸಂಚರಿಸುವ ನಗರ ಸಾರಿಗೆ ಬಸ್ ಪ್ರಯಾಣ ದರ ಮತ್ತು ಬೆಂಗಳೂರು, ಹುಬ್ಬಳ್ಳಿ ಧಾರವಾಡ­ಗಳಲ್ಲಿ ಸಂಚರಿಸುವ ಬಸ್ ಪ್ರಯಾಣಕ್ಕೂ ತಾಳೆ ಹಾಕಿದಾಗ ದಿಗ್ಭ್ರಮೆಯಾಗುತ್ತದೆ! ಯಾಕೆಂದರೆ ಚೆನ್ನೈ­ನಲ್ಲಿ ಮೊದಲ ಸ್ಟೇಜ್ ಪ್ರಯಾಣ ದರ ಕೇವಲ ₨ ೩.

ಬಸ್ ಪ್ರಯಾಣದ ಆರಂಭದ ತಾಣದಿಂದ ಮೂರನೇ ತಂಗುದಾಣಕ್ಕೆ ಅಲ್ಲಿ ಒಂದು ಸ್ಟೇಜ್ ಆಗುತ್ತದೆ. ಆದರೆ ಬೆಂಗಳೂರಿನಲ್ಲಿ ಎರ­ಡನೇ ತಂಗುದಾಣಕ್ಕೆ (ಕೆಲವೆಡೆ ಒಂದನೇ ತಂಗುದಾಣಕ್ಕೆ ಒಂದು ಸ್ಟೇಜ್ ಆಗುತ್ತದೆ!  ಉದಾಹರಣೆಗೆ ಮೆಜೆಸ್ಟಿಕ್‌ನಿಂದ ಮಹಾ­ರಾಣಿ ಕಾಲೇಜ್- ಒಂದನೇ ಸ್ಟೇಜ್ ಆದರೆ ನಂತರದ ಎಜಿ ಕಚೇರಿ ತಂಗುದಾಣ ಎರಡನೇ ಸ್ಟೇಜ್ ಆಗುತ್ತದೆ) ಎರಡು ಸ್ಟೇಜ್‌ಗಳಾಗುತ್ತವೆ! ಬೆಂಗಳೂರು ನಗರ ಸಾರಿಗೆಯಲ್ಲಿ ಒಂದನೇ ಸ್ಟೇಜ್ ಪ್ರಯಾಣ ದರ ₨ ೬. ಎರಡನೇ ಸ್ಟೇಜ್ ಪ್ರಯಾಣ ದರ ಒಮ್ಮೆಗೇ ₨ ೧೨. ಇದ್ಯಾವ ಲೆಕ್ಕ? ಚೆನ್ನೈನಲ್ಲಿ ಎರಡನೇ ಸ್ಟೇಜ್ ಪ್ರಯಾಣ ದರ ₨ ೪.

ಅಂದರೆ ಬೆಂಗಳೂರಿನಲ್ಲಿನ ಎರಡನೇ ಸ್ಟೇಜ್ ಪ್ರಯಾಣ ದರ ಚೆನ್ನೈನಲ್ಲಿನ ಎರಡನೇ ಸ್ಟೇಜ್ ಪ್ರಯಾಣ ದರಕ್ಕಿಂತ ಮೂರು ಪಟ್ಟು ಹೆಚ್ಚಾಯಿತು.  ಹಗಲು ದರೋಡೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಇನ್ನೇನು ಬೇಕು? ಇದು ನಗರ ಸಾರಿಗೆ ನಿಗಮಗಳ ಕಥೆಯಾದರೆ ರಾಜ್ಯದಲ್ಲಿನ ಕರ್ನಾ­ಟಕ ಸಾರಿಗೆ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ನಿಗಮ­ಗಳ ಕಥೆ ಮತ್ತಷ್ಟು ವಿಚಿತ್ರ.  ಹಬ್ಬ ಹರಿದಿನ ಹಾಗೂ ಸಾಲು ರಜೆಗಳ ಸಂದರ್ಭವನ್ನು ಬಿಟ್ಟರೆ ಬೆಂಗಳೂರಿನಿಂದ ರಾಜ್ಯದ ಕೆಲವು ಭಾಗಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿ­ಕರೇ ಇರುವುದಿಲ್ಲ. ಬಹುತೇಕ ಬಸ್‌ಗಳು ೧೦ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುವುದಿಲ್ಲ.

ಕೆಲ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ೧೦–-೧೨ ಪ್ರಯಾಣಿಕರನ್ನು ಮಾತ್ರ ಹೊತ್ತೊಯ್ಯು­ತ್ತವೆ.  ಸಾರಿಗೆ ನಿಗಮಗಳು ಈ ರೀತಿ ಅನಗತ್ಯವಾಗಿ ಬಸ್‌ಗಳನ್ನು ಓಡಿಸು­ತ್ತಿರುವು­ದೇಕೆ? ಇದರಿಂದ ಸಾರ್ವಜನಿಕರ ದುಡ್ಡು  ಪೋಲಾಗು­ವುದಿಲ್ಲವೇ? ಕಡಿಮೆ ಪ್ರಯಾಣಿಕರನ್ನು ಹೊತ್ತೊ­­ಯ್ಯುವ ಬಸ್‌ಗಳ ಸಂಚಾರವನ್ನು ರದ್ದುಪಡಿಸಬೇಕು.  ೫೨ ಆಸನ­ಗಳ ಸಾಮರ್ಥ್ಯವಿರುವ ಬಸ್‌ಗಳು ಕನಿಷ್ಠ ೪೦- ಪ್ರಯಾ­ಣಿಕರ­ನ್ನಾದರೂ ಹೊತ್ತೊಯ್ದರೆ ಸಾರಿಗೆ ನಿಗಮಗಳ ಆದಾಯ­ದಲ್ಲಿ ಗಮನಾರ್ಹ ಪ್ರಮಾಣದ ಹೆಚ್ಚಳವಾಗುತ್ತದೆ.  ಸಿಬ್ಬಂದಿ­ಯಿಂದ ಈ ರೀತಿಯ ಕೆಲಸ ತೆಗೆದುಕೊಳ್ಳಲು ಆಡಳಿತ ನಡೆಸುವವ­ರಾಗಲೀ ಸಾರಿಗೆ ಇಲಾಖೆ ಅಧಿಕಾರಿಗಳಾಗಲೀ ಚಿಂತಿಸುತ್ತಿ­ಲ್ಲ­ವೇಕೆ? ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎರಡು ಬಾರಿ ಬಸ್ ಪ್ರಯಾಣ ದರ ಏರಿಕೆಯಾಗಿದೆ.

ಪ್ರತಿ­ಪಕ್ಷದ ನಾಯಕರಾಗಿದ್ದಾಗ ಇದೇ ಸಿದ್ದರಾಮಯ್ಯ ಅವರು, ಬಸ್ ಪ್ರಯಾಣ ದರ ಏರಿಕೆಯಾದಾಗ ಕರ್ನಾಟಕ ರಾಜ್ಯ  ಪೆಟ್ರೋಲ್, ಡೀಸೆಲ್‌ ಮೇಲೆ ದೇಶದಲ್ಲೇ ಅತಿ ಹೆಚ್ಚು  ಮಾರಾಟ ಮತ್ತು ಪ್ರವೇಶ ತೆರಿಗೆ ವಿಧಿಸುವ ರಾಜ್ಯವಾಗಿದೆ. ಸರ್ಕಾರ ಇದನ್ನು ಕಡಿಮೆ ಮಾಡಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಬಾರದು ಎಂದು ಪ್ರತಿಪಾದಿಸಿದ್ದರು. ಈಗ ಅವರೇ ಮುಖ್ಯಮಂತ್ರಿ. ಮಾರಾಟ ತೆರಿಗೆ ಭಾರ ಇಳಿಸುವ ಮಾತಿರಲಿ, ಡೀಸೆಲ್ ಬೆಲೆ ಇಳಿದರೂ ಅವರ ಸರ್ಕಾರ ಬಸ್ ಪ್ರಯಾಣ ದರ ಇಳಿಕೆ ಬಗ್ಗೆ ಚಕಾರ­ವೆತ್ತುತ್ತಿಲ್ಲ. 

