ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ: ಉಪೇಕ್ಷೆ ಸಲ್ಲದು

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ವ್ಯಾಪಕವಾಗುತ್ತಿರುವ ಡೆಂಗೆ ಜ್ವರಕ್ಕೆ ಸಂಬಂಧಿಸಿದಂತೆ ಅಮೆರಿಕದ ವೈದ್ಯಕೀಯ ನಿಯತಕಾಲಿಕವೊಂದು ಪ್ರಕಟಿಸಿರುವ ಸಮೀಕ್ಷಾ ವರದಿ ನಾಗರಿಕರನ್ನು ಬೆಚ್ಚಿಬೀಳಿಸುವಂತಿದೆ. ನಮ್ಮ ಆರೋಗ್ಯ ಇಲಾಖೆ­ಗಳು ತೋರಿಸುತ್ತಿರುವ ಡೆಂಗೆ ಜ್ವರ ಪ್ರಕರಣಗಳ ಅಧಿಕೃತ ಅಂಕಿ­ಸಂಖ್ಯೆಗೂ ಈ ವರದಿಯಲ್ಲಿರುವ ಅಂಕಿಸಂಖ್ಯೆಗೂ ಅಜಗಜಾಂತರ ಕಂಡು­ಬಂದಿದೆ.

2006 ರಿಂದ 2012ರವರೆಗೆ ದೇಶದಲ್ಲಿ ವರ್ಷಂಪ್ರತಿ ಸುಮಾರು 60 ಲಕ್ಷ ಮಂದಿಯಲ್ಲಿ ಡೆಂಗೆ ಕಾಣಿಸಿಕೊಂಡಿದೆ ಎಂದು ನಿಯತ­ಕಾಲಿಕ ಎಚ್ಚರಿಸಿದೆ. ಇದು ಸರ್ಕಾರ ಅಂದಾಜಿಸಿರುವ ಅಂಕಿಸಂಖ್ಯೆಗಿಂತ 282 ಪಟ್ಟು ಅಧಿಕ! ಇದರಿಂದ ಸಾಮಾಜಿಕ ಹಾನಿ ಮಾತ್ರವಲ್ಲದೆ ನೂರಾರು ಕೋಟಿ ರೂಪಾಯಿ ಆರ್ಥಿಕ ಹೊರೆಯೂ ಉಂಟಾಗುತ್ತಿದೆ ಎಂದು ವರದಿ ಹೇಳಿದೆ. ಆದರೆ ಹೇಳಿಕೇಳಿ ಈ ಸಮೀಕ್ಷೆಯನ್ನು ಔಷಧ ತಯಾರಿಕಾ ಕಂಪೆ­ನಿ­ಯೊಂದು ಪ್ರಾಯೋಜಿಸಿದ್ದು, ಅದು ವರದಿಯ ಮೇಲೆ ಪ್ರಭಾವ ಬೀರಿದೆ ಎಂದು ಆರೋಗ್ಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಇದನ್ನು ತಳ್ಳಿ­ಹಾಕಿರುವ ಸಂಶೋಧಕರು, ಸಮೀಕ್ಷೆಯ ಮೇಲೆ ಕಂಪೆನಿ ಯಾವ ನಿಯಂತ್ರ­ಣ­ವನ್ನೂ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋ­ಧನಾ ಮಂಡಳಿಗೆ ಸೇರಿದ ಮದುರೆಯ ಕೀಟವೈದ್ಯಕೀಯ ಸಂಶೋಧನಾ ಕೇಂದ್ರ ಒಳಗೊಂಡು ಅಮೆರಿಕ ಮತ್ತು ಭಾರತದ ಪ್ರಮುಖ ಸಂಸ್ಥೆಗಳ ಸಂಶೋ­ಧಕರು ಈ ಸಮೀಕ್ಷೆಗೆ ಕೈಜೋಡಿಸಿದ್ದಾರೆ. ಹೀಗಾಗಿ ವರದಿಯನ್ನು ಸಾರಾಸಗಟಾಗಿ ತಳ್ಳಿಹಾಕಲು ಸಾಧ್ಯವಾಗದು. ಯಾರೇ ವರದಿ ಸಿದ್ಧ­ಪಡಿ­ಸಿ­ದ್ದರೂ ವಸ್ತುಸ್ಥಿತಿ ಏನಿದೆ ಎಂಬುದು ಇಲ್ಲಿ ಮುಖ್ಯ. ಇದು ಸಾರ್ವಜನಿಕರ ಆರೋಗ್ಯದಂತಹ ಪ್ರಮುಖ ವಿಷಯವಾದ್ದರಿಂದ ವರದಿಯ ಸತ್ಯಾಸತ್ಯತೆ­ಯನ್ನು ಒರೆಗೆ ಹಚ್ಚಬೇಕಾದುದು ಸರ್ಕಾರದ ಆದ್ಯ ಕರ್ತವ್ಯ.

ನಮ್ಮ ಆರೋಗ್ಯ ವ್ಯವಸ್ಥೆಯ ದುಃಸ್ಥಿತಿಯನ್ನು ಕಂಡವರಿಗೆ ಸರ್ಕಾರದ ಅಂಕಿ­ಸಂಖ್ಯೆಯ ಮೇಲೇ ಶಂಕೆ ಮೂಡುವುದು ಸಹಜ. ಒಂದು ವೇಳೆ ವರದಿ­ಯಲ್ಲಿ­ರುವುದೇ ಸತ್ಯ ಎನ್ನುವುದಾದರೆ, ಮಾರಣಾಂತಿಕವಾದ ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರ ವಿಶೇಷ ನಿಧಿಯನ್ನೇ ಮುಡುಪಾಗಿಟ್ಟು, ಸಮರೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾಗಿ­ಲ್ಲದೆ ವರದಿಯನ್ನು ಲಘುವಾಗಿ ಪರಿಗಣಿಸಿ ವಸ್ತುಸ್ಥಿತಿ ಭೀಕರವಾದರೆ, ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ.

1996ರಲ್ಲಿ ದೇಶದಲ್ಲಿ  ಮೊದಲ ಬಾರಿ ಡೆಂಗೆ ಕಾಣಿಸಿಕೊಂಡಾಗಿನಿಂದ ಈವರೆಗೆ ನೂರಾರು ಜನರ ಬಲಿ ಪಡೆದಿದೆ. ಇದರ ನಿಯಂತ್ರಣದ ಬಗ್ಗೆ ಜನರಲ್ಲಿರುವ ಮಾಹಿತಿ ಕೊರ­ತೆಯೂ ರೋಗ ಉಲ್ಬಣಕ್ಕೆ ಕಾರಣ. ರಾತ್ರಿ ವೇಳೆ ಸೊಳ್ಳೆ ಕಡಿತದಿಂದ ತಪ್ಪಿಸಿ­ಕೊಂಡರೆ ಡೆಂಗೆಯಿಂದ ಪಾರಾಗಬಹುದು ಎಂದು ಜನ ಭಾವಿಸಿದ್ದಾರೆ. ಆದರೆ ಡೆಂಗೆ ಜ್ವರಕ್ಕೆ ಕಾರಣವಾಗುವ ಈಡಿಸ್‌ ಈಜಿಪ್ಟಿ ಎಂಬ ಸೊಳ್ಳೆ ಕಚ್ಚು­ವುದೇ ಹಗಲಿನಲ್ಲಿ. ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಸಾರ್ವಜನಿಕ ಆರೋಗ್ಯ ಸುಧಾರಣಾ ಕ್ರಮಗಳೂ ತೀವ್ರಗೊಳ್ಳಬೇಕಿವೆ. ಅಷ್ಟಕ್ಕೂ ಸರ್ಕಾ­ರದ ಅಂಕಿಸಂಖ್ಯೆಯೇ ಸರಿ ಎನ್ನುವುದು ಸಾಬೀತಾದರೆ, ಅಂತಿಮವಾಗಿ ಈ ಸಂಸ್ಥೆ­ಗಳ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸುವ ಅಧಿಕಾರವಂತೂ ಸರ್ಕಾರಕ್ಕೆ ಇದ್ದೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT