ನವದೆಹಲಿ (ಪಿಟಿಐ): ಅಂತಿಮ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಡೀಸೆಲ್ ದರ ಲೀಟರ್‌ಗೆ ₨1.09 (ಸ್ಥಳೀಯ ತೆರಿಗೆ ಬಿಟ್ಟು) ಹೆಚ್ಚಳವಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.
2013ರಲ್ಲಿ ಕೇಂದ್ರ ಸಂಪುಟ ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಪ್ರತಿ ತಿಂಗಳು ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಮಾಡಬೇಕಿತ್ತು. ‘ಚುನಾವಣೆ ಘೋಷಣೆಯಾದ ಕಾರಣ ಬೆಲೆ ಏರಿಕೆ ಮಾಡುವುದಿಲ್ಲ. ಅದಕ್ಕೆ ಒಪ್ಪಿಗೆ ನೀಡಬೇಕು’ ಎಂಬ ಪ್ರಸ್ತಾವವನ್ನು ಚುನಾವಣಾ ಆಯೋಗಕ್ಕೆ ಪೆಟ್ರೋಲಿಯಂ ಸಚಿವಾಲಯ ಕಳೆದ ತಿಂಗಳು ಕಳುಹಿಸಿತ್ತು. ಆದರೆ ಈ ಪ್ರಸ್ತಾಪವನ್ನು ಆಯೋಗ ಸೋಮವಾರ ತಿರಸ್ಕರಿಸಿತು.
ಆಯೋಗ ತೀರ್ಮಾನ ಕೈಗೊಳ್ಳಲು ವಿಳಂಬ ಮಾಡಿದ್ದರಿಂದ ಏಪ್ರಿಲ್ 1 ಮತ್ತು ಮೇ 1 ರಂದು ತಲಾ 50 ಪೈಸೆ ಏರಿಕೆ ಜಾರಿಗೆ ತಂದಿರಲಿಲ್ಲ.
2013 ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇದ್ದ ಕಾರಣ ಆ ಏಪ್ರಿಲ್ನಲ್ಲಿ ಡೀಸೆಲ್ ಬೆಲೆ ಏರಿಸಿರಲಿಲ್ಲ. ಚುನಾವಣೆ ಮುಗಿದ ನಂತರ ದಿಢೀರನೆ ಪ್ರತಿ ಲೀಟರ್‌ಗೆ ₨90 ಪೈಸೆಯನ್ನು ಏರಿಕೆ ಮಾಡಲಾಗಿತ್ತು.