೨೦೧೩ರ ಜೂನ್ ೧೫ರಂದು ಬಸ್‌ ಪ್ರಯಾಣ ದರದಲ್ಲಿ ಶೇಕಡ ೧೦.೫ರಷ್ಟು  ಏರಿಕೆ ಮಾಡಿದ ಸಾರಿಗೆ ನಿಗಮಗಳು,  ಡೀಸೆಲ್ ಬೆಲೆ ಏರಿಕೆ ನೆಪವೊಡ್ಡಿ ಈ ವರ್ಷದ ಮೇ ೪ರಂದು ಶೇ ೭.೯೬ರಷ್ಟು ದರ ಏರಿಕೆ ಮಾಡಿದ್ದವು. ಇವೆರಡೂ ಅವಧಿ­ಯಲ್ಲಿ ಬಿಎಂಟಿಸಿ ಪ್ರಯಾಣ ದರವನ್ನು ಒಟ್ಟಾರೆ ಶೇ ೩೦ಕ್ಕೂ ಅಧಿಕ ಪ್ರಮಾಣದಲ್ಲಿ ಹೆಚ್ಚಿಸಿದೆ. ವಾಸ್ತವದಲ್ಲಿ ಇದು ಶೇ ೫೦ಕ್ಕೂ ಅಧಿಕ.  ೨೦೧೩ರ ಜೂನ್‌ನಿಂದ ಈ ವರ್ಷದ ಸೆಪ್ಟೆಂಬರ್ ಅಂತ್ಯದವರೆಗೆ ಡೀಸೆಲ್ ಬೆಲೆ ಲೀಟರ್‌ಗೆ  ಸುಮಾರು ₨ 4 ಹೆಚ್ಚಳವಾಗಿದೆ. ಆದರೆ ಇದೀಗ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಒಮ್ಮೆಗೇ ₨ ೪ ಇಳಿಕೆಯಾಗಿದೆ.

ಈ ಅವಧಿ­ಯಲ್ಲಿ ಒಟ್ಟಾರೆ ಪ್ರಯಾಣ ದರ ಏರಿಕೆ ಶೇ ೧೮.೪೬ (೧೦.೫+೭.೯೬) ಆಗಿದ್ದರೂ ವಾಸ್ತವವಾಗಿ ಪ್ರಯಾಣ ದರದ ಏರಿಕೆ ಶೇ ೨೨ಕ್ಕೂ ಹೆಚ್ಚು ಆಗಿರುತ್ತದೆ.  ಸದ್ಯದ ಡೀಸೆಲ್ ದರ ಇಳಿಕೆಯನ್ನು ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಸರ್ಕಾರ ಬಿಎಂಟಿಸಿ ಮತ್ತು ಇತರೆ ಎಲ್ಲ ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಕನಿಷ್ಠ ಶೇ ೧೭ರಷ್ಟನ್ನಾದರೂ ಇಳಿಸಲೇಬೇಕಾಗು ತ್ತದೆ. ಪೆಟ್ರೋಲ್ ಬಿಟ್ಟು ಡೀಸೆಲ್ ಮೇಲಿನ ಮಾರಾಟ ತೆರಿಗೆ ಭಾರವ­ನ್ನಾ­ದರೂ ಕನಿಷ್ಠ ಶೇ ೫ರಷ್ಟು ಇಳಿಕೆ ಮಾಡಿದರೆ ಪ್ರಯಾಣ ದರ­ವನ್ನು ಮತ್ತೂ ಶೇ ೧೦ರಷ್ಟು ಕಡಿಮೆ ಮಾಡ­ಬಹುದು. ತಮ್ಮದು ಜನಪರ ಸರ್ಕಾರ ಎಂದು ಹೇಳಿ­ಕೊಳ್ಳು­ತ್ತಿರುವ ಸಿದ್ದರಾಮಯ್ಯ ಅವರು ಈ ವಾಸ್ತವ  ಅರಿತಾದರೂ ಪ್ರಯಾಣ ದರ ಇಳಿಕೆಗೆ ಮನಸ್ಸು ಮಾಡುವರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT